ಅನಿಶ್ಚಿತ ಕಾಲದ ನೈತಿಕ ಧ್ವನಿ: ‘ಬೌಮನಿಜಂ’ ಮತ್ತು ಬೌಮನ್ ಚಿಂತನೆ

(ಕುವೆAಪು ಭಾಷಾಭಾರತಿಯಿಂದ ಕೊಡಮಾಡುವ ೨೦೨೪ನೇ ವರ್ಷದ ಪುಸ್ತಕ ಬಹುಮಾನ ಪಡೆದ ಡಾ.ಮಲ್ಲೇಶಪ್ಪ ಸಿದ್ರಾಂಪೂರರವರ ‘ಬೌಮನಿಜಂ’ ಕೃತಿ ಅವಲೋಕನ)
A moral voice in uncertain times: ‘Baumanism’ and Bauman’s thought

ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿದ್ರಾಂಪೂರ ಗ್ರಾಮದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ನಂತರ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಾರಟಗಿಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ಸಿಂಧನೂರಿನಲ್ಲಿ ಮುಗಿಸಿದ್ದಾರೆ. ೨೦೦೪ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಯಚೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ ಕನ್ನಡ ಪದವಿಯನ್ನು ಪೂರ್ಣಗೊಳಿಸಿ, “ಗಾಣಿಗರು; ಒಂದು ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ೨೦೦೯ರಲ್ಲಿ ಡಾ.ಕೆ.ಶಾರದರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದವರು. ಅಲ್ಲಿಯೇ ಕೆಲವು ವರ್ಷಗಳ ಕಾಲ ಅತಿಥಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೧೦ರಿಂದ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಹೊರ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅಲ್ಲಿಂದಲೇ ಕನ್ನಡದ ಕಾಯಕದಲ್ಲಿ ತಲ್ಲಿನಾಗಿರುವುದು ವಿಶೇಷ. ಮಡಿವಾಳ ಮಾಚಿದೇವ, ಮೊಲ ಮತ್ತು ಇತರ ಕಥೆಗಳು, ತೆಲ್ಲಿಗರು, ಕಂದಳಿ, ಕಂಪಣ, ಪಡಿನೆಳಲು, ವೇಮನನ ಪದ್ಯಗಳು, ಇನ್‌ಸ್ಟಂಟ್ ಲೈಪ್ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಪಡಿನೆಳಲು ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ೨೦೨೩ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಪ್ರಸ್ತುತ ಇವರ ‘ಬೌಮನಿಜಂ’ ಕೃತಿಗೆ ೨೦೨೪ನೇ ವರ್ಷದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಪುರಸ್ಕಾರ ಸಂದಿರವುದು ಬಹಳ ವಿಶೇಷ.
ಪ್ರೊ. ಬಿ. ತಿರುಪತಿರಾವು ಅವರು ತೆಲುಗಿನಲ್ಲಿ ರಚಿಸಿದ ‘ಬೌಮನಿಜಂ’ ಈ ಮಹತ್ವದ ಕೃತಿಯನ್ನು ಡಾ.ಮಲ್ಲೇಶಪ್ಪ ಸಿದ್ರಾಂಪೂರ ಅವರು ಅತ್ಯಂತ ಜವಾಬ್ದಾರಿಯುತವಾಗಿ, ತಾತ್ವಿಕ ನಿಷ್ಠೆಯೊಂದಿಗೆ ಕನ್ನಡಕ್ಕೆ ಅನುವಾದಿಸಿರುವುದು ಈ ಗ್ರಂಥದ ಮೊದಲ ಗಮನಾರ್ಹ ಅಂಶ. ಅನುವಾದಿತ ಕೃತಿ ಎಂಬ ಅರ್ಥದಲ್ಲಿ ಮಾತ್ರವಲ್ಲದೆ, ಕನ್ನಡದ ಸಮಾಜಶಾಸ್ತಿçÃಯ ಮತ್ತು ತಾತ್ವಿಕ ಬರವಣಿಗೆಯ ಪರಂಪರೆಯಲ್ಲಿ ಒಂದು ಸ್ವತಂತ್ರ, ಗಂಭೀರ ಗ್ರಂಥದAತೆ ಮೂಡಿಬಂದಿದೆ. ಈ ಅನುವಾದಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೨೪ನೇ ವರ್ಷದ ಪುಸ್ತಕ ಬಹುಮಾನ ಲಭಿಸಿರುವುದು, ಕೇವಲ ಅನುವಾದಕರ ವೈಯಕ್ತಿಕ ಸಾಧನೆಯಲ್ಲ; ಕನ್ನಡದಲ್ಲಿ ಜಾಗತಿಕ ಮಟ್ಟದ ತಾತ್ವಿಕ ಚಿಂತನೆಗಳನ್ನು ಸಮರ್ಥವಾಗಿ ಪರಿಚಯಿಸುವ ಪ್ರಯತ್ನಗಳಿಗೆ ದೊರೆತ ಮಹತ್ವದ ಸಾರ್ವಜನಿಕ ಮಾನ್ಯತೆಯಾಗಿದೆ. ವಿಶೇಷವಾಗಿ, ಸಮಾಜಶಾಸ್ತç ಮತ್ತು ತತ್ವಶಾಸ್ತçದಂತಹ ಸಂಕೀರ್ಣ ಕ್ಷೇತ್ರಗಳಲ್ಲಿ ಅನುವಾದವು ಸಾಮಾನ್ಯವಾಗಿ ಎದುರಿಸುವ ಅರ್ಥಭ್ರಷ್ಟತೆ, ಕೃತಕ ಪದಬಳಕೆ ಮತ್ತು ಭಾಷಾ ದುರ್ನಿರ್ವಹಣೆಯ ಸಮಸ್ಯೆಗಳನ್ನು ಈ ಕೃತಿ ಸಮರ್ಥವಾಗಿ ಮೀರಿ ನಿಂತಿರುವುದು ಪ್ರಶಂಸನೀಯ.
ಜಿಗ್ಮAಟ್ ಬೌಮನ್ ಎಂಬ ಹೆಸರು ಸಮಕಾಲೀನ ಸಮಾಜ ಚಿಂತನೆಯ ವಲಯದಲ್ಲಿ ಕೇವಲ ಒಬ್ಬ ಸಮಾಜಶಾಸ್ತçಜ್ಞನ ಹೆಸರಾಗಿ ಉಳಿದಿಲ್ಲ; ಅದು ಒಂದು ವಿಶಿಷ್ಟ ಚಿಂತನಾ ಪರಂಪರೆಯ ಪ್ರತೀಕವಾಗಿ ಬೆಳೆದಿದೆ. Zಥಿgmuಟಿಣ ಃಚಿumಚಿಟಿ ಅವರು ಇಪ್ಪತ್ತನೆಯ ಶತಮಾನದ ರಾಜಕೀಯ ಹಿಂಸಾಚಾರ, ಯುದ್ಧಗಳು, ಹತ್ಯಾಕಾಂಡಗಳು, ಸಮಾಜವಾದದ ಉತ್ಥಾನ–ಪತನ ಮತ್ತು ಇಪ್ಪತ್ತೊಂದನೆಯ ಶತಮಾನದ ಜಾಗತೀಕರಣ, ವಿನಿಮಯವಾದ, ವೈಯಕ್ತೀಕರಣ, ಅಸ್ಮಿತೆ ಸಂಕಟಗಳನ್ನು ನೇರವಾಗಿ ಕಂಡು ಅನುಭವಿಸಿದ ಚಿಂತಕ. ಪೋಲೆಂಡ್‌ನ ಯಹೂದಿ ಕುಟುಂಬದಲ್ಲಿ ಜನಿಸಿದ ಬೌಮನ್ ನಾಜೀಯಿಜಂ, ಸ್ಟಾಲಿನಿಸಂ ಮತ್ತು ನಂತರದ ನಿರಾಶಾದಾಯಕ ಸಮಾಜವಾದಿ ಅನುಭವಗಳ ನಡುವೆ ಬೆಳೆದವರು. ಅವರ ಜೀವನಾನುಭವವೇ ಅವರ ತಾತ್ವಿಕತೆಯ ಕಚ್ಚಾ ವಸ್ತುವಾಗಿದೆ. ಸಮಾಜವನ್ನು ದೂರದಿಂದ ನೋಡುವ ವಿದ್ವಾಂಸನ ದೃಷ್ಟಿಯಲ್ಲದೆ, ಅದನ್ನು ಅನುಭವಿಸಿ ನೋವಿನ ಮೂಲಕ ಚಿಂತಿಸಿದ ಮಾನವೀಯ ಬೌದ್ಧಿಕನ ಧ್ವನಿಯೇ ಬೌಮನ್‌ನ ಬರಹಗಳಲ್ಲಿ ಕೇಳಿಸುತ್ತದೆ. ಇದೇ ಕಾರಣಕ್ಕೆ ಅವರ ಸಮಾಜಶಾಸ್ತç ಶುದ್ಧ ಅಂಕಿಅAಶಗಳ ಅಥವಾ ಸಿದ್ಧಾಂತಗಳ ಜಾಲವಲ್ಲ, ಅದು ನೈತಿಕ ತುರ್ತುಭಾವದಿಂದ ಕೂಡಿದ ಮಾನವೀಯ ಸಂವೇದನೆಯ ಬರವಣಿಗೆ.
ಬೌಮನ್‌ನ ಚಿಂತನೆಯ ವೈಶಿಷ್ಟö್ಯವೆಂದರೆ ಅವರು ಯಾವತ್ತೂ ಒಂದೇ ಸಿದ್ಧಾಂತದ ಒಳಗೆ ಬಂಧಿತರಾಗಿ ಉಳಿಯಲಿಲ್ಲ. ಸಮಾಜವಾದಿ, ಮಾರ್ಕ್ಸ್ವಾದಿ, ಮಾನವತಾವಾದಿ ಮಾಕ್ಸ್ವಾದಿ, ಆಧುನಿಕತೆಯ ವಿಮರ್ಶಕ, ಆಧುನಿಕೋತ್ತರ ಚಿಂತಕ, ನೈತಿಕ ತತ್ವಜ್ಞಾನಿ, ಸಾಂಸ್ಕೃತಿಕ ವಿಶ್ಲೇಷಕ ಎಂಬ ಹಲವು ಗುರುತುಗಳು ಅವರ ಚಿಂತನೆಯ ವಿಭಿನ್ನ ಹಂತಗಳನ್ನು ಸೂಚಿಸುತ್ತವೆ. ಆದರೆ ಈ ಎಲ್ಲಾ ಹಂತಗಳ ನಡುವೆ ಒಂದು ಆಂತರಿಕ ತಂತು ನಿರಂತರವಾಗಿ ಸಾಗುತ್ತದೆ, ಅದು ಮಾನವನ ಗೌರವಯುತ ಅಸ್ತಿತ್ವದ ಪ್ರಶ್ನೆ. ಆಧುನಿಕತೆಯ ಹೆಸರಿನಲ್ಲಿ ನಡೆದ ಹತ್ಯಾಕಾಂಡಗಳಾಗಲಿ, ಸಮಾಜವಾದದ ಹೆಸರಿನಲ್ಲಿ ಜಾರಿಗೊಂಡ ನಿರಂಕುಶ ವ್ಯವಸ್ಥೆಗಳಾಗಲಿ, ಅಥವಾ ದ್ರವಾಧುನಿಕತೆಯಲ್ಲಿ ಮನುಷ್ಯನು ವಿನಿಮಯದ ವಸ್ತುವಾಗಿ ಪರಿವರ್ತಿತವಾಗುತ್ತಿರುವ ಸ್ಥಿತಿಯಾಗಲಿ ಎಲ್ಲೆಡೆ ಬೌಮನ್ ಕೇಳುವ ಪ್ರಶ್ನೆ ಒಂದೇ: ಈ ವ್ಯವಸ್ಥೆಗಳು ಮಾನವೀಯತೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತವೆ?
ಈ ಹಿನ್ನೆಲೆಯಲ್ಲಿಯೇ ‘ಬೌಮನಿಜಂ’ ಕೃತಿ ಬೌಮನ್‌ನ ಚಿಂತನೆಗಳನ್ನು ಪರಿಚಯಿಸುವ ಸರಳ ಗ್ರಂಥವಲ್ಲದೆ, ಅವರ ಸಂಪೂರ್ಣ ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ಪಯಣವನ್ನು ಕ್ರಮಬದ್ಧವಾಗಿ ಕಟ್ಟಿಕೊಡುವ ಒಂದು ಆಳವಾದ ತಾತ್ವಿಕ ಪ್ರಯತ್ನವಾಗಿ ರೂಪುಗೊಂಡಿದೆ. ಈ ಕೃತಿಯಲ್ಲಿ ಬೌಮನ್‌ನ ಆಲೋಚನೆಗಳನ್ನು ಪ್ರತ್ಯೇಕ ಕೃತಿಗಳ ಸಾರಾಂಶಗಳAತೆ ನೀಡದೆ; ಆಧುನಿಕತೆ ಎಂಬ ನೆಲೆಯಿಂದ ಆರಂಭಿಸಿ ದ್ರವಾಧುನಿಕತೆ, ನೈತಿಕತೆ, ಅಸ್ಮಿತೆ, ವಿನಿಮಯ, ಪ್ರೀತಿ, ಭೀತಿ, ನಿಗಾ ಮತ್ತು ಕೊನೆಗೆ ರೆಟ್ರೋಟೋಪಿಯಾ ವರೆಗೆ ಸಾಗುವ ಸಮಗ್ರ ಚಿಂತನೆಯ ಹರಿವಿನಂತೆ ನಿರೂಪಿಸಲಾಗಿದೆ. ಈ ನಿರಂತರ ಹರಿವಿನ ಸಂರಚನೆಯೇ ‘ಬೌಮನಿಜಂ’ನ ಪ್ರಮುಖ ಬಲ. ಬೌಮನ್‌ನ ಚಿಂತನೆಗಳು ಹೇಗೆ ರೂಪಾಂತರಗೊAಡವು, ಅವು ಯಾವ ಚಾರಿತ್ರಿಕ ಸಂದರ್ಭಗಳು ಮತ್ತು ವೈಯಕ್ತಿಕ ಅನುಭವಗಳು ಅವುಗಳನ್ನು ತೀಕ್ಷ÷್ಣ್ಣಗೊಳಿಸಿದವು ಎಂಬುದನ್ನು ಈ ಕೃತಿ ಕ್ರಮಬದ್ಧವಾಗಿ ಓದುಗ
ರ ಮುಂದಿಡುತ್ತದೆ.
ಕೃತಿಯ ಪಠ್ಯದಲ್ಲಿ ಬೌಮನ್‌ನ ಜೀವನಾನುಭವ ಮತ್ತು ಅವರ ತಾತ್ವಿಕ ಚಿಂತನೆಯ ನಡುವಿನ ಆಂತರಿಕ ಸಂಬAಧವನ್ನು ಲೇಖಕರು ಅತ್ಯಂತ ಜಾಗರೂಕತೆಯಿಂದ ಹಿಡಿದುಕೊಂಡು ಹೋಗುತ್ತಾರೆ. ಪೋಲೆಂಡ್‌ನ ಯಹೂದಿ ಹಿನ್ನೆಲೆ, ನಾಜೀಯಿಜಂ ಮತ್ತು ಸ್ಟಾಲಿನಿಸಂನ ನೇರ ಅನುಭವ, ಯುದ್ಧೋತ್ತರ ಯುರೋಪಿನ ರಾಜಕೀಯ ವಾತಾವರಣ, ಸಮಾಜವಾದದ ಮೇಲಿನ ಪ್ರಾರಂಭಿಕ ನಂಬಿಕೆ ಮತ್ತು ನಂತರ ಅದರಲ್ಲಿ ಹುಟ್ಟಿಕೊಂಡ ತೀವ್ರ ಅನುಮಾನಗಳು ಇವೆಲ್ಲವೂ ಬೌಮನ್‌ನ ಸಮಾಜಶಾಸ್ತಿçÃಯ ದೃಷ್ಟಿಕೋನವನ್ನು ಹೇಗೆ ರೂಪಿಸಿವೆ ಎಂಬುದನ್ನು ಈ ಕೃತಿ ಸಮತೋಲನದ ನಿಲುವಿನಲ್ಲಿ ನಿರೂಪಿಸುತ್ತದೆ. ಬೌಮನ್‌ನು ಸಮಾಜವಾದದಿಂದ ಸಂಪೂರ್ಣವಾಗಿ ದೂರ ಸರಿದವನು ಅಲ್ಲ; ಬದಲಾಗಿ ಅದರ ಆಚರಣೆಯಲ್ಲಿ ಅಡಗಿದ್ದ ನಿರಂಕುಶತೆ, ಅಧಿಕಾರಶಾಹಿ ಮತ್ತು ಮಾನವೀಯತೆಯ ಹರಣವನ್ನು ತೀವ್ರವಾಗಿ ಪ್ರಶ್ನಿಸಿದವನು ಎಂಬ ಅಂಶ ಇಲ್ಲಿ ಸ್ಪಷ್ಟವಾಗಿ ಮೂಡಿಬರುತ್ತದೆ. ಈ ಮೂಲಕ ಬೌಮನ್‌ನನ್ನು ಕೇವಲ ‘ದ್ರವಾಧುನಿಕತೆಯ ತಾತ್ವಿಕ’ ಎಂಬ ಸೀಮಿತ ಚೌಕಟ್ಟಿನಲ್ಲಿ ಅಲ್ಲದೆ, ಮಾನವೀಯ ಸಮಾಜವಾದದ ಪರವಾದ, ನಿರಂತರ ಆತ್ಮಪರಿಶೀಲನೆ ನಡೆಸಿದ ಬೌದ್ಧಿಕನಾಗಿ ಈ ಕೃತಿ ಮರುಸ್ಥಾಪಿಸುತ್ತದೆ.
ಆಧುನಿಕತೆ ಮತ್ತು ಅದರೊಳಗಿನ ತರ್ಕಬದ್ಧತೆ, ಕ್ರಮ, ನಿಯಂತ್ರಣ ಹಾಗೂ ಸಾಮಾಜಿಕ ಇಂಜಿನಿಯರಿAಗ್‌ನ ಅಪಾಯಗಳನ್ನು ವಿವರಿಸುವ ಸಂದರ್ಭದಲ್ಲಿ, ‘ನರಮೇಧ–ಆಧುನಿಕತೆ’ ಮತ್ತು ‘ಆಧುನಿಕತೆ–ಸಂದಿಗ್ಧತೆ’ ಎಂಬ ಅಧ್ಯಾಯಗಳು ಬೌಮನ್‌ನ ಅತ್ಯಂತ ಮಹತ್ವದ ವಾದಗಳನ್ನು ಕನ್ನಡ ಓದುಗರಿಗೆ ಡಾ.ಮಲ್ಲೇಶಪ್ಪ ಸಿದ್ರಾಂಪೂರರವರು ಸಮರ್ಥವಾಗಿ ಈ ಕೃತಿಯ ಮೂಲಕ ತಲುಪಿಸಿದ್ದಾರೆ. ಯಹೂದಿಗಳ ಮಾರಣಹೋಮವನ್ನು ಆಧುನಿಕತೆಯ ಹೊರಗಿನ ಅಪಘಾತವಲ್ಲದೆ, ಅದರೊಳಗೇ ಅಡಗಿರುವ ತರ್ಕದ ಫಲವಾಗಿ ಬೌಮನ್ ಅರ್ಥೈಸಿದ ರೀತಿಯನ್ನು ಲೇಖಕರು ಸೂಕ್ಷö್ಮವಾಗಿ ವಿವರಿಸಿದ್ದಾರೆ. ಇದರಿಂದ ಆಧುನಿಕತೆಯನ್ನು ಸದಾ ಪ್ರಗತಿ, ವಿಮೋಚನೆ ಮತ್ತು ತರ್ಕದ ಪ್ರತೀಕವಾಗಿ ಮಾತ್ರ ನೋಡುವ ದೃಷ್ಟಿಕೋನಕ್ಕೆ ತೀವ್ರವಾದ ಸವಾಲು ಎದುರಾಗುತ್ತದೆ. ಆಧುನಿಕತೆಯು ಕ್ರಮ ಮತ್ತು ನಿಯಂತ್ರಣದ ಹೆಸರಿನಲ್ಲಿ ವಿಭಿನ್ನತೆಗಳನ್ನು ಹೇಗೆ ನಾಶಪಡಿಸುತ್ತದೆ, ಸಮಾಜವನ್ನು ‘ತೋಟಗಾರಿಕೆಯ’ ರೀತಿಯಲ್ಲಿ ನಿರ್ವಹಿಸಲು ಹೊರಟಾಗ ಅದು ಹೇಗೆ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಬೌಮನ್‌ನ ವಾದವನ್ನು ಈ ಕೃತಿ ಅತ್ಯಂತ ಸ್ಪಷ್ಟವಾಗಿ ಕಟ್ಟಿಕೊಡುತ್ತದೆ.
ಈ ಹಂತದಿAದಲೇ ಕೃತಿ ಸಹಜವಾಗಿ ದ್ರವಾಧುನಿಕತೆಯತ್ತ ಸಾಗುತ್ತದೆ. ಇಲ್ಲಿ ‘ದ್ರವ’ ಎನ್ನುವ ರೂಪಕ ಕೇವಲ ಸಾಹಿತ್ಯಿಕ ಅಲಂಕಾರವಲ್ಲ; ಅದು ಸಮಕಾಲೀನ ಸಮಾಜದ ಅಸ್ಥಿರತೆ, ಅನಿಶ್ಚಿತತೆ ಮತ್ತು ನಿರಂತರ ಬದಲಾವಣೆಯನ್ನು ಗ್ರಹಿಸಲು ಬಳಸುವ ತಾತ್ವಿಕ ಸಾಧನವಾಗಿ ರೂಪುಗೊಳ್ಳುತ್ತದೆ. ದ್ರವಾಧುನಿಕತೆ, ದ್ರವ ಕಾಲ, ದ್ರವ ಬದುಕು, ದ್ರವ ಪ್ರೇಮ, ದ್ರವ ಭೀತಿ ಮತ್ತು ದ್ರವ ನಿಗಾ ಕುರಿತ ಅಧ್ಯಾಯಗಳು ಬೌಮನ್‌ನ ಚಿಂತನೆಯ ಅತ್ಯಂತ ಪ್ರಬಲ ಹಾಗೂ ಸಮಕಾಲೀನ ಭಾಗವನ್ನು ಒಳಗೊಂಡಿವೆ. ಘನ ಸಂಸ್ಥೆಗಳು, ಸ್ಥಿರ ಸಾಮಾಜಿಕ ಸಂಬAಧಗಳು ಮತ್ತು ದೀರ್ಘಕಾಲೀನ ಯೋಜನೆಗಳು ಹೇಗೆ ಕರಗಿಹೋಗಿ, ವೈಯಕ್ತೀಕರಣ ಮತ್ತು ವಿನಿಮಯವೇ ಜೀವನದ ಕೇಂದ್ರವಾಗುತ್ತವೆ ಎಂಬುದನ್ನು ಈ ಕೃತಿ ಬಹಳ ಸ್ಪಷ್ಟವಾಗಿ ಚಿತ್ರಿಸುತ್ತದೆ. ಇಲ್ಲಿ ಬೌಮನ್‌ನ ಸಮಾಜಶಾಸ್ತç ಕೇವಲ ಸಿದ್ಧಾಂತ ಮಟ್ಟದಲ್ಲೇ ನಿಲ್ಲದೆ, ಮಾನವ ಬದುಕಿನ ಆಂತರಿಕ ಅನುಭವಗಳನ್ನು, ಭಯಗಳನ್ನು, ಅಸುರಕ್ಷತೆಯನ್ನು ಮತ್ತು ಒಂಟಿತನವನ್ನು ಸ್ಪರ್ಶಿಸುತ್ತದೆ.
ಪ್ರೇಮವೂ ಸಹ ದ್ರವಾಧುನಿಕತೆಯಲ್ಲಿ ಒಂದು ಸ್ಥಿರ ನೈತಿಕ ಬಂಧವಲ್ಲದೆ, ಮುರಿಯಬಹುದಾದ, ಬಳಸಿಬಿಸಾಡಬಹುದಾದ ವಿನಿಮಯ ಸಂಬAಧವಾಗಿ ಪರಿವರ್ತಿತವಾಗುತ್ತಿರುವುದನ್ನು ಈ ಕೃತಿ ತೀಕ್ಷ÷್ಣವಾಗಿ ತೋರಿಸುತ್ತದೆ. ಭಯವು ಅಪವಾದವಲ್ಲದೆ ನಿರಂತರ ಸಾಮಾಜಿಕ ಸ್ಥಿತಿಯಾಗಿ ರೂಪುಗೊಂಡಿರುವುದು, ಭದ್ರತೆಯ ಹೆಸರಿನಲ್ಲಿ ನಿಗಾ ತಾಂತ್ರಿಕ ವ್ಯವಸ್ಥೆಗಳ ಮೂಲಕ ಸಹಜ ಮತ್ತು ಸ್ವೀಕಾರಾರ್ಹವಾಗುತ್ತಿರುವುದು. ವ್ಯಕ್ತಿಗಳು ತಮ್ಮ ಅಸ್ತಿತ್ವವನ್ನು ವಸ್ತುಗಳ ಮೂಲಕ ವ್ಯಕ್ತಪಡಿಸಲು ಒತ್ತಾಯಿತರಾಗುತ್ತಿರುವುದು ಇವೆಲ್ಲವನ್ನೂ ‘ಬೌಮನಿಜಂ’ ಸಮಕಾಲೀನ ಸಮಾಜದ ನಿಜವಾದ ಲಕ್ಷ÷್ಣಣಗಳಾಗಿ ಅನಾವರಣಗೊಳಿಸುತ್ತದೆ.
ಈ ಕೃತಿಯ ಮತ್ತೊಂದು ಅತ್ಯಂತ ಮಹತ್ವದ ಆಯಾಮವೆಂದರೆ ನೈತಿಕತೆ ಕುರಿತ ಚರ್ಚೆ. ಆಧುನಿಕತೆಯಲ್ಲಿ ನೈತಿಕತೆ ಹೇಗೆ ಕಾನೂನು ಮತ್ತು ನಿಯಮಗಳಾಗಿ ಕುಗ್ಗಿಹೋಗುತ್ತದೆ ಎಂಬುದನ್ನು ಬೌಮನ್ ಪ್ರಶ್ನಿಸುವ ರೀತಿ, ಮತ್ತು ಆಧುನಿಕೋತ್ತರ ಸ್ಥಿತಿಯಲ್ಲಿ ವ್ಯಕ್ತಿಗತ ನೈತಿಕ ಹೊಣೆಗಾರಿಕೆಯ ಅಗತ್ಯವನ್ನು ಆತ ಹೇಗೆ ಪುನರ್‌ಪ್ರತಿಪಾದಿಸುತ್ತಾನೆ ಎಂಬುದನ್ನು ಈ ಕೃತಿ ನಿರಂತರವಾಗಿ ಒತ್ತಿ ಹೇಳುತ್ತದೆ. ಒಳಿತು–ಕೆಡುಕು ಎಂಬ ಸರಳ ದ್ವಂದ್ವಗಳನ್ನು ತಿರಸ್ಕರಿಸಿ, ಮಾನವ ಬದುಕು ಮೂಲತಃ ಸಂದಿಗ್ಧತೆಯಲ್ಲೇ ಸಾಗುತ್ತದೆ ಎಂಬ ಬೌಮನ್‌ನ ನಿಲುವು ಇಲ್ಲಿ ಸ್ಪಷ್ಟವಾಗಿ ಮೂಡಿಬರುತ್ತದೆ. ಈ ನೈತಿಕ ಚಿಂತನೆ ಕೃತಿಗೆ ಒಂದು ಆಂತರಿಕ ಮಾನವೀಯ ನಾಡಿಯನ್ನು ಒದಗಿಸುವುದರ ಜೊತೆಗೆ, ದ್ರವಾಧುನಿಕತೆಯ ನಿರಾಶೆಯ ನಡುವೆಯೂ ಸಂಪೂರ್ಣ ನಿರಾಶಾವಾದಕ್ಕೆ ಜಾರದೆ ಇರುವ ಬೌಮನ್‌ನ ಧೋರಣೆಯನ್ನು ಓದುಗರಿಗೆ ತಲುಪಿಸುತ್ತದೆ.
ಈ ಎಲ್ಲಾ ತಾತ್ವಿಕ ಚರ್ಚೆಗಳ ನಡುವೆಯೂ ಡಾ.ಮಲ್ಲೇಶಪ್ಪರವರ ‘ಬೌಮನಿಜಂ’ ಕೃತಿಯ ಭಾಷೆ ಮತ್ತು ಅನುವಾದ ವಿಶೇಷವಾಗಿ ಗಮನ ಸೆಳೆಯುತ್ತದೆ. ಬೌಮನ್‌ನಂತಹ ಸಂಕೀರ್ಣ ಚಿಂತಕನ ಪರಿಕಲ್ಪನೆಗಳನ್ನು ಯಾಂತ್ರಿಕ ಪದಶಃ ಅನುವಾದಕ್ಕೆ ಒಳಪಡಿಸದೆ, ಅವುಗಳ ಭಾವಾರ್ಥವನ್ನು ಕನ್ನಡದ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೊಂದುವAತೆ ರೂಪಿಸಿರುವುದು ಈ ಕೃತಿಯ ಬಹುದೊಡ್ಡ ಸಾಧನೆ. ಕನ್ನಡದಲ್ಲಿ ಸಮಾಜಶಾಸ್ತç ಮತ್ತು ತತ್ವಶಾಸ್ತç ಬರವಣಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೃತಕತೆ ಇಲ್ಲದಂತೆ, ಸರಳವಾದರೂ ಗಂಭೀರವಾದ, ತರ್ಕಬದ್ಧವಾದ ಭಾಷೆಯಲ್ಲಿ ವಿಚಾರಗಳನ್ನು ಮುಂದಿಡಲಾಗಿದೆ. ಇದರಿಂದ ಈ ಕೃತಿ ಕೇವಲ ಸಂಶೋಧಕರಿಗೆ ಮಾತ್ರವಲ್ಲದೆ, ಸಮಕಾಲೀನ ಸಮಾಜವನ್ನು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಸಾಮಾನ್ಯ ಓದುಗರಿಗೂ ಇದು ಸುಲಭವಾಗಿ ತಲುಪುತ್ತದೆ.
ಒಟ್ಟಾರೆ, ‘ಬೌಮನಿಜಂ’ ಕೃತಿ ಬೌಮನ್‌ನ ಸಮಗ್ರ ತಾತ್ವಿಕತೆಯನ್ನು ಕನ್ನಡದಲ್ಲಿ ರೂಪುಗೊಳಿಸಿದ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಗ್ರಂಥವಾಗಿದೆ. ಇಷ್ಟೊಂದು ವಿಸ್ತೃತ ಪ್ರಮಾಣದಲ್ಲಿ, ಕ್ರಮಬದ್ಧವಾಗಿ ಮತ್ತು ತಾತ್ವಿಕ ಆಳದೊಂದಿಗೆ ಬೌಮನ್‌ನ ಚಿಂತನೆಗಳನ್ನು ಡಾ.ಮಲ್ಲೇಶಪ್ಪ ಸಿದ್ರಾಂಪೂರ ಇವರು ಕನ್ನಡದಲ್ಲಿ ಪರಿಚಯಿಸಿದ ಮೊಟ್ಟಮೊದಲ ಕೃತಿಯಿದು ಎಂಬುದು ಇದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಬೌಮನ್‌ನ ಚಿಂತನೆಗಳನ್ನು ಒಂದೇ ಕಡೆ ಸಂಗ್ರಹಿಸುವುದಷ್ಟೇ ಅಲ್ಲದೆ, ಅವುಗಳ ನಡುವಿನ ಆಂತರಿಕ ಸಂಬAಧಗಳನ್ನು ಸ್ಪಷ್ಟಗೊಳಿಸಿ, ಸಮಕಾಲೀನ ಸಮಾಜದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ತಾತ್ವಿಕ ಕಣ್ಣೊಚ್ಚುಗಳನ್ನು ಕನ್ನಡ ಓದುಗರಿಗೆ ಒದಗಿಸುತ್ತದೆ. ದ್ರವಾಧುನಿಕತೆಯ ಅಸ್ಥಿರತೆ ಮತ್ತು ಅನಿಶ್ಚಿತತೆಯ ನಡುವೆಯೂ ಮಾನವೀಯ ಆಶಾವಾದವನ್ನು ಸಂಪೂರ್ಣವಾಗಿ ಕೈಬಿಡದ ಬೌಮನ್‌ನ ಚಿಂತನೆಯ ಆತ್ಮವನ್ನು ಈ ಕೃತಿ ನಿಷ್ಠೆಯಿಂದ ಪ್ರತಿಬಿಂಬಿಸುತ್ತದೆ. ಈ ಕಾರಣದಿಂದ ‘ಬೌಮನಿಜಂ’ ಕೃತಿ ಬೌಮನ್ ಅಧ್ಯಯನಕ್ಕೆ ಮಾತ್ರವಲ್ಲ, ಇಂದಿನ ಸಮಾಜವನ್ನು ಗಂಭೀರವಾಗಿ, ವಿಮರ್ಶಾತ್ಮಕವಾಗಿ ಮತ್ತು ನೈತಿಕ ಸಂವೇದನೆಯೊAದಿಗೆ ಗ್ರಹಿಸಲು ಬಯಸುವ ಕನ್ನಡ ಬೌದ್ಧಿಕ ಲೋಕಕ್ಕೆ ಒಂದು ಅವಿಭಾಜ್ಯ, ದೀರ್ಘಕಾಲಿಕ ಕೊಡುಗೆಯೆಂದು ನಿರ್ವಿವಾದವಾಗಿ ಹೇಳಬಹುದು.
ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕೊಪ್ಪಳ-೫೮೩೨೩೧
ಮೊ:೯೪೪೮೫೭೦೩೪೦
ಇmಚಿiಟ: sಞoಣಟಿeಞಚಿಟ@gmಚಿiಟ.ಛಿom
Comments are closed.