ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ: ಕೆ.ವಿ.ಪ್ರಭಾಕರ್

Get real time updates directly on you device, subscribe now.

 

ಇವತ್ತಿನ‌ ನನ್ನ ಈ ಸನ್ಮಾನ ಆ ಪರಂಪರೆಗೆ ಸಲ್ಲುತ್ತದೆ: ಕೆ.ವಿ.ಪಿ

ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿದ ಮುಖ್ಯಮಂತ್ರಿಗಳು, ಬೆವರಿನ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಟ್ಟರು: ಕೆ.ವಿ.ಪಿ

ಬೆಳಗಾವಿ ಸೆ

 

14:
ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಒಂದು ಸಿದ್ದಾಂತ. ಬೆವರಿನ‌ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದು ಕೊಡುವ ಸಿದ್ಧಾಂತ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.‌

ಪತ್ರಕರ್ತನಾಗಿ ಎರಡು ಕಣ್ಣುಗಳಿಂದ ಸಮಾಜವನ್ನು ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನೊಬ್ಬನನ್ನು ಗಮನಿಸುತ್ತಿರುತ್ತದೆ ಎನ್ನುವ ಸಾಮಾಜಿಕ ಎಚ್ಚರವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಲ್ಲಿ ಕಲಿತುಕೊಂಡೆ.

ಒಂದು ಬಲಿಷ್ಠವಾದ ವ್ಯವಸ್ಥೆ ಏಕಲವ್ಯರ ಬೆರಳುಗಳನ್ನು, ಅವಕಾಶ ಮತ್ತು ಪ್ರತಿಭೆಗಳನ್ನು ಹೇಗೆ ಕಿತ್ತುಕೊಳ್ಳುತ್ತದೆ ಎನ್ನುವುದನ್ನು ನಾನು ಪತ್ರಕರ್ತನಾಗಿ ಕಲಿತಿದ್ದೆ. ಆದರೆ, ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ ಬೆವರಿನ‌ ಸಂಸ್ಕೃತಿಗೆ ಘನತೆ ತರುವುದು ಹೇಗೆ ಎನ್ನುವುದನ್ನು ನಾನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಲಿತೆ. ನಾನು ಮಾನ್ಯ ಮುಖ್ಯಮಂತ್ರಿಗಳ ನೆರಳಿಗೆ ಬಂದು ಒಂದು ಡಜನ್ ವರ್ಷಗಳೇ ಕಳೆದವು. ಈ ಅವಧಿಯಲ್ಲಿ ನಾನು ಗ್ರಹಿಸಿದ್ದು ಏನೆಂದರೆ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಬ್ಬ ರಾಜಕೀಯ ನಾಯಕರಲ್ಲ. ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ. ಆ ಪರಂಪರೆ ಸೃಷ್ಟಿಸಿದ ಅವಕಾಶಗಳ ಕಾರಣಕ್ಕೇ ಇಂದು ಇಲ್ಲಿ ನಾನು ಸನ್ಮಾನಿತನಾಗುತ್ತಿದ್ದೇನೆ. ಆದ್ದರಿಂದ ಈ ಸನ್ಮಾನವನ್ನು ನಾನು ಸಿದ್ಧರಾಮಯ್ಯ ಅವರ ಪರಂಪರೆಗೆ ಅರ್ಪಿಸುತ್ತೇನೆ ಎಂದರು.

ವಿಧಾನಸೌಧದಲ್ಲಿ ಬೇರೆ ಬೇರೆ ಜನ ಸಮುದಾಯಗಳ, ದುಡಿಯುವ ವರ್ಗಗಳ ಸಭೆಗಳು ನಡೆಯುವಾಗ ಅವರೆಲ್ಲರ ಬಾಯಲ್ಲಿ ಬರುವ ಒಂದು ಮಾತು ಪದೇ ಪದೇ ನನ್ನ ಕಿವಿಗೆ ಬೀಳುತ್ತದೆ. ” ಸಾರ್, ನಮಗೆ ನ್ಯಾಯ ಸಿಕ್ಕರೆ ನಿಮ್ಮ ಅವಧಿಯಲ್ಲೇ ಸಿಗಬೇಕು ಸರ್. ಹಿಂದಿನವರೂ ಮಾಡಿಲ್ಲ, ಮುಂದೆ ಬರುವವರೂ ಮಾಡುವುದೂ ಕಷ್ಟ ಸರ್”. ಈ ಮಾತು ನನ್ನನ್ನು ಸದಾ ಎಚ್ಚರದಲ್ಲಿ ಇರುವಂತೆ ಮಾಡಿ ನನ್ನ ಕರ್ತವ್ಯ ಪ್ರಜ್ಞೆಯನ್ನು ರೂಪಿಸಿದೆ ಎಂದರು.

ಎರಡು ಬಾರಿ ಮುಖ್ಯಮಂತ್ರಿ ಆಗುವುದು, ಸತತ ಮೂರು ದಶಕಗಳ ಕಾಲ ಜನ ಸಮುದಾಯಗಳ ಭರವಸೆಯ ನಾಯಕರಾಗಿ ರೂಪುಗೊಂಡಿದ್ದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಬದ್ಧತೆ ನೇರವಾಗಿ ನನ್ನ ಮೇಲೆ ಪ್ರಭಾವ ಬೀರಿದೆ ಎಂದು ವಿವರಿಸಿದರು.

ಪತ್ರಕರ್ತ ಸಮುದಾಯದ 20-25 ವರ್ಷಗಳ ಬೇಡಿಕೆಗೆ ನಾನು ಮುಕ್ತಿ ದೊರಕಿಸಿಕೊಟ್ಟೆ ಎಂದು ನೀವೆಲ್ಲಾ ಹೇಳುತ್ತಿದ್ದೀರಿ. ಇದೆಲ್ಲವೂ ಒಬ್ಬನಿಂದ ಆಗಿದ್ದಲ್ಲ, ಮುಖ್ಯಮಂತ್ರಿಗಳು ನನಗೆ ಕೊಟ್ಟ ಶಕ್ತಿ ಮತ್ತು ಪತ್ರಕರ್ತರ ಸಂಘದ ಸತತ ಹೋರಾಟ, ನಿರಂತರ ಪ್ರಯತ್ನ ಕೂಡ ಕಾರಣ ಎಂದು ಹೇಳಲು ಬಯಸುತ್ತೇನೆ.

ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದಿಲೀಪ್ ಕುರಂದವಾಡೆ ಇಬ್ಬರೂ ಅಸಾಧ್ಯ ಸಂಘಟಕರು ಮತ್ತು ಅಷ್ಟೇ ಬದ್ಧತೆಯುಳ್ಳವರು. ನಿಮ್ಮಲ್ಲರ ಹಾರೈಕೆ ಮತ್ತು ಬೆಂಬಲದಲ್ಲಿ ನಾನು ಇಲ್ಲಿಯವರೆಗೂ ಹೆಜ್ಜೆ ಇಟ್ಟಿದ್ದೇನೆ. ನಡೆಯಬೇಕಾಗಿರುವ ಹಾದಿ ಬಹಳ ಇದೆ. ಆದರೆ, ನನಗೆ ಒದಗಿ ಬಂದಿರುವ ಈ ಅವಕಾಶದಲ್ಲಿ ನಾನು ಪತ್ರಕರ್ತರ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು ಎನ್ನುವ ಖಚಿತ ನಿರ್ಧಾರ ಮಾಡಿಯೇ ಕೆಲಸ ಮಾಡುತ್ತಿದ್ದೇನೆ.

ಹತ್ತಾರು ವರ್ಷಗಳಿಂದ ಜಡ್ಡುಗಟ್ಟಿರುವ ತಾಂತ್ರಿಕ‌ ಅಡೆ ತಡೆಗಳನ್ನು, ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಇಲಾಖೆಯ ಕಾರ್ಯದರ್ಶಿಗಳಾದ ಕಾವೇರಿ ಮೇಡಂ, ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರೂ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ನಿಮ್ಮೆಲ್ಲರ ಒತ್ತಾಯ ಮತ್ತು ಆಗ್ರಹಗಳಿಗೂ ನಾನು ಕಿವಿಯಾಗಿದ್ದೇನೆ. ಎಲ್ಲರ ಒಟ್ಟು ಶ್ರಮದಲ್ಲಿ ಇನ್ನಷ್ಟು ಅನುಕೂಲಗಳು ಪತ್ರಕರ್ತ ಸಮುದಾಯಕ್ಕೆ ಸಿಗಲಿದೆ ಎಂದು ಹೇಳುತ್ತಾ, ಇವತ್ತಿನ‌ ಈ ಸನ್ಮಾನ ಮತ್ತು ದೀಪಕ್ ಕುರಂದವಾಡೆ ತಂಡದ ಪ್ರೀತಿ, ಅಭಿಮಾನಕ್ಕೆ ಆಭಾರಿ‌ ಆಗಿದ್ದೇನೆ ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷರಾದ ದೀಪಕ್ ಕುರಂದವಾಡೆ, KUWJ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ.ಭೀಮಶಿ ಎಲ್. ಜಾರಕಿಹೊಳಿ, ಸಂಘದ ಮುಖಂಡರಾದ ಮದನ್ ಗೌಡ ಸೇರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!