ತಾಲೂಕುಮಟ್ಟದಲ್ಲಿ ನಿಯಮಿತವಾಗಿ ಸಭೆಗಳು ನಡೆಯಲಿ: ಎಂ.ಸುಂದರೇಶಬಾಬು
ಕೊಪ್ಪಳ ಕುಡಿಯುವ ನೀರು ಸರಬರಾಜು ಹಾಗೂ ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಆಗಸ್ಟ್ 04ರಂದು ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಮಳೆ ಕೊರತೆಯಿಂದಾಗಿ ಯಾವುದೇ ಕಡೆಗಳಲ್ಲಿ ಜನರಿಗೆ ನೀರಿನ ಅಭಾವ ಉಂಟಾದಲ್ಲಿ ಕೂಡಲೇ ಸ್ಪಂದಿಸಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತು ಕೊಡಬೇಕು. ಮಳೆಯಿಂದಾಗಿ ಸಂಭವಿಸುವ ಮಾನವ ಜೀವಹಾನಿ, ಜಾನುವಾರು ಜೀವ ಹಾನಿ ಪ್ರಕರಣಗಳಿಗೆ ಇದುವರೆಗೆ ಸಕಾಲಕ್ಕೆ ಪರಿಹಾರ ನೀಡಿದಂತೆ ಮುಂದಿನ ದಿನಗಳಲ್ಲು ಅಗತ್ಯ ಕ್ರಮ ವಹಿಸಬೇಕು. ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದು ಅಥವಾ ಅತಿಯಾಗಿ ಮಳೆಯಾಗಿ ಬೆಳೆಗಳಲ್ಲಿ ರೋಗ ಬಾಧೆ ಸೇರಿದಂತೆ ಯಾವುದಾದರು ಸಮಸ್ಯೆಗಳು ಕಂಡುಬಂದಲ್ಲಿ ರೈತರಿಗೆ ಅನುಕೂಲವಾಗುವ ಹಾಗೆ ಸಮರ್ಪಕ ಬೆಳೆ ನಿರ್ವಹಣೆಗೆ ಸಲಹೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದೆ ನಡೆದಂತೆ ತಾಲೂಕುಮಟ್ಟದಲ್ಲಿ ಸಹ ತಾಲೂಕುಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳು ನಿಯಮಿತವಾಗಿ ನಡೆಯಬೇಕು. ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಿಗಳು ಸೇರಿದಂತೆ ಈ ಎಲ್ಲಾ ತಾಲೂಕುಮಟ್ಟದ ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಿ ಗ್ರಾಮ, ಹೋಬಳಿವಾರು ಕುಡಿಯುವ ನೀರು ಸರಬರಾಜು, ಬಿತ್ತನೆ ಪ್ರಮಾಣ, ಕೃಷಿ-ತೋಟಗಾರಿಕಾ ಬೆಳೆಗಳ ನಿರ್ವಹಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚಿಸಿ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ವಹಿಸಬೇಕು. ಈ ಹಿಂದೆ ನಿರ್ದೇಶನ ನೀಡಿದಂತೆ ನೀರು ಪೂರೈಸುವ ಮೊದಲು ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಬೇಕು. ಮಳೆಗಾಲ ಹಿನ್ನೆಲೆಯಲ್ಲಿ ನೀರು ಅಲ್ಲಲ್ಲಿ ನಿಂತು ಅದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗೆ, ಚಿಕೂನ್‌ಗುನ್ಯದಂತ ಕಾಯಿಲೆಗಳು ಹರಡದ ಹಾಗೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಮಾತನಾಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿಯ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಗ್ರಾಮದಲ್ಲಿ ಶುಚಿತ್ವ, ಕುಡಿಯುವ ನೀರಿನ ಸರಬರಾಜು, ಬೀದಿದೀಪ, ಗಟಾರು ಶುಚಿತ್ವ, ಜಲಜೀವನ ಮಿಷನ್ ಕಾಮಗಾರಿ ಅನುಷ್ಠಾನ ಸೇರಿದಂತೆ ಆಯಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಅಗತ್ಯ ಮೇಲ್ವಿಚಾರಣೆ ಮಾಡಬೇಕು ಎಂದು ಇಓಗಳಿಗೆ ಸೂಚಿಸಿದರು.
*ಪರಿಹಾರ ವಿತರಣೆ:* ಜಿಲ್ಲೆಯಲ್ಲಿ ಸಿಡಿಲಿನಿಂದ ಕೊಪ್ಪಳ, ಕುಷ್ಟಗಿ, ಕುಕನೂರು, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಮೃತಪಟ್ಟ 5 ಹಾಗೂ ಕನಕಗಿರಿ ತಾಲೂಕಿನಲ್ಲಿ ಮನೆಕುಸಿದು ಮೃತಪಟ್ಟ 2 ಸೇರಿ ಒಟ್ಟು 7 ಮಾನವ ಜೀವ ಹಾನಿ ಪ್ರಕರಣಗಳಿಗೆ ತಲಾ 5 ಲಕ್ಷ ರೂ.ಗಳಂತೆ 35,00,000 ರೂ.ಪರಿಹಾರ ವಿತರಿಸಲಾಗಿದೆ. ಜನವರಿಯಿಂದ ಜುಲೈ ಮಾಹೆವರೆಗೆ ಕೊಪ್ಪಳ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರ, ಯಲಬುರ್ಗಾ ಹಾಗೂ ಗಂಗಾವತಿ ತಾಲೂಕುಗಳು ಸೇರಿ ಜಿಲ್ಲೆಯ ಒಟ್ಟು 246 ಮನೆಹಾನಿ ಪ್ರಕರಣಗಳ ಪೈಕಿ ಇದುವರೆಗೆ 195 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಮಾಹೆಯವರೆಗೆ ಕೊಪ್ಪಳ ತಾಲೂಕಿನಲ್ಲಿ 16, ಕುಷ್ಟಗಿ ತಾಲೂಕಿನಲ್ಲಿ 12, ಕನಕಗಿರಿ ತಾಲೂಕಿನಲ್ಲಿ 1, ಕಾರಟಗಿ ತಾಲೂಕಿನಲ್ಲಿ 3, ಕೂಕನೂರ ತಾಲೂಕಿನಲ್ಲಿ 4 ಮತ್ತು ಯಲಬುರ್ಗಾ ತಾಲೂಕಿನಲ್ಲಿ 5 ಸೇರಿ ಒಟ್ಟು 41 ಜಾನುವಾರುಗಳ ಜೀವಹಾನಿ ಪ್ರಕರಣಗಳಿಗೆ ನಿಯಮಾನುಸಾರ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳು ಸೇರಿ ಒಟ್ಟು 3,08,000 ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ 2,36,437 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭತ್ತ, ಶಕ್ತಿಮಾನ್ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ ಸೇರಿದಂತೆ 1,80,098 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ದಾನ್ಯಗಳನ್ನು ಬೆಳೆಯಲಾಗಿದೆ. ತೊಗರಿ, ಹುರುಳಿ, ಹೆಸರು, ಅಲಸಂದಿ, ಅವರೆ, ಮಡಿಕೆ ಸೇರಿ 28,079 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ದಾನ್ಯಗಳು. ಶೆಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲು ಸೇರಿ 13,880 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳು. ಹತ್ತಿ, ಕಬ್ಬು ಸೇರಿದಂತೆ 14,380 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.
ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಆಗಸ್ಟ್ 4ರವರೆಗೆ 21,695 ಮೆ.ಟನ್ ಯೂರಿಯಾ, 15,042 ಮೆ.ಟನ್ ಡಿಎಪಿ, 1839 ಮೆ.ಟನ್ ಎಂಓಪಿ, 31,253 ಮೆ.ಟನ್ ಎನ್‌ಕೆಪಿಎಸ್ ಮತ್ತು 458 ಮೆ.ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 70,288 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ. ಅದೇ ರೀತಿ 7962.78 ಕ್ವಿಂಟಲ್ ಬಿತ್ತನೆ ಬೀಜಗಳು ಮಾರಾಟವಾಗಿದ್ದು, 2032.03 ಕ್ವಿಂಟಲ್ ದಾಸ್ತಾನು ಇದೆ. ವಿವಿಧ ಬಿತ್ತನೆ ಬೀಜವಾರು ಭತ್ತದ ಬೀಜ 726.30 ಕ್ವಿಂಟಲ್ ಮಾರಾಟವಾಗಿದ್ದು 142.45 ಕ್ವಿಂಟಲ್ ದಾಸ್ತಾನು ಇದೆ. ಮೆಕ್ಕೆಜೋಳ 5831.39 ಕ್ವಿಂಟಲ್ ಮಾರಾಟವಾಗಿದ್ದು 1314.93 ಕ್ವಿಂಟಲ್ ದಾಸ್ತಾನು ಇದೆ. ಸಜ್ಜೆ ಬೀಜ 523.44 ಕ್ವಿಂಟಲ್ ಮಾರಾಟವಾಗಿದ್ದು 159.84 ಕ್ವಿಂಟಲ್ ದಾಸ್ತಾನು ಇದೆ. ನವಣೆ 5.96 ಕ್ವಿಂಟಲ್ ಮಾರಾಟವಾಗಿದ್ದು 4.64 ಕ್ವಿಂಟಲ್ ದಾಸ್ತಾನು ಇದೆ. ಹೆಸರು ಬೀಜ 123.51 ಕ್ವಿಂಟಲ್ ಮಾರಾಟವಾಗಿದ್ದು 48.49 ಕ್ವಿಂಟಲ್ ದಾಸ್ತಾನು ಇದೆ. ತೊಗರಿ ಬೀಜ 733.43 ಕ್ವಿಂಟಲ್ ಮಾರಾಟವಾಗಿದ್ದು 218.87 ಕ್ವಿಂಟಲ್ ದಾಸ್ತಾನು ಇದೆ. ಸೂರ್ಯಕಾಂತಿ ಬೀಜ 18.75 ಕ್ವಿಂಟಲ್ ಮಾರಾಟವಾಗಿದ್ದು 142.81 ಕ್ವಿಂಟಲ್ ದಾಸ್ತಾನು ಇದೆ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಸಭೆಗೆ ಮಾಹಿತಿ ನೀಡಿದರು.
*ಮಳೆ ವಿವರ:* ಜಿಲ್ಲೆಯಲ್ಲಿ ಜುಲೈ 01ರಿಂದ 31ವರೆಗೆ ವಾಡಿಕೆ ಮಳೆ 66 ಮಿಮಿ ಇದ್ದು ವಾಸ್ತವಿಕವಾಗಿ 109 ಮಿಮಿ ಸುರಿದು ಶೇ.65ರಷ್ಟು ಹೆಚ್ಚಿನ ಮಳೆಯಾಗಿದೆ. ತಾಲೂಕುವಾರು ಜುಲೈ 1 ರಿಂದ ಜುಲೈ 31ರವರೆಗೆ ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ 81 ಮಿಮಿ ಇದ್ದು, ವಾಸ್ತವಿಕವಾಗಿ 135 ಮಿಮಿ ಸುರಿದು ಶೇ.67ರಷ್ಟು, ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ 73 ಮಿಮಿ ಇದ್ದು ವಾಸ್ತವಿಕವಾಗಿ 125 ಮಿಮಿ ಸುರಿದು ಶೇ.71ರಷ್ಟು, ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 67 ಮಿಮಿ ಇದ್ದು ವಾಸ್ತವಿಕವಾಗಿ 78 ಮಿಮಿ ಮಳೆ ಸುರಿದು ಶೇ.16ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 68 ಮಿಮಿ ಇದ್ದು, ವಾಸ್ತವಿಕವಾಗಿ 132 ಮಿಮಿ ಮಳೆ ಸುರಿದು ಶೇ.94ರಷ್ಟು, ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ 61 ಮಿಮಿ ಇದ್ದು ವಾಸ್ತವಿಕವಾಗಿ 82 ಮಿಮಿ ಸುರಿದು ಶೇ.35ರಷ್ಟು, ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 62 ಮಿಮಿ ಇದ್ದು ವಾಸ್ತವಿಕವಾಗಿ 114 ಮಿಮಿ ಮಳೆ ಸುರಿದು ಶೇ.84ರಷ್ಟು ಮಳೆ ಸುರಿದಿದೆ. ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ 47 ಮಿಮಿ ಇದ್ದು, ವಾಸ್ತವಿಕವಾಗಿ 108 ಮಿಮಿ ಮಳೆ ಸುರಿದು ಶೇ.129ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ವಿವಿಧ ತಾಲೂಕುಗಳ ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ತೋಟಗಾರಿಕೆ, ಪಶುಪಾಲನಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Comments are closed.