ಸಣ್ಣ ಸುದ್ದಿಯೂ ಪರಿಣಾಮ ಬೀರಬಲ್ಲದು: ಡಾ.ಟಿ.ವಿ. ವಾರುಣಿ
ಕಾಲೇಜುರಂಗ ಆಗಸ್ಟ್ ತಿಂಗಳ ಸಂಚಿಕೆ ಬಿಡುಗಡೆ
-ಪತ್ರಕರ್ತನಿಗೆ ಸಮಾಜದ ಹಿತ ಮುಖ್ಯವಾಗಿರಬೇಕೇ ಹೊರತು ಸ್ವಾರ್ಥ ಸಾಧನೆಯಲ್ಲ
-ಪದಗಳ ಬಳಕೆ, ಭಾಷಾಜ್ಞಾನ ಅರಿತಿರಬೇಕು
ಅಳವಂಡಿ/ಕೊಪ್ಪಳ: ಲೇಖನಿ ಖಡ್ಗಕ್ಕಿಂತ ಹರಿತ ಎಂಬ ಮಾತು ಎಲ್ಲರಿಗೂ ಗೊತ್ತು. ಖಡ್ಗದಿಂದ ಸಾಧ್ಯವಾಗದಿರುವುದು ಬರಹದಿಂದ ಸಾಧ್ಯವಾಗುತ್ತದೆ. ಸುದ್ದಿ ಸಣ್ಣದಾದರೂ ಪರಿಣಾಮ ದೊಡ್ಡದು ಎಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಡಾ.ಟಿ.ವಿ.ವಾರುಣಿಯವರು ಹೇಳಿದರು.
ಕೊಪ್ಪಳ ತಾಲೂಕಿನ ಅಳವಂಡಿಯ ಶ್ರೀ ಅಳವಂಡಿ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟಿಮನಿ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪ್ರತಿ ತಿಂಗಳು ಹೊರತರುವ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕಾಲೇಜುರಂಗದ ಆಗಸ್ಟ್ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾವೃತ್ತಿಯಲ್ಲಿ ಸೃಜನಶೀಲತೆಗೆ ಪ್ರಾಧಾನ್ಯತೆ. ಬೇರೆ ವಿಷಯಗಳಲ್ಲಿ ಕಲಿಕೆ ಮಾತ್ರ ಇರುತ್ತದೆ. ಪತ್ರಿಕೋದ್ಯಮದಲ್ಲಿ ಕಲಿಕೆಯ ಜೊತೆ ಕೌಶಲ್ಯವೂ ಬೇಕು. ಕೌಶಲ್ಯದ ಕಲಿಕೆಯೂ ಈ ಕಾಲೇಜಿನಲ್ಲಿ ಕಾರ್ಯರೂಪಕ್ಕೆ ಬಂದಿರುವುದು ಪ್ರಶಂಸನಾರ್ಹ ಎಂದು ಅಭಿಪ್ರಾಯಪಟ್ಟರು.
ಬದುಕಿನಲ್ಲಿ ಹಣಗಳಿಕೆಯೊಂದೇ ಶ್ರೇಷ್ಠವಲ್ಲ. ಅರಿವು, ಅಕ್ಷರ, ಅನ್ನ ನೀಡಿದ ಹೆತ್ತವರ ಋಣ ತೀರಿಸಲಸಾಧ್ಯ. ನಮ್ಮ ರಾಜ್ಯ, ದೇಶದಲ್ಲಿ ವೃದ್ಧಾಶ್ರಮ ಪರಿಕಲ್ಪನೆ ಬೇರುಸಹಿತ ತೊಲಗಬೇಕು. ಗುರು ಹಿರಿಯರನ್ನು ಗೌರವಿಸುವ, ತಂದೆ-ತಾಯಿಯನ್ನು ಪೂಜಿಸುವ ಪರಂಪರೆ ಬೆಳೆಯಬೇಕು ಎಂದು ಅವರು ಕರೆ ನೀಡಿದರು.
ಕಾಲೇಜು ರಂಗ ಪತ್ರಿಕೆಯ ಆಗಸ್ಟ್ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ದತ್ತು ಕಮ್ಮಾರ ಅವರು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಕ್ಣೇತ್ರದಲ್ಲಿ ಕೆಲಸ ಮಾಡುವುದಕ್ಕೂ ತರಗತಿಯಲ್ಲಿ ಕಲಿಯುವುದಕ್ಕೂ ವ್ಯತ್ಯಾಸಗಳಿರುತ್ತವೆ. ಕಲಿಕಾ ಹಂತದಲ್ಲೇ ಪ್ರಾಯೋಗಿಕತೆಗೆ ಒತ್ತು ನೀಡಿ, ವಿದ್ಯಾರ್ಥಿಗಳ ಬರವಣಿಗೆಯನ್ನೇ ಜೀವಾಳವನ್ನಾಗಿಸಿ ಪತ್ರಿಕೆ ಹೊರತರುತ್ತಿರುವುದು ಸಾಮಾನ್ಯ ಸಂಗತಿಯಲ್ಲ ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಬೋಧಕರು ತಮ್ಮ ಗೌರವಧನದ ಅಲ್ಪಭಾಗವನ್ನು ಈ ಕಾರ್ಯಕ್ಕೆ ವಿನಿಯೋಗಿಸುತ್ತಿರುವುದು ಅವರಲ್ಲಿನ ಕಲಿಸುವ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ವಿದ್ಯಾರ್ಥಿ ಹಂತದಿಂದಲೇ ಮಾತನಾಡುವ, ಬರೆಯುವ ಕೌಶಲ ಬೆಳೆಸಿ, ಧೈರ್ಯ, ಸ್ಫೂರ್ತಿ ತುಂಬುವ ಕೆಲಸ ಬಹುಶಃ ಬೇರೆಲ್ಲೂ ಇಲ್ಲ ಎಂದು ಶ್ಲಾಘಿಸಿದರು.
ಇಂದು ಸುದ್ದಿ ಮತ್ತು ಜಾಹೀರಾತು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನ ಬಿಟ್ಟು ಇನ್ನೊಂದು ನಡೆಯದು. ಜಾಹೀರಾತು ಇಲ್ಲದೇ ಮಾಧ್ಯಮ ಸಂಸ್ಥೆಯ ಸಿಬ್ಬಂದಿ ಜೀವನ ಇಲ್ಲ. ಸುದ್ದಿಗಳೇ ಇಲ್ಲದಿದ್ದರೆ ಪತ್ರಿಕೆಯನ್ನು ಯಾವ ಓದುಗರೂ ಕಣ್ಣೆತ್ತಿ ನೋಡುವುದಿಲ್ಲ. ಒಂದು ಪತ್ರಿಕೆ ಓದುಗನ ಕೈ ಸೇರಬೇಕಾದರೆ ಹತ್ತಾರು ರೂಪಾಯಿ ವ್ಯಯಿಸಬೇಕು. ಓದುಗನಿಗೆ ಐದಾರು ರೂಪಾಯಿಗೆ ಪತ್ರಿಕೆ ಕೈ ಸೇರುತ್ತದೆ. ಇನ್ನುಳಿದ ವೆಚ್ಚವನ್ನು ಜಾಹೀರಾತಿನಿಂದಲೇ ಸೃಜಿಸಬೇಕು. ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜುರಂಗ ಪತ್ರಿಕೆ ಉಚಿತವಾಗಿ ಕೈ ಸೇರುತ್ತಿದೆ ಎಂದರೆ ಅದರ ಹಿಂದಿನ ಪರಿಶ್ರಮ ಕರ್ತೃಗಳಿಗೆ ಮಾತ್ರ ಗೊತ್ತಿರುತ್ತದೆ. ಪುಕ್ಕಟೆ ಸಿಗುತ್ತದೆ ಎಂದು ಉದಾಸೀನ ಮಾಡಬೇಡಿ. ಅದರ ಹಿಂದಿನ ಶ್ರಮ ಅರ್ಥೈಸಿಕೊಂಡು ಸದ್ಬಳಕೆ ಮಾಡಿಕೊಂಡು ಕಾಲೇಜಿಗೆ ಸಾರ್ಥಕತೆ ತಂದುಕೊಡಿ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗೇಂದ್ರಪ್ಪ.ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಬ್ಯಾಲಹುಣಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಸವರಾಜ ಕರುಗಲ್ ಮಾತನಾಡಿದರು.
ಈ ವೇಳೆ ಉಪನ್ಯಾಸಕರಾದ ರವಿ ಹಿರೇಮಠ, ಪ್ರದೀಪ ಪಲ್ಲೇದ್, ಈಶಪ್ಪ ಮೇಟಿ, ಬೋರಯ್ಯ, ವೀರಭದ್ರಪ್ಪ, ವೆಂಕಟೇಶ.ಎಸ್., ಹಸೀನಾಭಾನು, ಸಿದ್ದು ಕಡ್ಲೆಕೊಪ್ಪ, ಮಹೇಶ, ದೈಹಿಕ ಶಿಕ್ಷಣ ನಿರ್ದೇಶಕ ಸಿದ್ಧಾಚಾರಿ ಬಡಿಗೇರ, ಗ್ರಂಥಪಾಲಕಿ ಗೌತಮಿ, ಬೋಧಕೇತರ ಸಿಬ್ಬಂದಿ ಹನುಮವ್ವ, ದುರ್ಗಪ್ಪ, ವೀರಣ್ಣ ಪೂಜಾರ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಇಂದಿರಾ ನಿರೂಪಿಸಿದರು. ಕೊಟ್ರಮ್ಮ ಸ್ವಾಗತಿಸಿದರು. ಸಹನಾಬೇಗಂ ಮತ್ತು ಪೂಜಾ ಅತಿಥಿ ಪರಿಚಯ ಮಾಡಿಕೊಟ್ಟರು. ಉಪನ್ಯಾಸಕ ವಿಜಯಕುಮಾರ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಅಣ್ಣಯ್ಯ ಹಿರೇಮಠ, ಶಿವಮ್ಮ ವಿದ್ಯಾರ್ಥಿ ಅನಿಸಿಕೆ ಹಂಚಿಕೊಂಡರು. ಅಂಜಲಿ ವಂದಿಸಿದರು.
*ಬಾಕ್ಸ್-1*
*ಮಲ್ಲಮ್ಮ ಹೂವಿನಾಳ ಪ್ರಬಂಧಕ್ಕೆ ಬಹುಮಾನ:*
ಕಾಲೇಜುರಂಗ ಆಯೋಜಿಸಿದ್ದ ನಾನು ನನ್ನ ದೇಶ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜಿನ ಬಿ.ಎ. 6ನೇ ಸೆಮೆಸ್ಟರ್ ವಿದ್ಯಾರ್ಥಿನಿ ಮಲ್ಲಮ್ಮ ಹೂವಿನಾಳ ಬರೆದ ಪ್ರಬಂಧಕ್ಕೆ ಪ್ರಥಮ ಬಹುಮಾನ ಲಭಿಸಿದ್ದು ಬಹುಮಾನದ ಪ್ರಾಯೋಜಕರಾದ ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಬ್ಯಾಲಹುಣಸಿ ಪುಸ್ತಕದ ಜೊತೆ ನಗದು ಬಹುಮಾನ ವಿತರಿಸಿದರು. ಬಿ.ಎ.6ನೇ ಸೆಮೆಸ್ಟರ್‌ನ ವಿದ್ಯಾರ್ಥಿನಿ ಶಿವಮ್ಮ ದ್ವಿತೀಯ ಹಾಗೂ ಬಿ.ಎ. 2ನೇ ಸೆಮೆಸ್ಟರ್‌ನ ಯಶೋಧಾ ತೃತೀಯ ಸ್ಥಾನ ಗಳಿಸಿದ್ದು ಪುಸ್ತಕ ಬಹುಮಾನ ಹಾಗೂ ಪ್ರಬಂಧ ಪ್ರಕಟಣೆಯ ಗೌರವ ಪಡೆದರು. ಕಾಲೇಜಿನ ವಿದ್ಯಾರ್ಥಿಗಳಾದ ಗವಿಸಿದ್ದಮ್ಮ, ಕೊಟ್ರಮ್ಮ, ಅಂಜಲಿ ಹಾಗೂ ಸಿದ್ದನಗೌಡ ಬರೆದ ಪ್ರಬಂಧಗಳು ಮೆಚ್ಚುಗೆ ಗಳಿಸಿದ್ದು ಪುಸ್ತಕ ಬಹುಮಾನ ವಿತರಿಸಲಾಯಿತು.
ವಾರುಣಿ-ದತ್ತು ಅವರಿಗೆ ಸತ್ಕಾರ
ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಡಾ.ಟಿ.ವಿ.ವಾರುಣಿ ಹಾಗೂ ಕಾಲೇಜುರಂಗ ಆಗಸ್ಟ್ ಸಂಚಿಕೆ ಬಿಡುಗಡೆಗೊಳಿಸಿದ ಅತಿಥಿ, ಹಿರಿಯ ಪತ್ರಕರ್ತ ದತ್ತು ಕಮ್ಮಾರ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
Comments are closed.