ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ: ಪ್ರೊ.ಬಿ.ಕೆ.ರವಿ


ಕಾಸಾಬ್ಲಾಂಕಾ (ಮೊರಕ್ಕೋ) ಜೂನ್.10 ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದವಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಪಟ್ಟರು.
ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ”ಕುರಿತ 16ನೆಯ ಅಂತರರಾಷ್ಟ್ರಿಯ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಪ್ರೊ.ಬಿ.ಕೆ.ರವಿಯವರು, ಜಾಗತಿಕವಾಗಿ 251 ಮಿಲಿಯನ್ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು,400 ಮಿಲಿಯನ್ ಜಾಗತಿಕ ತಾಪಮಾನದಿಂದ,ಪರಿಸರ ಬದಲಾವಣೆಯಿಂದ ತೊಂದರೆಗೆ ತುತ್ತಾಗುತ್ತಿರುವುದು,57.2%ರಷ್ಟು ಮಕ್ಕಳು ಸೌಲಭ್ಯಗಳು ಹಾಗೂ ತಂತ್ರಜ್ಞಾನದ ಲಭ್ಯತೆಯಿಂದ ವಂಚಿತರಾಗುತ್ತಿರುವುದು ಹಾಗೂ ತೃತೀಯ ಜಗತ್ತಿನ ರಾಷ್ಟçಗಳು ಹಣಕಾಸಿನ ಅಲಭ್ಯತೆಯಿಂದ ಬಳಲುತ್ತಿರುವುದು ಆತಂಕಕಾರಿ ಎಂದರು.
ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಗೆ ಸೀಮಿತಗೊಳಿಸದೆ ಜೀವನದ ನಿಜ ಆಯಾಮವನ್ನು, ಮಾನವೀಯ ಮೌಲ್ಯಗಳನ್ನು ಅವರಲ್ಲಿ ಕರಗತಗೊಳಿಸುವ ಅಗತ್ಯವಿದೆ ಹಾಗೂ ತಂತ್ರಜ್ಞಾನದ ಬಳಕೆ ಬಗ್ಗೆ ಕೂಡಾ ಅವರಲ್ಲಿ ಅರಿವು ಮೂಡಿಸಬೇಕು, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು,ಸಂಶೋಧನೆಗಳ ಫಲಿತಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಪ್ರೊ.ರವಿ ಹೇಳಿದರು.
ನಂತರ ಉನ್ನತ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು. ಈ ಅಂತರರಾಷ್ಟ್ರಿಯ ಸಮ್ಮೇಳನದಲ್ಲಿ 254ಕ್ಕೂ ಹೆಚ್ಚು ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಹಸನ್-II ವಿಶ್ವವಿದ್ಯಾಲಯದ ಕುಲಪತಿ ಡಾ.ಹೌಸಿನೇ ಅಸೆಡಾಗ್,ಡೀನ್ ಡಾ.ಅಬ್ದೆಲ್ಲಾ ಬ್ರಾಕ್ಟಾ, ಸಮ್ಮೇಳನದ ಸಂಯೋಜಕಿ ಡಾ.ಇಮಾನೇ ಎಲ್ ಇಮಾಡಿ, ಮುಂತಾದವರು ಉಪಸ್ಥಿತರಿದ್ದರು.
Comments are closed.