ಭಾರತ ಬಹುತ್ವದ ಪ್ರಜಾಪ್ರಭುತ್ವವಾದಿ ದೇಶ: ಒಂದು ಧರ್ಮದ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

0

Get real time updates directly on you device, subscribe now.

ಕೊಡಿಗಿನ ಅಭಿವೃದ್ಧಿಗೆ ಅನುದಾನ:ಸಿಎಂ ಭರವಸೆ

ಕೊಡಗು, ಜನವರಿ 31: ಬಹಳ ಜನ ಬಹುತ್ವದ ಭಾರತವನ್ನು ಒಂದು ಧರ್ಮದ ರಾಷ್ಟ ಎನ್ನುತ್ತಾರೆ. ಭಾರತ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಬಹುತ್ವದ ರಾಷ್ಟ್ರ. ಇದನ್ನು ಒಂದು ಧರ್ಮಕ್ಕೆ ಸೇರಿದ ಸಾರ್ವಭೌಮ ರಾಷ್ಟವನ್ನಾಗಿ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ಅವರು ಇಂದು ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ಭಾಗಮಂಡಲದ ಹತ್ತಿರ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು –ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಧರ್ಮಗಳು, ಜನರು, ಜಾತಿಗಳೂ ಕೂಡ ಸಮಾನ. ಅದಕ್ಕಾಗಿಯೇ ಸಂವಿಧಾನದಲ್ಲಿ ಸಹಿಷ್ಣುತೆ ಹಾಗೂ ಸಹಬಾಳ್ವೆ ಇರಬೇಕು ಎಂದಿರುವುದು. ನಮ್ಮ ಧರ್ಮವನ್ನು ಪ್ರೀತಿಸಿ ಗೌರವಿಸಬೇಕು. ಆದರೆ ಇನ್ನೊಂದು ಧರ್ಮವನ್ನು ಅಲ್ಲಗಳೆಯಬಾರದು. ಅದನ್ನೇ ಸಹಿಷ್ಣುತೆ ಎನ್ನುತ್ತಾರೆ. ಸಹಿಸ್ಣುತೆ ಇದ್ದಾಗ ಮಾತ್ರ ನಾವು ಮಾನವರಾಗಿ ಬಾಳಲು ಸಾಧ್ಯವಾಗುತ್ತದೆ. ಕುವೆಂಪು ಅವರು ಹುಟ್ಟುವಾಗ ಎಲ್ಲರೂ ವಿಶ್ವ ಮಾನವರಾಗಿರುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಹೇಳಿದ್ದರು. ನಾವೆಲ್ಲರೂ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲಾಗಿದೆ

ಯಾವ ಪಕ್ಷ ನುಡಿದಂತೆ ನಡೆಯುತ್ತದೆ, ಜನಪರವಾಗಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ಎಂಟು ತಿಂಗಳಲ್ಲಿ ಪ್ರಮುಖವಾಗಿ ಭರವಸೆ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದೊಳಗೆ ಈಡೇರಿಸಿದ್ದೇವೆ. ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿನ ಎಲ್ಲಾ ಜಾತಿಯ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಿರುವುದು ನಮ್ಮ ಸರ್ಕಾರ ಎಂದರಲ್ಲದೇ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಾಜದಲ್ಲಿ ಸಮಾನತೆಯನ್ನು ತರುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

ಭ್ರಾತೃತ್ವ ಬೆಳೆಸಿ, ಭಾರತೀಯರಾಗಿ ಬದುಕಬೇಕು

ಕೊಡಗಿನ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ಯಾವ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಯೋಚಿಸಬೇಕು. ಭಾರತ ದೇಶ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ಧ್ವೇಷ ಮಾಡಬಾರದು. ಧ್ವೇಷ ಮಾಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದುದು ಎಂದರು.

ನಮ್ಮ ಸರ್ಕಾರ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಿದೆ. ಪ್ರತಿ ಸರ್ಕಾರವೂ ತನ್ನ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಸಂವಿಧಾನವು ಸ್ವಾತಂತ್ರö್ಯ ಸಮಾನತೆ, ಭ್ರಾತೃತ್ವವನ್ನು ಸಾರುತ್ತದೆ. ಭ್ರಾತೃತ್ವವನ್ನು ನಾವು ಬೆಳೆಸಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯ. ಮೂಲತ: ಮನುಷ್ಯರಾಗಿರುವ ನಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಅಂತಿಮವಾಗಿ ಜಾತಿ ವ್ಯವಸ್ಥೆ ತೊಲಗಿ ಭಾರತೀಯರಾಗಿ ಬದುಕಬೇಕು. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದೆ ಎಂದರು.

ಕೊಡಿಗಿನ ಅಭಿವೃದ್ಧಿಗೆ ಅನುದಾನ

ಭಾಗಮಂಡಲದಲ್ಲಿ ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳ ಸಂಗಮವನ್ನು ತ್ರಿವೇಣಿ ಸಂಗಮವಾಗಿದೆ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಅನುದಾನ ನೀಡಿದಂತೆ, ಈ ಬಾರಿಯೂ ಕೊಡಗಿನ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದರು.

ನುಡಿದಂತೆ ನಡೆದ ಸರ್ಕಾರ

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಜಯಗೊಳಿಸಿದ ಕೊಡುಗಿನ ಜನತೆಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. 2013-18ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪಕ್ಷ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ , ತಾನು ನೀಡಿದ್ದ ಭರವಸೆಗಳಲ್ಲಿ ಶೇ.10 ರಷ್ಟನ್ನು ಕೂಡ ಈಡೇರಿಸಲಿಲ್ಲ ಎಂದರು.

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಫಲಾನುಭವಿಗಳ ಖಾತೆಗೆ ಹಣ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.

ಸಿ ಅಂಡ್ ಡಿ ಭೂಮಿ: ಸಮಿತಿ ರಚನೆ

ಸಿ ಅಂಡ್ ಡಿ ಭೂಮಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ, ಅದರ ವರದಿಯಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಸುಗ್ರೀವಾಜ್ಞೆ

ಈ ಭಾಗದ ಜನರು ಮೈಕ್ರೋಫೈನಾನ್ಸ್ ನಿಂದ ಅನುಭವಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆಯನ್ನು ಸಧ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು.

Get real time updates directly on you device, subscribe now.

Leave A Reply

Your email address will not be published.

error: Content is protected !!