ಜ.26 ರಂದು ಯುವ ಜನರ ಹಕ್ಕೊತ್ತಾಯ ಸಮಾವೇಶ : ಆಶಾ ವೀರೇಶ್
ಕೊಪ್ಪಳ : ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ “ಉದ್ಯೋಗಕ್ಕಾಗಿ ಕನ್ನಡಿಗರು – ಯುವಜನರ ಹಕ್ಕೊತ್ತಾಯ ಸಮಾವೇಶವನ್ನು” – ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಇದೇ ಜನವರಿ 26ರಂದು ಹಮ್ಮಿಕೊಳ್ಳಲಾಗಿದೆ ಈ ಸಮಾವೇಶಕ್ಕೆ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೆಆರ್ ಎಸ್ ಪಾರ್ಟಿ ಜಿಲ್ಲಾಧ್ಯಕ್ಷರಾದ ಆಶಾ ವೀರೇಶ್ ಮನವಿ ಮಾಡಿದರು.
ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕರ್ನಾಟಕದಲ್ಲಿಯೂ ಮತ್ತಷ್ಟು ವ್ಯಾಪಕವಾಗಿದೆ. ಇದಕ್ಕೆ ಹಲವು ಕಾರಣಗಳಿದ್ದು ಪ್ರಮುಖವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಕ್ಷಾಂತರ ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವುದು, ಇನ್ನೊಂದೆಡೆ ರಾಜ್ಯದಲ್ಲಿ ಸ್ಥಾಪನೆಯಾಗುವ ಮತ್ತು ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳಲ್ಲಿ ಕೂಡ ನಿರಂತರವಾಗಿ ರಾಜ್ಯದ ಯುವಜನರು ಕಡೆಗಣಿಸಲ್ಪಡುತ್ತಿದ್ದಾರೆ. ಹಾಗೆಯೆ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ಹಿಂದಿ ಹೇರಿಕೆಯಿಂದ ಕೇಂದ್ರ ಸರ್ಕಾರಿ ನೌಕರಿಗಳಿಂದಲೂ ವಂಚಿತರಾಗುತ್ತಿದ್ದಾರೆ, ರಾಜ್ಯದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ಮಾಡಬೇಕಾದ ಮತ್ತು ಉದ್ಯೋಗವು ಪ್ರತಿಯೊಬ್ಬ ಯುವಜನರ ಹಕ್ಕಾಗಿಸುವ ಬೃಹತ್ ಕೆಲಸ ನಮ್ಮೆಲ್ಲರ ಮುಂದಿದೆ ಇದನ್ನು ನಿರ್ವಹಿಸಬೇಕಾದ ಸರ್ಕಾರಕ್ಕೆ ತನ್ನ ಜವಾಬ್ದಾರಿಯನ್ನು ನೆನಪಿಸಿ ಈ ನಿಟ್ಟಿನಲ್ಲಿ ಕಾರ್ಯವನ್ನು ಮಾಡುವ ಬಗ್ಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರಿ ನೌಕರರು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಬೇಕು, ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಕೂಡ ತಮ್ಮ ಆಸ್ತಿಯನ್ನು ಘೋಷಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ ಆರ್ ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗೋಣೇಶ್, ಗಣೇಶ್ ಕುಮಾರ್ ಸಾರಂಗಿ, ಕನಕಪ್ಪ, ಬಸವರಾಜ್, ಎ.ಎಚ್.ಗೋಡಿಚಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.