ಪ್ರವರ್ಗ 1 ಗುಂಪಿನ ಮೀಸಲಾತಿ ಹೆಚ್ಚಳ ಕುರಿತ ಬೇಡಿಕೆ ಸಿಎಂ ಗಮನಕ್ಕೆ ತರುವೆ: ಸಚಿವ ತಂಗಡಗಿ
ಬೆಳಗಾವಿ ಸುವರ್ಣಸೌಧ, ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಒಳಗೊಂಡ ಪ್ರವರ್ಗ 1 ಗುಂಪಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತಂತೆ ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ.ತಳವಾರ ಬಾಬಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಅತ್ಯಂತ ಹಿಂದುಳಿದ ಜಾತಿಗಳನ್ನು ಒಳಗೊಂಡ ಪ್ರವರ್ಗ-1 ಗುಂಪಿಗೆ ಜನಸಂಖ್ಯೆ,ಆರ್ಥಿಕ-ಸಾಮಾಜಿಕ-
ಶೈಕ್ಷಣಿಕ ಹಿನ್ನೆಲೆ ಪರಿಗಣಿಸದೇ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿರುವುದು ಮತ್ತು ಅದರಿಂದ ತೀರಾ ಹಿಂದುಳಿದ ಜಾತಿಗಳಿಗೆ ಮೂವತ್ತು ವರ್ಷಗಳಿಂದ ಆಗುತ್ತಿರುವ ಅನ್ಯಾಯದ ಕುರಿತು ನಿಯಮ 330ರ ಮೇರೆಗೆ ಡಾ.ತಳವಾರ ಬಾಬಣ್ಣ ಪ್ರಸ್ತಾಪಿಸಿ, ಮೀಸಲಾತಿ ಪ್ರಮಾಣವನ್ನು ಶೇ.7 ಕ್ಕೆ ಹೆಚ್ಚಿಸುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದರು.
ಈ ಕುರಿತಂತೆ ಸದಸ್ಯರಾದ ಹರಿಪ್ರಸಾದ್, ರವಿಕುಮಾರ್, ನಾಗರಾಜ್ ಮತ್ತಿತರರು ದನಿಗೂಡಿಸಿದರು.
ಪ್ರವರ್ಗ-1 ಗುಂಪಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಕುರಿತ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.