ಸಂಭ್ರಮದ ಹಿರೇಬಗನಾಳ ಗವಿಸಿದ್ದೇಶ್ವರರ ರಥೋತ್ಸವ

ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಭಾನುವಾರ ಶ್ರೀಕರಿಯಮ್ಮ ದೇವಿ ಹಾಗೂ ಶ್ರೀಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ 33ನೇ ವರ್ಷದ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಹೂವಿನಹಡಗಲಿ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು ಸೇರಿದಂತೆ ನಾನಾ ಶ್ರೀಗಳು ಚಾಲನೆ ನೀಡಿದರು.
ರಥೋತ್ಸವಕ್ಕೆ ಆಗಮಿಸಿದ ಭಕ್ತರು ಉತ್ತತ್ತಿ ಹಾಗೂ ಬಾಳೆ ಹಣ್ಣು ಎಸೆದು ಭಕ್ತಿ ಮೆರೆದರು. ಜಾತ್ರೆಯ ಹಿನ್ನಲೆಯಲ್ಲಿ ರಥೋತ್ಸವವು ಕಾಸನಕಂಡಿ ಕ್ರಾಸ್ ವರೆಗಿನ ಪಾದಗಟ್ಟೆಯವರೆಗೆ ತೆರಳಿ ಮರಳಿ ಕರೆ ತರಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸದ ನಿಮಿತ್ತ ಭಾನುವಾರ ಬೆಳಿಗ್ಗೆ ಶ್ರೀ ಗವಿಸಿದ್ದೇಶ್ವರ ಸ್ವಾಮಿ ಕತೃ ಗದ್ದುಗೆಗೆ ಅಭಿಷೇಕ ಹಾಗೂ ಸಂಜೆ ಶ್ರೀಗವಿಸಿದ್ದೇಶ್ವರ ರಥೋತ್ಸವ, ಸಂಗೀತ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀಗವಿಮಠದ ಹತ್ತಿರ ಬಸವ ಪಟ(ಧ್ವಜಾರೋಹಣ) ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀದೇವಿಯ ಕಂಕಣಧಾರಣೆ ನಡೆಯಿತು. ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾಮಾತೆಯ ದರ್ಶನ ಮತ್ತು ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ ಆಯುವ ಕಾರ್ಯಕ್ರಮ ಜರುಗಿತು. ಶ್ರೀಮಾರುತೇಶ್ವರನಿಗೆ ಕುಂಕುಮ ಪೂಜೆ, ಗಿಡ, ಮುಳ್ಳು ಪಾಲ್ಕಿ, ಅಗ್ನಿ, ಮನೋರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ನಂತರ ಅನ್ನಸಂತರ್ಪಣೆ ಜರುಗಿತು.
ನಾಳೆ ಸಂಜೆ ಶ್ರೀಗವಿಸಿದ್ದೇಶ್ವರ ಮೂರ್ತಿ ಉತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ ಹಾಗೂ ಶ್ರೀಗವಿಸಿದ್ದೇಶ್ವರನ ಕಡಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯ ಸ್ವಾಮೀಜಿ, ಹಿರೇಸಿಂದೋಗಿ ಕಪ್ಪತ್ತಮಠದ ಚಿದಾನಂದ ಸ್ವಾಮೀಜಿ, ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಅನೇಕರು ಇದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮ ಹಿರಿಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
Comments are closed.