ಕೊಪ್ಪಳದ ನೀರೋ ಪಿಟೀಲು ಬಾರಿಸುವುದು ನಿಲ್ಲಿಸಲಿ: ಸಿವಿಸಿ

ಕೊಪ್ಪಳ: ಅಧಿಕಾರದ ಹಪಾಹಪಿಗೆ ಬಿದ್ದಿರುವ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ರೈತರ ಶಾಪ ತಟ್ಟುವುದು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿವಿ ಚಂದ್ರಶೇಖರ್ ಛಾಟಿ ಬೀಸಿದ್ದಾರೆ.
ಯೂರಿಯಾ ಗೊಬ್ಬರಕ್ಕಾಗಿ ರೈತರು ಕ್ಷೇತ್ರದಲ್ಲಿ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಮುಂಗಾರು ಮಳೆಯಾದರೂ ಯೂರಿಯಾ ಕೊರತೆಯಿಂದ ರೈತರ ಭವಿಷ್ಯ ಮಂಕಾಗಿದೆ. ರೈತರು ದಿನಗಟ್ಟಲೆ ಕಿಲೊಮಿಟರ್ ಉದ್ದದ ಸರತಿಯಲ್ಲಿ ಗೊಬ್ಬರಕ್ಕಾಗಿ ಕಾಯುತ್ತಿರುವುದು ಶಾಸಕರ ಹೊಣೆಗೇಡಿತನ ಹಾಗೂ ನಿಷ್ಕ್ರಿಯತೆಗೆ ಕನ್ನಡಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ ಮಕ್ಕಳು ಶಾಲೆ ಬಿಟ್ಟು ಸರತಿ ಸಾಲಿನಲ್ಲಿ ಗೊಬ್ಬರಕ್ಕಾಗಿ ನಿಂತಿರುವುದು ಪರಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ರೋಮ್ ಸಾಮ್ರಾಜ್ಯ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸಿದಂತೆ ರೈತರ ಬದುಕಿನಲ್ಲಿ ಧಗೆ ಉಂಟಾದಾಗ ಶಾಸಕರು ಅಧಿಕಾರಕ್ಕಾಗಿ ರಾಜಕೀಯದಲ್ಲಿ ತೊಡಗಿರುವುದು ಈ ಕ್ಷೇತ್ರದ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕರು ಕ್ರಿಯಾಶೀಲವಾಗಿದ್ದರೆ ಕಾರ್ಮಿಕ ಇಲಾಖೆಯ ಜಿಲ್ಲೆಯ ಪ್ರಥಮ ಶ್ರಮಿಕರ ಮಕ್ಕಳ ವಸತಿ ಶಾಲೆ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ದೊರಕುತ್ತಿತ್ತು. ಈಗ ಅದು ಪಕ್ಕದ ಕ್ಷೇತ್ರಕ್ಕೆ ಲಭಿಸಿದೆ. ಇನ್ನಾದರೂ ಕುಂಭಕರ್ಣ ನಿದ್ರೆಯಿಂದ ಶಾಸಕರು ಏಳಬೇಕು. ಇಲ್ಲದಿದ್ದರೆ ಜನರೇ ಅವರನ್ನು ಅವರ ಸ್ಥಾನದಿಂದ ಎಬ್ಬಿಸುತ್ತಾರೆ. ಶಾಸಕರ ನಿಷ್ಕ್ರಿಯತೆ ವಿರುದ್ಧ ಶೀಘ್ರದಲ್ಲಿ ತಮ್ಮ ಪಕ್ಷ ಬೃಹತ್ ಆಂದೋಲನ ನಡೆಸಲಿದೆ ಎಂದು ಹೇಳಿದ್ದಾರೆ.
Comments are closed.