ರಾಜ್ಯದಲ್ಲಿರುವುದು ಕನ್ನಡ, ಕನ್ನಡಿಗರ ಸರ್ಕಾರ: ಸಚಿವ ಶಿವರಾಜ್ ತಂಗಡಗಿ
* ಕನ್ನಡ ಭಾಷೆ, ನೆಲ, ಜಲ ವಿಚಾರದಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ
* ರಾಜ್ಯದ ಕೈಗಾರಿಕೆ, ಅಂಗಡಿ ಮುಂಗಟ್ಟುಗಳ ನಾಮಫಲಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಎಂಬ ಐತಿಹಾಸಿಕ ಕಾನೂನು ಜಾರಿಗೆ ತಂದಿದ್ದು ನಮ್ಮ ಸರ್ಕಾರ
* ನನ್ನ ಅಧಿಕಾರಾವಧಿಯಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣವಾಗಿರುವುದು ನನ್ನ ಸೌಭಾಗ್ಯ
ಬೆಂಗಳೂರು, ಜ.27
ಕರ್ನಾಟಕದಲ್ಲಿ ಇರುವುದು ಕನ್ನಡ ಮತ್ತು ಕನ್ನಡಿಗರ ಸರ್ಕಾರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ನಾಡಿನ ಅಸ್ಮಿತೆಯಾದ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ಸಚಿವರು ಮಾತನಾಡಿದರು.
ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವರ್ಷವಿಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಅದರಂತೆ ಭುವನೇಶ್ವರಿ ತಾಯಿ ಪ್ರತಿಮೆ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಶಕ್ತಿಸೌಧದ ಆವರಣದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಭುವನೇಶ್ವರಿ ತಾಯಿ ನಾಡಿನ ಪ್ರತೀಕ. ನಿಜಕ್ಕೂ ಇದು ಐತಿಹಾಸಿಕವಾದ ಕ್ಷಣ. ನಾನು ಸಚಿವನಾದ ಬಳಿಕ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗಿದ್ದು, ನನ್ನ ಪುಣ್ಯ. ನಮ್ಮ ಸರ್ಕಾರ ಎಂದೆಂದಿಗೂ ಕನ್ನಡಿಗರ ಪರ ಇರುವ ಸರ್ಕಾರ. ಕನ್ನಡದ ಭಾಷೆ, ನೆಲ, ಜಲ ವಿಚಾರದಲ್ಲಿ ಯಾವುದೇ ರಾಜಿಯೇ ಪ್ರಶ್ನೆಯೇ ಇಲ್ಲ ಎಂದು ವೇದಿಕೆ ಮೂಲಕ ಸಚಿವರು ಸಂದೇಶ ರವಾನಿಸಿದರು.
ಹಿಂದೆ ಬದಂತಹ ಮುಖ್ಯಮಂತ್ರಿಗಳು, ಸರ್ಕಾರಗಳೆಲ್ಲಾ ಕೇವಲ ಬಾಯಿ ಮಾತಿಗೆ ಕನ್ನಡ ಭಾಷೆ ಬಗ್ಗೆ ಕೇವಲ ಆದೇಶಗಳನ್ನು ಮಾತ್ರ ಮಾಡಿದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಾಣಿಜ್ಯ, ಕೈಗಾರಿಕೆ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು ಎಂದು ಐತಿಹಾಸಿಕವಾದ ಕಾನೂನನ್ನು ಜಾರಿಗೆ ತರಲಾಯಿತು. ಪರಿಣಾಮ ರಾಜ್ಯದ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ರಾರಾಜಿಸುತ್ತಿದೆ ಎಂದರು.
ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಆಂಗ್ಲಮಯವಾಗಿತ್ತು. ಆದರೆ ವಿಮಾನ ನಿಲ್ದಾಣದ ನಾಮಫಲಕ ಸೇರಿದಂತೆ ಗೋಡೆ ಬರಹಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಸೂಚಿಸಲಾಯಿತು. ಪರಿಣಾಮ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆ ಹೆಚ್ಚಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದರು.
ಅನುದಾನಕ್ಕೆ ಮನವಿ: ಗೋವಾ ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಅಲ್ಲಿನ ಕನ್ನಡಿಗರಿಗೆ ಕನ್ನಡ ಭವನ ನಿರ್ಮಿಸಲು ಅಲ್ಲಿನ ಸರ್ಕಾರದ ಜತೆ ಈಗಾಗಲೇ ಚರ್ಚೆ ಕೂಡ ನಡೆಸಲಾಗಿದ್ದು, ಸ್ಥಳವನ್ನು ಗುರುತಿಸಲಾಗಿದೆ. ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಸಚಿವರು ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ವೇಳೆ ಮನವಿ ಮಾಡಿದರು.
ಕರಾಳ ದಿನಾಚರಣೆ ಆಚರಣೆಗೆ ಬ್ರೇಕ್;
ಇನ್ನು ಪ್ರತಿವರ್ಷ ನವೆಂಬರ್ 1ರ ರಾಜ್ಯೋತ್ಸವದಂದು ಎಂಇಎಸ್ ನವರು ಬೆಳಗಾವಿಯಲ್ಲಿ ‘ಕರಾಳ ದಿನ’ವನ್ನು ಆಚರಣೆ ಮಾಡುತ್ತಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ಕರಾಳ ದಿನ ಆಚರಣೆಗೆ ಯಾವುದೇ ಅವಕಾಶ ನೀಡಲಿಲ್ಲ. ಈ ಮೂಲಕ ಕನ್ನಡಿಗರೇ ಕರ್ನಾಟಕದಲ್ಲಿ ಸಾರ್ವಭೌಮರು ಎಂಬ ಸಂದೇಶವನ್ನು ರವಾನಿಸಿದ್ದೇವೆ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಅವರು ತಿಳಿಸಿದರು.
Comments are closed.