ಭ್ರಷ್ಟ ಸಿಂಡಿಕೇಟ್ ಗೆ ಶಾಸಕರ ಆಶೀರ್ವಾದ ಇದೆ: ಸಿವಿಸಿ
ಕೊಪ್ಪಳ: ಕೊಪ್ಪಳದಲ್ಲಿ ಆಡಳಿತ ವ್ಯವಸ್ಥೆ ಭ್ರಷ್ಟತೆಯ ಉತ್ತುಂಗಕ್ಕೆ ತಲುಪಿದೆ ಎಂಬುದನ್ನು ಲೋಕಾಯುಕ್ತ
ಡಿ ವೈ ಎಸ್ ಪಿ ವಸಂತ್ ಕುಮಾರ್ ಅವರ ದಿಡೀರ್ ವರ್ಗಾವಣೆ ಸಾಬೀತುಪಡಿಸಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಭ್ರಷ್ಟ ವ್ಯವಸ್ಥೆಯ ಪೋಷಕರಿಗೆ, ಅಕ್ರಮ ಮರಳು ಮಾಫಿಯಾ ನಿಯಂತ್ರಕರಿಗೆ, ಸರಕಾರಿ ಕಾಮಗಾರಿಗಳ ಲೂಟಿಕೋರರಿಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಸಿಂಹ ಸ್ವಪ್ನ ವಾಗಿದ್ದಾರೆ. ಆದ್ದರಿಂದಲೇ ದಕ್ಷ ಅಧಿಕಾರಿಗಳನ್ನು ಕೊಪ್ಪಳದಿಂದ ವರ್ಗಾಯಿಸಲಾಗುತ್ತಿದೆ. ದಕ್ಷತೆ, ಅಭಿವೃದ್ಧಿ, ಪ್ರಾಮಾಣಿಕತೆ ಹಾಗೂ ಮೌಲ್ಯಗಳ ಬಗ್ಗೆ ಶಾಸಕರಿಗೆ ಕಿಂಚತ್ತಾದರೂ ಗೌರವ ಇದ್ದರೆ ಈ ಕೂಡಲೇ ವರ್ಗಾವಣೆ ಆದೇಶವನ್ನು ರದ್ದು ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
” ಕಳೆದ 2023 – 24ನೇ ಸಾಲಿನಲ್ಲಿ 336 ಕಾಮಗಾರಿಗಳಲಿ 10 ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಎಂಬ ಆರೋಪಗಳಿವೆ. ಅದರ ಕುರಿತು ದಾಖಲೆಗಳ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ದಕ್ಷ ಅಧಿಕಾರಿಯ ವರ್ಗಾವಣೆಯ ಮೂಲಕ ಶಾಸಕರು ಏನು ಸಂದೇಶ ಕೊಡಲು ಹೊರಟಿದ್ದಾರೆ? ಪರಿಸ್ಥಿತಿಯನ್ನು ಗಮನಿಸಿದರೆ ಭ್ರಷ್ಟತೆಯ ಸಿಂಡಿಕೇಟ್ ಗೆ ಶಾಸಕರ ಆಶೀರ್ವಾದ ಇದ್ದಂತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ದಾಳಿಗೆ ಒಳಗಾದವರೆಲ್ಲರೂ ಶಾಸಕರ ಹಿಂಬಾಲಕರು ಎಂಬುದು ಗಮನಾರ್ಹ. ವರ್ಗಾವಣೆ ರದ್ದು ಮಾಡಿ ದಕ್ಷತೆಯ ಪರವಾಗಿದ್ದೇನೆ ಎಂದು ಸಾಬೀತುಪಡಿಸಿ. ಇಲ್ಲವೇ ಭ್ರಷ್ಟತೆಯ ಪರವಾಗಿದ್ದೇನೆ ಇಂದು ಒಪ್ಪಿಕೊಳ್ಳಿ ಎಂದು ಶಾಸಕರಿಗೆ ಸವಾಲ್ ಎಸೆದಿದ್ದಾರೆ.
ದಕ್ಷ ಅಧಿಕಾರಿಗಳ ವಿರುದ್ಧ ವರ್ಗಾವಣೆ ಅಸ್ತ್ರ ಪ್ರಯೋಗಿಸುವ ಶಾಸಕರು ಹಾನಿಕಾರಕ ಕಾರ್ಖಾನೆಗಳ ವಿರುದ್ಧ ಏಕೆ ಮೌನವಾಗಿದ್ದಾರೆ? ಕೊಪ್ಪಳ ವಿಧಾನಸಭಾ ಕ್ಷೇತ್ರದಾದ್ಯಂತ ಮೂಲಭೂತ ಸೌಕರ್ಯ ಸರಿಪಡಿಸಲಾರದಷ್ಟು ಏಕೆ ಹದಗೆಟ್ಟಿವೆ? ಈ ಪ್ರಶ್ನೆಗಳಿಗೂ, ಕಾಮಗಾರಿಗಳ ಭ್ರಷ್ಟಾಚಾರಕ್ಕೂ ಹಾಗೂ ದಕ್ಷ ಅಧಿಕಾರಿಗಳ ವರ್ಗಾವಣೆಗೂ ನೇರ ಸಂಬಂಧವಿದೆ ಎಂದು ಕಿಡಿ ಕಾರಿದ್ದಾರೆ.
Comments are closed.