ಗಡಿಯಲ್ಲಿ ಕನ್ನಡ ಭಾಷಾಭಿವೃದ್ಧಿಗೆ ಹಿನ್ನೆಡೆ : ಪತ್ರಕರ್ತ ಸಿದ್ದು ಬಿರಾದಾರ್
ಬೆಂಗಳೂರು, ಮಾ.2-
ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷಾಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಭಾಷಾಭಿಮಾನ ಹೆಚ್ಚಿಸಲು ತೊಡಕಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸಿದ್ದು ಬಿರಾದಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವದ ಚಿಂತನೆ ಸಂವಾದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಭಾಷೆ ಕನ್ನಡ ಸಾಹಿತ್ಯದ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಆಂದ್ರ,ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷಾಭಿಮಾನ ಕುಸಿಯುತ್ತಿದೆ. ಕನ್ನಡ ಭಾಷೆ ಮಾತನಾಡುವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಆಂಧ್ರ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ರಾಯಚೂರ ಜಿಲ್ಲೆಯ ಗಡಿ ಭಾಗದ 30 ಕ್ಕು ಹೆಚ್ಚು ಹಳ್ಳಿಗಳಲ್ಲಿರುವ ಕನ್ನಡಿಗರು ತೆಲಗು ಭಾಷೆಯನ್ನೆ ಮಾತನಾಡ್ತಿದ್ದಾರೆ. ಹೀಗಾಗಿ ಮಾತೃಭಾಷೆ ಕಣ್ಮರೆಯಾಗುವ ಆತಂಕದ ಛಾಯೆ ಮೂಡಿದೆ ಎಂದರು. ವಾಸ್ತವ ಪರಿಸ್ಥಿತಿ ಹೀಗಿರುವಾಗ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಕನ್ನಡ ಭಾಷೆ ಕೇವಲ ಅಭ್ಯಾಸಕ್ಕೆ ಮಾತ್ರ ಸಿಮೀತವಾಗುವ ಸ್ಥಿತಿ ನಿರ್ಮಾಣಗೊಳ್ಳುವ ಆತಂಕ ಸೃಷ್ಟಿಯಾಗಿದೆ. ಮನೆಯಲ್ಲಿ ಪೋಷಕರು ತೆಲಗು ಭಾಷೆ ಮಾತನಾಡುವುದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು. ಇನ್ನು ಪ್ರೌಢಶಾಲೆಗಳಲ್ಲಿ ಪ್ರತಿ ವರ್ಷವೂ ಎಸ್ ಎಸ್ ಎಲ್ ಸಿ ಯಲ್ಲಿ ಅನೇಕ ಮಕ್ಕಳು ಮಾತೃಭಾಷೆ ಕನ್ನಡ ವಿಷಯದಲ್ಲೆ ಅನುತ್ತೀರ್ಣವಾಗುತ್ತಿದ್ದಾರೆ. ಇದು ಗಡಿಯಲ್ಲಿ ಕನ್ನಡ ಭಾಷೆಯ ಅಭಿವೃದ್ದಿ ಎತ್ತ ಸಾಗಿದೆ ಎಂದು ಯೋಚಿಸುವಂತಾಗಿದೆ ಎಂದರು. ಇನ್ನು ಗಡಿಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಹಾಗೂ ಕನ್ನಡ ಭಾಷಾಭಿಮಾನ ಹೆಚ್ಚಿಸುವ ಮಹತ್ವದ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರದ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷಾಭಿಮಾನ ಉತ್ತೇಜಿಸಲು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ದಿ ಪ್ರಾಧಿಕಾರ ಸೇರಿದಂತೆ ಸರ್ಕಾರ ವಿಶೇಷ ಕಾರ್ಯಾಗಾರಗಳನ್ನು ಅಯೋಜಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮತಿ ಭಾನು ಮುಷ್ತಾಕ್, ಡಾ. ಮಹೇಶ ಜೋಶಿ, ಡಾ. ಡಿ. ಡೋಮೊನಿಕ್ ಉಪಸ್ಥಿತರಿದ್ದರು.
Comments are closed.