ನಾ ಕಂಡಂತೆ ಕೊಪ್ಪಳ ರೇಡಿಯೋ ಕಾರ್ಯಕ್ರಮಕ್ಕೆ ಚಾಲನೆ : ಸಂಸದ ರಾಜಶೇಖರ್ ಹಿಟ್ನಾಳ್
ಗಂಗಾವತಿ ನ.15: ಗ್ರಾಮೀಣ ಭಾರತಿ 90.4 ಎಫ್.ಎಂ ಕೇಂದ್ರದಲ್ಲಿ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ನಾ ಕಂಡಂತೆ ಕೊಪ್ಪಳ ಜಿಲ್ಲಾವಲೋಕನ ಸರಣಿ ರೇಡಿಯೋ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ ಮಾತನಾಡಿದರು.
ನವೆಂಬರ್ 15ರಿಂದ ಪ್ರತಿದಿನ ಸಂಜೆ 6.30ಕ್ಕೆ ನಾ ಕಂಡಂತೆ ಕೊಪ್ಪಳ ಜಿಲ್ಲಾವಲೋಕನ ಕಾರ್ಯಕ್ರಮ ಗ್ರಾಮೀಣ ಭಾರತಿ 90.4ಎಫ್.ಎಂ.ನಲ್ಲಿ ಪ್ರಸಾರಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಂದು ಗ್ರಾಮೀಣ ಭಾರತಿ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರೇಡಿಯೋದಲ್ಲಿ ಮಾತನಾಡಿದ ಅವರು “ನಮ್ಮ ಕೊಪ್ಪಳದ ಹೆಮ್ಮೆಯ ಗ್ರಾಮೀಣ ಭಾರತಿ 90.4 ಎಫ್.ಎಂ. ರೇಡಿಯೋದ ಮೊದಲ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ರೇಡಿಯೋವನ್ನು ಕೊಡುಗೆಯಾಗಿ ಕೊಟ್ಟಿರುವಂತಹ ದೀಪ ಸಮಾಜ ಸೇವಾ ಕೇಂದ್ರದವರಿಗೆ ನನ್ನ ಅಭಿನಂದನೆಗಳನ್ನ ಸಲ್ಲಿಸುತ್ತೇನೆ.
ಕಳೆದೊಂದು ವರ್ಷದಿಂದ ಗ್ರಾಮೀಣ ಭಾರತಿ ರೇಡಿಯೋ ನಾಡಿನ ಜನತೆಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರೀತಿಯಿಂದ ಉಣಬಡಿಸಿದ್ದಾರೆ. ಮತ್ತು ಜನರು ಕೂಡ ಅದರ ಸವಿಯನ್ನು ಅಷ್ಟೇ ಪ್ರೀತಿಯಿಂದ ಸವಿದಿದ್ದಾರೆ. ಈ ವರ್ಷಾಚರಣೆ ಸಂಭ್ರಮದಲ್ಲಿ “ನಾ ಕಂಡಂತೆ ಕೊಪ್ಪಳ ಜಿಲ್ಲಾವಲೋಕನ” ಸರಣಿ ರೇಡಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ಸಂಗತಿ. ನೋಡಿ ಈ ಕಾರ್ಯಕ್ರಮದ ಹೆಸರೇ ಹೇಳುವಂತೆ ನಾ ಕಂಡಂತೆ ಕೋಪಳ ಜಿಲ್ಲಾ ಅವಲೋಕನ. ನಮ್ಮ ಹೆಮ್ಮೆಯ ಕೊಪ್ಪಳ ಜಿಲ್ಲೆಯನ್ನ ನಮ್ಮ ಯುವ ಪೀಳಿಗೆಗೆ, ನಾಡಿಗೆ ವಿನೂತನ ರೀತಿಯಲ್ಲಿ ಪರಿಚಯಿಸುವ ಆಶಯವನ್ನ ಈ ಕಾರ್ಯಕ್ರಮ ಹೊಂದಿದೆ.
ನಾನಂತೂ ಈ ಸರಣಿಯನ್ನ ಕೇಳಲಿಕ್ಕೆ ಹೆಚ್ಚು ಕಾತುರನಾಗಿದ್ದೇನೆ. ಜಾಗತೀಕರಣದ ದಾಳಿಗೆ ತುತ್ತಾಗಿರುವ ಕಾಲಘಟ್ಟದಲ್ಲಿರುವ ನಾವು ನಮ್ಮ ಚಾರಿತ್ರಿಕ ಪರಂಪರೆ ಸಂಸ್ಕೃತಿ ಕಲೆಗಳನ್ನ ನಮ್ಮ ಮುಂದಿನ ತಲೆಮಾರಿಗೆ ಹೆಮ್ಮೆಯಿಂದ ಪರಿಚಯಿಸುವಲ್ಲಿ ಎಲ್ಲೋ ಕೊಂಚ ಹಿಂದೆ ಬಿದ್ದಿದೀವಿ ಅನ್ಸುತ್ತೆ. ಈ ಮೊಬೈಲ್, ಸೋಶಿಯಲ್ ಮೀಡಿಯಾಗಳ ಆಳ್ವಿಕೆ ಶುರುವಾದಾಗಿ ನಿಂತಂತು ನಮ್ಮ ಮಕ್ಕಳಿಗೆ ಪ್ರಪಂಚ ಈಗ ಅಂಗೈಯಲ್ಲಿ ಬಂದು ಸೇರಿದೆ.
ಜಗತ್ತಿನ ಎಲ್ಲ ವಿದ್ಯಮಾನಗಳು ಅಂಗೈಯಲ್ಲಿ ಕಾಣುತ್ತಿರುವ ಸಂದರ್ಭದಲ್ಲಿ ನಮ್ಮ ಮಕ್ಕಳು ಹೊರ ಜಗತ್ತಿನಡೆಗೆ ಹೆಚ್ಚು ಆಕರ್ಷಣೆಗೊಳ್ಳುತ್ತಿದ್ದಾರೆ. ಅದು ತಪ್ಪಲ್ಲ..! ಆದರೆ, ಮೊದಲು ನಮ್ಮೂರು, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹಿರಿಮೆ-ಗರಿಮೆಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವುದು ಅವಶ್ಯಕವಾಗಿದೆ. ಅವರಿಗೆ ಈ ಜ್ಞಾನ ದೊರೆಯದಿದ್ರೆ, ಅವರು ತಮ್ಮ ನೆಲ, ಜಲ, ಭಾಷೆ-ಸಂಸ್ಕೃತಿಯನ್ನು ಹೇಗೆ ಪ್ರೀತಿಸಬಲ್ಲರು!? ಈ ಕಾರಣಕ್ಕಾಗಿ ನಾ ಕಂಡಂತೆ ಕೊಪ್ಪಳ ಜಿಲ್ಲಾ ಅವಲೋಕನ ರೇಡಿಯೋ ಕಾರ್ಯಕ್ರಮ ನನಗೆ ಅತ್ಯಂತ ಪ್ರಿಯವಾಗಿದೆ.
ಕೊಪ್ಪಳದ ನೆಲಕ್ಕೆ ಪ್ರಾಚೀನತೆಯೊಂದಿಗೆ ಪೌರಾಣಿಕ ಐತಿಹ್ಯದ ನಂಟೂ ಇದೆ. ಕೊಪ್ಪಳದ ಪಾಲ್ಕಿ ಗುಂಡು ಮತ್ತು ಮಲಿಮಲ್ಲಪ್ಪನ ಬೆಟ್ಟದ ನಡುವಿನ ಬಯಲನ್ನು ಪಾಂಡವರ ವಠಾರ ಎಂದು ಕರೆಯಲಾಗಿದೆ. ಗಂಗಾವತಿ ತಾಲೂಕಿನ ಆನೆಗೊಂದಿ ರಾಮಾಯಣ ಕಾಲದ ಕಿಷ್ಕಿಂದೆಯ ಭಾಗವಾಗಿತ್ತು ಎಂದು ನಂಬಲಾಗಿದೆ. ಇಲ್ಲಿನ ಅಂಜನಾದ್ರಿ ಇಂದು ಜಗತ್ ವಿಖ್ಯಾತಿಯನ್ನ ಪಡೆಯುತ್ತಿರುವುದು ಸಂತಸದ ಸಂಗತಿ. ಅಲ್ಲದೇ ಕೊಪ್ಪಳದ ಗವಿಮಠ ಬೆಟ್ಟ ಮತ್ತು ಪಾಲ್ಕಿ ಗುಂಡು ಬೆಟ್ಟದಲ್ಲಿ ದೊರೆತಿರುವ ಅಶೋಕನ ಶಾಸನಗಳು ಕೊಪ್ಪಳ ಜಿಲ್ಲೆಗೆ ಮತ್ತು ಮೌರ್ಯ ಸಾಮ್ರಾಜ್ಯಕ್ಕೆ ಇರುವ ನಂಟನ್ನು ತೆರೆದಿಟ್ಟಿವೆ.
ಕೋಪಣಾದ್ರಿ, ಕೋಪಣಾಚಲ ಕೋಪಣಾ ನಗರ ಹೀಗೆ ಅನೇಕ ಹೆಸರುಗಳು ನಮ್ಮ ಕೊಪ್ಪಳಕ್ಕಿವೆ. ಸುಮಾರು 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ಪ್ರದೇಶ ಪ್ರದೇಶದ ಅತಿ ದೊಡ್ಡ ಸಾಧನೆ ಎಂದರೆ, ಅದು ತನ್ನ ಜನ್ಮನಾಮವನ್ನು ಇತಿಹಾಸದುದ್ದಕ್ಕೂ ಕುಪನ ಮತ್ತು ಕೋಪಣ ಎಂಬ ಹೆಸರಿನಿಂದಲೇ ಮುಂದುವರೆಯಿತು. ಇಲಿಯ ವ್ಯವಹಾರ ಭಾಷೆಯು ಪ್ರಾಕೃತದಿಂದ ಸಂಸ್ಕೃತಕ್ಕೆ ಹಾಗೂ ಕನ್ನಡಕ್ಕೆ ಬದಲಾದರೂ ಇದು ತನ್ನ ಹೆಸರಿನಲ್ಲಿ ಬದಲಾವಣೆಯನ್ನು ತಂದುಕೊಂಡಿದ್ದು ‘ನ’ ದಿಂದ ‘ಣ’ ವರ್ಣಕ್ಕೆ ‘ಕ’ ದಿಂದ ‘ಕೊ’ ವರ್ಣಕ್ಕೆ ಮಾತ್ರ.
ಮೊದಲು ಬೌದ್ಧ ಕೇಂದ್ರವಾಗಿದ್ದ ಈ ಪ್ರದೇಶವು ನಂತರದಲ್ಲಿ ಪ್ರಸಿದ್ಧ ಜೈನ ಕೇಂದ್ರವಾಗಿ ದಕ್ಷಿಣ ಜೈನ ಕಾಶಿ ಎಂದೇ, ಒಂದು ಸಹಸ್ರಮಾನಕ್ಕೂ ಹೆಚ್ಚು ಕಾಲ ಇತಿಹಾಸದಲ್ಲಿ ಮೆರೆಯಿತು. ಶಾಸನಗಳಿಗೆ ಸೀಮಿತವಾಗದ ಇದರ ಉಲ್ಲೇಖವು ಆರಂಭಕಾಲದ ಕನ್ನಡದ ಕಾವ್ಯಗಳಲ್ಲಿಯೂ ಧ್ವನಿಸಿತು. ಕನ್ನಡದ ಮೊದಲ ಕವಿ ಕವಿರಾಜಮಾರ್ಗದ ಕರ್ತೃ ಶ್ರೀ ವಿಜಯನು ಇದನ್ನು “ಮಹಾಕೂಪಣನಗರ” ಎಂದು ಕೊಂಡಾಡಿದ್ದಾನೆ. ಇನ್ನು ಹತ್ತನೆಯ ಶತಮಾನದ ಮೊದಲ ಗದ್ಯ ಕವಿ ಚಾವುಂಡರಾಯನು ಇದನ್ನು ಕೋಪಣಾದ್ರಿ ಎಂದು ಮತ್ತು ಈತನ ನೆಚ್ಚಿನ ಚಂಪೂ ಕವಿ ರನ್ನನು ಇದನ್ನು ಕೋಪಣಾಚಲವೆಂದು ಕರೆದು ಈ ಸ್ಥಾನದ ಪವಿತ್ರವನ್ನು ಮನದಟ್ಟು ಮಾಡಿಕೊಟ್ಟಿರುವರು.
ಕುಪನ-ಕುಪಣ-ಕೊಪಣ=ಕೊಪ್ಪಳ. ಇಷ್ಟೆಲ್ಲಾ ಕೇಳುತ್ತಿದ್ದರೆ ನಿಮ್ಮ ಮನದಲ್ಲಿ ಕೊಪ್ಪಳದಂತೆ ಎಷ್ಟೊಂದು ದೀರ್ಘಕಾಲ ಒಂದೇ ಹೆಸರಿನಲ್ಲಿ ಕರೆಸಿಕೊಂಡಿರುವ ಇನ್ನೊಂದು ಸ್ಥಳವು ಕರ್ನಾಟಕದ ಇತಿಹಾಸದಲ್ಲಿ ಇದೆಯೇ ಎಂಬುದೊಂದು ಕುತೂಹಲ ಮೂಡುತ್ತದೆ. ಭಾರತದ ಹೆಸರಾಂತ ಪವಿತ್ರ ಸ್ಥಳಗಳಾದ ವಾರಣಾಸಿ, ಪ್ರಯಾಗ್, ಕುರುಕ್ಷೇತ್ರ, ಮಧುರೈ ಮತ್ತು ಶ್ರೀಶೈಲ ಮುಂತಾದವುಗಳ ಸಾಲಿನಲ್ಲಿ ನಿಲ್ಲಬಲ್ಲ ಕರ್ನಾಟಕದ ಏಕೈಕ ಸ್ಥಳ ನಮ್ಮ ಹೆಮ್ಮೆಯ ಕೊಪ್ಪಳ.
ಪ್ರವಾಸೋಧ್ಯಮದಲ್ಲೂ ಕೂಡ ಕೊಪ್ಪಳ ಜಿಲ್ಲೆ ಅತ್ಯಂತ ಸಮೃದ್ಧವಾಗಿದೆ. ರಾಜ್ಯ ಪುರಾತತ್ವ ಮತ್ತು ಕೇಂದ್ರ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು 30ಕ್ಕೂ ಹೆಚ್ಚು ಸಂರಕ್ಷಿತ ಸ್ಮಾರಕಗಳನ್ನ ಕೊಪ್ಪಳ ಜಿಲ್ಲೆ ಹೊಂದಿವೆ. ಹಿರೇಬಣಕಲ್ ನ ಪ್ರಾಗೈತಿಹಾಸಿಕ ಮೊರೆರ ಮನೆಗಳು, ಕೊಪ್ಪಳ ಕೋಟೆ ಬಹದ್ದೂರ್ ಬಂಡಿ ಕೋಟೆ, ಇಟಗಿಯ ಮಹಾದೇವ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಾಲಯ, ಕಿನ್ನಾಳದ ಕಲೆ, ಅಂಜನಾದ್ರಿ ಹೀಗೆ ಪರಂಪರೆಯ ತವರೂರು ನಮ್ಮ ಹೆಮ್ಮೆಯ ಕೊಪ್ಪಳ.
ಕೇಳುಗರೆ, ಏನಿಲ್ಲ ಹೇಳಿ ನಮ್ಮ ಹೆಮ್ಮೆಯ ಕೊಪ್ಪಳದಲ್ಲಿ. ರಾಜ್ಯ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಎರಡು ರೈಲ್ವೆ ಸಂಪರ್ಕಗಳು. ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗುತ್ತಿವೆ. ದಕ್ಷಿಣದ ಕುಂಭಮೇಳವೆಂದೆ ಖ್ಯಾತಿ ಹೊಂದಿರುವ ಪಾರಂಪರಿಕ, ಧಾರ್ಮಿಕ-ಭಾವೈಕ್ಯತಾ ಸ್ಥಳ ಶ್ರೀ ಗವಿಮಠ, ಅನೇಕ ಸಾಧು-ಸಂತರು, ಶರಣರು ನಡೆದಾಡಿದ ನೆಲ ಈ ನನ್ನ ಪುಣ್ಯಭೂಮಿ. ಇಲ್ಲಿ ಹುಟ್ಟಿರುವುದು ನನ್ನ ಪೂರ್ವಜನ್ಮದ ಸುಕೃತ. ಇಲ್ಲಿಯ ಜನರಿಗೆ ಸ್ನೇಹ, ಪ್ರೀತಿ ಸಂಬಂಧಗಳೆ ಜೀವಾಳ. ಅಣ್ಣ, ತಮ್ಮ, ಅಕ್ಕ, ತಂಗಿ, ಚಿಕ್ಕಪ್ಪ-ದೊಡ್ಡಪ್ಪ, ಅಳಿಯ-ಮಾವ ಅಂತೆಲ್ಲ ಊರಿನವರೊಂದಿಗೆ ಎಲ್ಲರೂ ಒಂದೇ ಎಂಬಂತೆ ಬದುಕುವ ಜನ ನನ್ನೂರಿನವರು.
ಕಲೆ ಸಾಹಿತ್ಯ ಕ್ರೀಡೆ ಸಂಸ್ಕೃತಿ ಪರಂಪರೆಯಲ್ಲಿ ಅತ್ಯಂತ ಶ್ರೀಮಂತವಾಗಿದೆ ನಮ್ಮ ಹೆಮ್ಮೆಯ ಕೊಪ್ಪಳ. ಕೊಪ್ಪಳ ಜಗತ್ತಿನ ಪಾರಂಪರಿಕ ತಾಣವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಪ್ರದೇಶ. ಇಂತಹ ಪ್ರದೇಶದ ಒಂದು ಅವಲೋಕನದ ಸರಣಿ ರೇಡಿಯೋ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗುತ್ತಿರುವುದು ನನಗೆ ನಮ್ಮೂರಿನವರ ಬಗ್ಗೆ ಮತ್ತಷ್ಟು ವಿಷಯಗಳನ್ನ ತಿಳಿಯುವ ಕುತೂಹಲವನ್ನ ಇಮ್ಮಡಿಗೊಳಿಸಿದೆ. ನಾನಂತೂ ಅತ್ಯಂತ ಉತ್ಸಾಹದಿಂದ ಈ ಸರಣಿಯನ್ನ ಕೇಳುತ್ತೇನೆ.
ಕೇಳುಗರೆ, ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ಇದ್ದರೂ ಒಂದು ಕೊರತೆ ದಶಕಗಳಿಂದ ಇದ್ದೇ ಇತ್ತು. ನಮ್ಮದೇ ಆದ ರೇಡಿಯೋ ಕೇಂದ್ರ ಇಲ್ಲದಿರುವುದು ಆಗಾಗ ನನಗೆ ಈ ವಿಷಯ ಕಾಡುತ್ತಿತ್ತು. ಈಗ ಆ ಕೊರತೆಯನ್ನು ಗಂಗಾವತಿಯ ದೀಪ ಸಮಾಜ ಸೇವ ಕೇಂದ್ರದ ಗೆಳೆಯರು ನೀಗಿಸಿದ್ದಾರೆ. ನಮ್ಮೂರಿಗೆ, ಕೊಪ್ಪಳ ಜಿಲ್ಲೆಗೆ ರೇಡಿಯೋ ತಂದಿದ್ದಾರೆ.
ಈಗ ಹೇಳಿ, ಏನಿಲ್ಲ ನಮ್ಮ ಕೊಪ್ಪಳದಲ್ಲಿ!?
ಇದು ನನ್ನೂರು ಎಲ್ಲರೂ ನಮ್ಮವರು…
ಇದು.. “ನಾ ಕಂಡಂತೆ ಕೊಪ್ಪಳ.”
ಜೈ ಕೊಪ್ಪಳ…
ಜೈ ಕನ್ನಡ…
ಕನ್ನಡವೇ ಸತ್ಯ ಕನ್ನಡವೇ ನಿತ್ಯ.