ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಿದೆ: ಸಿಎಂ

Get real time updates directly on you device, subscribe now.

ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು-ನೆರವು ನೀಡಲು ನಾನು ಸದಾ ಸಿದ್ದ: ಸಿ.ಎಂ.ಸಿದ್ದರಾಮಯ್ಯ

ಚಿನ್ನದ ಪದಕ ಪಡೆದವರಿಗೆ 6 ಕೋಟಿ ಹಣ ಮೀಸಲಿಟ್ಟಿದ್ದೀವಿ. ದೇಶಕ್ಕೆ ಯಾರಾದರೂ ಚಿನ್ನ ತನ್ನಿ: ಕ್ರೀಡಾಪಟುಗಳಿಗೆ ಸಿಎಂ ಕರೆ

ಬೆಂಗಳೂರು ಡಿ1:ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು-ನೆರವು ನೀಡಲು ನಾನು ಸದಾ ಸಿದ್ದ. ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಿದೆ. ರಾಜ್ಯದಿಂದ ಯಾರಾದರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಒಂದು ಚಿನ್ನ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಕರ್ನಾಟಕ ಒಲಂಪಿಕ್ ಸಂಸ್ಥೆ ಯವನಿಕಾದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

ಚಿನ್ನದ ಪದಕ ಪಡೆದವರಿಗೆ 6 ಕೋಟಿ ಹಣ ಮೀಸಲಿಟ್ಟಿದ್ದೀವಿ. ಬೆಳ್ಳಿ ಪದಕ ಪಡೆದವರಿಗೆ 4 ಕೋಟಿ ಹಣ ಇಟ್ಟಿದ್ದೇವೆ. ಆದರೆ ಯಾರೂ ಪದಕ ತರ್ತಾನೇ ಇಲ್ಲ. ದೇಶಕ್ಕೆ ಯಾರಾದರೂ ಚಿನ್ನ ತನ್ನಿ ಎಂದು ಕರೆ ನೀಡಿದರು.

ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎನ್ನುವ ಪ್ರೋತ್ಸಾಹದಾಯಕ ಉದ್ದೇಶದಿಂದ ಕರ್ನಾಟಕ ಒಲಂಪಿಕ್ ಸಂಸ್ಥೆ 22 ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಿದೆ.

ಗೋವಿಂದರಾಜು ಅವರು ಒಲಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದ್ದಾರೆ. ನಾನು ಬಜೆಟ್ ರೂಪಿಸುವಾಗ ಚರ್ಚೆಯಲ್ಲಿ ಕುಳಿತು ಕ್ರೀಡಾಕ್ಷೇತ್ರಕ್ಕೆ ಅಗತ್ಯವಾದ ಎಲ್ಲವನ್ನೂ ಸೇರಿಸುತ್ತಾರೆ. ನಾನು ಕ್ರೀಡಾಪಟು ಅಲ್ಲದಿದ್ದರೂ ಕ್ರೀಡಾಪ್ರೇಮಿ. ನಾನು ಶಾಲಾ, ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಒಂದೂ ಪ್ರಶಸ್ತಿ ಬರಲಿಲ್ಲ. ಆದರೆ ಶಾಸಕರ ಕ್ರೀಡಾಕೂಟದಲ್ಲಿ ಸಿಕ್ಕಾಪಟ್ಟೆ ಪ್ರಶಸ್ತಿ ಬಂತು ಎಂದು ಸ್ಮರಿಸಿದರು.

ಕ್ರೀಡೆಯಲ್ಲಿ ಸಣ್ಣ ಪುಟ್ಟ ದೇಶಗಳೆಲ್ಲಾ ಬಹಳ‌ ಮುಂದಿವೆ. ಆದರೆ, ಭಾರತದಂತಹ ದೊಡ್ಡ ದೇಶಕ್ಕೆ ಒಲಂಪಿಕ್ ನಲ್ಲಿ ಒಂದೂ ಚಿನ್ನ ಬರಲಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.

ಹೀಗಾಗಿ ನಾನು ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಅನುಕೂಲ ಕಲ್ಪಿಸಿಕೊಡಲು ನಾನು ಸಿದ್ಧ. ರಾಜ್ಯದ ಪಟುಗಳು ದೇಶಕ್ಕೆ ಒಲಂಪಿಕ್ಸ್ ನಲ್ಲಿ ಚಿನ್ನ ತರಲಿ ಎಂದು ಆಶಿಸಿದರು.

ಗೃಹ ಸಚಿವ ಜಿ.ಪರಮೇಶ್ವರ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರೂ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಸೇರಿ‌ ಇಲಾಖೆಯ ಅಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

25% ಹಾಜರಾತಿ-10 ಗ್ರೇಸ್ ಮಾರ್ಕ್ ಬಗ್ಗೆ ಪರಿಶೀಲನೆ: ಸಿಎಂ ಭರವಸೆ.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾದ ಗೋವಿಂದರಾಜು ಅವರು ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾ ಮಕ್ಕಳಿಗೆ ಶೇ25 ರಷ್ಡು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಈ ಬಗ್ಗೆ ಪ್ರಸ್ತಾಪಿಸಿದ ಸಿಎಂ, ಈ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!