ಡಾ. ಸಬಿಹಾ ಭೂಮಿಗೌಡ ಅವರಿಗೆ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ
11ನೇ ಮೇ ಸಾಹಿತ್ಯ ಮೇಳದ ಗೌರವ ಪ್ರಕಟ-3
ಡಾ. ಸಬಿಹಾ ಭೂಮಿಗೌಡ ಅವರಿಗೆ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ
ಸಮಾಜಮುಖಿ ಚಿಂತನೆಯ ಡಾ. ಸಬಿಹಾ ಭೂಮಿಗೌಡ ಅವರನ್ನು ಮೇ ಸಾಹಿತ್ಯ ಮೇಳವು ಕೊಡಮಾಡುವ 2025 ರ ಸಾಲಿನ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿಗೆ ಸಮಿತಿಯು ಆಯ್ಕೆ ಮಾಡಿದೆ.
ಪ್ರೊ. ಸಬಿಹಾ ಭೂಮಿಗೌಡ ನಮ್ಮ ನಡುವಿನ ಅತ್ಯಂತ ಸೂಕ್ಷ್ಮ ಮನದ, ಒಳನೋಟಗಳುಳ್ಳ ಕವಿ, ಕತೆಗಾರ್ತಿ, ಲೇಖಕಿ, ವಿಮರ್ಶಕಿ. ಒಂದು ತಲೆಮಾರನ್ನು ರೂಪಿಸಬಲ್ಲಷ್ಟು ಸೂಕ್ಷ್ಮತೆ ಮತ್ತು ಬದ್ಧತೆಯಿರುವ ಹೆಣ್ಣು ಕಣ್ಣೋಟದ ಬೋಧಕಿ. ಆಡಳಿತಾತ್ಮಕ ಸಾಮರ್ಥ್ಯ, ಶಿಸ್ತು, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಕಾಯಕ ಪ್ರೀತಿಗೆ ಅವರು ಮಾದರಿ. ಈ ಮಾತಿಗೆ ಅವರ ಬರಹ, ಆಪ್ತಬಳಗ, ಶಿಷ್ಯಬಳಗ, ಅವರು ಕೈಗೊಂಡ ಸಂಶೋಧನೆ-ಯೋಜನೆಗಳು, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನಾಲ್ಕು ವರ್ಷದ ಅವಧಿಯಲ್ಲಿ ಕೈಗೊಂಡ ಕೆಲಸಗಳೇ ಸಾಕ್ಷಿ.
ಅವರ ತಂದೆ ಎಂ. ಆರ್. ಗಜೇಂದ್ರಗಡ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದವರು ಮತ್ತು ತಾಯಿ ಸಾಹಿರಾ ಇಟಗಿಯವರು. ತಂದೆಯ ಉದ್ಯೋಗದ ಕಾರಣವಾಗಿ ಅವರು ಬೆಳೆದುದು ಮಂಗಳೂರು ಸಮೀಪದ ಸುರತ್ಕಲ್ ಬಳಿಯ ಕೆ.ಆರ್.ಇ.ಸಿ (ಈಗಿನ ಎನ್‌ಐಟಿಕೆ) ಕ್ಯಾಂಪಸ್‌ನಲ್ಲಿ. ಅವರ ಪಿಎಚ್‌ಡಿವರೆಗಿನ ಶಿಕ್ಷಣ ಮಂಗಳೂರು ವಿಶ್ವವಿದ್ಯಾಲಯದಲ್ಲೇ ಆಯಿತು. ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳಾಗಿದ್ದ ಸಬಿಹಾ ಮತ್ತು ಮಂಡ್ಯ ಜಿಲ್ಲೆಯ ಕೃಷಿಕ ಮನೆತನದ ಭೂಮಿಗೌಡ ಅವರ ನಡುವೆ ಗೆಳೆತನ ಬೆಳೆಯಿತು. ಸಮಾನ ಮನಸ್ಕ ಸಂಗಾತಿಗಳಿಬ್ಬರೂ ಸ್ನೇಹ ಬಳಗದ ಸಮ್ಮುಖದಲ್ಲಿ ರಿಜಿಸ್ಟರ‍್ಡ್ ವಿವಾಹವಾಗಿ ಬಾಳಸಂಗಾತಿಗಳಾದರು. ಶಿಕ್ಷಣ ಪಡೆದ ನಂತರ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಬಿಹಾ ಅಧ್ಯಾಪನ ವೃತ್ತಿ ಕೈಗೊಂಡರು. ವಿದ್ಯಾರ್ಥಿಗಳ ಮೆಚ್ಚಿನ ಬೋಧಕಿಯಾಗಿ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಅಧ್ಯಾಪಕಿಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ, ಜನಪರ ಚಳುವಳಿಗಳ ಒಡನಾಡಿಯಾಗಿ ತಮ್ಮದೇ ಛಾಪು ಮೂಡಿಸಿದ ಅವರು, ಹಾಸ್ಟೆಲ್ ವಾರ್ಡನ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ, ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳೇ ಮುಂತಾಗಿ ಅಧಿಕಾರದ ಹಲವು ಸ್ಥಾನಗಳನ್ನು ದಕ್ಷವಾಗಿ, ಸಮರ್ಥವಾಗಿ ನಿಭಾಯಿಸಿದ್ದಾರೆ.
ಸೃಜನಶೀಲ ಮತ್ತು ಸೃಜನೇತರ ಎಂಬ ಎರಡೂ ಪ್ರಕಾರಗಳ ಬರವಣಿಗೆಗಳಲ್ಲಿ ಸ್ಪಷ್ಟ ಚಿಂತನೆಯ ಹಾಗೂ ಸಮತೋಲಿತ ಸ್ತ್ರೀವಾದಿ ನೋಟದ ಛಾಪನ್ನು ಮೂಡಿಸಿದ ಸಬಿಹಾ ಅಧ್ಯಾಪಕ ವೃತ್ತಿಯಲ್ಲಿ ಮೂವತ್ತೊಂಭತ್ತು ವರ್ಷಗಳ ಕಾಲ ನೂರಾರು ವಿದ್ಯಾರ್ಥಿಗಳ ಚಿಂತನೆ, ಬರಹ, ಬದುಕುಗಳನ್ನು ರೂಪಿಸಿದ್ದಾರೆ. ಕೈಗೊಳ್ಳುವ ಯಾವ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುತ್ತಾ, ಸವಾಲುಗಳೆದುರಾದಾಗಲೂ ಧೃತಿಗೆಡದೆ, ಸೈದ್ಧಾಂತಿಕವಾಗಿ ರಾಜಿಯಾಗದೇ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ನಶೆಯಾಗಬಹುದಾದ ಅಧಿಕಾರವನ್ನು ಟಾನಿಕ್‌ನಂತೆ ಬಳಸಿ ಉದ್ದೇಶಿತ ಸಾಧನೆಯ ಗುರಿ ಮುಟ್ಟಿರುವುದು ಅವರ ಹೆಗ್ಗಳಿಕೆಯಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವನ್ನು ಆರಂಭಿಸಿದ ಬಳಗದವರಲ್ಲಿ ಅವರೂ ಒಬ್ಬರು. ಒಕ್ಕೂಟವೂ ಸೇರಿದಂತೆ ಕರ್ನಾಟಕದ ಬಹುತೇಕ ಜನಪರ ಚಳವಳಿ, ಹೋರಾಟ, ಸಂಘಟನೆಗಳ ಒಡನಾಡಿ ಅವರು. ಚಳುವಳಿಗಳ ಸತ್ವವನ್ನು ಅರಿತುಕೊಳ್ಳುತ್ತ ಬರಹದ ಬದುಕು ರೂಪಿಸಿಕೊಂಡ ಸಬಿಹಾ, ಕತೆ, ಕಾವ್ಯ, ಅಂಕಣ, ಪ್ರಬಂಧ, ವಿಮರ್ಶೆ, ಸಂಶೋಧನಾ ಬರಹ, ಸಂಪಾದನೆ ಮುಂತಾದ ಪ್ರಕಾರಗಳಲ್ಲಿ ೪೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಎರಡು ಕಥಾ ಸಂಕಲನಗಳೂ ಸೇರಿವೆ. ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಸಬಿಹಾರ ಕಥೆಗಳನ್ನು ಗುರುತಿಸುವುದು ಹೀಗೆ:
‘ಮೂಲತಃ ಅಧ್ಯಾಪನದಷ್ಟೇ ಸಾಮಾಜಿಕ ಮತ್ತು ಮಹಿಳಾ ಹೋರಾಟದಲ್ಲಿ ತೊಡಗಿಸಿಕೊಂಡ ಸಬಿಹಾ ಅವರಿಗೆ ಕಥಾಕ್ಷೇತ್ರವು ಹೋರಾಟದ ಹಾದಿಗಳನ್ನು, ಅದರ ಏಳುಬೀಳುಗಳನ್ನು, ಬಿಕ್ಕಟ್ಟುಗಳನ್ನು, ಎದುರಾಗಿರುವ ಸವಾಲುಗಳನ್ನು ಬಿಡಿಸಿಕೊಳ್ಳುವಲ್ಲಿ ವ್ಯವಸ್ಥೆ, ಗಂಡು ಮತ್ತು ಹೆಣ್ಣು ಇಬ್ಬರೂ ವಹಿಸಬೇಕಾದ ಪಾತ್ರಗಳನ್ನು, ಆ ಪಾತ್ರಗಳನ್ನು ನಿಭಾಯಿಸುವಲ್ಲಿ ನಮಗಿರಬೇಕಾದ ಬದ್ಧತೆ, ಸ್ಪಷ್ಟತೆಗಳನ್ನು ಅರಿಯುವಲ್ಲಿ ಅಪಾರ ನೆರವು ನೀಡುವ ಆಕರ ಕ್ಷೇತ್ರವಾಗಿದೆ ಎನಿಸುತ್ತದೆ. ಆದ್ದರಿಂದಲೇ ಸಬಿಹಾ ಅವರ ಕಥಾಲೋಕವನ್ನು ನಾವು ಗಂಭೀರವಾಗಿ ನೋಡಬೇಕು. ಅವು ತಮ್ಮಷ್ಟಕ್ಕೆ ತಾವು ಕತೆಗಳೆಂದಲ್ಲ, ಅವು ಲೋಕದ ಸನ್ನಿವೇಶಗಳು, ವಾಸ್ತವಗಳು, ಜೊತೆ ಕಟ್ಟಿಕೊಂಡಿರುವ ಸಂಬಂಧಗಳ ಕಾರಣಕ್ಕಾಗಿಯೂ. ಸಬಿಹಾ ಅವರ ಕತೆಗಳ ಮೂಲವಸ್ತು ಹೆಣ್ಣು. ಆದರೆ ಆ ಹೆಣ್ಣನ್ನು ಸುತ್ತುವರಿದಿರುವ ಪರಿಸರವೂ ಅಷ್ಟೇ ಮುಖ್ಯವಾದ ವಸ್ತುವಾಗಿದೆ. ಅವರ ಕತೆಗಳ ವೈಶಿಷ್ಟ್ಯಗಳು ಮೂಲತಃ ಎರಡು. ಒಂದು, ಹೆಣ್ಣಿನ ಸ್ಥಿತಿಗತಿಗಳನ್ನು ಸಬಿಹಾ ‘ಶ್ರೀ ಸಾಮಾನ್ಯ ಹೆಣ್ಣಿನ’ ಮೂಲಕ ಅರಿಯಲು ನಡೆಸುವ ಪ್ರಾಮಾಣಿಕ ಪ್ರಯತ್ನ. ಎರಡು, ಹೆಣ್ಣಿನ ಸವಾಲುಗಳನ್ನು ಏಕಕಾಲಕ್ಕೆ ಸ್ವತಃ ಹೆಣ್ಣಿನ ಕಣ್ಣುಗಳಿಂದಲೂ, ಲೋಕದ ಕಣ್ಣಿನಿಂದಲೂ ನೋಡುವ ಪ್ರಯತ್ನ ಮಾಡುತ್ತಾರೆ ಎನ್ನುವುದು. ಈ ಎರಡನ್ನೂ ಕೆಲವೊಮ್ಮೆ ಪಕ್ಕಪಕ್ಕದಲ್ಲಿ ಮತ್ತೆ ಕೆಲವೊಮ್ಮೆ ಎದುರುಬದುರಾಗಿಸಿ ನೋಡುತ್ತಾರೆ. ಬದಲಾಗಬೇಕಾಗಿರುವುದು ಹೆಣ್ಣೋ ಲೋಕವೋ ಎನ್ನುವ ಪ್ರಶ್ನೆಯೊಂದು ಇವರನ್ನು ಸತತವಾಗಿ ಕಾಡಿದೆ ಎನ್ನಿಸುತ್ತದೆ.’
ಜನಚಳುವಳಿಗಳ ಒಡನಾಟ, ಅಧ್ಯಾಪನ, ಅಧ್ಯಯನ, ಮತ್ತು ಸಂಶೋಧನೆಗಳು ರೂಪಿಸಿದ ವಿಸ್ತೃತ ಚಿಂತನಾ ಲೋಕ ಸಬಿಹಾ ಭೂಮಿಗೌಡ ಅವರೊಳಗಿನ ಚಿಂತಕಿಯನ್ನು, ಕತೆಗಾರ್ತಿಯನ್ನು ಸೂಕ್ಷ್ಮವಾಗಿ, ನ್ಯಾಯಪರವಾಗಿ ವಿಕಾಸಗೊಳಿಸಿವೆ. ಅವರಿಗೆ ೨೦೨೫ನೇ ಸಾಲಿನ ‘ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ’ ಪ್ರದಾನ ಮಾಡುತ್ತಿರುವುದು ‘ಮೇ ಸಾಹಿತ್ಯ ಮೇಳ ಬಳಗ’ಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಬಿಹಾ-ಭೂಮಿಗೌಡ ಜೋಡಿಯ ಕುಟುಂಬಕ್ಕೆ ಎಲ್ಲವೂ ಒಳಿತೇ ಆಗಲಿ; ಕಂಡ ಕನಸುಗಳೆಲ್ಲ ಸಾಕಾರವಾಗಲಿ ಎಂದು ಹಾರೈಸುತ್ತೇವೆ.
ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. 11ನೇ ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಪ್ರದಾನ ಮಾಡಲಾಗುವುದು
Comments are closed.