ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ : ಶಿವರಾಜ್ ತಂಗಡಗಿ
ಕನಕಗಿರಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಪಿಡಿಓ ರವರು ಕಡ್ಡಯವಾಗಿ ಗ್ರಾ.ಪಂ ನಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಜೊತೆಗೆ ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡುವ ಮೂಲಕ ಮಾದರಿ ಗ್ರಾ.ಪಂ ಗಳನ್ನಾಗಿ ಮಾಡಲು ಸೂಚಿಸಿದರು.
ನಂತರ ಪಿಡಿಓ ರವರಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 94 ಸಿಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯೊಂದಿಗೆ ಸಂವಹನ ಮಾಡಿ ವಿತರಣೆಗೆ ಸಿದ್ದಪಡಿಸಿಕೊಳ್ಳಲು ಸೂಚಿಸಿದರು. ಇದೇ ವೇಳೆ ತಾಂತ್ರಿಕ ಸಿಬ್ಬಂದಿಗಳಿಗೆ ಗ್ರಾ.ಪಂ ನಲ್ಲಿ ಅತೀ ಅಗತ್ಯವಿರುವ ಹಾಗೂ ಅನೈರ್ಮಲ್ಯ ಇರುವಂತ ಪ್ರದೇಶಗಳಲ್ಲಿ ಮೊದಲು ಸಿಸಿ ಚರಂಡಿ & ಸಿಸಿ ರಸ್ತೆ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ತಿಳಿಸಿದರು. ಬಳಿಕ ವಿವಿಧ ವಿಷಯಗಳ ಕುರಿತು ಚರ್ಚಿಸಿ ಪ್ರಗತಿಯನ್ನು ಸಾಧಿಸಲು ತಿಳಿಸಿದರು.
ಈ ವೇಳೆ ಕನಕಗಿರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್, ಗಂಗಾವತಿ/ಕಾರಟಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಸಹಾಯಕ ನಿರ್ದೇಶಕರಾದ ಶರಪೊನ್ನಿಸಾ ಬೇಗಂ, ವನಜಾಕ್ಷಿ, ವೀರಣ್ಣ ನಕ್ರಳ್ಳಿ ಸೇರಿದಂತೆ ತಾ.ಪಂ ಸಿಬ್ಬಂದಿಗಳು, ವಿವಿಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ನರೇಗಾ ತಾಂತ್ರಿಕ ಸಿಬ್ಬಂದಿಗಳು ಹಾಜರಿದ್ದರು.