ಬೀದಿ ನಾಟಕಗಳು ಚಳುವಳಿಯ ದೊಡ್ಡ ಶಕ್ತಿ: ಶಿಕ್ಷಕ ಕೊಟ್ರೇಶ್. ಬಿ


ಬೀದಿ ನಾಟಕಗಳು ಚಳುವಳಿಯ ದೊಡ್ಡ ಶಕ್ತಿಯಾಗಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಹೆಸರುವಾಸಿಯಾಗಿದೆ ಎಂದು ರಂಗಭೂಮಿ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೊಟ್ರೇಶ್ ಪಿ ಅಭಿಪ್ರಾಯಪಟ್ಟರು.
ಅವರು ಶ್ರೀಮತಿ ಲಕ್ಷ್ಮಿ. ಎಸ್ ನಾನವಟೆ ಬಿ.ಈಡಿ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದಿ ನಾಟಕಗಳು ವಿಷಯದ ಕುರಿತು ಮಾತನಾಡಿದರು.
“೧೯೭೦ರ ದಶಕದಲ್ಲಿ ಬೀದಿ ನಾಟಕಗಳು ಜನರ ಸಾಮಾಜಿಕ ಸಮಸ್ಯೆಗಳ ಪ್ರತಿಬಿಂಬವಾಗಿ, ಅವುಗಳ ಪರಿಹಾರಕ್ಕಾಗಿ ಕ್ರಾಂತಿಕಾರಿ ವೇದಿಕೆಯಾಗಿದ್ದವು. ಇವು ಜನರಿಗೆ ನೇರವಾಗಿ ತಲುಪುವ ಮೂಲಕ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಗೆ ಸ್ಪಷ್ಟ ಸಂದೇಶ ನೀಡುವ ಬಹುದೊಡ್ಡ ಮಾಧ್ಯಮವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಬೀದಿ ನಾಟಕಗಳು ಕೇವಲ ಸರ್ಕಾರದ ಯೋಜನೆಗಳ ಪ್ರಚಾರ ಹಾಗೂ ಖಾಸಗಿ ಕಂಪನಿಗಳ ಉತ್ಪನ್ನಗಳ ಪ್ರಚಾರದ ಮಟ್ಟಕ್ಕೆ ಸೀಮಿತಗೊಂಡಿವೆ, ಇದು ವಿಷಾದನೀಯ” ಎಂದು ಅವರು ಅಭಿಪ್ರಾಯಪಟ್ಟರು.
“ಬೀದಿ ನಾಟಕಗಳು ಯಾವಾಗಲೂ ಚಳುವಳಿಯ ಶಕ್ತಿಯಾಗಿ, ಸಮಸಮಾಜದ ಪರಿಕಲ್ಪನೆಯನ್ನು ಪ್ರತಿನಿಧಿಸುವ ಮಾಧ್ಯಮವಾಗಿರಬೇಕು” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಾನಾವಟೆ ಕಾಲೇಜಿನ ಆಡಳಿತಾಧಿಕಾರಿ ಶ್ರೀಕುಮಾರ್,ಎಸ್ ನಾನವಟೆ ರಂಗಭೂಮಿ ಕೇವಲ ಮನರಂಜನೆ ಮಾತ್ರವಲ್ಲ, ಹಳ್ಳಿಗಳ ಜನರಿಗೆ ಸಾಮಾಜಿಕ ಬದಲಾವಣೆಯನ್ನು ತರಲು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿಯ ಸದಸ್ಯ ಶಿವ ನಾಯಕ್ ದೊರೆ, ಈ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಚಿಗುರು ಕಲಾತಂಡದ ಕಲಾವಿದರು “ಸಾಮಾಜಿಕ ಅರಿವು” ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಇದೇ ವೇಳೆ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀ ಮತಿ ರೇಣುಕಾ ಜಿ.ಬಾವಳ್ಳಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಯು ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.