ಜನರಿಗೆ ಸಮಗ್ರ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ದಿನೇಶ್ ಗುಂಡೂರಾವ್

Get real time updates directly on you device, subscribe now.

ಕೊಪ್ಪಳ ಅಕ್ಟೋಬರ್ 23  :ರಾಜ್ಯ ಸರ್ಕಾರ ಜನ ಸಾಮಾನ್ಯರ ಬಗ್ಗೆ ಚಿಂತನೆ ಮಾಡುವಂತಹದ್ದಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ 856 ಕೋಟಿ ಅನುದಾನವು ಅನುಮೊದನೆಯಾಗಿದ್ದು, ಮುದಿನ ಎರಡು ವರ್ಷದಲ್ಲಿ 2 ಹೊಸ ಜಿಲ್ಲಾಸ್ಪತ್ರೆಗಳು, 8 ಉಪವಿಭಾಗ ಆಸ್ಪತ್ರೆಗಳು, ಹೊಸ ಸಿ.ಹೆಚ್.ಸಿ.ಗಳು ಹಾಗೂ ಪಿ.ಹೆಚ್.ಸಿ.ಗಳನ್ನು ಮಾಡಲಾಗುತ್ತಿರುವುದು ದಾಖಲೆಯಾಗಿದೆ. 24 ಪಿ.ಹೆಚ್.ಸಿ., 7 ನಗರ ಪ್ರಾಥಮಿಕ ಆರೋಗ್ಯ ಸೇರಿ ಒಟ್ಟು 31 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕ.ಕ ಭಾಗದಲ್ಲಿ ಆರಂಭಿಸಲಾಗುತ್ತಿದೆ. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥ್ಥಾಪನೆಗೆ ಅನುಮೊದನೆ ನೀಡಿದ್ದು, ಇದರಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ 3 ಮಂಜೂರಾಗಿವೆ. ಈ ಮೂರು ಪಿ.ಹೆಚ್.ಸಿ.ಗಳನ್ನು ತ್ವರಿತವಾಗಿ ತಾತ್ಕಾಲಿಕ ಕಟ್ಟಡದಲ್ಲಿ ಪ್ರಾರಂಭಿಸಿ, ಜನರಿಗೆ ಆರೊಗ್ಯ ಸೇವೆ ನೀಡಲು ಕ್ರಮ ಕೈಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಟೆಂಡರ್ ಕರೆದು ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಕೊಪ್ಪಳ ಜಿಲ್ಲೆಯ ಕುಕನೂರಿನ 30 ಹಾಸಿಗೆ ಆಸ್ಪತ್ರೆಯನ್ನು ರೂ. 40 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸಲು ಅನುಮೋದನೆ ನೀಡಲಾಗಿದೆ. ಅದೇ ರೀತಿ ಕಾರಟಗಿ ಮತ್ತು ಕನಕಗಿರಿಯ ಆಸ್ಪತ್ರೆಗಳನ್ನು ಸಹ ಮೇಲ್ದರ್ಜೆಗೆರಿಸಲಾಗುವುದು. ಸರ್ಕಾರದ ಯೋಜನೆಗಳನ್ನು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ತರುವಲ್ಲಿ ಬಸವರಾಜ ರಾಯರೆಡ್ಡಿಯವರು ಶ್ರಮವಿದೆ. ಒಂದು ಕ್ಷೇತ್ರವನ್ನು ಯಾವ ರೀತಿಯಾಗಿ ಅಭಿವೃದ್ಧಿ ಪಡಿಸಬೇಕು ಎಂಬುವುದನ್ನು ಅವರಿಂದ ನೋಡಿ ಇತರರು ಕಲಿಯಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮತ್ತು ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಹೆಚ್ಚಿನ ಸಂಖ್ಯೆಯ ಶಿಶು ಮರಣ, ಗರ್ಭೀಣಿಯರಿಗೆ ಪೌಷ್ಠಿಕ ಆಹಾರದ ಕೊರತೆ, ಜನರಿಗೆ ಆರೋಗ್ಯ ತೊಂದರೆಯAತಹ ಸಮಸ್ಯೆಗಳನ್ನು ಮನಗಂಡು ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾರಂಭಕ್ಕೆ ಅನುಮೊದನೆ ನೀಡಿದ್ದಾರೆ. ಇದರ ಫಲವಾಗಿ ನಮ್ಮ ಕ್ಷೇತ್ರಕ್ಕೂ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ದೊರೆತಿವೆ. ಯಲಬುರ್ಗಾ ಕ್ಷೇತ್ರವು ಆರ್ಥಿಕವಾಗಿ ಹಿಂದುಳಿದ ಕ್ಷೇತ್ರವಾಗಿದ್ದು, ಈ ಭಾಗದಲ್ಲಿ ಉದ್ಯಮವಿಲ್ಲ, ಖಾಸಗಿ ಆಸ್ಪತ್ರೆಗಳಿಲ್ಲ ಹಾಗೂ ಯಾವುದೇ ರೀತಿಯ ಆದಾಯದ ಮೂಲವಿಲ್ಲ. ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಭಾಗದ ಜನರಿಗೆ ಆರೋಗ್ಯ ಕೇಂದ್ರಗಳಿಗೆ ತೆರಳಲು ಕಷ್ಟವಾಗುತ್ತಿತ್ತು. ಯಲಬುರ್ಗಾ ಕ್ಷೇತ್ರಕ್ಕೆ ಮಂಜೂರಾದ ಮೂರು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾತ್ಕಾಲಿಕವಾಗಿ ಆರಂಭಿಸಿ, ಈ ಮೂರು ಪಿ.ಹೆಚ್.ಸಿ.ಗಳಲ್ಲಿ ವೈದ್ಯರು, ಸ್ಟಾಪ್ ನರ್ಸ್, ಇತರೆ ಸಿಬ್ಬಂದಿ, ಔಷಧಿಗಳು ಹಾಗೂ ಅಗತ್ಯ ಪರಿಕರಗಳೊಂದಿಗೆ ಸೇವೆಯನ್ನು ಆರಂಭಿಸಲಾಗಿದೆ. ಬಂಡಿ, ಚಿಕ್ಕಮ್ಯಾಗೇರಿ ಹಾಗೂ ಬಳಗೇರಿ ಗ್ರಾಮಗಳ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ 4 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಹಾಗೂ ಜಮೀನು ಖರೀದಿಗೂ ಸಹ ಹಣವನ್ನು ನೀಡಲಾಗಿದೆ ಎಂದರು.
ಯಲಬುರ್ಗಾ ಕ್ಷೇತ್ರದಲ್ಲಿ ನಾನು ಮೊದಲ ಬಾರಿ ಶಾಸಕನಾದಾಗ ಹೈಸ್ಕೂಲ್‌ಗಳು ಕೇವಲ 7 ಇದ್ದವು. ಈಗ ಆ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಸುಮಾರು 15 ವಸತಿ ಶಾಲೆಗಳಿವೆ. ಚಿಕ್ಕಮ್ಯಾಗೇರಿಯಲ್ಲಿ ಒಂದು ಹಾಸ್ಟೆಲ್ ಮಂಜೂರಾಗಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಯಲಬುರ್ಗಾ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಲಭೂತ ಸೌಕರ್ಯಗಳಲ್ಲಿ ಆರೋಗ್ಯ ಸೇವೆಗಳನ್ನು ನೀಡಬೇಕೆಂಬ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮದ ಭಾಗವಾಗಿ ಜಿಲ್ಲೆಯಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಅವಶ್ಯವಿರುವ ಔಷಧಿಗಳು, ಲ್ಯಾಬ್ ಟೆಕ್ನಿಷಿಯನ್ ಹಾಗೂ ಫಾರ್ಮಸಿ ಅಧಿಕಾರಿಗಳುನ್ನು ನೀಡಲಾಗಿದೆ. ಸರ್ಕಾರದ ಮೂಲ ಉದ್ದೇಶವಾದ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವ ಜವಾಬ್ದಾರಿಯು ಆರೋಗ್ಯ ಇಲಾಖೆ, ವೈದ್ಯರು ಹಾಗೂ ಸಿಬ್ಬಂದಿಗಳ ಮೇಲಿದ್ದು, ಅವುಗಳನ್ನು ಸಮರ್ಪಕವಾಗಿ ನಿಭಾಯಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮುನಿರಾಬಾದ್ ಕಾಡಾ ಅಧ್ಯಕ್ಷರಾದ ಹಸನ್ ಸಾಬ ದೋಟಿಹಾಳ, ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರಣಪ್ಪ ಕುರಿ, ಹಲವು ಗಣ್ಯರು, ಜನಪ್ರತಿನಿಧಿಗಳು, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಚಿಕ್ಕಮ್ಯಾಗೇರಿ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!