ತುಂಗಭದ್ರಾ ಗೇಟ್ ನಂ.19ರ ಕಾಮಗಾರಿ ಜುಲೈ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ – ಸಂಸದ ಕೆ.ರಾಜಶೇಖರ ಹಿಟ್ನಾಳ
ನಮ್ಮ ಭಾಗದ ರೈತರ ಜೀವ ನಾಡಿಯಾದ ತುಂಗಭದ್ರಾ ಜಲಾಶಯದ ಸ್ಟೀಲ್ ವೇ ಗೇಟ್ ನಂ.19ರ ಕಾಮಗಾರಿಯು 2025ರ ಜುಲೈ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಕಳೆದ ವರ್ಷ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ಕ್ಕೆ ಸ್ಟಾಪ್ ಲಾಗ್ ಎಲಿಮೆಂಟ್‌ನ್ನು ಸರ್ಕಾರದ ಅಧಿಕಾರಿಗಳು ಹಾಗೂ ಗೇಟ್ ತಜ್ಞರಾದ ಕನ್ನಯ್ಯ ನಾಯ್ಡು ಮತ್ತು ಗೇಟ್ ತಯಾರಿಕಾ ಕಂಪನಿಗಳಾದ ಜಿಂದಾಲ್ ಸ್ಟೀಲ್ಸ್, ಹಿಂದೂಸ್ಥಾನಿ ಸ್ಟೀಲ್ಸ್ ಹಾಗೂ ನಾರಾಯಣ ಸ್ಟೀಲ್ಸ್ ಸಹಯೋಗದಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು. ಇದಕ್ಕಾಗಿ ರಾಜ್ಯ ಸರ್ಕಾರವು ಬಹಳಷ್ಟು ಪ್ರಯತ್ನಗಳನ್ನು ಮಾಡಿತ್ತು. ಇದರಿಂದಾಗಿ ರೈತರ ಎರಡೂ ಬೆಳೆಗಳಿಗೆ ನೀರು ಕೊಡಲು ಅನುಕೂಲವಾಯಿತು ಎಂದರು.
ತುಂಗಭದ್ರಾ ಆಣೆಕಟ್ಟಿನ ಗೇಟ್‌ಗಳ ಸ್ಥಿತಿ-ಗತಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಜಲ ಆಯೋಗವು (ಸಿ.ಡಬ್ಲ್ಯೂ.ಸಿ) ಒಂದು ಸಮಿತಿಯನ್ನು ರಚಿಸಿದ್ದು, ಸಿ.ಡಬ್ಲ್ಯೂ.ಸಿ.ಯ ನಿವೃತ್ತ ಅಧ್ಯಕ್ಷರಾದ ಎ.ಕೆ.ಬಜಾಜ್ ಅವರ ನೇತೃತ್ವದಲ್ಲಿ ತಾಂತ್ರಿಕ ಪರಿಣಿತರ ತಂಡವು 2025ರ ಏಪ್ರಿಲ್ 9ರಂದು ತುಂಗಭದ್ರಾ ಆಣೆಕಟ್ಟನ್ನು ಪರಿಶೀಲಿಸಿ, ಕಾಂಪ್ರೆನ್ಸಿವ್ ಹೆಲ್ತ್ ಓವರ್‌ವ್ಯೂವ್ (Comprehensive health overview) ಹಾಗೂ ಆಣೆಕಟ್ಟೆಯ ಸುರಕ್ಷತೆಯ ನಿರ್ವಹಣೆಯ ಬಗ್ಗೆ ಕೈಗೊಳ್ಳಬೇಕಾದ ಅಂಶಗಳ ವಿವರದ ವರದಿಯನ್ನು ನೀಡಿರುತ್ತಾರೆ. ಎನ್.ಡಿ.ಎಸ್.ಎ ಅಧ್ಯಕ್ಷರಾದ ಅನೀಲ್ ಜೈನ್ ಅವರು ತುಂಗಭದ್ರಾ ಆಣೆಕಟ್ಟನ್ನು ಪರಿಶೀಲಿಸಿ ಜಲಾಶಯದಲ್ಲಿ ಸಾಧ್ಯವಾದಷ್ಟು ಕಡಿಮೆ ಮಟ್ಟದಲ್ಲಿ ನೀರನ್ನು ಶೇಖರಿಸಲು ಹಾಗೂ ಆಣೆಕಟ್ಟಿನ ಕಾಂಪ್ರೆನ್ಸಿವ್ ಹೆಲ್ತ್ ಚೆಕಪ್ (Comprehensive health checkup) ಕೈಗೊಳ್ಳಲು ಸಲಹೆ ನೀಡಿರುತ್ತಾರೆ ಎಂದು ಹೇಳಿದರು.
ಸ್ಟೀಲ್ವೇ ಗೇಟ್ ನಂ.19ರ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ಸ್ (Stop log gate elements)ಗಳ ತೆಗೆಯುವುದು ಹಾಗೂ ಹೊಸ ಸ್ಟೀಲ್ವೇ ಗೇಟುಗಳನ್ನು ಅಳವಡಿಸುವ ಕಾಮಗಾರಿಯನ್ನು ರೂ.1.66 ಕೋಟಿಗಳಿಗೆ (ಜಿ.ಎಸ್.ಟಿ. ಹೊರತುಪಡಿಸಿ) ಎಂ/ಎಸ್ ಹಾರ್ಡ್ವೆರ್ ಟೂಲ್ಸ್ & ಮಷಿನರಿ ಪ್ರೈ.ಲಿ ಅಹಮದಾಬಾದ್, ಗುಜರಾತ್ ಇವರಿಗೆ ವಹಿಸಲಾಗಿದೆ. ಕಾಮಗಾರಿಯನ್ನು ಜುಲೈ-2025 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಬಾಕಿ ಉಳಿದ 32 ಸ್ಪೀಲ್ವೇ ಗೇಟುಗಳನ್ನು ತೆಗೆದು ಹೊಸ ಸ್ಪೀಲ್ವೇ ಗೇಟುಗಳನ್ನು ಅಳವಡಿಸುವ ಕಾಮಗಾರಿಗಳಿಗೆ ರೂ.52 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ ಎಂದರು.
Comments are closed.