ಸಮಾಜಮುಖಿ ಚಿಂತನೆ ರೂಢಿಸುವುದೇ ಗುರುಗಳ ನಿಜವಾದ ಹೊಣೆಗಾರಿಕೆ-ಪ್ರೊ. ಬಿ.ಕೆ. ರವಿ
ಕೊಪ್ಪಳ,(ಸೆ.೫): ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ. ಅವರ ಜೀವನ ಮೌಲ್ಯಗಳನ್ನು ಬೆಳೆಸುವುದು, ನೈತಿಕ ದಾರಿ ತೋರಿಸುವುದು ಹಾಗೂ ಸಮಾಜಮುಖಿ ಚಿಂತನೆ ರೂಢಿಸುವುದೇ ಗುರುಗಳ ನಿಜವಾದ ಹೊಣೆಗಾರಿಕೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಭಿಪ್ರಾಯಪಟ್ಟರು.

ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದನಾಡಿದರು,
ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನವಷ್ಟೇ ಅಲ್ಲ, ಜೀವನೋಪಾಯದ ಕೌಶಲ್ಯಗಳನ್ನು ಕಲಿಯಬೇಕಿದೆ. ಅದನ್ನು ಸಾಧಿಸಲು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಪೂರ್ಣವಾಗಿ ಬೆರೆತು, ಹೊಸ ತಂತ್ರಜ್ಞಾನ ಮತ್ತು ಸಮಾಜದ ಅಗತ್ಯಗಳಿಗೆ ತಕ್ಕಂತೆ ಪಾಠಮಾಡಬೇಕು. ಗುರುಗಳು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಾಗರಿಕರ ಗುಣ ಬೆಳೆಸಿದರೆ, ದೇಶದ ಭವಿಷ್ಯ ಭದ್ರವಾಗುತ್ತದೆ ಎಂದರು.
ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿ, ಶಿಕ್ಷಕರು ಸಮಾಜದ ಮೌಲ್ಯ ಕಾಪಾಡುವವರಾಗಿದ್ದಾರೆ. ನಿಜವಾದ ಶಿಕ್ಷಕನು ವಿದ್ಯಾರ್ಥಿಗಳ ಜೀವನವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಅವರ ತ್ಯಾಗ, ಶ್ರಮ, ಸೇವಾಭಾವವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರವೀಣ್ ಪಾಟೀಲ್, ಅಯ್ಯಪ್ಪ, ಸಂತೋಷಕುಮಾರ ಹೆಚ್.ಕೆ., ರೋಹಿತ್ ಕುಮಾರ, ಅಲ್ತಾಪ್ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.
Comments are closed.