ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

Get real time updates directly on you device, subscribe now.

ಗಂಗಾವತಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಯಶಸ್ವಿಯಾಗಿ ಜೀವನ ನಡೆಸಬೇಕಾದರೆ ಕಾಲೇಜು ಹಂತದಲ್ಲಿ ಜ್ಞಾನವನ್ನು ಕೌಶಲ್ಯಗಳನ್ನು ಸಂಪಾದಿಸಬೇಕಾದ ಅವಶ್ಯಕತೆ ಇದೆ ಎಂದು ಕವಿತಾಳದ ಪ್ರಗತಿಪರ ಕೃಷಿ ಸಾಧಕಿಯಾದ ಕವಿತಾ ಮಿಶ್ರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಅವರು ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ೧೨ನೇ ವಾರ್ಷಿಕೋತ್ಸವ ಮತ್ತು ರ‍್ಯಾಂಕ್ ಪಡೆದ ಸಾಧಕಿಯರನ್ನ ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಗಳಿಗಿಂತ ಕೃಷಿ ವೃತ್ತಿಯು ಅತ್ಯಂತ ಮಹತ್ವವಾದದ್ದು ಮತ್ತು ಬೆಲೆಯುತವಾದದ್ದು, ಏಕೆಂದರೆ ಮುಂದಿನ ದಿನಮಾನಗಳಲ್ಲಿ ಒಂದೇ ಒಂದು ಎಕರೆ ಕೃಷಿ ಭೂಮಿ ಇರುವ ರೈತನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುತ್ತಾನೆ ಎಂದು ತಿಳಿಸಿದರು. ಇಂದಿನ ಮಹಿಳೆ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಕಡೆ ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಇಂದಿನ ಯುವತಿಯರಲ್ಲಿ ಬುದ್ಧಿವಂತಿಕೆ ಜೊತೆಗೆ ತಾಳ್ಮೆ, ಆತ್ಮವಿಶ್ವಾಸ ಸಾಧಿಸುವ ಛಲ ಕುಟುಂಬದ ಜೊತೆ ಹೊಂದಾಣಿಕೆ, ಸಹಕಾರ, ಸಂಸ್ಕಾರಗಳ ಗುಚ್ಛವಾಗಿ ಮುಂದೆ ಸಾಗಬೇಕು, ಅದರಿಂದ ಪರಿಪೂರ್ಣ ಬದುಕಿನ ಅನಾವರಣವಾಗಲಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೇಮಂತರಾಜ್ ಕಲ್ಮಿಂಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಶಿಸಿದರು.
ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ನಿಯಮಿತ ಅವಧಿಯಲ್ಲಿ ಸಂಸ್ಥೆಯ ಅಮೋಘ ಸಾಧನೆಗೆ ವಿದ್ಯಾರ್ಥಿನಿಯರು ಕಾರಣರಾಗಿದ್ದಾರೆ. ೯ ವರ್ಷದಲ್ಲಿ ಆರು ಚಿನ್ನದ ಪದಕ, ೨೪ ರ‍್ಯಾಂಕುಗಳನ್ನು ಗಳಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ವಿಶಿಷ್ಟ ಸಾಧನೆಗೈದಿದೆ ಎಂದರು.
ಡಾ. ಅಮಿತ್ ಕುಮಾರ್ ರೆಡ್ಡಿಯವರು ಉಪನ್ಯಾಸಕರಿಗೆ ಅವರ ಪರಿಶ್ರಮವನ್ನು ಪ್ರಶಂಶಿಸಿ, ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ಮಾತನಾಡಿ, ಪ್ರತಿವರ್ಷ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ, ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯರಾದ ಬಸಪ್ಪ ಸಿರಿಗೇರಿ ರ‍್ಯಾಂಕ್ ಸಾಧಕಿಯರಾದ ಬಿ.ಕಾಂ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದ ಜೇಬಾ, ೫ನೇ ರ‍್ಯಾಂಕ್ ಪಡೆದ ಅಕ್ಷತಾ, ೬ನೇ ರ‍್ಯಾಂಕ್ ಪಡೆದ ಜಯಶ್ರೀ, ಅದೇರಿತಿ ಬಿ.ಎ ಪದವಿಯಲ್ಲಿ ಕುಮಾರಿ ಸುಭದ್ರಾ ಇವರು ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಮತ್ತು ೬ನೇ ರ‍್ಯಾಂಕ್, ಕುಮಾರಿ ಉಮಾ ಇವರು ೪ನೇ ರ‍್ಯಾಂಕ್, ಕುಮಾರಿ ಹನುಮಂತಿ ೫ನೇ ರ‍್ಯಾಂಕ್, ಕುಮಾರಿ ಅನಿತಾ ಕೋರಿ ೧೦ನೇ ರ‍್ಯಾಂಕ್ ಗಳಿಸಿದ ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯ ನೆರವೇರಿಸಿಕೊಟ್ಟು, ವಿದ್ಯಾರ್ಥಿನಿಯರ ಸಾಧನೆ ಹಾಗೂ ಪಾಲಕರ ಸಹಕಾರ, ಪ್ರಾಧ್ಯಾಪಕರ ಶ್ರಮವನ್ನ ಸ್ಮರಿಸಿದರು.
ಈ ಸಂದರ್ಭದಲ್ಲಿ ಶಂಕರಲಿAಗಪ್ಪ ಕೊಪ್ಪದ್ ರವರು ಮುಖ್ಯ ಅತಿಥಿಗಳಾಗಿ ಹಿತನುಡಿಗಳನ್ನು ನುಡಿದರು. ವಿಶೇಷವಾಗಿ ಈ ಸಾಧನೆಯನ್ನು ಇತಿಹಾಸ ಪ್ರಾಧ್ಯಾಪಕರಾದ ದಿವಂಗತ ಪಂಡರಿನಾಥ್ ಅಗ್ನಿಹೋತ್ರಿ ಅವರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪಂಪಾಪತಿ, ಪವಿತ್ರ ಬಸವರಾಜ್ ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರು ಶಿವಶರಣರವರು ನಿರೂಪಿಸಿದರೆ, ಶ್ರೀಮತಿ ಆಶಾ ಸ್ವಾಗತಿಸಿ, ಅಧ್ಯಾಪಕರಾದ ಚನ್ನಬಸವ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!