ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ: ತರಬೇತಿ ಕಾರ್ಯಾಗಾರ

Get real time updates directly on you device, subscribe now.

: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಸಂಖ್ಯಿಕ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ ಕುರಿತು ಮೇಲ್ವಿಚಾರಕರು, ಮೂಲ ಕಾರ್ಯಕರ್ತರ ತರಬೇತಿ ಕಾರ್ಯಾಗಾರವು ಆಗಸ್ಟ್  04ರಂದು ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಬೆಳೆ ಸಮೀಕ್ಷೆ ಕಾರ್ಯವನ್ನು ಸಿ.ಸಿ.ಇ ನಿಯಮದ ಪ್ರಕಾರ ಕೈಗೊಳ್ಳಬೇಕು. ಸ್ವತಃ ಮೂಲ ಕಾರ್ಯಕರ್ತರೇ ಹೋಗಿ ಸಮೀಕ್ಷೆಯನ್ನು ಮಾಡಬೇಕು. ಕಾರ್ಯಕರ್ತರು, ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಟಾವು ದಿನಾಂಕವನ್ನು ಖಚಿತಪಡಿಸಿಕೊಂಡು ಕಟಾವಿನ ದಿನದಂದು ಅವರ ಸಮಕ್ಷಮದಲ್ಲಿ ಬೆಳೆ ಕಟಾವು ಕೈಗೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಕಟಾವು ಪ್ರಯೋಗಗಳು ವ್ಯಪಗಥವಾಗದಂತೆ ನೋಡಿಕೊಳ್ಳಿ. ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿರುವ ವಿವಿಧ ಇಲಾಖೆಯ ಅಧಿಕಾರಿಗಳು ಕಟಾವಿನ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಬೆಳೆ ಅಂದಾಜು ಸಮೀಕ್ಷಾ ಕಾರ್ಯಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮೂಲಕಾರ್ಯಕರ್ತರಾಗಿರುತ್ತಾರೆ. ಲಭ್ಯವಿರುವ ಇಲಾಖಾವಾರು ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಮೂಲ ಕಾಯಕರ್ತರು ವರ್ಗಾವಣೆಯಾದಲ್ಲಿ ಅವರಿಗೆ ಹಂಚಿಕೆಯಾದ ಪ್ರಯೋಗಗಳ ಮಾಹಿತಿಯನ್ನು ಮತ್ತೊಬ್ಬರಿಗೆ ವಹಿಸಿ, ಮೊಬೈಲನ್ನು ಹಸ್ತಾಂತರಿಸಬೇಕು. ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಬೆಳೆ ಇದ್ದುಕೊಂಡು ಬೆಳೆ ಸಮೀಕ್ಷೆಯನ್ನು ನಷ್ಠಗೊಳಿಸುವಂತಿಲ್ಲ. ಪ್ರತಿ ವಾರಕ್ಕೊಮ್ಮೆ ಬೆಳೆ ಅಂದಾಜು ಸಮೀಕ್ಷೆಯ ಪ್ರಗತಿಯನ್ನು ಆಯಾ ತಾಲೂಕ ತಹಶೀಲ್ದಾರರು ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಸಭೆ ಜರುಗಿಸಿ, ಮೂಲಕಾರ್ಯಕರ್ತರಿಗೆ ನಿರ್ದೇಶನವನ್ನು ನೀಡಬೇಕು. ಯೋಜನಾ ಪಟ್ಟಿಯನ್ನು ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಾಡಿ. ಯಾವುದೇ ಕಾರಣಕ್ಕೂ ಬೆಳೆ ಬದಲಾವಣೆಯನ್ನು ಮಾಡಬಾರದು. ಸಮೀಕ್ಷೆ ಕೈಗೊಳ್ಳುವ ಸರ್ವೆ ನಂಬರಿನಲ್ಲಿ ಕಡ್ಡಾಯವಾಗಿ ನೀರಾವರಿ ಇದ್ದರೆ ನೀರಾವರಿ ಎಂದು ಮತ್ತು ಮಳೆ ಆಶ್ರಿತ ಬೆಳೆ ಇದ್ದರೆ ಮಳೆ ಆಶ್ರಿತ ಬೆಳೆ ಎಂದೇ ಮಾಡಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಮಾತನಾಡಿ, ಕೃಷಿ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ಹೋಬಳಿವಾರು ಮತ್ತು ಗ್ರಾಮ ಪಂಚಾಯತಿವಾರು ವಿಮಾ ಘಟಕದಲ್ಲಿ ಕೈಗೊಳ್ಳಬಹುದಾದ ವಿವಿಧ ಬೆಳೆಗಳ ಬೆಳೆ ಅಂದಾಜು ಸಮೀಕ್ಷೆಯ ಯೋಜನಾ ಪಟ್ಟಯನ್ನು ತಯಾರಿಸಿ, ಜುಲೈ 20ರಂದು ಜಿಲ್ಲಾಧಿಕಾರಿಗಳ ತಂತ್ರಾಂಶದ ಮೂಲಕ ಬಿಡುಗಡೆ ಮಾಡಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಮೂಲಕಾರ್ಯಕರ್ತರು, ತಮ್ಮ ಮೊಬೈಲ್ ಆಪ್ ಮೂಲಕ ಹಂಚಿಕೆ ಮಾಡಲಾದ ಪ್ರಯೋಗಗಳ ಮಾಹಿತಿಯನ್ನು ಡೌನ್‌ಲೋಡ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ಗ್ರಾಮಗಳ, ಬೆಳೆಗಳ ಮತ್ತು ಸರ್ವೆ ನಂಬರಗಳ ಮಾಹಿತಿ ಪಡೆದುಕೊಂಡು ಸ್ವತಃ ಕ್ಷೇತ್ರ ಬೇಟಿ ನೀಡಿ, ನಮೂನೆ 1ನ್ನು ಕ್ರಮಬದ್ಧವಾಗಿ ಭರ್ತಿಮಾಡಿ, ಅಪ್‌ಲೋಡ ಮಾಡುವುದು ಕಡ್ಡಾಯವಾಗಿದೆ. ಪ್ರತಿ ಪ್ರಯೋಗಕ್ಕೆ ಮೂಲ ಸರ್ವೆ ನಂಬರ ಸೇರಿದಂತೆ ಹೆಚ್ಚುವರಿಯಾಗಿ ಅದಕ್ಕೆ 4 ಸರ್ವೆ ನಂಬರಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಆಯ್ಕೆಯಾದ ಸರ್ವೆ ನಂಬರಿನ ರೈತರ ಜೊತೆ ಸತತವಾಗಿ ಸಂಪರ್ಕವಿರಿಸಿ, ಕಟಾವಿನ ದಿನದಂದು ಅವರ ಸಮಕ್ಷದಲ್ಲಿ ಬೆಳೆಕಟಾವುಗಳನ್ನು ಕೈಗೊಳ್ಳಬೇಕು. ಕಟಾವಿನ ಸಮಯದಲ್ಲಿ ವಿವಿಧ ಹಂತಗಳ ಛಾಯಾಚಿತ್ರವನ್ನು ಮತ್ತು ವಿಡಿಯೋವನ್ನು ಮಾಡುವುದು ಕಡ್ಡಾಯ. ಒಂದೇ ತರಹನಾದ ಛಾಯಾಚಿತ್ರ ಇರಬಾರದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಸುಧಾಕರ ಹಾ ಮಾನೆ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಮಂಜುಳಾ ಚವ್ಹಾಣ ಸೇರಿಂದ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!