ವೃತ್ತಿಯ ಜೊತೆಯಲ್ಲಿ ಸಾಹಿತ್ಯದ ಕೃಷಿ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ: ಜುಮ್ಮಣ್ಣನ್ನವರ

Get real time updates directly on you device, subscribe now.


ಕೊಪ್ಪಳ:ಆರೋಗ್ಯ ಇಲಾಖೆಯ ನೌಕರನಾಗಿ ಕಾರ್ಯನಿರ್ವಹಿಸುವುದರ ಜೊತೆ ಜೊತೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಸಾಹಿತಿ ಶಿವರಾಯಪ್ಪ ನೀರಲೋಟಿ ಅವರ ಕಾರ್ಯವು ಬಹಳ ಶ್ಲಾಘನೀಯವಾಗಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ಹೇಳಿದರು.
ಅವರು ಭಾನುವಾರ ನಗರದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಕನಸು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಶಿವರಾಯಪ್ಪ ನೀರಲೋಟಿ ಅವರ ಜೋಪಾನ ಕೃತಿ ಲೋಕಾರ್ಪಣೆ,ಶ್ರೀದೇವಿ ನೀರಲೋಟಿ ಪ್ರಕಾಶನದ ಲಾಂಛನ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಸರಕಾರಿ ನೌಕರರಲ್ಲಿ ಅತ್ಯಂತ ಹೆಚ್ಚು ಒತ್ತಡದಲ್ಲಿ ಹಾಗೂ ಹೆಚ್ಚು ಜನ ಸಾಮಾನ್ಯರ ಜೊತೆಯಲ್ಲಿ ಕೆಲಸ ಮಾಡುವ ಇಲಾಖೆ ಆರೋಗ್ಯ ಇಲಾಖೆ ಆಗಿದೆ.ಇಂತಹ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶಿವರಾಯಪ್ಪ ನೀರಲೋಟಿ ಅವರು ತಮ್ಮ ಕರ್ತವ್ಯದ ಜೊತೆಯಲ್ಲಿ ಸಾಹಿತ್ಯದ ವಲಯದಲ್ಲಿ ಗುರುತಿಸುವ ನಿಟ್ಟಿನಲ್ಲಿ ತಮ್ಮ ಮೊದಲ ಕೃತಿಯನ್ನು ಹೊರತಂದಿದ್ದಾರೆ.ಜೋಪಾನ ಕೃತಿ ಬಹಳ ಉತ್ತಮ ರೀತಿಯ ಸಾಹಿತ್ಯವನ್ನು ಒಳಗೊಂಡ ಕೃತಿಯಾಗಿದೆ.ಕೃತಿಯಲ್ಲಿ ಬಳಸಿರುವ ಪದಗಳ ವಾಸ್ತವ ಜೀವನದ ದರ್ಶನವನ್ನು ಮಾಡುತ್ತಿವೆ.ಬದುಕಿನ ಬವಣೆಯ ಕುರಿತಾಗಿ ಉತ್ತಮ ರೀತಿಯಲ್ಲಿ ಕೃತಿಯನ್ನು ರಚನೆ ಮಾಡುವುದರ ಜೊತೆಗೆ ಇಂತಹ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಬರಲಿ ಅಲ್ಲದೇ ಇಂತಹ ಕೃತಿಯನ್ನು ಪ್ರತಿಯೊಬ್ಬರು ಕೊಂಡು ಓದುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.
ಹಿರೇಸಿಂದೋಗಿಯ ಶ್ರೀದೇವಿ ಪ್ರಕಾಶನ ಲಾಂಛನವನ್ನು ಬಿಡುಗಡೆ ಮಾಡಿದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡಿ, ತಮ್ಮ ತಾಯಿಯ ಹೆಸರಿನಲ್ಲಿ ಪ್ರಕಾಶವನ್ನು ಮಾಡಿರುವ ಕಾರ್ಯ ಮಾದರಿಯಾಗಿದೆ.ಪ್ರಕಾಶನದ ಅಡಿಯಲ್ಲಿ ಅನೇಕ ಕೃತಿಗಳು ಹೊರಬರಲಿ.ಅಲ್ಲದೇ ಅನೇಕ ಲೇಖಕರ ಕೃತಿಗಳಿಗೆ ಆಶ್ರಯ ನೀಡುವ ಕಾರ್ಯವಾಗಲಿ. ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ಸವಾರಿಯ ಮೂಲಕ ಪೊರಬಂದರ ಹಾಗೂ ಕಟಕ್ ತನಕ ಪ್ರಯಾಣ ಮಾಡಿದ ಶಿವರಾಯಪ್ಪ ನೀರಲೋಟಿ ಅವರ ಕ್ಷೇತ್ರವು ಬಹಳ ವಿಸ್ತಾರವಾಗಿದ್ದು, ಇವರು ಶಿವೀನೀ ಎಂಬ ಕಾವ್ಯಾ ನಾಮದಿಂದ ಕೃತಿ ರಚನೆಯಲ್ಲಿ ತೊಡಗಿದ್ದಾರೆ.ಅವರ ಕೃತಿಯಲ್ಲಿ ಬಳಸಿರುವ ಸಾಹಿತ್ಯ ಗಟ್ಟಿತನದಿಂದ ಕೂಡಿದೆ ಎಂದು ಹೇಳಿದರು.
ಕೃತಿ ಪರಿಚಯವನ್ನು ಶಿಕ್ಷಕರು ಹಾಗೂ ಕಾರಟಗಿ ಭಾಗದ ಸಾಹಿತಿಗಳಾದ ರಮೇಶ ಬನ್ನಿಕೊಪ್ಪ ಅವರು ಸವಿವರವಾಗಿ ತಿಳಿಸಿಕೊಟ್ಟರು.
ದಿವ್ಯ ಸಾನಿಧ್ಯವನ್ನು ಕಪ್ಪತಮಠದ ಚಿದಾನಂದ ಮಹಾಸ್ವಾಮಿಗಳು,ಅಳವಂಡಿ ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಪ್ಪ ನೀರಲೋಟಿ ರೇಷ್ಮೇ ಇಲಾಖೆ ನಿವೃತ್ತ ನೌಕರರು ವಹಿಸಿದ್ದರು.
ಕಾರ್ಯಕ್ರದಲ್ಲಿ ಬಳ್ಳಾರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳಾದ ಪಿ.ಎಸ್.ಅಮರದೀಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನಗೌಡ ಪಾಟೀಲ,ಯಲಬುರ್ಗಾ ತಾಲೂಕ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗಪ್ಪ ಶ್ಯಾಗೋಟಿ,ಹುಲಕೋಟಿ ಸಾಹಿತಿಗಳಾದ ಮರಳುಸಿದ್ದಪ್ಪ ದೊಡ್ಡಮನಿ,ಶರಣಬಸಪ್ಪ ಬಿಳಿಎಲೆ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿವಯೋಗಪ್ಪ ಜಡಿ ನಿರೂಪಿಸಿದರು.
ಹಿರೇಸಿಂದೋಗಿ ಶಾಲೆಯ ಶಿಕ್ಷಕರಾದ ಪರಶುರಾಮ ಸ್ವಾಗತಿಸಿ,ಸಾಹಿತಿ ಬಿ.ಎನ್.ಹೊರಪೇಟೆ ವಂದಿಸಿದರು.
ಇದೇ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಂತಕುಮಾರಿ ಮಂಗಳೂರು,ಸAಜಯ ಸಜ್ಜನ,ಡಾ.ಶಿವಕುಮಾರ.ಬಿ,ಡಾ.ವೆಂಕಟೇಶ,ಡಾ.ಇರ್ಪಾನ್ ಅಂಜುಮ್,ಕೋಡಿಹಳ್ಳಿ ಕೋಟ್ರೇಶ,ಬಸವರಾಜ ಹೆಸರೂರು,ಗುರುಸ್ವಾಮಿ,ಶಿವಪ್ಪ ಹಡಪದ,ಕೋಟ್ರೇಶ ಹೈದ್ರಿ,ಏಳುಕೋಟೇಶ ಕೋಮಲಾಪುರ,ಬಸವರಾಜ ಹೂಗಾರ ಅವರನ್ನು ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!