ಭಾಗ್ಯನಗರ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಸನ್ನಿಹಿತಪೂರಕ ಸೌಲಭ್ಯಗಳ ಮಾಹಿತಿ ಸಂಗ್ರಹಿಸಿದ ನಿಯೋಗ

Get real time updates directly on you device, subscribe now.

ಭಾಗ್ಯನಗರ (ಕೊಪ್ಪಳ): ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಕುರಿತಂತೆ ಇತ್ತೀಚೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಕಾಲೇಜು ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾಲೇಜು ಪ್ರಾರಂಭಿಸಲು ಬೇಕಾದ ಕನಿಷ್ಠ ಸೌಲಭ್ಯಗಳ ಲಭ್ಯತೆ ಕುರಿತು ಶುಕ್ರವಾರ ಪರಿಶೀಲನೆ ನಡೆಸಿತು.

ಕೊಪ್ಪಳದ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತ ನಾಯಕ ದೊಡ್ಡಮನಿ ಹಾಗೂ ಉಪನ್ಯಾಸಕರಾದ ಶಿವನಾಥ್ ಇ.ಜಿ. ಅವರಿದ್ದ ನಿಯೋಗವು ಸ್ಥಳ ಲಭ್ಯತೆ ಹೊಂದಿರುವ ಭಾಗ್ಯನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ್ ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪದವಿ ಮಹಾವಿದ್ಯಾಲಯ ಪ್ರಾರಂಭಿಸಲು ಬೇಕಾದ ಮೂಲಸೌಕರ್ಯಗಳು ಲಭ್ಯವಿರುವುದನ್ನು ತೋರಿಸಿ, ಪೂರಕ ಮಾಹಿತಿ ಒದಗಿಸಿದರು.

ಪದವಿ ಮಹಾವಿದ್ಯಾಲಯದ ಪ್ರಾರಂಭಕ್ಕೆ ಬೇಕಾದ ಕೊಠಡಿಗಳು, ಶೌಚಾಲಯ, ನೀರಿನ ವ್ಯವಸ್ಥೆ, ಆಟದ ಮೈದಾನ, ಒಂದು ವೇಳೆ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾದಲ್ಲಿ ಕಳೆದ 15 ವರ್ಷಗಳಿಂದ ನಿಷ್ಕ್ರಿಯವಾಗಿರುವ ಪವರ್ ಲೂಮ್ ನೇಕಾರರ ಸಹಕಾರ ಉತ್ಪಾದಕ ಮತ್ತು ಮಾರಾಟ ನಿಯಮಿತ ಸಂಸ್ಥೆಯ ಕಟ್ಟಡಗಳನ್ನು ಬಳಸಿಕೊಳ್ಳಲು ಅವಕಾಶವಿದೆ ಎಂಬುದನ್ನು ಭಾಗ್ಯನಗರ ಸರಕಾರಿ ಪದವಿ ಕಾಲೇಜ್ ಹೋರಾಟ ಸಮಿತಿಯ ಸಂಚಾಲಕರಾದ ಕೃಷ್ಣ ಇಟ್ಟಂಗಿ ಅವರು ನಿಯೋಗದ ಗಮನಕ್ಕೆ ತಂದರು.

ಲಭ್ಯವಿರುವ ಸೌಲಭ್ಯಗಳು ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಸೂಕ್ತವಾಗಿವೆ ಎಂದು ನಿಯೋಗ ತೃಪ್ತಿ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಭಾಗ್ಯನಗರ ಸರಕಾರಿ ಪದವಿ ಕಾಲೇಜ್ ಹೋರಾಟ ಸಮಿತಿಯ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಹೊನ್ನೂರಸಾಬ್ ಭೈರಾಪೂರ್, ಶಿವರಾಮ್ ಮೇಗಳಮನಿ, ಹಾಗೂ ಪಟ್ಟಣ ಪಂಚಾಯತ ಸದಸ್ಯ ಮೋಹನ್ ಅರಕಲ್ ಉಪಸ್ಥಿತರಿದ್ದರು.

ಸದರಿ ಪರಿಶೀಲನೆ ವರದಿಯು ಕಲಬುರಗಿಯ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯಾಗಲಿದೆ. ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರಿಗೆ ಈ ಕುರಿತು ಸಲ್ಲಿಕೆಯಾಗಿದ್ದ ಮನವಿಗಳನ್ನು ಪುರಸ್ಕರಿಸಿ ಸೂಕ್ತ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ನಿಯೋಗ ಆಗಮಿಸಿತ್ತು ಎಂದು ಸಂಚಾಲಕ ಕೃಷ್ಣ ಇಟ್ಟಂಗಿ ಅವರು ಹರ್ಷ ವ್ಯಕ್ತಪಡಿಸಿದ್ದು, ಸೂಕ್ತ ಸಹಕಾರ ನೀಡುತ್ತಿರುವ ಜನಪ್ರತಿನಿಧಿಗಳಿಗೆ ಭಾಗ್ಯನಗರದ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಭಾಗ್ಯನಗರ ಪದವಿ ಕಾಲೇಜ್
ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜ್ ಸ್ಥಾಪನೆ ಕುರಿತಂತೆ ಇತ್ತೀಚೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಪೂರಕವಾಗಿ ಶಿಕ್ಷಣ ಇಲಾಖೆಯ ನಿಯೋಗ ಶುಕ್ರವಾರ ಸರಕಾರಿ ಪದವಿಪೂರ್ವ ಕಾಲೇಜ್ನಲ್ಲಿ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿತು.

Get real time updates directly on you device, subscribe now.

Comments are closed.

error: Content is protected !!