ಬ್ಯಾಂಕ್ ಖಾತೆಯಿಂದ ಅನಧಿಕೃತ ಹಣ ಕಡಿತ:  ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು ಪ್ರಕಟ

Get real time updates directly on you device, subscribe now.

: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಪ್ರಕರಣದಡಿ ದೂರುದಾರರಿಗೆ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.
 ಗ್ರಾಹಕ ಫಿರ್ಯಾದು ಸಂಖ್ಯೆ: 56/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ವೀರಣ್ಣ ತಂದೆ ನಾಗಪ್ಪ ಮಟ್ಟಿ, ಉದ್ಯೋಗ: ಶಿಕ್ಷಕರು, ಅಳವಂಡಿ ಗ್ರಾಮ ತಾಲ್ಲೂಕ ಮತ್ತು ಜಿಲ್ಲೆ ಕೊಪ್ಪಳ, ಇವರು ಎದುರುದಾರರಾದ ಕೆನರಾ ಬ್ಯಾಂಕ್ ಬೆಟಗೇರಿ ಬ್ರಾಂಚ್ ಕೊಪ್ಪಳ ಜಿಲ್ಲೆ, ಇವರಲ್ಲಿ ಎಸ್.ಬಿ ಖಾತೆ ಹೊಂದಿದ್ದು ಎದುರುದಾರರ ಬ್ಯಾಂಕಿನ ಗ್ರಾಹಕರಾಗಿರುತ್ತಾರೆ. ತಮ್ಮ ಖಾತೆಯಿಂದ ರೂ. 50,000 ರಂತೆ ಎರಡು ಬಾರಿ ಒಟ್ಟು ರೂ. 1,00,000 ಗಳನ್ನು ಯಾವುದೇ ತರಹದ ಮಾಹಿತಿ ಇಲ್ಲದೆ ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿದ್ದು, ದೂರುದಾರರ ಮೊಬೈಲಗೆ ಹಣ ಕಡಿತಗೊಂಡ ಬಗ್ಗೆ ಸಂದೇಶ ಬಂದಿರುತ್ತದೆ. ಮೋಬೈಲನಲ್ಲಿ ಸಂದೇಶ ನೋಡಿದ ತಕ್ಷಣವೇ ದೂರುದಾರರರು ಎದುರುದಾರರ ಬ್ಯಾಂಕಿಗೆ ಹೋಗಿ ತನ್ನ ಎಸ್.ಬಿ. ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ ಹಾಗೂ ತಕ್ಷಣವೇ ತನ್ನ ಖಾತೆಯಲ್ಲಿ ಬಾಕಿ ಹಣ ಅನಧಿಕೃತವಾಗಿ ಕಡಿತವಾಗುವುದನ್ನು ತಡೆಹಿಡಿಯುವಂತೆ ಮತ್ತು ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ತನಗೆ ಹಿಂತಿರುಗಿಸುವಂತೆ ಲಿಖಿತ ರೂಪದಲ್ಲಿ ಕೋರಿರುತ್ತಾರೆ. ಇದರ ಜೊತೆಗೆ ಅಳವಂಡಿ ಪೋಲಿಸ್ ಠಾಣೆಗೆ ದೂರನ್ನು ಸಹ ಸಲ್ಲಿಸಿರುತ್ತಾರೆ. ಎದುರುದಾರರ ಬ್ಯಾಂಕಿನವರ ಸೂಚನೆಯಂತೆ ಸೈಬರ್ ಪೋಲಿಸ್ ರವರಿಗೂ ಸಹ ದೂರನ್ನು ನೀಡಿರುತ್ತಾರೆ. ಎದುರುದಾರರ ಬ್ಯಾಂಕಿನವರು ದೂರುದಾರರ ಮನವಿಗೆ ಸ್ಪಂದಿಸದೇ ಅವರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿರುವ ಹಣ ರೂ. 1,00,000 ಗಳನ್ನು ಮರಳಿಸದೇ ಇದ್ದುದರಿಂದ ಮಾನಸಿಕವಾಗಿ ನೊಂದು ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್ ಮೇತ್ರಿ ಅವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಎದುರುದಾರ ಕೆನರಾ ಬ್ಯಾಂಕ್, ಅಳವಂಡಿ ಶಾಖೆ ಇವರಿಗೆ ಆರ್.ಬಿ.ಐ ಮಾರ್ಗಸೂಚಿಗಳನ್ವಯ ದೂರುದಾರರ ಹೊಣೆಗಾರಿಕೆ ಶೂನ್ಯ ಇದ್ದು, ಎದುರುದಾರರ ಹೊಣೆಗಾರಿಕೆ ಹೆಚ್ಚಾಗಿದ್ದು ಎದುರುದಾರರು ತನ್ನ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಭದ್ರತೆಯಿಂದ ಕಾಪಾಡುವ ಹೊಣೆಗಾರಿಕೆ ಎದುರುದಾರರ ಬ್ಯಾಂಕಿನವರದ್ದಾಗಿದ್ದು, ಅದನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದು ಸೇವಾ ನ್ಯೂನತೆ ಎಸಗಿದ್ದರಿಂದ ದೂರುದಾರರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 10,000 ಗಳನ್ನು ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟಾçರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!