ಕೊಪ್ಪಳ ಇನ್ನರ್ ವ್ಹೀಲ್ ಕ್ಲಬ್ ಗೆ ವಿಕಲಚೇತನರ ಕ್ಷೇತ್ರದಲ್ಲಿನ ಸಾಧನೆಗೆ ಸರಕಾರದ ರಾಜ್ಯ ಪ್ರಶಸ್ತಿ ಗರಿ
…
ಕೊಪ್ಪಳ, ಡಿ 1,ವಿಕಲಚೇತನರ ಪುನಃಶ್ಚೇತನ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಕಳೆದ 29 ವರ್ಷಗಳಿಂದ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕೊಪ್ಪಳದ ಇನ್ನರ್ ವ್ಹೀಲ್ ಕ್ಲಬ್ ಗೆ ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2024ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ರಾಜ್ಯ ಪ್ರಶಸ್ತಿ ಲಭಿಸಿದೆ.
ಸಂಸ್ಥೆಯು ಈ ಭಾಗದಲ್ಲಿ ಪೋಲಿಯೋ ನಿರ್ಮೂಲನೆ, ಅಂಗವಿಕಲತೆ ತಡೆಗಟ್ಟುವಿಕೆ, ಜನಜಾಗೃತಿ, ವೈದ್ಯಕೀಯ ಚಿಕಿತ್ಸೆ, ಸಲಕರಣೆಗಳ ವಿತರಣೆ, ಜೀವನೋಪಾಯ, ಶಿಕ್ಷಣ ಸೇರಿದಂತೆ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬಂದು ಹಕ್ಕು ಆಧಾರಿತ ಉತ್ತಮ ಗುಣಮಟ್ಟದ ಜೀವನ ನಡೆಸುವಲ್ಲಿ ಸ್ವಯಂ ಸೇವಾ ಸಂಸ್ಥೆಯಾಗಿ ಇನ್ನರ್ ವ್ಹೀಲ್ ಕ್ಲಬ್ ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಇದಲ್ಲದೇ ವಿಕಲಚೇತನರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ವಿಕಲಚೇತನರ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ. ಕ್ಲಬ್ ನ ಸಾಧನೆಗೆ ರಾಜ್ಯ ಪ್ರಶಸ್ತಿ ಲಭಿಸಿರುವುದು ಸಂತಸವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ ತಂಬ್ರಳ್ಳಿ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಡಿಸೆಂಬರ್ 3 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ ಸ್ವೀಕರಿಸಲು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಉಮಾ ಮಹೇಶ್ ತಂಬ್ರಳ್ಳಿ ಮತ್ತು ಕ್ಲಬ್ಬಿನ ಪದಾಧಿಕಾರಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ, ಪ್ರಶಸ್ತಿ ಪ್ರಕಟ ಗೊಂಡ ಬಳಿಕ ಇಲ್ಲಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿಶೇಷವಾಗಿ ಮಹಿಳಾ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿ ಅಭಿನಂದಿಸಿದ್ದಾರೆ
Comments are closed.