ಬೂಕರ್ ಪ್ರಶಸ್ತಿಗೆ ಭಾಜನರಾದ ಭಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಸನ್ಮಾನ ಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸನ್ಮಾನ

Get real time updates directly on you device, subscribe now.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಭಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ವಸತಿ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ರಿಜ್ವಾನ್ ಅರ್ಷದ್, ಗೋವಿಂದರಾಜ್,  ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಹಾಗೂ ಇತರರು ಉಪಸ್ಥಿತರಿದ್ದರು.

 

ಸಚಿವ ಶಿವರಾಜ್ ತಂಗಡಗಿ ಅವರ ಭಾಷಣ
* ಎಲ್ಲವೂ ಅತ್ಯಂತ ಪ್ರಾಚೀನವೂ, ವೈಭವಪೂರ್ಣವೂ ಆಗಿವೆ. ಅತ್ಯಂತ ಶ್ರೀಮಂತ ಇತಿಹಾಸವುಳ್ಳ ನಮ್ಮ ಭಾಷೆಯು ನಿತ್ಯನೂತನ ಹಾಗೂ ನಿರಂತರವಾಗಿದೆ.
* ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳನ್ನು ಪೂರೈಸಿದ ಪ್ರಯುಕ್ತ ʼಕರ್ನಾಟಕ ಸಂಭ್ರಮ-50ʼ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವ ಈ ಹೊತ್ತಿನಲ್ಲೇ ಕನ್ನಡಕ್ಕೆ ಜಾಗತಿಕ ಮಾನ್ಯತೆಯನ್ನು, ಘನತೆಯನ್ನು ತಂದಿತ್ತಿರುವ ಈ ಕನ್ನಡದ ಹೆಣ್ಣು ಮಕ್ಕಳನ್ನು ತಾಯಿ ಭುವನೇಶ್ವರಿಯ ಪ್ರತಿರೂಪಗಳೆಂದರೆ ತಪ್ಪಾಗಲಾರದು.
* ನಮ್ಮ ಭಾಷೆಯ ಸಾಹಿತ್ಯವು ಪ್ರತಿವರ್ಷವೂ ಹೊಸ ಹೊಸ ಸಾಹಿತಿಗಳಿಂದ ಶ್ರೀಮಂತಗೊಳ್ಳುತ್ತಲೇ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಮೆ ನಮ್ಮ ಭಾಷೆಗಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೂಕರ್‌ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮ್ಮ ನಾಡಿನ ಹೆಣ್ಣುಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.
* ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದ ಶ್ರೀಮತಿ ಬಾನು ಮುಷ್ತಾಕ್‌ ಅವರು ನಾಡಿನ ಧೀಮಂತ ಸಾಹಿತಿಗಳಲ್ಲಿ ಒಬ್ಬರು. ಬಾಲ್ಯದಲ್ಲಿ ವಿದ್ಯೆಯನ್ನು ಕಲಿಯಲು ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಿ, ಅನೇಕ ಪರೀಕ್ಷೆಗಳಿಗೊಳಪಟ್ಟು, ದೊರೆತ ಅಲ್ಪ ಅವಕಾಶದಲ್ಲಿಯೇ ತಮ್ಮ ಅಮಿತ ಆಸಕ್ತಿಯಿಂದಾಗಿ ವಿದ್ಯೆಯನ್ನು ಕರಗತ ಮಾಡಿಕೊಂಡು, ಇಂದು ಜಗತ್ತೇ ತಿರುಗಿ ನೋಡುವಂತೆ ಬೆಳೆದಿದ್ದಾರೆ, ತಮಗೆ ವಿದ್ಯೆ ಕಲಿಸಿದ ನಾಡಿಗೆ, ಭಾಷೆಗೆ ಅಪಾರವಾದ ಗೌರವವನ್ನು ತಂದಿತ್ತಿದ್ದಾರೆ.
* ಸಾಮಾನ್ಯ ಅಲ್ಪಸಂಖ್ಯಾತ ಕುಟುಂಬದ ಹೆಣ್ಣುಮಗಳಾದ ಶ್ರೀಮತಿ ಬಾನು ಮುಷ್ತಾಕ್‌ ಅವರು ವಿಪರೀತ ಕಟ್ಟುಪಾಡುಗಳಲ್ಲಿ ಬೆಳೆದವರು. ಜೀವನದಲ್ಲಿ ತಾವು ಅನುಭವಿಸಿದ, ಕಂಡ, ಕೇಳಿದ ಅನೇಕ ಅನುಭವಗಳನ್ನು ಕಥೆಯಾಗಿ ರಚಿಸಿದವರು. ಇವರ ಅನೇಕ ಕಥಾಸಂಕಲನಗಳು ಜನಪ್ರಿಯವಾಗಿವೆ.
* ಬರಹವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿದ ಶ್ರೀಮತಿ ಬಾನು ಮುಷ್ತಾಕ್‌ ಅವರು ಅನೇಕ ಕಥಾಸಂಕಲನಗಳು, ಕಾದಂಬರಿಗಳು, ಪ್ರಬಂಧಗಳು, ಕವನಸಂಕಲನಗಳು, ಲೇಖನ ಸಂಕಲನಗಳನ್ನು ರಚಿಸಿದ್ದಾರೆ. ಪಾರ್ಸಿ ಮೂಲದ ಇತಿಹಾಸ ಗ್ರಂಥ ʼತಾರೀಖ್-ಎ-ಫೆರಿಸ್ತಾʼವನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ʼಕರಿನಾಗರಗಳುʼ ಕೃತಿಯನ್ನು ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರು ʼಹಸೀನಾʼ ಎಂಬ ಚಲನಚಿತ್ರವನ್ನಾಗಿಸಿದ್ದಾರೆ. ಈ ಚಿತ್ರಕ್ಕೆ ಒಟ್ಟಾರೆ 3 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
* ಇನ್ನು ಈ ಬೂಕರ್‌ ಪ್ರಶಸ್ತಿಗೆ ಕನ್ನಡದ ಕಥೆಗಳನ್ನು ಅನುವಾದ ಮಾಡಿಕೊಟ್ಟವರೂ ನಮ್ಮ ಕನ್ನಡದ ಹೆಣ್ಣುಮಗಳೇ ಎಂಬುದು ವಿಶೇಷ. ಮಡಿಕೇರಿಯ ಶ್ರೀಮತಿ ದೀಪಾ ಭಾಸ್ತಿ ಅವರು ನಾಡಿನ ಖ್ಯಾತ ಅನುವಾದಕರು ಹಾಗೂ ವಿಮರ್ಶಕರು. ಇವರು ಅನೇಕ ಕೃತಿಗಳನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ, ಮಾತ್ರವಲ್ಲ, ತಾವೂ ಸ್ವತಃ ಕನ್ನಡದಲ್ಲಿ, ಇಂಗ್ಲಿಷ್‌ನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ವಿಶ್ವಮಟ್ಟದ ಖ್ಯಾತ ಪತ್ರಿಕೆಗಳಲ್ಲಿ ಅಂಕಣಕಾರ್ತಿಯಾಗಿರುವ ಶ್ರೀಮತಿ ದೀಪಾ ಭಾಸ್ತಿಯವರು ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
* ಸ್ತ್ರೀ ಸಂವೇದನೆಯ ಕಥೆಗಳನ್ನುಳ್ಳ ಶ್ರೀಮತಿ ಬಾನು ಮುಷ್ತಾಕ್‌ ಅವರ ಕಥಾಸಂಕಲನಗಳಲ್ಲಿ ಮನಮುಟ್ಟುವ 12 ಕಥೆಗಳನ್ನು ಆಯ್ದುಕೊಂಡು, ಅವುಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿ, ʼಹಾರ್ಟ್‌ ಲ್ಯಾಂಪ್ʼ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಅನುವಾದ ಮಾಡುವ ಸಂದರ್ಭದಲ್ಲಿ ಶ್ರೀಮತಿ ಬಾನು ಮುಷ್ತಾಕ್‌ ಅವರು ಬಳಸಿರುವ ಸ್ಥಳೀಯವಾದ ಅನೇಕ ಶಬ್ದಗಳನ್ನು ಅವು ಇರುವಂತೆಯೇ ಬಳಸಿರುವುದು ವಿಶೇಷ. ಆ ಮೂಲಕ ಕನ್ನಡ ನೆಲದ ಶಬ್ದಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಶ್ರೀಮತಿ ದೀಪಾ ಭಾಸ್ತಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.
* ತಮ್ಮ ಕೃತಿಗಳ ಮೂಲಕ ಜಗತ್ತಿನ ಶ್ರೇಷ್ಠ ಗೌರವವನ್ನು ಕನ್ನಡಕ್ಕೆ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವುದಕ್ಕಾಗಿ ಶ್ರೀಮತಿ ಬಾನು ಮುಷ್ತಾಕ್‌ ಹಾಗೂ ಶ್ರೀಮತಿ ದೀಪಾ ಭಾಸ್ತಿ ಎಂಬ ಇಬ್ಬರೂ ಕನ್ನಡತಿಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
* ಬಾಳುವುದೇತಕೆ ನುಡಿ ಎಲೆ ಜೀವ ಸಿರಿಗನ್ನಡದಲಿ ಕವಿತೆಯ ಹಾಡೆ ಸಿರಿಗನ್ನಡದೇಳಿಗೆಯನು ನೋಡೆ ಕನ್ನಡ ತಾಯಿಯ ಸೇವೆಯ ಮಾಡೆ ಎಂಬ ಕವಿವಾಣಿಯಂತೆ ನಾನು ಇಲಾಖೆಯ ಸಚಿವನಾಗಿರುವ ಈ ಹೊತ್ತಿನಲ್ಲಿ ಕನ್ನಡಕ್ಕೆ ಇಂತಹ ಗೌರವ ದೊರೆತಿರುವುದು ನನ್ನ ಪಾಲಿಗೆ ದೊರೆತ ಸೌಭಾಗ್ಯ ಹಾಗೂ ಹೆಮ್ಮೆ.
* ನಮ್ಮ ನಿಮ್ಮಂತೆಯೇ ಸಾಮಾನ್ಯರಾಗಿ ಜನಿಸಿ, ಅಸಾಮಾನ್ಯ ಕಷ್ಟಗಳನ್ನು ಎದುರಿಸಿ, ಅಭೂತಪೂರ್ವವಾದದ್ದನ್ನು ಸಾಧಿಸಿದ ಈ ಹೆಣ್ಣುಮಕ್ಕಳ ಜೀವನ ನಮಗೆಲ್ಲ ಆದರ್ಶಪ್ರಾಯ, ಅನುಕರಣೀಯ, ಸದಾ ಸ್ಮರಣೀಯ. ನಮ್ಮ ನಾಡಿನ ಯುವಜನತೆ ಇಂತಹವರನ್ನು ಆದರ್ಶವಾಗಿಟ್ಟುಕೊಂಡು ಸಾಧನೆಗೆ ಹಾದಿಗಳನ್ನು ಹುಡುಕಬೇಕಿದೆ. ಯಾವುದೇ ಕ್ಷೇತ್ರವಾದರೂ ನಿರಂತರ ಸಾಧನೆಯಿದ್ದಲ್ಲಿ ಯಶಸ್ಸು ಶತಃಸಿದ್ಧ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ಈ ಇಬ್ಬರೂ ತಾಯಂದಿರ ಈ ಸೇವೆಗೆ ಕನ್ನಡ ನಾಡು ಸದಾ ಆಭಾರಿಯಾಗಿದೆ.
* ಜಾಗತಿಕ ಮಟ್ಟದ ಈ ಸಾಧನೆಗಾಗಿ ಶ್ರೀಮತಿ ಬಾನು ಮುಷ್ತಾಕ್‌ ಹಾಗೂ ‍ಶ್ರೀಮತಿ ದೀಪಾ ಭಾಸ್ತಿ ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು.

Get real time updates directly on you device, subscribe now.

Comments are closed.

error: Content is protected !!