ರಾಜ್ಯೋತ್ಸವ ಪ್ರಶಸ್ತಿ : ಕೊಪ್ಪಳ ಜಿಲ್ಲೆಗೆ ಸಿಗಲಿ ಆದ್ಯತೆ
ಕೊಪ್ಪಳ : ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದಾಗಲೂ ಕೊಪ್ಪಳ ಜಿಲ್ಲೆಗೆ ನಿರಾಸೆ ಎನ್ನುವಂತಾಗಿದೆ. ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ನಿರಂತರವಾಗಿ ಜಿಲ್ಲೆಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುತ್ತಿವೆ. ಈ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವವರೂ ಸಹ ಕೊಪ್ಪಳ ಜಿಲ್ಲೆಯ ಕೋಟಾದಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುವಂತಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರು ಕೊಪ್ಪಳ ಜಿಲ್ಲೆಯವರೇ ಆಗಿರುವುದರಿಂದ ಈ ಸಲ ಹೆಚ್ಚಿನ ಆದ್ಯತೆ ಸಿಗಲಿದೆ ಎಂದೇ ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ಸಲ ಮೂವರಿಗೆ ಪ್ರಶಸ್ತಿ ದೊರೆತಿತ್ತು. ಸಾಹಿತಿಗಳ ಪೈಕಿ ಹಿರಿಯ ಸಾಹಿತಿ ಎ.ಎಂ.ಮದರಿವರಿಗೆ ವಿಜಯಪುರದ ಜಿಲ್ಲೆಯ ಕೋಟಾ ದಡಿಯಲ್ಲಿ ದೊರೆತಿತ್ತು.
ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಹಿರಿಯ ಸಾಹಿತಿಗಳಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಬ್ಯಾಳಿ, ಮಹಾಂತೇಶ ಮಲ್ಲನಗೌಡರ, ಈರಪ್ಪ ಎಂ.ಕಂಬಳಿ, ವಿ.ಬಿ.ರಡ್ಡೇರ ವೀರಣ್ಣ ಹುರಕಡ್ಲಿ ಎ.ಪಿ.ಅಂಗಡಿ ಈಶ್ವರ ಹತ್ತಿ ಶ್ರೀನಿವಾಸ ಚಿತ್ರಗಾರ ಅಕ್ಬರ್ ಕಾಲಿಮಿರ್ಚಿ ವೀರಣ್ಣ ವಾಲಿ ಡಿ ವಿ ಬಡಿಗೇರ್ ಸೇರಿದಂತೆ ತೆ ಇನ್ನಿತರರು ಇದ್ದಾರೆ.
ಕೇವಲ ಸಾಹಿತ್ಯವಷ್ಟೇ ಅಲ್ಲದೇ ಕಿನ್ನಾಳ ಕಲೆ, ಸಹಕಾರ, ರಂಗಭೂಮಿ, ಪತ್ರಿಕಾರಂಗ, ಸಮಾಜಸೇವೆ ವೈದ್ಯಕೀಯ ಸೇವೆ, ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಸಾಕಷ್ಟಿದ್ದಾರೆ.
ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೂ ಸಿಗಲಿ ಗೌರವ
ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕಾರಟಗಿ, ಕುಕನೂರು, ಕೊಪ್ಪಳದಲ್ಲಿ ೩೦-೪೦ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಪತ್ರಿಕಾ ವಿತರಕರಾಗಿ ಎಲೆಮರೆಯಂತೆ ಸೇವೆ ಸಲ್ಲಿಸುತ್ತಿರುವವರು ಇದ್ದಾರೆ. ಅಂತವರನ್ನೂ ಗುರುತಿಸುವ ಕೆಲಸ ಮಾಡಬೇಕಿದೆ.
ಸಹಕಾರ ಕ್ಷೇತ್ರದಲ್ಲೂ ಸಹ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಶೇಖರಗೌಡ ಮಾಲೀಪಾಟೀಲ್, ರಮೇಶ ವೈದ್ಯ ಸೇರಿದಂತೆ ಸಾಕಷ್ಟು ಸಾಧಕರಿದ್ಧಾರೆ.
ತುಂಗಭದ್ರ ಡ್ಯಾಮ್ ನ ಟ್ರಸ್ಟ್ ಗೇಟ್ ದುರಸ್ತಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ತಂತ್ರಜ್ಞ ಕನ ಯ್ಯ ನಾಯ್ದು ಅವರಿಗೂ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎನ್ನುವುದು ರೈತರ ಒಕ್ಕೋರಲ ಆಗ್ರಹ ವಾಗಿದೆ.