ಕನ್ನಡ ಭಾಷೆ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅಪಾರ

ಕೊಪ್ಪಳ : ಕರ್ನಾಟಕದ ಏಕೀಕರಣದಲ್ಲಿ ಹಾಗೂ ಕನ್ನಡ ನಾಡು, ಭಾಷೆ, ಸಾಹಿತ್ಯ ಕ್ಷೇತ್ರ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಪತ್ರಕರ್ತರಿಗೆ ಗೌರವ ಇದೆ ಜೊತೆಗೆ ಸಮಾಜವನ್ನು ಅಭಿವೃದ್ಧಿ ಮಾಡುವ ಹೊಣೆಗಾರಿಕೆ ಕೂಡವಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಹೇಳಿದರು.
ಕೊಪ್ಪಳ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಭಾಷೆ ನಾಶಪಡಿಸಂತಹ,ಜನಗಳಲ್ಲಿ ಗೊಂದಲ ಮೂಡಿಸು ವಂತಹ ಮತ್ತು ಜನರ ಭಾವನೆಗಳಿಗೆ ಧಕ್ಕೆಯಾಗದಂತಹ ವರದಿ ಮಾಡುವುದು ಪತ್ರಿಕೋದ್ಯಮದ ಆದ್ಯ ಕರ್ತವ್ಯವಾಗಿದೆ. ಕನ್ನಡ ಪತ್ರಿಕೋದ್ಯಮವು ಕನ್ನಡ ಭಾಷೆಯ ಬೆಳವಣಿಗೆಯನ್ನು ಹೆಚ್ಚು ಮಾಡಬೇಕು. ಯುವ ಪತ್ರಕರ್ತರು ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ದಿಂದ ಮಾಧ್ಯಮದಲ್ಲಿ ಕ್ರಾಂತಿ ಕಾರಕ ಬದಲಾವಣೆಯಾಗಿದೆ ಎಂದರು.
ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ನಿಕಾಯ ಡೀನ್ ಪ್ರೊ.ವಿ.ಸುದೇಶ ಮಾತನಾಡಿ, ಪತ್ರಿಕೋದ್ಯಮ ಸಮಾಜದಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದರೆ ಪತ್ರಿಕೋದ್ಯಮಕ್ಕೆ ಪತ್ರಿಕಾ ಸ್ವಾತಂತ್ರ್ಯ ನೀಡುವುದು ಬಹಳ ಮುಖ್ಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಪತ್ರಿಕೋದ್ಯಮವು ಮಾಡುತ್ತಿದೆ. ಪ್ರತಿದಿನ ಸಂಶೋಧನಾತ್ಮಕವಾಗಿ ವಿಷಯಗಳನ್ನು ಅವಲೋಕಿಸಿ ಸಮಾಜದ ಮುಂದೆ ತೆರೆದಿಡಲು ಸಹಾಯಕವಾಗುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಸಾಮಾಜಿಕ ಅನ್ಯಾಯವನ್ನು ತೆರೆದಿಡುವವರೇ ಪತ್ರಕರ್ತರು. ಪತ್ರಕರ್ತರಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುವ ಬರವಣಿಗೆಗಳು ಹಾಗೂ ಲೇಖನಗಳು ಹೆಚ್ಚು ಬರಲಿ ಹಾಗೂ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಹಾಗೂ ಸಿದ್ಧಾಂತಗಳನ್ನು ಜನರಿಗೆ ಹಾಗೂ ಸಮಾಜಕ್ಕೆ ತಿಳಿಸಬೇಕು. ಪತ್ರಿಕೋದ್ಯಮದ ಹಾಗೂ ವಿವಿಧ ವಿಷಯಗಳ ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತಷ್ಟು ಸಹಾಯಕವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳು ಇದ್ದು ಹಾಗೆ, ಭಾರತದ ಸಂವಿಧಾನದಲ್ಲಿರುವ ಸಾರ್ವಭೌಮ ಸಮಾಜವಾದ ಸ್ವಾತಂತ್ರ್ಯ ಭ್ರಾತೃತ್ವದ ಭಾವನೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಕನ್ನಡ ಪತ್ರಿಕೋದ್ಯಮ ದೇಶದ ಪತ್ರಿಕೋದ್ಯಮದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ, ಕನ್ನಡ ಪತ್ರಿಕೋದ್ಯಮ ಜನಸ್ನೇಹಿಯಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಅದಕ್ಕೆ ಕಾರಣ ಪತ್ರಕರ್ತರು. ಪತ್ರಕರ್ತರು ಅನೇಕ ಒತ್ತಡಗಳಿದ್ದರೂ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಜೊತೆಗೆ ಕೊಪ್ಪಳ ವಿಶ್ವವಿದ್ಯಾಲಯ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಹಂತ ಹಂತವಾಗಿ ಬೆಳೆಯುತ್ತಿದೆ ಹಾಗಾಗಿ ವಿಶ್ವವಿದ್ಯಾಲಯಕ್ಕೆ ಒಂದು ಸ್ವಂತ ಕಟ್ಟಡವನ್ನು ಸರ್ಕಾರದ ಕಡೆಯಿಂದ ಮಂಜೂರು ಮಾಡಿಸಲು ಈ ಭಾಗದ ಶಾಸಕರು ಮತ್ತು ಸಚಿವರು ಧ್ವನಿ ಎತ್ತಬೇಕು ಎಂದರು.
ಇದೆ ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಗೊಳಿಸಿದರು.
ಕೊಪ್ಪಳ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ, ಸಿಂಡಿಕೇಟ್ ಹಾಗೂ ಆಕಾಡೆಮಿಕ್ ಕೌನ್ಸಿಲ್ ಸದಸ್ಯರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕರಾದ ಸಂತೋಷಕುಮಾರ ಹೆಚ್ ಕೆ. ರಂಗನಾಥ್, ಶ್ರೀ ಕಾಂತ್, ವಿವಿಧ ವಿಭಾಗಗಳ ಅಧ್ಯಾಪಕರು, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Comments are closed.