ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜು ಪ್ರಾರಂಭಿಸಲು ಮನವಿ  

0

Get real time updates directly on you device, subscribe now.

 

ಕೊಪ್ಪಳ, ನವೆಂಬರ್ 01: ಭಾಗ್ಯನಗರದಲ್ಲಿರುವ ನಾಲ್ಕು ಪಿಯುಸಿ ಕಾಲೇಜುಗಳಿಂದ ಪ್ರತಿ ವರ್ಷ ಅಂದಾಜು 700 ವಿದ್ಯಾರ್ಥಿಗಳು ಉತ್ತೀರ್ಣವಾಗುತ್ತಿದ್ದಾರೆ. ಆದರೆ, ಇವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸರಕಾರಿ ಪದವಿ ಕಾಲೇಜನ್ನು ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಭಾಗ್ಯನಗರದ ನಾಗರಿಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದ ಕೆ. ರಾಜಶೇಖರ ಹಿಟ್ನಾಳ ಹಾಗೂ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರಿಗೆ ʼಭಾಗ್ಯನಗರಕ್ಕೆ ಬೇಕು ಸರಕಾರಿ ಪದವಿ ಕಾಲೇಜುʼ ಅಭಿಯಾನದ ಅಧ್ಯಕ್ಷರೂ ಆಗಿರುವ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶ್ರೀನಿವಾಸ ಗುಪ್ತಾ ಅವರ ನೇತೃತ್ವದಲ್ಲಿ ಈ ಕುರಿತು ಮನವಿ ಸಲ್ಲಿಸಲಾಯಿತು.

ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂದು ಸಂವಿಧಾನದ ಪರಿಚ್ಛೇದ 21(ಎ) ಅನ್ವಯ ಘೋಷಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 29(ಎಚ್)ರಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದ ಅಭಿಯಾನದ ಸದಸ್ಯರು, ಉನ್ನತ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನೂ ಉಲ್ಲೇಖಿಸಿದರು.

ಜಿಲ್ಲೆಯಲ್ಲಿ ಸದ್ಯ 11 ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಿವೆ. ಈ ಪೈಕಿ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ಹಾಗೂ ಕನಕಗಿರಿಗಳಲ್ಲಿರುವ ಕಾಲೇಜುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಭಾಗ್ಯನಗರಕ್ಕೆ ಹೋಲಿಸಿದರೆ ಕೊಪ್ಪಳ ತಾಲೂಕಿನ ಹೊಸ ಬಂಡಿಹರ್ಲಾಪುರ, ಹಿಟ್ನಾಳ, ಇರಕಲ್ಲಗಡ ಹಾಗೂ ಅಳವಂಡಿ; ಗಂಗಾವತಿ ತಾಲೂಕಿನ ಶ್ರೀರಾಮನಗರ ಮತ್ತು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮಗಳ ಜನಸಂಖ್ಯೆ, ಪ್ರತಿ ವರ್ಷ ಪಿಯುಸಿ ಮುಗಿಸುವ ವಿದ್ಯಾರ್ಥಿಗಳ ಸಂಖ್ಯೆ, ಆದಾಯ ಪ್ರಮಾಣ, ತೆರಿಗೆ ಸಂಗ್ರಹ, ಹಾಗೂ ಪ್ರಾದೇಶಿಕ ವ್ಯಾಪ್ತಿ ತೀರಾ ಕಡಿಮೆ ಇದೆ. ಯಾವ ಮಾನದಂಡಗಳನ್ನು ಆಧರಿಸಿ ಈ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಯಿತೋ, ಆ ಎಲ್ಲಾ ಮಾನದಂಡಗಳನ್ನು ಭಾಗ್ಯನಗರ ಪಟ್ಟಣವು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ ಎಂಬುದನ್ನು ಅಭಿಯಾನದ ಸಂಚಾಲಕ ಕೃಷ್ಣ ಇಟ್ಟಂಗಿ ಅವರು ವಿವರಿಸಿದರು.

ಭಾಗ್ಯನಗರದ ಅಂದಾಜು ಜನಸಂಖ್ಯೆ ಸದ್ಯ 30,000ಕ್ಕಿಂತ ಹೆಚ್ಚಿದೆ. ಇಲ್ಲಿ ನಾಲ್ಕು ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿ ವರ್ಷ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗುತ್ತಾರೆ ಹಾಗೂ ಪ್ರತಿ ವರ್ಷ ಕನಿಷ್ಟ 700 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೆ. ಈ ಪೈಕಿ ಪೈಕಿ ಶೇ.60ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಅಂದರೆ, ಪ್ರತಿ ವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಿಯುಸಿ ಪಾಸಾಗುತ್ತಿದ್ದಾರೆ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಇವರು ಭಾಗ್ಯನಗರದಿಂದ ಹೊರಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂಬುದನ್ನು ಗಣ್ಯರ ಗಮನಕ್ಕೆ ತರಲಾಯಿತು.

ಪ್ರತಿ ವರ್ಷ ಪಿಯುಸಿ ಪಾಸಾಗುವ 700ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವರ್ಗಗಳಿಗೆ ಸೇರಿರುವರ ಪ್ರಮಾಣ ಶೇ.70ಕ್ಕಿಂತ ಹೆಚ್ಚಿದೆ. ಅಂದರೆ, ಅಂದಾಜು 490ರಿಂದ 500 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ವಿಭಾಗಗಳಲ್ಲಿ ಬರುತ್ತಾರೆ. ಆದರೆ, ಭಾಗ್ಯನಗರದಲ್ಲಿ ಸರಕಾರಿ ಪದವಿ ಕಾಲೇಜು ಇಲ್ಲದಿರುವುದರಿಂದಾಗಿ, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವವರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಾರ್ಹ ವಿಷಯವಷ್ಟೇ ಅಲ್ಲ ಕಳವಳಕಾರಿ ವಿಷಯವೂ ಹೌದು ಎಂದು ಹಿರಿಯ ವಕೀಲರಾದ ರಾಘವೇಂದ್ರ ಪಾನಘಂಟಿ ಅವರು ಜನಪ್ರತಿನಿಧಿಗಳ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ, ಭಾಗ್ಯನಗರ ಪಟ್ಟಣದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಾಮಾಜಿಕ ನ್ಯಾಯ ಹಾಗೂ ಶೈಕ್ಷಣಿಕ ನ್ಯಾಯ ಒದಗಿಸಲು 2025-26ನೇ ಶೈಕ್ಷಣಿಕ ವರ್ಷದಿಂದಲೇ ಸರಕಾರಿ ಪದವಿ ಕಾಲೇಜನ್ನು ತುರ್ತಾಗಿ ಹಾಗೂ ವಿಸ್ತರಣೆಗೆ ಅವಕಾಶ ಇರುವ ರೀತಿ ಪ್ರಾರಂಭಿಸಬೇಕು ಎಂದು ಹಕ್ಕೊತ್ತಾಯ ಮಾಡಿದ ಅವರು, ಉದ್ದೇಶಿತ ಸರಕಾರಿ ಪದವಿ ಕಾಲೇಜನ್ನು ಸ್ಥಾಪಿಸಲು ಬೇಕಾದ ಸ್ಥಳಾವಕಾಶವೂ ಭಾಗ್ಯನಗರದಲ್ಲಿ ಲಭ್ಯವಿದೆ ಎಂದರು. ಪೂರ್ಣಪ್ರಮಾಣದ ಕಟ್ಟಡ, ಅದಕ್ಕೆ ತಕ್ಕ ರೀತಿಯ ಕ್ಯಾಂಪಸ್ ಹಾಗೂ ಇತರ ಅವಶ್ಯ ಸೌಲಭ್ಯಗಳು ನಿರ್ಮಾಣವಾಗುವವರೆಗೆ, ತಾತ್ಕಾಲಿಕವಾಗಿ ಸರಕಾರಿ ಪದವಿ ಕಾಲೇಜ್ ಪ್ರಾರಂಭಿಸಲು ಬೇಕಾದ ಕಟ್ಟಡ ಸಹ ಭಾಗ್ಯನಗರದಲ್ಲಿ ಲಭ್ಯವಿದೆ ಎಂಬುದನ್ನು ವಿವರಿಸಲಾಯಿತು.

ನಿಯೋಗದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ ಅಧ್ಯಕ್ಷರಾದ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷರಾದ ಹೊನ್ನೂರ ಸಾಬ್ ಬೈರಾಪುರ, ದಾನಪ್ಪ ಕವಲೂರು, ಮತ್ತು ಪ್ರಹ್ಲಾದ ಅಗಳಿ, ಡಾ. ಕೊಟ್ರೇಶ ಶೇಡ್ಮಿ, ನಿವೃತ್ತ ಉಪನ್ಯಾಸಕ ಡಿ.ಎಂ. ಬಡಿಗೇರ್ ಸಹಿತ ಹಲವಾರು ಗಣ್ಯರು ಹಾಜರಿದ್ದರು.

ಭಾಗ್ಯನಗರದಲ್ಲಿ ಪದವಿ ಕಾಲೇಜಿನ ಅವಶ್ಯಕತೆಯನ್ನು ತಾವೂ ಮನಗಂಡಿರುವುದಾಗಿ ತಿಳಿಸಿದ ಸಚಿವ ಶಿವರಾಜ ತಂಗಡಗಿ, ಆದ್ಯತೆಯ ಮೇರೆಗೆ ಈ ಬೇಡಿಕೆಯನ್ನು ಸರಕಾರದ ಗಮನಕ್ಕೆ ತಂದು, ಮಂಜೂರಾತಿ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

 

Get real time updates directly on you device, subscribe now.

Leave A Reply

Your email address will not be published.

error: Content is protected !!