ಅರ್ಜಿ ಹಿಡಿದು ವೇದಿಕೆಗೆ ಬಂದಿದ್ದ ಮಹಿಳೆ… ತಕ್ಷಣವೇ ನೆರವಾದ ಡಿಸಿ‌ ಶಿಲ್ಪ ನಾಗ್

Get real time updates directly on you device, subscribe now.

ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಎರಡು ಮಕ್ಕಳ ಜೊತೆಗೆ ವೇದಿಕೆಗೆ ಬಂದ ಹೆಣ್ಣು ಮಗಳೊಬ್ಬಳು ಮನವಿ ನೀಡಿ, ಏನಾದರೂ ಸಹಾಯ ಮಾಡಿ ಸರ್ ಎಂದು ಕಣ್ಣೀರಾದಳು. ಆ ಕ್ಷಣಕ್ಕೆ ಏನು ಮಾಡುವುದು ಎಂದು ತೋಚಲಿಲ್ಲ.

ವೇದಿಕೆಯಲ್ಲಿ ಇದ್ದ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೊಂದು ಮನವಿ ಮಾಡಿ ಸಹಾಯ ಮಾಡುವಂತೆ ವಿನಂತಿಸಿಕೊಂಡೆ.

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಮೃತಪಟ್ಟ ಸಂದರ್ಭದಲ್ಲಿ ಆ ಪತ್ರಕರ್ತರ ಕುಟುಂಬದ ಸಂಕಷ್ಟ ಏನಿತ್ತು, ಅವರ ಕುಟುಂಬಕ್ಕೆ ಪರಿಹಾರ ಕೊಡಿಸಿರುವುದನ್ನು ವಿವರಿಸಿ ಜಿಲ್ಲಾಧಿಕಾರಿಗಳ ಕೈಗೆ ಕೋವಿಡ್ ಕಥೆಗಳು ಪುಸ್ತಕ ಕೊಟ್ಟು ಬಂದಿದ್ದೆ.

ಆಗಿದ್ದು ಇಷ್ಟೇ.

ಮಲೆ‌ಮಹದೇಶ್ವರ ಬೆಟ್ಟದಲ್ಲಿ ಕ್ರಿಯಾಶೀಲ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ವಿಜಯವಾಣಿ ವರದಿಗಾರ ಪಿ.ನಾಗರಾಜ್ ಅಕಾಲಿಕ ನಿಧಾನರಾದ ಮೇಲೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಪತ್ನಿ ನಾಗರತ್ನಳಿಗೆ ಎರಡು ಮಕ್ಕಳನ್ನು ಸಾಕುವ ಜವಾಬ್ದಾರಿ ದಿಢೀರ್ ಹೆಗಲ ಮೇಲೆ ಬಿತ್ತು.

ಅವರಿಗಿರುವ ಒಂದು ಎಕರೆ ಜಮೀನಿನಲ್ಲಿ ಭಾವಮೈದುನನಿಗೂ ಪಾಲಾಗಬೇಕು. ಮಾವನ ಮನೆಯಲ್ಲಿ ಪ್ರತ್ಯೇಕ ವಾಸ. ಜೀವನ ನಿರ್ವಹಣೆ ಮಾಡಲು ಟೈಲರಿಂಗ್ ಮೊರೆ ಹೋಗಿರುವ ನಾಗರತ್ನ ಸಹಾಯಕ್ಕೆ ಮನವಿ ಹಿಡಿದು ಚಾಮರಾಜನಗರಕ್ಕೆ ಬಂದಿದ್ದಳು.

ಆ ಕುಟುಂಬಕ್ಕೆ ನೆರವು ಕೊಡಿಸಬೇಕೆನ್ನುವುದು ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ವಿಜಯವಾಣಿ ಪತ್ರಿಕೆಯ ಸತ್ಯನಾರಾಯಣ ಮತ್ತು ಕಿರಣ್ ಸೇರಿದಂತೆ ಎಲ್ಲರ ಒತ್ತಾಸೆ.

ಆ ಹೆಣ್ಮಗಳ ಕಷ್ಟಕ್ಕೆ ಖಂಡಿತವಾಗಿ ಮಹಿಳಾ ಜಿಲ್ಲಾಧಿಕಾರಿಯಾಗಿ ಶಿಲ್ಪ ನಾಗ್ ಅವರು ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ನನ್ನದಿತ್ತು. ಅದಕ್ಕಾಗಿ ಆ ವೇದಿಕೆಯಲ್ಲಿ ಅವರಿಗೆ ಮನವಿ ಮಾಡಿಕೊಂಡಿದ್ದೆ.

ಜಿಲ್ಲಾಧಿಕಾರಿ ಶಿಲ್ಪ ನಾಗ್ ಅವರ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಲಿಲ್ಲ. ನಾಗರತ್ನ ಅವರ ಅಕೌಂಟ್ ಗೆ 15 ಸಾವಿರ ಹಾಕುವ ಮೂಲಕ ವೈಯಕ್ತಿಕವಾಗಿ ತುರ್ತು ನೆರವು ನೀಡಿದ್ದಾರೆ. ಆ ಹೆಣ್ಮಗಳಿಗೊಂದು ಎಲ್ಲಾದರೂ ಕೆಲಸ ಕರುಣಿಸಿ ಮನವಿಗೂ ಜಿಲ್ಲಾಧಿಕಾರಿ ಅಸ್ತು ಅಂದಿದ್ದಾರೆ.

ಅಕೌಂಟ್ ಗೆ ಹಣ ಬಂದಿರುವ ಸಂಗತಿಯನ್ನು ಪೋನ್ ನಲ್ಲಿ ನಾಗರತ್ನ ತಿಳಿಸಿದಾಗ ಸಮಾಧಾನವಾಯಿತು. ಕೂಡಲೇ ಜಿಲ್ಲಾಧಿಕಾರಿ ಶಿಲ್ಪ ನಾಗ್ ಅವರಿಗೆ ಪೋನ್ ಮಾಡಿ ಧನ್ಯವಾದ ಹೇಳಿದೆ. ಕೋವಿಡ್ ಸಂದರ್ಭದಲ್ಲಿ ನೀವೆಲ್ಲ ಮಾಡಿರುವ ಕೆಲಸಗಳಿಗೆ ಹೋಲಿಸಿದರೆ ಇದೆಲ್ಲಾ ಏನಲ್ಲ ಬಿಡಿ ಶಿವಾನಂದ್ ಎಂದರು ಡಿಸಿ.

ಅಧಿಕಾರಿಗಳು ಕುರ್ಚಿಯಲ್ಲಿ ಇರುವುದು ಮುಖ್ಯವಲ್ಲ. ಆ ಕುರ್ಚಿಯಲ್ಲಿ ಕುಳಿತಾಗ ಎಷ್ಟು ಜನರಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು ಎನ್ನುವುದು ಮುಖ್ಯ.
ಅದಕ್ಕಾಗಿ ಶಿಲ್ಪ ನಾಗ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪರವಾಗಿ ಧನ್ಯವಾದ.
ಆ ಕುಟುಂಬಕ್ಕೊಂದು ಉದ್ಯೋಗ ಕರುಣಿಸಿ, ಎರಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾದರೆ ಸಾಕು.

ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ದೇವರಾಜ್, ನಂದೀಶ್, ಗೂಳಿಪುರ‌ ನಂದೀಶ್, ಗೌಡಳ್ಳಿ‌ಮಹೇಶ್, ಮಂಜು, ಬನಶಂಕರಿ ಆರಾಧ್ಯ ಎಲ್ಲರೂ ಮಾತನಾಡುವ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತ ನಾಗರಾಜ್ ಅವರ ನೆನಪು ಹೇಳುತ್ತಲೇ ಇದ್ದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಪತ್ರಕರ್ತರಾಗಿ ನಾಗರಾಜ್ ಮಾಡಿದ ವರದಿಗಳು, ಬೆಟ್ಟದ ಪ್ರಾಧಿಕಾರ, ಹನೂರು ತಾಲ್ಲೂಕು ಮತ್ತು ಜಿಲ್ಲಾಡಳಿತದ ಗಮನ ಸೆಳೆದಿದ್ದವು ಎನ್ನುವುದು ಇಲ್ಲಿ ಗಮನಾರ್ಹ. ಇದರಿಂದಾಗಿ ಅಲ್ಲಿ ಅಭಿವೃದ್ದಿ ಮತ್ತು ಮೂಲ ಸೌಕರ್ಯ ಉತ್ತಮಗೊಳ್ಳಲು ಸಾಧ್ಯವಾಗಿದೆ.

ಕೆಯುಡಬ್ಲ್ಯೂಜೆ 10 ಸಾವಿರ ರೂ ನೆರವನ್ನು ಶೀಘ್ರವಾಗಿ ಆ ಕುಟುಂಬಕ್ಕೆ ಕಳುಹಿಸಲಾಗುವುದು. ಹೆಚ್ಚಿನ ನೆರವಿಗೆ ಸರ್ಕಾರದ ಗಮನ ಸೆಳೆಯಲಾಗುವುದು.

ಪತಿ ಕಳೆದುಕೊಂಡ ನಾಗರತ್ನ ಬದುಕಿಗೆ, ಆ ಎರಡು ಮಕ್ಕಳ ಭವಿಷ್ಯಕ್ಕಾಗಿ ಮಾನವೀಯ ನೆಲೆಯಲ್ಲಿ ನಾವೆಲ್ಲರೂ ಬೆಂಬಲವಾಗಿ ನಿಲ್ಲದಿದ್ದರೆ ಏನು ಪ್ರಯೋಜನ? ಅಲ್ವಾ?

ಸಂತೋಷಕ್ಕೆ ಎಲ್ಲರೂ ನೆಂಟರು.‌ ಕಷ್ಟದ ಸಂದರ್ಭದಲ್ಲಿ ಯಾರೂ ಇಲ್ಲರು. ಎನ್ನುವ ಮಾತು ದಾರಿಯುದ್ದಕ್ಕೂ ನೆನಪಾಗುತ್ತಲೇ ಇತ್ತು.

-ಶಿವಾನಂದ ತಗಡೂರು

Get real time updates directly on you device, subscribe now.

Comments are closed.

error: Content is protected !!