ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ತಿಗೆ ಲಕ್ಷ್ಮೀ ಆಯ್ಕೆ – ಹಲಗೇರಿ ಗ್ರಾಮದ ವಿದ್ಯಾರ್ಥಿನಿ ಲಕ್ಷ್ಮೀ ‌ಹಡಪದ

Get real time updates directly on you device, subscribe now.

 

ಕೊಪ್ಪಳ:
ತಾಲೂಕಿನ ಹಲಗೇರಿ ಗ್ರಾಮದ ಹತ್ತನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಸಂಗಪ್ಪ ಹಡಪದ ಅವರು ಪ್ರತಿಷ್ಠಿತ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್–2025 ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (Child Rights Trust) ಆಯೋಜಿಸಿರುವ ಈ ಕಾರ್ಯಕ್ರಮವು ರಾಜ್ಯದ ಮಕ್ಕಳ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಪ್ರಮುಖ ವೇದಿಕೆ ಎನ್ನಲಾಗಿದೆ.

ಮಕ್ಕಳ ಧ್ವನಿಯಾಗಿ ಬೆಂಗಳೂರಿಗೆ:
ಲಕ್ಷ್ಮಿ ಅವರು ಗ್ರಾಮೀಣ ಮಕ್ಕಳ ಪರವಾಗಿ ಮಾತನಾಡಲು ಅವಕಾಶ ಪಡೆದಿದ್ದು, ಹಲಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಪ್ರಸ್ತಾಪಿಸಲು ಸಿದ್ಧರಾಗಿದ್ದಾರೆ. ನ.19 ಮತ್ತು 20, 2025ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳು ಭಾಗವಹಿಸಲಿದ್ದು, ಮಕ್ಕಳು ಗುರುತಿಸಿದ ಸಮಸ್ಯೆಗಳ ಆಧಾರದ ಮೇಲೆ ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತಿಗೆ ನಿರ್ಣಯಗಳನ್ನು ಸಲ್ಲಿಸಲಿದ್ದಾರೆ.

ಸ್ಪೂರ್ತಿ ಗುಂಪಿನ ಸೇವೆ ಮತ್ತು ಪ್ರೋತ್ಸಾಹ:
“ಸ್ಪೂರ್ತಿ ಗುಂಪಿನ ಸದಸ್ಯೆಯಾಗಿರುವ ನಾನು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನನಗೆ ಹೆಮ್ಮೆಯ ವಿಷಯ. ನನ್ನ ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರ ಪ್ರೋತ್ಸಾಹದಿಂದಾಗಿ ಗ್ರಾಮೀಣ ಮಕ್ಕಳ ಮೂಲಸೌಕರ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವೆ,” ಎಂದು ಲಕ್ಷ್ಮಿ ಹೇಳಿದರು.

ವಿದ್ಯಾರ್ಥಿನಿಗೆ ಅಭಿನಂದನೆ:
ಹಲಗೇರಿ ಪ್ರೌಢಶಾಲೆಯ SDMC ಅಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಲಕ್ಷ್ಮಿಯವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯಮಟ್ಟದ ವೇದಿಕೆಯಲ್ಲಿ ಅವರು ಉತ್ತಮ ಪ್ರದರ್ಶನ ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಹಕ್ಕುಗಳ ಸಂಸತ್‌ನ ಮಹತ್ವ:
ಮಕ್ಕಳನ್ನು ನಿರ್ಧಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸುವ ವೇದಿಕೆಯಾಗಿ ಈ ಸಂಸತ್ತು ಗುರುತಿಸಲಾಗಿದೆ. ಮಕ್ಕಳೇ ಗುರುತಿಸಿದ ಸಮಸ್ಯೆಗಳನ್ನು ಸರ್ಕಾರ ತುರ್ತಾಗಿ ಪರಿಗಣಿಸಲು ಒತ್ತಾಯಿಸುವ ವಿಶಿಷ್ಟ ಅವಕಾಶ ಇದಾಗಿದೆ.

ಕೋಟ್..
ಪ್ರತಿಷ್ಠಿತ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್–2025 ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಹಡಪದ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀಣ ಮಕ್ಕಳ ಮೂಲಸೌಕರ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮಂಡಿಸಿ ಸರ್ಕಾರದ ಗಮನ ಸೆಳೆಯುತ್ತಿರುವುದು ಸಂತಸ ತಂದಿದೆ. ಗ್ರಾಮಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸುವೆ.

ವರುಣಕುಮಾರ್ ನಿಟ್ಟಾಲಿ, ಅಧ್ಯಕ್ಷ, ಎಸ್ಡಿಎಂಸಿ, ಸರ್ಕಾರಿ ಪ್ರೌಢಶಾಲೆ, ಹಲಗೇರಿ

ಫೋಟೋ: ಪ್ರತಿಷ್ಠಿತ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್–2025 ಕಾರ್ಯಕ್ರಮಕ್ಕೆ ಆಯ್ಕೆಯಾದ ಲಕ್ಷ್ಮೀ ಹಡಪದ.

Get real time updates directly on you device, subscribe now.

Comments are closed.

error: Content is protected !!