ಬಿಎಸ್‌ಪಿಎಲ್/ಎಂಎಸ್‌ಪಿಎಲ್ ಸೇರಿ ಕಾರ್ಖಾಗಳ ವಿರುದ್ಧ “ಪೇಂಟ್ ಅಭಿಯಾನ”

Get real time updates directly on you device, subscribe now.

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಎಂಎಸ್‌ಪಿಎಲ್ ಅಥವಾ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನಕ್ಕೆ ಮತ್ತೊಂದು ರೀತಿಯ ಹೋರಾಟ ಸೇರ್ಪಡೆಯಾಗಿದ್ದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ “ಪೇಂಟ್ ಅಭಿಯಾನ”ವನ್ನು ಆರಂಭಿಸಲಾಗಿದೆ.
ಕೊಪ್ಪಳದ ವಿವಿದೆಡೆ ಮತ್ತು ಬಾದಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹಗಳನ್ನು ಬರೆಯುವ ಉದ್ದೇಶ ಈ ಪೇಂಟ್ ಅಭಿಯಾನ ಹೊಂದಿದ್ದು, ಈ ಪೇಂಟ್ ಅಭಿಯಾನವನ್ನು ಜನಾಂದೋಲನವಾಗಿ ಸಹಕಾರದ ತತ್ವದಲ್ಲಿ ಮಾಡುವ ಉದ್ದೇಶದಿಂದ ಎಲ್ಲರನ್ನೂ ಒಳಗೊಳ್ಳುವ ಉದ್ದೇಶದಿಂದ ಗೋಡೆ ಬರಹಕ್ಕೆ ಅಗತ್ಯ ಇರುವ ಬಣ್ಣಗಳನ್ನು ಕೊಪ್ಪಳ ಭಾಗ್ಯನಗರದ ವಿವಿಧ ಬಣ್ಣದ ವ್ಯಾಪಾರಿಗಳಿಂದ ದೇಣಿಗೆ ರೂಪದಲ್ಲಿ ಪಡೆದು ಗೋಡೆ ಬರಹಗಳನ್ನು ಮಾಡಲು ಸಮಿತಿ ನಿರ್ಧರಿಸಿ ಇಂದು ಅದಕ್ಕೆ ಚಾಲನೆ ನೀಡಲಾಗಿದೆ.
ಮೊದಲು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಿರಣ್ ಪೇಂಟ್ಸ್‌ನ ಮಾಲೀಕರಾದ ಗವಿಸಿದ್ದಪ್ಪ ಚಿನ್ನೂರ್ ಮತ್ತು ಹುಲಿಗಮ್ಮ ದೇವಿ ಪೇಂಟ್ಸ್ ನ ಮಾರುತಿ ಅವರು ದೇಣಿಗೆ ನೀಡಿದರು. ಈ ಅಭಿಯಾನದಲ್ಲಿ ಗೋಡೆ ಬರಹ ಬರೆಯಲು ಹಿರಿಯ ಚಿತ್ರ ಕಲಾವಿದರಾದ ರಾಜು ತೇರದಾಳ್ ಮತ್ತು ಕೃಷ್ಣ ಚಿತ್ರಗಾರವರು ಒಪ್ಪಿಕೊಂಡಿದ್ದು ಇನ್ನೂ ಅನೇಕ ಬಣ್ಣದ ಅಂಗಡಿ ಮಾಲೀಕರು ಮತ್ತು ಚಿತ್ರ ಕಲಾವಿದರು ಸಹಕಾರ ನೀಡುವ ನಿರೀಕ್ಷೆಯಿದ್ದು ಕೊಪ್ಪಳದಿಂದ ಕಾರ್ಖಾನೆಗಳನ್ನು ಓಡಿಸುವ ನಿಟ್ಟಿನೊಳಗಡೆ ಆಂದೋಲನವನ್ನು ತೀವ್ರಗೊಳಿಸಲು ಜನರು ಅಂಜದೆ ಅಳುಕದೆ ಸಹಕಾರ ನೀಡಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪ್ರೊ. ಅಲ್ಲಮಪ್ರಭು ಬೆಟ್ಟದೂರ್, ಬಸವರಾಜ ಶೀಲವಂತರ್, ಮಹಾಂತೇಶ್ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ ಇತರರು ಇದ್ದರು. ಬಣ್ಣದ ಸಹಾಯ ಮಾಡಲಿಚ್ಚಿಸುವ ಬಣ್ಣದ ಅಂಗಡಿಯವರು, ಗೋಡೆ ಬರಹ ಮಾಡಲು ಇಚ್ಛಿಸುವ ಚಿತ್ರ ಕಲಾವಿದರು ಆಂದೋಲನದ ಸದಸ್ಯರನ್ನು ಸಂಪರ್ಕಿಸಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಂಘಟಕರು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!