ಸದಾಶಿವ ಸೊರಟೂರಗೆ ವಿಭಾ ಕಾವ್ಯ ಪ್ರಶಸ್ತಿ
ಮೇ ಸಾಹಿತ್ಯ ಮೇಳದ ಗೌರವ ಪ್ರಕಟ-1
ಸದಾಶಿವ ಸೊರಟೂರಗೆ ವಿಭಾ ಕಾವ್ಯ ಪ್ರಶಸ್ತಿ
ನೋವಿಗೆ ಕವಿತೆಯೇ ಮದ್ದು: ಸದಾಶಿವ ಸೊರಟೂರು
ಸದಾಶಿವ ಸೊರಟೂರು ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರು. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕರು. ಬರವಣಿಗೆ ಬರೀ ಪ್ರವೃತ್ತಿಯಲ್ಲ, ಬದುಕು. ಇವರು ಸೂಕ್ಷ್ಮ ಸಂವೇದನೆಯ ಕವಿ, ಕಥೆಗಾರ. ಕಥೆಯಲ್ಲೂ ಕವಿತೆ ಉಕ್ಕಿಸುವ ಮತ್ತು ಕವಿತೆಯನ್ನು ನೋವಿಗೆ ಒಂದು ಮದ್ದಿನಂತೆ ಸವರಿಕೊಳ್ಳುವ ಬರಹಗಾರ. ಆ ಮದ್ದನ್ನು ಜನರ ಪಾಲಿಗೂ ಹಂಚುವ
ಹಂಬಲದ ವ್ಯಕ್ತಿ.
ಸದಾ ಒಂದು ತುಣುಕು ಬಂಡಾಯವನ್ನು ಮಾತಿನಲ್ಲೂ, ಕವಿತೆಯಲ್ಲೂ, ಕಥೆಯಲ್ಲೂ ಇಟ್ಟುಕೊಂಡು ಆ ಮೂಲಕ ಸಮಾಜವನ್ನು ತಿವಿಯುವ ಬಂಡಾಯ ಮನೋಭಾವದ ಲೇಖಕ. ಅವರ ಬರಹಗಳಲ್ಲಿ ಈ ಭಾವ ಢಾಳಾಗಿ ಕಾಣಿಸುತ್ತದೆ. ಕಥೆಗೆ ಈ ಹೊತ್ತಿಗೆ ಕಥಾ ಪುರಸ್ಕಾರ, ಕಸಾಪ ದತ್ತಿ ಪ್ರಶಸ್ತಿ, ಭೂಮಿ ಸಾಹಿತ್ಯ ಪುರಸ್ಕಾರಗಳು ಬಂದಿವೆ. ಈವರೆಗೆ ಕವನ ಸಂಕಲಗಳಗೆ ಬಳ್ಳಾರಿ ಎನ್ ಗವಿಸಿದ್ದ ಕಾವ್ಯ ಪುರಸ್ಕಾರ, ಕಾವ್ಯಸಂಜೆ ಕಾವ್ಯ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರ, ಹರಿಹರಶ್ರೀ ಕಾವ್ಯ ಪ್ರಶಸ್ತಿಗಳು ಬಂದಿವೆ.
ಗಾಯಗೊಂಡ ಸಾಲುಗಳು, ಕೊಲ್ಲುವುದಕ್ಕೆ ಸದ್ದುಗಳಿವೆ, ದೇವರನ್ನು ಹೊರಹಾಕುತ್ತೇನೆ, ಕಂಡಕ್ಟರ್ ಕವಿತೆಗಳು, ನಿನ್ನ ಬೆರಳು ತಾಕಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ.. ಇವು ಪ್ರಕಟಿತ ಕವನ ಸಂಕಲನಗಳು. ಅರ್ಧ ಬಿಸಿಲು ಅರ್ಧ ಮಳೆ ಮತ್ತು ಧ್ಯಾನಕ್ಕೆ ಕೂತ ನದಿ ಕಥಾ ಸಂಕಲನಗಳು. ಆ ಹಾದಿ ಎಂಬುದು ಒಂದು ರಸ್ತೆಯ ಕುರಿತು ಬರೆದ ಕಥಾನಕದ ಪುಸ್ತಕ. ಇಷ್ಟಲ್ಲದೆ ಅವರ ನೂರಾರು ಲೇಖನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಕೆಲ ಕಥೆಗಳು ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿವೆ.
ಈ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಸದಾಶಿವ ಸೊರಟೂರು ಅವರ ’ದೇವರನ್ನು ಹೊರಹಾಕುತ್ತೇನೆ’ ಸಂಕಲನ ಆಯ್ಕೆಯಾಗಿದೆ.
ಈ ಸಂಕಲನದ ಕವಿತೆಗಳು ’ನೋವು ನೋವಿನ ಬೆರಳು ಹಿಡಿದು ನಡೆಯುತ್ತದೆ’ ಎನ್ನುತ್ತಲೇ ಅನುಭವವನ್ನು ವಿಶಿಷ್ಟವಾಗಿ ನೋಡುವುದರ ಮೂಲಕ ಅರ್ಥವನ್ನು ಹಿಗ್ಗಿಸುತ್ತವೆ. ಇಲ್ಲಿಯ ಕವಿತೆಗಳನ್ನು ಓದುತ್ತ ಹೋದಂತೆ ರಸಾನಂದವಾಗುತ್ತ, ನಮ್ಮ ಎಷ್ಟೋ ಮನೋವೇದನೆಗಳು ಕಡಿಮೆಯಾಗುತ್ತವೆ. ಕವಿ ತನ್ನ ಚಿಂತನೆಗಳನ್ನು ಪ್ರತಿಮೆಗಳ ಮೂಲಕ ಹೇಳುವ ಹಾದಿಯನ್ನು ಹುಡುಕಿಕೊಂಡಿದ್ದಾರೆ, ಇಲ್ಲಿ ಎಲ್ಲೆಡೆ ಅಕ್ಷರಗಳ ಹಂಗಿಲ್ಲದ ಭಾವವೊಂದು ಪುಟಿಯುತ್ತಿದೆ, ಪ್ರತಿ ಸಾಲುಗಳೂ ಯಾವುದೋ ಒಂದು ಹಂತದಲ್ಲಿ ಮಾನವತೆಯನ್ನು ಜಾಗೃತಗೊಳಿಸುವ ಸಂದೇಶಗಳಾಗಿ ಒಡಮೂಡಿರುವುದು ಮರುಓದಿಗೆ ಪ್ರೇರೇಪಿಸುವಂತಿದೆ.
ಇಂಥ ಕವಿತೆಗಳ ಸಂಕಲನವು ‘ವಿಭಾ ಸಾಹಿತ್ಯ ಪ್ರಶಸ್ತಿ’ ಪಡೆದಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ. ಅವರಿಗೆ ೨೦೨೪ನೇ ಸಾಲಿನ ‘ವಿಭಾ ಸಾಹಿತ್ಯ ಪ್ರಶಸ್ತಿ’ ನೀಡಲು ಮೇ ಸಾಹಿತ್ಯ ಮೇಳ ಬಳಗವು ಹರ್ಷಿಸುತ್ತದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 11ನೇ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು..
ಸದಾಶಿವ್ ಸೊರಟೂರು
Comments are closed.