ನಾಯಕ ಅರಸು ಮನೆತನಗಳ ಇತಿಹಾಸ ತಿಳಿಯಬನ್ನಿ . . .
ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ಚರಿತ್ರೆ ಇರುವಂತೆ, ವಾಲ್ಮೀಕಿ, ಬೇಡ, ನಾಯಕ, ತಳವಾರ ಎಂದು ಕರೆಯುವ ಶೌರ್ಯಕ್ಕೆ ಹೆಸರಾದ ಜನಾಂಗವೊಂದು ಇತಿಹಾಸ ಪುಟಗಳಲ್ಲಿ ದಾಖಲಾಗಿ, ಸಾಕಷ್ಟು ಸಂಸ್ಥಾನ, ಅರಸು ಮನೆತನ, ಪಾಳೆಯ ಪಟ್ಟುಗಳು ಹೆಸರು ಮಾಡಿವೆ. ಅಂತಹ ಕೆಲ ರಾಜ ಮನೆತನಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.
ಗಂಡುಗಲಿ ಕುಮಾರರಾಮ ಆಚರಣೆ, ಸಂಪ್ರದಾಯಗಳು
ಇತಿಹಾಸದ ಪುಟಗಳನ್ನು ತಿರುವಿದಾಗ. ವಿಜಯನಗರ ಸಾಮ್ರಾಜ್ಯ ಸ್ಫಾಪನೆಗೂ ಮುನ್ನ ಬದುಕಿ ಬಾಳಿ ಶೌರ್ಯ ಪರಾಕ್ರಮಗಳಿಗೆ ಹೆಸರಾಗಿದ್ದ ಗಂಡುಗಲಿ ಕುಮಾರರಾಮ. ದೆಹಲಿ ಸುಲ್ತಾನನ ಸೈನ್ಯವನ್ನು ಸಮರ್ಥವಾಗಿ ಎದುರಿಸಿ, ನಾಡಿಗಾಗಿ ಹಾಗೂ ತಾಯಿಗೆ ಕೊಟ್ಟ ಮಾತಿನಂತೆ ಪರಸ್ತ್ರೀಯರ ಮೇಲೆ ಕೈ ಮಾಡದೇ ಪ್ರಾಣವನ್ನೇ ಅರ್ಪಿಸಿದ ಕಡುಗಲಿ ಗಂಡುಗಲಿ ಕುಮಾರರಾಮ. ಅಂದಿನ ಗಂಡುಗಲಿ ಕುಮಾರರಾಮ ಕಾಲಚಕ್ರದಲ್ಲಿ ಉರುಳಿ ರಾಮ, ರಾಮನಾಥದೇವರಾಗಿ, ಅವರ ಹೆಸರುಗಳಲ್ಲಿ ಗುಡಿ ಸ್ಥಾಪಿತವಾದವು. ಗುಡಿಗಳಲ್ಲಿ ಗಂಡುಗಲಿ ಕುಮಾರರಾಮನಿಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಲೇ ಬಂದಿವೆ. ಈ ತರಹದ ಆಚರಣೆಗಳನ್ನು ಕುರಿತು ಒಂದಿಷ್ಟು ತಿಳಿದುಕೊಳ್ಳೋಣ
ಈ ಆಚರಣೆಗಳಲ್ಲಿ ಭೌಗೋಳಿಕವಾಗಿ ಆ ಪ್ರದೇಶದದಲ್ಲಿ ನಡೆದು ಹೋದ, ಘಟನೆಗಳು, ಸಂಬಂಧಗಳು ಇರುತ್ತವೆ. ಕರ್ನಾಟಕದ ಹಲವು ಕಡೆ ಗಂಡುಗಲಿ ಕುಮಾರರಾಮನ ದೇವಾಲಯಗಳಿದ್ದು. ಅಲ್ಲಿ ಹಿಂದಿನಿಂದಲೂ ತಮ್ಮ ಪೂರ್ವಿಕರು ಆಚರಿಸಿಕೊಂಡ ಬರುತ್ತಿರುವ ಜಾತ್ರೆಗಳನ್ನು ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಕುಮಾರರಾಮನ ದೇವಾಲಯಗಳಿದ್ದ ಊರುಗಳಲ್ಲಿ ಜಾತ್ರೆ ನಡೆಯುತ್ತಿವೆ.
ನ್ಯೂನಿಸ್ ನ ಎಂಬ ಪೋರ್ಚುಗೀಸ್ ಪ್ರವಾಸಿ ವಿಜಯನಗರ ಸ್ಥಾಪನೆಗೂ ಮೊದಲು ಆನೆಗೊಂದಿಯ ರಾಜನು ಕೃನಮಟವೆಂಬ ದುರ್ಗಕ್ಕೆ ಹೋಗಿ ನೆಲಸಿ ದೆಹಲಿ ಸುಲ್ತಾನನ್ನು ಎದುರಿಸುತ್ತಾನೆ. ಕಮ್ಮಟದುರ್ಗದ ಕುರಿತು ಇತಿಹಾಗಳಲ್ಲಿ ದಾಖಲಾಗಿದೆ. ಇತಿಹಾಸಕಾರರು ಸಂಶೋಧಕರು ಅಧ್ಯಯನ ನೆಡಸಿ ಸ್ಥಳ ಪರಿಶೀಲಿಸಿ ಕುಮಾರರಾಮನ ಕುಮ್ಮಟವೇ ನ್ಯೂನಿಸ್ ನ ರ ಕೃನಮಟವೆಂದು ಇತಿಹಾಸದಲ್ಲಿ ದಾಖಲಿಸಿದ್ದಾರೆ.
ಬಹಳ ದಿನಗಳವರೆಗೆ ಕಂಪಿಲರಾಯ ಹರಿಯಲಾದೇವಿಗೆ ಮಕ್ಕಳಾಗದಿರಲು, ಕುಲದೇವರಾದ ಜಟ್ಟಂಗಿ ರಾಮೇಶ್ವರರನನ್ನು ಪೂಜಿಸಿದಾಗ. ದೇವರ ವರಪ್ರಸಾದ ಹಣ್ಣು ದೊರೆಯುತ್ತದೆ. ಆ ಹಣ್ಣನ್ನು ಹರಿಯಲಾದೇವಿ ತಿನ್ನುತ್ತಾಳೆ. ಅಳಿದುಳಿದ ಹಣ್ಣನ್ನು ಸಿಪ್ಪೆಯ ಸಹಿತ ದಾಸಿ ತಿನ್ನುತ್ತಾಳೆ, ಗೊಪ್ಪವನ್ನು ಕುದುರೆಗೆ ತಿನ್ನಿಸುತ್ತಾಳೆ. ಹರಿಯಲಾದೇವಿ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟುತ್ತದೆ ಆತನೇ ಕುಮಾರರಾಮ. ದಾಸಿಯು ಗಂಡುಮಗುವಿಗೆ ಜನ್ಮ ನೀಡುತ್ತಾಳೆ ಆತನೇ ಹೋಲ್ಕಿರಾಮ. ಗೊಪ್ಪ ತಿಂದ ಕುದುರೆಗೆ ಗಂಡುಗುದುರೆ ಹುಟ್ಟುತ್ತದೆ. ಆ ಕುದುರೆಯೇ ಬೊಲ್ಲ ಕುದುರೆ.
ಗಂಡುಗಲಿ ಕುಮಾರರಾಮ ಕನ್ನಡ ನಾಡು ಕಂಡ ದೊರೆ. ಕಂಪಿಲರಾಯ ಹರಿಯಲಾದೇವಿಗೆ ಮಕ್ಕಳಿಲ್ಲದ ಸಮಯದಲ್ಲಿ ಜಟ್ಟಂಗಿ ರಾಮೇಶ್ವರನ ವರಪ್ರಸಾದದಿಂದ ಹುಟ್ಟಿದವನೇ ಕುಮಾರರಾಮ. ಈ ಹಿನ್ನೆಲೆಯಿಂದಲೇ ಕುಮಾರರಾಮ ಎಂದು ನಾಮಕರಣ ಮಾಡುತ್ತಾರೆ. ವೀರ, ಶೂರ ಚಂದುಳ್ಳ ಚೆಲುವ, ಕುಮಾರರಾಮ ತನ್ನ ಶೌರ್ಯ ಪರಾಕ್ರಮಗಳಿಂದ ಗಂಡುಗಲಿ ಕುಮಾರರಾಮ ಎಂದು ಪ್ರಸಿದ್ಧನಾಗುತ್ತಾನೆ. ಪರಸ್ತ್ರೀಯರನ್ನು ಗೌರವದಿಂದ ಕಾಣುತ್ತಿದ್ದ ಕುಮಾರರಾಮನಿಗೆ ಪರನಾರಿ ಸಹೋದರ ಅಂತಲೂ ಕರೆಯುತ್ತಾರೆ. ಕುಮಾರಾಮ ಹೋಲ್ಕಿರಾಮ ನೋಡಲು ಒಂದೇತರನಾಗಿರುತ್ತಾರೆ. ಆ ಕಾರಣದಿಂದಲೇ ಕುಮಾರರಾಮ ಹೋಲ್ಕಿರಾಮ ಎಂದು ಕರೆಯಲಾಗುತ್ತದೆ. ಈ ಇಬ್ಬರು ಬೆಳೆದು ದೊಡ್ಡವರಾಗಲು ಹದಿನೆಂಟು ವರ್ಷದವರಾದಾಗ ವಿದ್ಯಾ ಪ್ರದರ್ಶನ ಜರಗುತ್ತದೆ. ಇಪ್ಪತ್ತಾರು ದಡೆ ಕಬ್ಬಿಣದ ಗುಂಡು ಎತ್ತುವ ಕೌಶಲ್ಯವನ್ನು ತೋರಿಸುತ್ತಾರೆ. ಕುಮಾರರಾಮ ಭೂಮಿಯಿಂದ ಒಂದು ಗೇಣು ಎತ್ತಿದರೆ. ಹೋಲ್ಕಿರಾಮ ಎಡಗೈಯಿಂದ ಎತ್ತಿ ಹೆಗಲಮೇಲಿರಿಸಿಕೊಳ್ಳುತ್ತಾನೆ.
ಕುಮಾರರಾಮನ ಚೆಂಡಿನಾಟ
ಕಂಪಿಲರಾಯ ಬೇಟೆ ಆಡಲು ಹೋಗಿರುತ್ತಾನೆ. ಇತ್ತ ಕುಮಾರರಾಮನಿಗೆ ಮುತ್ತಿನ ಚೆಂಡಿನಾಟ ಆಡುವ ಬಯಕೆಯಾಗುತ್ತದೆ. ತಾಯಿ ಪರಿಪರಿಯಾಗಿ ಹೇಳಿ ಬೇಡವೆಂದರೂ ಕೇಳದೆ ಪೂರ್ವಿಕರಿಂದ ಬಂದ ಚೆಂಡನ್ನು ಪಡೆದು, ಮುತ್ತಿನ ಚೆಂಡಿನಾಟ ಆಡಲು ಹೊರಡುತ್ತಾನೆ.
ಹರುಷದಿಂದಲಿ ರಾಮ ಪರಮಸಿಂಗರದಿಂದ
ನೆರೆಗೂಡಿ ಗೆಳೆಯರಿಗೆ ಹೇಳಿದನು | ಒಳ್ಳೆ
ಪುರಮಾಸಿ ಚೆಂಡಾಟ ಆಡೋಣವೆಂದು | ಸಿಸ್ತು
ಇರುವುದು ತಾಣವು ಗೊತ್ತೆ ನಿಮಗೆಂದು || ರತ್ನಾಜಿ
ಅರಮನೆಯಂಗಳವು ಆಡುದಕೆ | ಬಲುಯಿಂಬು
ನೆರೆದ ಗೆಳೆಯರೆಲ್ಲ ವೊರದು ಪೇಳಿದರು || ದುಂ
ಚೆಂಡಿನಾಟ ಆಡಲು ರತ್ನಾಜಿ ಅರಮನೆ ಅಂಗಳಕೆ ತಲುಪುತ್ತಾರೆ. ಕುಮಾರರಾಮ, ಹೋಲ್ಕಿರಾಮ, ರುದ್ರ, ಇಮ್ಮಡಿ ಜಟ್ಟಂಗಿ, ಕಾಟಣ್ಣ, ಸೋಮಣ್ಣ, ಲಿಂಗಣ್ಣ ಕೂಡಿ ಚೆಂಡಿನಾಟವ ಆಡುವರು. ಇವರು ಆಡುತ್ತಿದ್ದನ್ನು ನೋಡಿ ಚೆಂಡಿನಾಟದ ನೆವದಿಂದ ಕಂಡನೆನ್ನುವ ರತ್ನಾಜಿ ಹಿಂಡ ದೇವರ ಭಜಿಸುವಳು, ಗಾಳೆಮ್ಮ, ಮಾರೆಮ್ಮ, ಅಮರೇಶ್ವರ, ಕೊಪ್ಪಳ ಜಿಲ್ಲೆಯ ಕೂಕನಪಳ್ಳಿಯ ಬಳಿಯಿರುವ ಅಡವಿ ಅಮರೇಶ್ವರ ಅಂತ ಕೆಲ ಜನಪದರು ಹೇಳುತ್ತಾರೆ. ಇದಲ್ಲದೇ ಸಿಂಧನೂರಿನ ಬಳಿಯಿರುವ ಗುಂಡ ಮಲ್ಲೇಶನಿಗೆ ಒದಗೆಂದಳು. ದೇವ ಕೆಂಡಗಣ್ಣಿನ ಹಂಪಿ ವಿರುಪಾಕ್ಷ ಈಗ ಚೆಂಡು ನಮ್ಮನೆಯೊಳು ಕಂಡದ್ದು ಆದರೆ ದಿಂಡರಕಿ ಹಾಕಿ ಕೈ ಮುಗಿವೆ ಎನ್ನುತ್ತಾ ದೇವರನ್ನು ಭಜಿಸುತ್ತಾಳೆ. ಹೀಗೆ ಭಜಿಸುತ್ತಿರಲು ಚೆಂಡು ರತ್ನಾಜಿಯ ಮಹಲು ತಲುಪುತ್ತದೆ. ಕುಮಾರರಾಮನು ಚೆಂಡು ತರಲು ರತ್ನಾಜಿ ಅರಮನೆಗೆ ಬರುತ್ತಿದ್ದಂತೆ. ಚೆಂಡು ಕೇಳಲು ಬಂದ ರಾಮನನ್ನು ದಿಟ್ಟಿಸಿ ನೋಡಿದ ರತ್ನಾಜಿ ಅವನನ್ನು ಪಡೆಯುವ ಬಯಕೆ ಯನ್ನು ವ್ಯಕ್ತಪಡಿಸುತ್ತಾಳೆ. ತನ್ನ ಕಾಮದಾಹವನ್ನು ಈಡೇರಿಸುವಂತೆ ಪರಿಪರಿಯಾಗಿ ಬೇಡುತ್ತಾಳೆ. ಇದರಿಂದ ಜಿಗುಪ್ಸೆಗೊಂಡ ರಾಮ ಹೀಗೆ ಪ್ರತಿಕ್ರಿಯಿಸುತ್ತಾನೆ.
ತಾಯೆ ತಂದೆಯ ಸತಿಯೇ
ನಾಯಿ ಮಾಡುವ ಕೆಲಸ ಮಾಯೆ
ನಿನಗ್ಯಾಕೆ ನನಮ್ಯಾಲೆ ಹಡೆದವ್ವ
ಹೇಯ ಇಲ್ಲೇನ ನಿನಗೇಟ
ಎಂದು ಎಚ್ಚರಿಸುತ್ತಾನೆ, ಇದು ಸಲ್ಲ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಕುಮಾರರಾಮನ ಉಪದೇಶ ಮಾತುಗಳು ರತ್ನಾಜಿಗೆ ಹಿಡಿಸುವುದಿಲ್ಲ. ಮತ್ತೆ ಮತ್ತೆ ಕುಮಾರರಾಮನನ್ನು ಬಯಸುತ್ತಾಳೆ ಕುಮಾರರಾಮ ಅವಳ ಕೈ ಕೊಸರಿ ಹೋದಾಗ. ಕೆರಳಿದ ರತ್ನಾಜಿ ಕುಮಾರರಾಮನ ತೆಲೆ ತೆಗೆಸಲು ನಿಶ್ಚಯಿಸುತ್ತಾಳೆ. ಅದರಂತೆ ಕಂಪಿಲರಾಯನ ಮುಂದೆ ಧಮಕೀಯ ಮಾಡಿ ಕಾಮಿಸಿದ ಎಂದು ಹರಲಿ ಹೊರೆಸುತ್ತಾಳೆ. ಕಂಪಿಲರಾಯ ಎನನ್ನು ವಿಚಾರಿಸದೆ ಮಂತ್ರಿ ಬೈಚಪ್ಪನಿಗೆ ಹೇಳುತ್ತಾನೆ. ಕುಮಾರರಾಮನ ತೆಲೆ ತೆಗೆದುಕೊಂಡು ಬರಲು. ಮಂತ್ರಿ ಬೈಚಪ್ಪ ಎಷ್ಟೇ ಹೇಳಿದರೂ ಕೇಳದೆ ಕಂಪಿಲರಾಯ ಆದೇಶ ಮಾಡುತ್ತಾನೆ. ಕುಮಾರರಾಮನ ತೆಲೆ ತರಲು ಹೋದಾಗ, ಹೋಲ್ಕಿರಾಮ ತನ್ನ ತಲೆಯನ್ನು ಕೊಡುತ್ತಾನೆ. ಹೋಲ್ಕಿರಾಮನ ತೆಲೆಯನ್ನು ತೋರಿಸಿ ಕುಮಾರರಾಮನನ್ನು ಗುಹೆಯಲ್ಲಿ ಬಚ್ಚಿಟ್ಟಿರುತ್ತಾರೆ. ಕುಮಾರರಾಮ ನಿಲ್ಲವೆಂದು ತಿಳಿದ ದೆಹಲಿ ಸುಲ್ತಾನನ ಕುಮ್ಮಟದುರ್ಗದ ಮೇಲೆ ದಂಡೆತ್ತಿ ಬರಲು ಕುಮಾರರಾಮ ವಿರಾವೇಷದಿಂದ ಹೋರಾಡಿ ಜಯಗಳಿಸುತ್ತಾನೆ. ಇಷ್ಟೊತ್ತಿಗಾಗಲೇ ಕುಮಾರರಾಮನ ತಪ್ಪಲ್ಲವೆಂದು ತಿಳಿದ ಕಂಪಿಲರಾಯ ಸುಡುವ ಸುಣ್ಣದ ಹಗೆವಿನಲ್ಲಿ ನೂಕಿ ಕೊಲ್ಲಿಸುತ್ತಾನೆ. ಈಂತಹ ಶೂರ, ಧೀರ, ಪರನಾರಿ ಸಹೋದರ ಗಂಡುಗಲಿ ಕುಮಾರರಾಮ ಮಾತಂಗಿಯಿಂದ ಹತ್ಯೆಯಾಗುತ್ತಾನೆ. ಮಾತಂಗಿ ಕೊಲ್ಲುತ್ತಾಳೆ ಅಂತ ಹೇಳಲಾಗುತ್ತದೆ. ದೆಹಲಿಯ ಸುಲ್ತಾನನ ವಿರುದ್ಧ ಹೊರಾಡುತ್ತಿದ್ದಾಗ ಸೈನಿಕ ವೇಷ ಹೊತ್ತು ಬಂದ ಮಹಿಳೆಗೆ ಕುಮಾರರಾಮನ ಖಡ್ಗ ಕೀರಿಟಕ್ಕೆ ತಾಗುತ್ತಿದ್ದಂತೆ, ಆ ಸ್ತ್ರೀಯ ಕೇಶ ಬೀಳುವುದನ್ನು ಕಂಡ ಕುಮಾರರಾಮ ಮಹಿಳೆಯರ ಮೈಲೆ ಕೈ ಮಾಡದೇ, ಯುದ್ಧಮಾಡದೆ ನಿಲ್ಲುತ್ತಾನೆ. ಪರನಾರಿ ಸಹೋದರ. ಗಂಡುಗಲಿ ಕುಮಾರರಾಮನನ್ನು ಕೊಲ್ಲಲು ಈ ಸಂಚು ಬಳಸಿ ಮಾತಂಗಿಯಿಂದ ಹತ್ಯೆಮಾಡಿಸಲಾಗುತ್ತದೆ.
ಮುಂದೆ ಕುಮ್ಮಟದುರ್ಗದ ಪತನವಾದ ನಂತರ ಕಂಪಿಲರಾಯ ಹರಿಯಲಾದೇವಿ ಮಾರೆವ್ವ, ಸಿಂಗಮ್ಮ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಭಾವಸಂಗಮನೆಂಬ ಅಳಿಯನೂ ಇದ್ದ, ಮಾರೆವ್ವ ಭಾವಸಂಗಮನ ಪತ್ನಿಯಾಗಿದ್ದಳು. ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹರಿಹರ ಮತ್ತು ಸಹೋದರರು ಭಾವಸಂಗಮನ ಮಕ್ಕಳಾಗಿರುವುದರಿಂದ. ಕಂಪಿಲರಾಯನ ಮೊಮ್ಮಕ್ಕಳೇ ಆಗಿದ್ದರು. ಸಂಗಮನ ಹಿರಿಯ ಮಗನಿಗೆ ಅಜ್ಜಿ ಹರಿಯಲಾದೇವಿಯ ಹೆಸರನ್ನು ಹರಿಹರ ಎಂದು ಇರಿಸಲಾಗುತ್ತದೆ. ಮತ್ತೊಬ್ಬ ಮಗನಿಗೆ ತಾಯಿ ಮಾರೆವ್ವ ಬುಕ್ಕ ಎನ್ನುತ್ತಾಳೆ. ಹಕ್ಕ ಮತ್ತು ಬುಕ್ಕ ಕಂಪಿಲನ ಭಂಡಾರದ ಸೇವೆಯಲ್ಲಿದ್ದರು ಎಂದು ತಿಳಿದು ಬರುತ್ತದೆ. ಕುಮಾರರಾಮನ ಸೋದರಳಿಯಂದಿರಾದ ಹರಹರ ಮತ್ತು ಬುಕ್ಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದವರು.
ಗಂಡುಗಲಿ ಕುಮಾರರಾಮನ ಜಾತ್ರೆ, ಆಚರಣೆ ಮತ್ತು ಪದ್ಧತಿ
ಕುಮ್ಮಟದುರ್ಗದಲ್ಲಿರುವ ಜಟ್ಟಂಗಿ ರಾಮನ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ಗುಂಡುಗಳಿವೆ. ಇವು ಕುಮಾರರಾಮನ ಮತ್ತು ಇತರರ ಶಿರಗಳೆಂದು ಹೇಳಲಾಗುತ್ತದೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಕುಮ್ಮಟದುರ್ಗಕ್ಕೆ ಹೊಂದಿಕೊಂಡಿರುವ ಜಬ್ಬಲಗುಡ್ಡದಲ್ಲಿ ನಾಲ್ಕು, ಸಮೀಪದಲ್ಲಿರುವ ಇಂದರಗಿಯಲ್ಲಿ ಆರು ಹಾಗೂ ಮಲ್ಲಾಪುರದಲ್ಲಿ ಎರಡು, ಕುಮಾರರಾಮ ಮತ್ತು ಹೋಲ್ಕಿರಾಮನ ರುಂಡಗಳ ಮರದ ಪ್ರತಿಮೆಗಳಿವೆ. ಇಂದರಗಿಯಲ್ಲಿರುವ ಆರು ರುಂಡ ಶಿಲ್ಪಗಳನ್ನು ಕುಮಾರರಾಮ, ಹೋಲ್ಕಿರಾಮ, ಬೈಚಪ್ಪ, ಕಾಟಣ್ಣ, ಕಂಪಿಲರಾಯ, ಭಾವಸಂಗಮನವು ಎಂದು ಹೇಳಲಾಗುತ್ತದೆ. ಇಂದಿಗೂ ಪ್ರತಿವರ್ಷ ಹುಲಿಗೆಮ್ಮನ ಜಾತ್ರೆಗೆ ಒಂದುದಿನ ಮುಂಚೆ ಮಲ್ಲಾಪುರ, ಇಂದರಗಿ, ಜಬ್ಬಲಗುಡ್ಡದಲ್ಲಿನ ಮರದ ರುಂಡ ಶಿಲ್ಪಗಳು ಕುಮ್ಮಟದುರ್ಗದಲ್ಲಿರುವ ಜಟ್ಟಂಗಿರಾಮನ ದೇವಾಲಯ ಪ್ರವೇಶಿಸುತ್ತವೆ. ಒಂದು ರಾತ್ರಿ ಕುಮಾರರಾಮನ ಗೊಂದಲಿಗರ ಪದ, ಚೌಡ್ಕಿ ಪದ, ಜನಪದ ಹಾಡುತ್ತ ತಮ್ಮ ಆಚರಣೆಗಳನ್ನು ಮಾಡುತ್ತಾರೆ. ಮರುದಿನ ಅಲ್ಲಿಂದ ಪೂಜೆ ಮಾಡಿದ ಅಕ್ಕಿಪಡಿ ಬಂದ ಮೇಲೆಯೇ ಹುಲಿಗೆಮ್ಮನ ಜಾತ್ರೆಯ ಕಾರ್ಯಗಳು ಪ್ರಾರಂಭವಾಗುತ್ತವೆ. ಕುಮ್ಮಟದುರ್ಗದ ಜಟ್ಟಮಗಿರಾಮನ ದೇವಾಲಯದದಲ್ಲಿ ಕುಮಾರರಾಮನ ಜಾತ್ರೆ ದಿನದಂದು. ಮಕ್ಕಳ ಭಾಗ್ಯ ಕರುಣಿಸಲೆಂದು ಹರಕೆ ಕಟ್ಟುತ್ತಾರೆ. ಚಿಕ್ಕಮಕ್ಕಳ ಜವಳ ತೆಗೆಸುವುದು, ಬಾಸಿಂಗ ಬಿಡುವುದು ದೀಡ ನಮಸ್ಕಾರ ಹಾಕುವ ಪದ್ಧತಿ ಅಂದಿನಿಂದ ಇಂದಿಗೂ ತಪ್ಪದೇ ನಡೆದುಕೊಂಡು ಬರುತ್ತಿದೆ. ಈ ವರ್ಷ ಮೇ ಮಾಹೆಯಲ್ಲಿ, ಇಂದರಗಿ ಮಲ್ಲಾಪುರ, ಜಬ್ಬಲಗುಡ್ಡದ ಎಲ್ಲ ಮರದ ಮುಖಗಳು ಕುಮ್ಮಟದುರ್ಗದವನ್ನೇರಿ ಜಾತ್ರೆ ಮಾಡಿ ಅಲ್ಲಿಂದ ಅಕ್ಕಿಪಡಿ ಹುಲಗೆಮ್ಮನಿಗೆ ತಲುಪುತ್ತದೆ. ಕುಮಾರರಾಮನ ಜಾತ್ರೆ ಆದ ಮರುದಿನವೇ ಹುಲಿಗೆಮ್ಮನ ಜಾತ್ರೆ ನಡೆಯುತ್ತದೆ.
ಕುಮ್ಮಟದುರ್ಗವು ಪತನವಾದ ನಂತರ ಕರ್ನಾಟಕದ ಬೇರೆ ಬೇರೆ ಕಡೆ ಪಲಾಯನ ಮಾಡಿರಬಹುದು. ಕುಮಾರರಾಮನ ಜಾತ್ರೆ ಉತ್ಸವಗಳು ಹಲವುಕಡೆ ಇನ್ನು ಪ್ರಚಲಿತದಲ್ಲಿವೆ. ಬಹುಶ ಕುಮ್ಮಟದಿಂದ ಪಲಾಯನ ಮಾಡಿದ ಜನರು ತಮ್ಮ ಅರಸನಾದ ಕುಮಾರರಾಮನನ್ನು ದೈವಾಂಶ ಸಂಭೂತನೆಂದು ನಂಬಿ, ಅವನ ಪ್ರತಿಮೆಗಳಿಗೆ ಸ್ಥಾಪಿಸಿ ಪೂಜಿಸುವುದರ ಮೂಲಕ ತಮ್ಮ ಗತವಲಸೆಯ ಕುರುಹನ್ನು ಉಳಿಸಿಕೊಂಡಿದ್ದಾರೆ.
ಕುಮ್ಮಟದುರ್ಗವಷ್ಟೇ ಅಲ್ಲದೇ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿಯಲ್ಲಿ ಕುಮಾರರಾಮನ ಗುಡಿಯಿದೆ. ಇಲ್ಲಿಯೂ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಳಗೊಂಡನಕೊಪ್ಪ ದಲ್ಲಿ ಗ್ರಾಮದಲ್ಲಿ ಒಂದಂಕಣದ ಕುಮಾರರಾಮನ ದೇವಾಲಯವಿದೆ. ಬಳ್ಳಾರಿ ಜಿಲ್ಲೆಯ ದರೋಜಿ ಬಳಿಯ ರಾಂಪುರದಲ್ಲಿ ಚೆಂಡಿನಾಟ ಉತ್ಸವ ನಡೆಯುತ್ತದೆ. ಈ ಆಚರಣೆಗಳಲ್ಲಿ ಕುಮಾರರಾಮನ ಜೀವನದ ಮುಖ್ಯ ಘಟನೆಗಳನ್ನು ಪುನರಭಿನಯಿಸುವ ರೀತಿ ಎದ್ದು ಕಾಣುತ್ತದೆ. ಸೊಂಡೊರಿನಿಂದ ಮೊಳಕಾಲ್ಮೂರಿನವರೆಗೂ ಬಹುತೇಕ ಗ್ರಾಮಗಳಲ್ಲಿ ಕುಮಾರರಾಮನ ದೇವಾಲಯಗಳಿವೆ. ಅದರಲ್ಲಿ ಪ್ರಮುಖವಾಗಿ ದೇವಗಿರಿ, ಮೆಟ್ರಿಕಿ ಹಳ್ಳಿಯಲ್ಲಿ ರಾಮದೇವರ ಜಾತ್ರೆ ಬೇಸಿಗೆಯಲ್ಲಿ ನಡೆಯುತ್ತದೆ. ಕುಮಾರರಾಮನ ತೆಲೆಹೊತ್ತು ಕುಣಿಯುವುದು ಈ ಊರಿನ ಜನ ಕಾಲಾಟ ಎನ್ನುತ್ತಾರೆ. ಸೊರಬ ತಾಲ್ಲೂಕಿನ ಪ್ರದೇಶದಲ್ಲಿ ದೊಡ್ಡಬಾಗಿಲು ದೇವರ ಹಬ್ಬ ನಡೆಯುತ್ತಿದ್ದು ಅಲ್ಲಿ ಕುಮಾರರಾಮ, ಕಂಪಿಲರಾಯ ಜೊತೆಗಾರರ ತೆಲೆಗಳನ್ನು ಮೆರವಣಿಗೆ ಮಾಡಿ ಪೂಜಿಸಲಾಗುತ್ತದೆ. ತೀರ್ಥಹಳ್ಳಿಯ ತಾಲ್ಲೂಕಿನ ಹೊಸನಗರ ಪರಿಸರದಲ್ಲಿ ದೊಂಬರ ಹಬ್ಬ ಆಚರಣೆಯಲ್ಲಿ ಕುಮಾರರಾಮನ ತೆಲೆಯನ್ನು ಆರಾಧಿಸುವ ಪದ್ಧತಿಯಿದೆ. ಹೊನ್ನಾವರ ತಾಲ್ಲೂಕಿನ ಅಣಿಲಗೋಡು ಗ್ರಾಮದಲ್ಲಿ ಶೂಲದ ಹಬ್ಬ ಕುಮಾರರಾಮನ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನ ಶೂಲದ ಕಂಬಗಳನ್ನು ಏರಿ ಜನ ವಿಜಯೋತ್ಸವ ಆಚರಿಸುತ್ತಾರೆ. ಕುಮಾರರಾಮನ ಹೆಸರಿನಲ್ಲಿ ಹರಕೆಹೊತ್ತು ಸಂತಾನಭಾಗ್ಯ ಇಷ್ಟಾರ್ಥ ಸಿದ್ಧಿ ಕೋರುವರು. ಇವುಗಳಲ್ಲದೆ ಶಂಕರಿಕೊಪ್ಪ ಸೊರಬ ತಾಲೂಕು, ಬೇಡಕಣಿ ಸಿದ್ಧಾಪೂರ ತಾಲೂಕು , ಮೂಡೂರು, ಮಲ್ಲಂದ, ಶಿರಕೋಡ ಹಾನಗಲ್ ತಾಲೂಕು ಹಾಗೂ ,ಮೂಡ್ಲೂರು ಹಿರೇಕೆರೂರ ತಾಲೂಕಿನಲ್ಲಿ ದೇವಾಲಯಗಳಿವೆ.
ಬೆಳಗಾವಿಯ ಸುಳದಾಳ
ಬೆಳಗಾವಿ ಜಿಲ್ಲೆಯ ಸುಳದಾಳದಲ್ಲಿ ಗಂಡುಗಲಿ ಕುಮಾರರಾಮನ ದೇವಸ್ಥಾನವಿದೆ. ಊರಿನ ಭಾಗದಲ್ಲಿರುವ ಕುಮಾರರಾಮನ ದೇವಸ್ಥಾನದ ಹತ್ತಿಕೊಂಡಂತೆ ವಾಲ್ಮೀಕಿ ನಾಯಕ ಸಮಾಜದ ಮನೆಗಳು ಇವೆ. ಅಂದಿನಿಂದ ಇಂದಿನವರೆಗೂ ಸುಳದಾಳದ ನಾಯಕ ಸಮಾಜದ ಬೂದನವರ ಮನೆತನ ಪೂಜಿಸುತ್ತಾ ಆಚರಿಸುತ್ತಾ, ಬಂದಿದ್ದಾರೆ. ಸುಳದಾಳದಲ್ಲಿಯೂ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಸುಳದಾಳದ ಎಲ್ಲ ಜಾತಿ, ಧರ್ಮದವರು ಕುಮಾರರಾಮನನ್ನು ಆರಾಧಿಸುತ್ತಾ ಬಂದಿದ್ದಾರೆ. ಊರಿನಲ್ಲಿ ಮದುವೆಗಳಾಗಲಿ ಶುಭಸಮಾರಂಭ ಅಥವಾ ಯಾವುದೇ ಕಾರ್ಯಕ್ಕೂ ಮೊದಲು ಇಲ್ಲಿ ಕುಮಾರರಾಮನನ್ನು ಆರಾಧಿಸುತ್ತಾರೆ. ತಮ್ಮ ಪೂರ್ವಿಕರ ಕಾಲದಿಂದಲೂ ನಾವು ಕುಮಾರರಾಮನನ್ನು ಪೂಜಿಸುತ್ತಾ ಬಂದಿದ್ದೇವೆ ಎಂದು ಕುಮಾರ ಬೂದನವರ ತಿಳಿಸುತ್ತಾರೆ. ಬೇಡ ನಾಯಕ ಜನಾಂಗದನಾಗಿದ್ದ ಕುಮಾರರಾಮನನ್ನು ಇಲ್ಲಿಯೂ ನಾಯಕರ ಜನಾಂಗದವರೆ ಪ್ರತಿವರ್ಷ ಜಾತ್ರೆ ಆಚರಿಸುತ್ತಾ ಬರುತ್ತಿರುವುದನ್ನು ಗಮನಿಸಬಹುದು. ಊರಿನಲ್ಲಿ ಆಲದಮರಕ್ಕೆ ಹೊಂದಿಕೊಂಡಂತಿರುವ ಕುಮಾರರಾಮನ ದೇವಸ್ಥಾನದ ಪಕ್ಕದಲ್ಲೇ ರೈಲು ಹಳಿ ಹಾದುಹೋಗಿದ್ದು. ಸುಳದಾಳದಲ್ಲಿ ರೈಲು ನಿಲ್ದಾಣವು ಇದೆ. ಸುಳದಾಳ ಗ್ರಾಮದ ಕುಮಾರರಾಮನ ದೇವಸ್ಥಾನವನ್ನೂ ಐತಿಹಾಸಿಕ ಪ್ರಸಿದ್ಧ ಗಂಡುಗಲಿ ಕುಮಾರರಾಮನಿಗೆ ಸಂಬಂಧಿಸಿದ್ದು ಅಂತ ಓದಿದವರಿಗೆ ಮತ್ತು ಊರಿನ ಹಿರಿಯರು ಜನಪದರು, ಡೊಳ್ಳಿನ ಪದಗಳ ಮೂಲಕ ಕೆಲವರಿಗೆ ತಿಳಿದಿದೆ. ಇನ್ನಷ್ಟೇ ಕುಮಾರರಾಮನ ದೇವಸ್ಥಾನ ಊಳಿಸಿ ಬೆಳಸಿ, ಕಾಯಕಲ್ಪ ನೀಡುವ ಕೆಲಸ ನಡೆಯಬೇಕಿದೆ. ಗೋಕಾಕ ತಾಲೂಕಿನ ಸುಳದಾಳ ಗ್ರಾಮ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡುತ್ತದೆ.
ಕುಮಾರರಾಮನ ಸಾಂಗತ್ಯದಲ್ಲಿ ತಾಯಿ ಹರಿಯಲಾದೇವಿ ಕುಲಕ್ಕೆಲ್ಲ ದೇವರಾಗೆಂದು ಪೂಜಿಸಿದಳು. ಕಂಪಿಲರಾಯನು ರಾಮನೆಂಬ ಎಂಬ ಹೆಸರಿನಿಂದ ಬೇಡರ ಕುಲದಿಂದ ಪೂಜಿಸಿಕೊಳ್ಳೆಂದು, ಬೇಡರು ನಿನ್ನ ಜಾತ್ರೆ ನಡೆಸಲಿ ಎಂದೂ ನುಡಿದನು ಎಂದಿದೆ. ಹರಿಯಲಾದೇವಿ ಕನಕಗಿರಿ ನಾಯಕರ ಗುಜ್ಜಲ ವಂಶದವಳು. ಗಂಡುಗಲಿ ಕುಮಾರರಾಮ ಬೇಡ ನಾಯಕ ಜನಾಂಗದನ್ನೆಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.
ಬೇಡರು, ಕುರುಬರು, ಬೇಸ್ತರು, ದೀವರು, ಉಪ್ಪಾರರು, ಈಡಿಗರು ಶ್ರಮಿಕ ಜನರ ನಡುವೆ ಕುಮಾರರಾಮನ ಆರಾಧನೆ ಇಂದಿಗೂ ಜೀವಂತವಾಗಿದೆ. ಮೇಲಿನ ಶ್ರಮಿಕ ಮೊದಲಾದ ಜಾತಿಗಳಿಗೆಲ್ಲಾ ಇಲ್ಲಿರುವ ರಾಮಸ್ವಾಮಿಯೇ ದೇವರು ಮನೆ ದೇವರು, ಕುಲದೇವರಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗದಲ್ಲೂ ನಾಯಕರು, ಕುರುಬರು, ಈಡಿಗರು ಕುಮಾರರಾಮನನ್ನು ಆರಾಧಿಸುತ್ತಾರೆ. ಇನ್ನೂ ಅನೇಕ ಜಾತಿಜನಗಳು ಕುಮಾರರಾಮನನ್ನು ನಂಬಿ ಆಚರಣೆಯಲ್ಲಿ ತೊಡಗಿವೆ.
ಗಂಡುಗಲಿ ಕುಮಾರರಾಮನ ಕುರಿತು ಜನಪದ ಕತೆಗಳು ಹಾಡುಗಳು ಇವೆ. ಇವುಗಲಲ್ಲದೆ ಬಿ.ಎಸ್. ಗದ್ದಗಿಮಠ ಅವರ ಸಂಪಾದಕತ್ವದಲ್ಲಿ ಬೆಳಕಿಗೆ ಬಂದ ಕುಮಾರರಾಮನ ದುಂದುಮೆ. ಕುಮಾರರಾಮನ ದುಂದುಮೆಯನ್ನು ಹಾಡಿದವನು ಗೋಕಾವಿಯ ಗುರುವರ ಸಿದ್ಧಸೇವಕ ಎಂದು ಕರೆದು ಕೊಂಡಿದ್ದಾನೆ. ಮೈಸೂರಿನ ಸೀಮೆಯಲ್ಲಿನ ಸೀತಾಳರಾಮನ ಕತೆ, ಚೆನ್ನಿಗರಾಮನ ಕತೆ, ಚನ್ನಪಟ್ಟಣದ ಪರಿಸರದಲ್ಲಿನ ಸಾರಂಗಧರನ ಕಥೆ, ತೆಲುಗಿನಲ್ಲಿ ಸುಪ್ರಸಿದ್ಧವಾದ ಕುಮಾರರಾಮುನಿ ಕಥೆ. ಯಕ್ಷಗಾನ, ತಂಬೂರಿ, ಬುರ್ರಕಥಾ ಮಹಾಕಾವ್ಯದಲ್ಲಿ ಕುಮಾರರಾಮ. ಕೈಫಿಯತ್ತುಗಳಲ್ಲಿ ಕುಮಾರರಾಮ, ಲಾವಣಿ, ಗೋಂದಲಿಗರ ಪದ, ಗೀಗಿ ಪದ ಇನ್ನು ಮುಂತಾದವುಗಳು ಗಂಡುಗಲಿ ಕುಮಾರರಾಮನ ಆಚರಣೆ ಪದ್ಧತಿ ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಚಿತ್ರರಂಗದಲ್ಲಿ ಭಾರ್ಗವ ನಿರ್ದೇಶನದಲ್ಲಿ ಆರ‍್ಯಾಂಭ ಪಟ್ಟಾಭಿ ಅವರ ಕೃತಿ ಆಧಾರಿತ ಚಲನಚಿತ್ರ ಗಂಡುಗಲಿ ಕುಮಾರರಾಮದಲ್ಲಿ ನಟ ಶಿವರಾಜಕುಮಾರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಧುರ ಸಂಗಮ ಅನ್ನುವ ಚಿತ್ರದಲ್ಲಿ ನಟ ವಿಷ್ಣುವರ್ಧನ ಅವರು ಗಂಡುಗಲಿ ಕುಮಾರರಾಮನ ಸನ್ನಿವೇಶದಲ್ಲಿ ಕಾಣಿಸುತ್ತಾರೆ. ಕಂಪ್ಲಿಯ ವಾದಿರಾಜ ಅವರು ಬರೆದ ನಾಟಕ ಹಲವಾರು ಪ್ರದರ್ಶನಗಳನ್ನು ಕಂಡಿದೆ. ಚದುರಂಗ ಅವರು ಬರೆದ ಗಂಡುಗಲಿ ಕುಮಾರರಾಮ ನಾಟಕವು ರಂಗದ ಮೇಲೆ ಮೂಡಿವೆ. ಹುಯಿಲಗೋಳ ನಾರಾಯಣ ಅವರು ಗಂಡುಗಲಿ ಕುಮಾರರಾಮ ನಾಟಕ ರಚಿಸಿದ್ದಾರೆ.
ಕುಮಾರರಾಮನ ಕುರಿತು ಹಲವಾರು ಪುಸ್ತಕಗಳು ಬಂದಿವೆ, ಬರುತ್ತಲೂ ಇವೆ. ಈ ಎಲ್ಲ ಪ್ರಕಾರವಾಗಿ ಕರ್ನಾಟಕ ಸರ್ಕಾರದಿಂದ ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗ ,ಬಂಡೆಕುಮ್ಮಟ,ಹಳೆ ಕುಮ್ಮಟ, ಹೇಮಗುಡ್ಡ, ಬಳ್ಳಾರಿ ಜಿಲ್ಲೆಯ ಸಂಡೂರು, ದರೋಜಿ, ಚಿತ್ರದುರ್ಗ ಜಿಲ್ಲೆಯ ಜಟ್ಟಂಗಿ ರಾಮೇಶ್ವರ ದೇವಾಲಯ ಮತ್ತಿತರ ಸಂಬಂಧಿತ ಆಚರಣೆಯ ಸ್ಥಳಗಳನ್ನು ಸೇರಿಸಿಕೊಂಡು ಕುಮಾರರಾಮ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚಿಸುವ ಅಗತ್ಯವಿದೆ. ಐತಿಹಾಸಿಕ, ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ವರೆಗೂ ಆ ಕೆಲಸ ಆಗದಿರುವುದು ವಿಷಾದನೀಯ. ಈ ಭಾಗದ ಜನಪ್ರತಿನಿಧಿಗಳು, ಸಂಶೋಧಕರು ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ಕುಮಾರರಾಮ ಪ್ರಾಧಿಕಾರ ರಚಿನೆಯಾಗಬೇಕಿದೆ. ಕುಮ್ಮಟದುರ್ಗ ಮತ್ತು ಕುಮಾರರಾಮನ ಆಚರಣೆ, ಪದ್ಧತಿ ಜಾತ್ರೆ, ಉತ್ಸವಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಮೇಲಿದೆ.
ಚಿತ್ರದುರ್ಗದ ನಾಯಕರ ಇತಿಹಾಸ
ಇತಿಹಾಸ ಪುಸಟಗಳಲ್ಲಿ ಚಿತ್ರದುರ್ಗ ನಾಯಕ ಅರಸರ ಪಾತ್ರ ಪ್ರಮುಖವಾದುದು. ವಿಜಯನಗರ ಪತನವಾದ ನಂತರ ಆಳ್ವಿಕೆಗೆ ಬಂದ ನಾಯಕ ಅರಸು ಮನೆತನಗಳಲ್ಲಿ ಇದು ಅತ್ಯಂತ ಬಲಿಷ್ಟವಾದ ಸಂಸ್ಥಾನವಾಗಿತ್ತು. ಕ್ರಿಶ ೧೫೬೮ ರಿಂದ ೧೭೭೯ ರವರೆಗೆ ಚಿತ್ರದುರ್ಗ ಅರಸರ ಆಳ್ವಿಕೆಯ ಕಾಲ ಘಟ್ಟ.
ಆಳ್ವಿಕೆ ನಡೆಸಿದ ಅರಸರು : ೧೩
ಆಳ್ವಿಕೆ ನಡೆಸಿದ ಅವಧಿ : ೨೧೧ ವ?
೧. ಮತ್ತಿ ತಿಮ್ಮಣ್ಣನಾಯಕ (ಕ್ರಿ.ಶ.೧೫೬೮-೧೫೮೯) ೨೧ ವ?
೨. ಒಂದನೇ ಓಬಣ್ಣನಾಯಕ (ಕ್ರಿ.ಶ.೧೫೮೯-೧೬೦೩) ೧೫ ವ?
೩. ಒಂದನೇ ಕಸ್ತೂರಿ ರಂಗಪ್ಪನಾಯಕ (ಕ್ರಿ.ಶ.೧೬೧೩-೧೬೫೨) ೪೯ ವ?
೪. ಇಮ್ಮಡಿ ಮದಕರಿನಾಯಕ (ಕ್ರಿ.ಶ.೧೬೫೨-೧೬೭೫) ೨೨ ವ?
೫. ಇಮ್ಮಡಿ ಓಬಣ್ಣನಾಯಕ (ಕ್ರಿ.ಶ.೧೬೭೫)
೬. ಕಸ್ತೂರಿ ಚಿಕ್ಕಣ್ಣನಾಯಕ (ಕ್ರಿ.ಶ.೧೬೭೫-೧೬೮೬) ೧೨ ವ?
೭. ಮುಮ್ಮಡಿ ಮದಕರಿನಾಯಕ (ಕ್ರಿ.ಶ.೧೬೮೬-೧೬೮೮) ೩ ವ?
೮. ದೊಣ್ಣೆರಂಗಪ್ಪನಾಯಕ (ಕ್ರಿ.ಶ.೧೬೮೮)
೯. ಸೂರ್ಯಕಾಂತಿ ರಂಗಪ್ಪನಾಯಕ (ಕ್ರಿ.ಶ.೧೬೮೯)
೧೦. ಬಿಚ್ಚುಗತ್ತಿ ಭರಮಣ್ಣನಾಯಕ (ಕ್ರಿ.ಶ.೧೬೮೯-೧೭೨೧) ೩೨ ವ?
೧೧. ಹಿರೇಮದಕರಿನಾಯಕ (ಕ್ರಿ.ಶ.೧೭೨೧-೧೭೪೯) ೨೭ ವ?
೧೨. ಇಮ್ಮಡಿ ಕಸ್ತೂರಿ ರಂಗಪ್ಪನಾಯಕ (ಕ್ರಿ.ಶ.೧೭೪೯-೧೭೫೪) ೬ ವ?
೧೩. ರಾಜಾ ವೀರಮದಕರಿನಾಯಕ (ಕ್ರಿ.ಶ.೧೭೫೪-೧೭೭೯) * ೨೪ ವ?
ಹಿರೇಮದಕರಿನಾಯಕನ ಹೆಂಡತಿ ಮತ್ತು ಇಮ್ಮಡಿ ಕಸ್ತೂರಿ ರಂಗಪ್ಪನಾಯಕನ ತಾಯಿ ಗಂಡಿಲ ಓಬವ್ವನಾಗತಿಯು, ಕೊನೆಯ ಅರಸ ರಾಜಾ ವೀರಮದಕರಿ ನಾಯಕನ ಪರವಾಗಿ ಕ್ರಿ.ಶ.೧೭೫೪ ರಿಂದ ೧೭೫೬ ರ ವರೆಗೆ ಎರಡು ವ? ಕಾಲ ದುರ್ಗದಲ್ಲಿ ಆಳ್ವಿಕೆ ನಡೆಸಿದ ಬಗ್ಗೆ ಇತಿಹಾಸಪುಟಗಳಲ್ಲಿ ದಾಖಲಾಗಿದೆ.
ಬೇಡ ಜನಾಂಗದ ಇವರು ತಮ್ಮನ್ನು ವಾಲ್ಮೀಕಿ ಗೋತ್ರದವರೆಂದು, ಕಾಮಗೇತಿ ವಂಶದವರಾಗಿದ್ದ. ಕಾಮಗೇತಿ ಕಸ್ತೂರಿ ಎಂದೂ ಶಾಸನಗಳಲ್ಲಿ ಕರೆದುಕೊಂಡಿದ್ದಾರೆ. ಹಗಲು ಕಗ್ಗೊಲೆಯ ಮಾನ್ಯ, ಗಾದ್ರಿಮಲೆ ಹೆಬ್ಬುಲಿ,ಹರಿಹರರಾಯರ ಮರ್ಥನ, ಮಲೆನಾಡಿನ ವರಗಂಡ, ಚಂದ್ರಗಾವಿಯ ಛಲಂದಕ ಭಾರಿ ನಿಗಳಾಂಕ, ಹಾಗೂ ಮತ್ತಷ್ಟು ಬಿರುದುಗಳನ್ನು ಚಿತ್ರದುರ್ಗದ ನಾಯಕರ ಹೆಸರಿನಲ್ಲಿವೆ.
ಸುರುಪುರ ಸಂಸ್ಥಾನದ ಇತಿಹಾಸ ತಿಳಿಯಬನ್ನಿ
ಯಾದಗಿರ ಜಿಲ್ಲೆಯ ಭೀಮಾ ಹಾಗೂ ಕೃಷ್ಣಾ ನದಿಯ ದಂಡೆಯ ಮೇಲೆ ಇರುವ ಸುರಪುರ. ಸುರಪುರ ಸಂಸ್ಥಾನದ ಇತಿಹಾಸ ಪ್ರಾರಂಭವಾಗುವುದು, ಕ್ರಿ.ಶ ೧೬೩೬ ರಿಂದ ೧೮೫೮ ರವರೆಗೆ ಹನ್ನೆರಡು ಜನ ನಾಯಕ ಅರಸರನ್ನು ಸುರಪುರ ಸಂಸ್ಥಾನದ ಇತಿಹಾಸದಿಂದ ತಿಳಿದುಬರುತ್ತದೆ.
ಕ್ರಿ.ಶ ೧೮೩೬ ರಿಂದ ೧೮೫೮ ರವರೆಗೆ ಸುರಪುರಸ ಸಂಸ್ಥಾನ ವೀರ ಮತ್ತು ಶೂರತ್ವಕ್ಕೆ ಹೆಸರಾಗಿದೆ. ವಿಜಯನಗರ ವೈಭವೋನ್ನತಿಗೆ ಸುರುಪುರದ ನಾಯಕರ ಪಾತ್ರವೂ ಇದೆ. ಕೃ?ದೇವರಾಯ ಮಾಡಿದ ಅನೇಕ ದಂಡಯಾತ್ರೆಗಳಲ್ಲಿ ಸಗರನಾಡಿನ ಅನೇಕ ಬೇಡರ ಪಡೆಗಳು ವಿಜಯನಗರ ಸಾಮ್ರಾಜ್ಯದ ಬೆಂಬಲಕ್ಕೆ ನಿಂತಿದ್ದಾರೆ.
ಶೂರತನಕೆ ಮತ್ತೊಂದು ಹೆಸರು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಜನಪದರು ರಾಜಾ ವೆಂಕಟಪ್ಪ ನಾಯಕ ಅವರ ಕುರಿತು ಹೀಗೆ ಹೇಳುತ್ತಾರೆ.
ದಿಟ್ಟ ವೆಂಕಟಪ್ಪನಾಯಕ,
ಅಟ್ಟಿದನು ವೈರಿಗಳ ಭದ್ರ ರಾಜ್ಯವ ಕಟ್ಟಿ ಗುಂಡಿಗೆ!
ದೇಹ ಕೊಟ್ಟು ಮೋಸಕ್ಕೆ ಜೀವ ತೆತ್ತಾನು!
ಬಡೆಸಾಬಗ ಸುದ್ದಿಯ ಕಳಿಸಿ|
ಅಗಳಿಗೆ ಸೋಲ್ಜರ್ ತರಿಸಿ ವಳವಳಗ ಹೇಳಿ ಹಿಡಿತರಿಸಿ|
ಮಾಡಿದರು ಘಾಸಿ
ವೆಂಕಟಪ್ಪನ ಬಂಧಿಸಿ,
ಮಾಡ್ಯಾರೋ ಜೀವಕ್ಕ ಘಾಸಿ,
ಕತೆ ಕಟ್ಟಿ ಹೇಳ್ಯಾರೋ| ಕೋತಿ
೨೩ ಹರೆಯದ ಶೂರ ರಾಜ ವೆಂಕಟಪ್ಪನಾಯಕನನ್ನು ಮೋಸದಿಂದ ಬ್ರಿಟಿ?ರು ಕೊಂದು ಹಾಕಿ, ಬೇರೆ ಕಥೆ ಕಟ್ಡಿದ ಬಗ್ಗೆ ಜನಪದರ ಲಾವಣಿಯಿದು.
ಬ್ರಿಟಿ?ರ ವಿರುದ್ಧ ಹೋರಾಡಲು ಸಜ್ಜಾದ ಸಂಗೊಳ್ಳಿ ರಾಯಣ್ಣನನ್ನು ಬೆಂಬಲಿಸಲು ಸುರುಪುರದ ರಾಜಾ ಕೃ?ನಾಯಕ ೩೦೦ ಜನ ಬೇಡರ ಪಡೆಯನ್ನು ನೀಡಿ ಬೆಂಬಲಿಸಿದನು.
ವಿಜಯಪುರ ಆದಿಲ್ ಶಾಹಿ ಅರಸರೊಂದಿಗೆ ಹೋರಾಡಿ ಮದಿಸಿದ ಆನೆ ಪಳಗಿಸಿದ ಶೌರ್ಯ ನೋಡಿ, “ಮದಗಜಗಂಡ ಬಹರಿ ಪಿಡ್ಡನಾಯಕ” ಎಂಬ ಬಿರುದು ಗಡ್ಡಿ ಪಿಡ್ಡನಾಕನಿಗೆ ಸಲ್ಲುತ್ತದೆ.
ಬ್ರಿಟಿ? ಸೈನ್ಯ ರಾಜಾ ಪಿಡ್ಡನಾಯಕನನ್ನು ಕೊಂದಾಗ ಸುರಪುರದ ಮಾತೆ ’ರಾಣಿ ಈಶ್ವರಮ್ಮ’ ಬ್ರಿಟಿ?ರ ವಿರುದ್ಧ ಸಿಡಿದೆಳುತ್ತಾಳೆ ಬೇಡರು ಯಾರಿಗೂ ಹೆದರಬಾರದು, “ಸಮಯ ಬಂದರೆ ಸ್ತ್ರೀಯರೂ ವೀರ ನಾರಿಯಾಗಿ ಹೋರಾಟಕ್ಕೆ ಮುನ್ನುಗ್ಗಬೇಕು ಕೆಂಪು ಮುಸುಡಿಗಳನ್ನು ಸದೆಬಡಿಯಬೇಕು” ಎಂದು ವೀರಧ್ವನಿಯನ್ನು ಹೊರಡಿಸುತ್ತಾಳೆ. ಅವಳ ವಿರಾವೇಶದ ಧ್ವನಿ ಹಾಗೂ ರಾಜಾ ವೆಂಕಟಪ್ಪನಾಯಕನ ಶೌರ್ಯದ ಛಾಯೆ ಎಲ್ಲೆಡೆ ಹರಡಿ, ಬ್ರಿಟಿ?ರ ವಿರುದ್ಧ ಕೊಲ್ಲಾಪುರ , ಧಾರವಾಡ, ಬೆಳಗಾವಿಯಲ್ಲಿ ದಂಗೆಗಳಾಗುತ್ತವೆ. ಈ ಕುರಿತು ಬ್ರಿಟಿ? ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಣಿ ಈಶ್ವರಮ್ಮನ ಕುರಿತ ಜನಪದ ಸಾಲುಗಳು.
ರಾಣಿ ಈಶ್ವರಮ್ಮ ನಾಡಿಗೆ ತಕ್ಕವಳು
ನಡುಕ ಹುಟ್ಟಿಸಿದಳೋ | ಟೇಲರ್ ಸಾಯ್ಯಾಗ
ಬೈಗುಳದ ಸುರಿಮಳೆ ಸುರಿಸಿದಳೋ.
ಚಿನ್ನದ ಗುಣದವಳು, ದಿಟ್ಟ ನಿಲುವಿನವಳು
ಭಾ?ಗೆ ತಪ್ಪದವಳು! ಈಶ್ವರಮ್ಮ
ಮಗನ ರಕ್ಷಣೆಗೆ ನಿಂತವಳು, ಉಪ್ಪರಿಗೆ ಮನೆಬೇಕು,
ಕೊಪ್ಪರಿಗೆ ಹಣಬೇಕು,
ರಾಣಿ ಈಶ್ವರಮ್ಮನಂಥ ಸೊಸೆ ಬೇಕು !
ನಮ್ಮನೆಗೆ ಸುರಪುರ ರಾಜನಂಥ ಮಗಬೇಕು
ಗಡ್ಡಿ ಪಿಡ್ಡನಾಯಕ, ಹಸರಂಗಿ ಪಾಮನಾಯಕ, ಪೀತಾಂಬರಿ ಬಹರಿ ಪಿಡ್ಡನಾಯಕ, ಇಮ್ಮಡಿ ಪಾಮನಾಯಕ, ಮುಮ್ಮಡಿ ಪಿಡ್ಡನಾಯಕ, ಮೊಂಡುಗೈ ರಾಜಾ ವೆಂಕಟಪ್ಪ ನಾಯಕ, ಮುಮ್ಮಡಿ ಪಾಮನಾಯಕ, ಇಮ್ಮಡಿ ರಾಜಾವೆಂಕಟಪ್ಪನಾಯಕ, ರಾಜಾ ನಾಲ್ವಡಿ ಪಿಡ್ಡ ನಾಯಕ, ಮುಮ್ಮಡಿ ರಾಜಾ ವೆಂಕಟಪ್ಪನಾಯಕ, ರಾಜಾ ಕೃ?ಪ್ಪ ನಾಯಕ, ರಾಜಾ ನಾಲ್ವಡಿ ವೆಂಕಟಪ್ಪನಾಯಕ ಸುರುಪುರ ಸಂಸ್ಥಾನವನ್ನು ಆಳಿದ ರಾಜರು
ನೋಡಬನ್ನಿ ಸುರಪುರದ ಅರಮನೆ
ಸುರಪುರ ನಾಯಕ ಸಂಸ್ಥಾನದ ಅರಮನೆಯು ಇತಿಹಾಸದ ದಿನಗಳಿಗೆ ಸಾಕ್ಷಿಯಾಗಿ ನಿಂತಿದೆ. ಅರಮನೆಯಲ್ಲಿ ನಡೆದಾಡುತ್ತಿದ್ದರೆ ರೋಮಾಂಚನವಾಗುವುದಂತೂ ನಿಜ. ಅರಮನೆಯ ಪ್ರತಿ ಕಂಬಗಳು ಕಥೆ ಹೇಳುತ್ತವೆ ಎನಿಸುತ್ತದೆ.
ಮೂರು ಅಂತಸ್ತಿನ ವಿಶಾಲವಾದ ಈ ಅರಮನೆಯಲ್ಲಿ ವಿನ್ಯಾಸಕ್ಕೆ ಅನುಸಾರ ವಿಶಾಲ ಕೋಣೆಗಳು, ಅರಸರ ಆರಾಧ್ಯದೈವ ವೆಂಕಟೇಶ್ವರ ದೇವರ ದರ್ಶನ ಅರಮನೆಯಿಂದಲೇ ಲಭ್ಯವಾಗುವಂತೆ ಮಾಡಲಾಗಿದೆ. ಅರಮನೆಯಲ್ಲಿ ಇದ್ದುಕೊಂಡೇ ಕಿಂಡಿ ಮುಖಾಂತರ ದೇವರ ದರ್ಶನ ಮಾಡಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ.
ನಾಲ್ವಡಿ ವೆಂಕಟಪ್ಪನಾಯಕರ ವ್ಯಕ್ತಿತ್ವದ ಜತೆಗೆ ಸ್ವಾತಂತ್ರ್ಯ ಚಳವಳಿಯ ರೂಪುರೇ? ಸಿದ್ಧಗೊಂಡಿದ್ದೇ ಈ ಅರಮನೆಯಲ್ಲಿ. ಕೆಲ ವ?ಗಳ ಹಿಂದೆ ಸಂಸ್ಥಾನದ ಮೇಲಿನ ಅಭಿಮಾನದಿಂದ ತಾತಾ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಪುತ್ರ ರಾಜಾ ಕೃ?ಪ್ಪ ನಾಯಕ ಅವರು ಪಾಳು ಬಿದ್ದ ಅರಮನೆಯನ್ನು ಪುನಃ ನವೀಕರಿಸಿದರು. ಸುಮಾರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ಅರಮನೆ ಸುಂದರಗೊಳಿಸಿದರು ಎಂಬ ಮಾಹಿತಿ ಸ್ಥಳೀಯರಿಂದ ತಿಳಿದು ಬರುತ್ತದೆ. ಇತಿಹಾಸದ ಪುಟದಲ್ಲಿ ದಾಖಲಾದ ಸುರಪುರ ಅರಮನೆಯನ್ನೊಮ್ಮೆ ನೋಡಿಬನ್ನಿ.
ದೇಶಕ್ಕಾಗಿ ಮರಣ ದಂಡನೆಗೇರಿದವರನ್ನು ಮರೆಯದಿರೋಣ. . .
ಮೂಂಚೂಣಿಯಲ್ಲಿದ್ದವರನ್ನು ನೆನೆದು ಆತನೊಂದಿಗೆ ಶೌರ್ಯ ಪರಾಕ್ರಮಗಳಿಂದ ಹೋರಾಡಿದ ವೀರರನ್ನು ನೆನೆಯದಿದ್ದರೆ ತಪ್ಪಾಗುತ್ತದೆ. ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದವರು ಸಂಗೊಳ್ಳಿ ರಾಯಣ್ಣ ಮತ್ತು ಆತನ ಸಂಗಡಿಗರು, ದೇಶಕ್ಕಾಗಿ ಪ್ರಾಣ ಕೊಟ್ಟ ಧೀರರು. ಕಾಲಚಕ್ರದಲ್ಲಿ ಉರುಳಿ ಇಂದಿನ ಮಕ್ಕಳಿಗೆ ಸಂಗೊಳ್ಳಿ ರಾಯಣ್ಣ ಹೆಸರು ಚಲನಚಿತ್ರದಿಂದ, ನಾಟಕ, ದೇವತ್ವ ಪಡೆದುಕೊಂಡು ಇಂದಿಗೂ ಜನರ ಮನಸ್ಸಲ್ಲಿ ಹಸಿರಾಗಿದೆ.
ಸಂಗೊಳ್ಳಿ ರಾಯಣ್ಣನಷ್ಟೇ ಶೂರ ಧೀರರು ಆಗಿದ್ದ ಆತನ ಸಂಗಡಿಗರನ್ನು ಮರೆಯುತ್ತಿದ್ದೇವೆ ಅನಿಸದೆ ಇರಲಾರದು. ಶೌರ್ಯಕ್ಕೆ ಹೆಸರಾದ ಸಂಗೊಳ್ಳಿ ರಾಯಣ್ಣ ಸ್ನೇಹಿತರೆಂದರೆ ಅವರು ಇವನ್ನಷ್ಟೇ ಶೂರರು ಇರುತ್ತಾರೆ. ಅವನ ಪ್ರತಿ ಹೆಜ್ಜೆಯಲ್ಲೂ ಹೋರಾಡಿ ದೇಶಕ್ಕಾಗಿ ಕೊನೆಗೆ ಗಲ್ಲು ಶಿಕ್ಷೆಯವರೆಗೂ ಜೊತೆಯಾದ ಗೆಳೆಯರಲ್ಲಿ ಮುಂಚೂಣಿಯಲ್ಲಿದ್ದ ಸಂಗೊಳ್ಳಿ ರಾಯಣ್ಣನನ್ನು ನೆನೆದು ಆತನೊಂದಿಗೆ ಗಲ್ಲು ಶಿಕ್ಷೆಗೆ ಗುರಿಯಾದ ಆರು ಜನರ ಹೆಸರನ್ನು ನಾವು ನೆನಯದಿದ್ದರೆ ಹ್ಯಾಗೆ.
ದಿನಾಂಕ ೨೬.೦೧.೧೮೩೧ ರಂದು ಸಂಗೊಳ್ಳಿ ರಾಯಣ್ಣ ನೊಂದಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು ವಿವರ ಹೀಗಿದೆ. ರಾಯಣ್ಣ ರೋಗಣ್ಣವರ (ಸಂಗೊಳ್ಳಿ ರಾಯಣ್ಣ), ಬಾಳಾನಾಯಕ ಬಿನ್ ಮಲ್ಲನಾಯಕ, ಬಸಲಿಂಗಪ್ಪ ಬಿನ್, ಸಕ್ರೆಪ್ಪ, ಕರಬಸಪ್ಪ ಬಿನ್ ಕಲ್ಲಪ್ಪ, ಭೀಮಾ ಬಿನ್ ಕುಳ್ಯಾ, ಕೆಂಚಪ್ಪ ಬಿನ್ ರುದ್ರಪ್ಪ, ಅಪ್ಪಾಜಿ ಬಿನ್ ಚಂದ್ರನಾಯಕ, ಈ ಎಲ್ಲರೂ ಗಲ್ಲು ಶಿಕ್ಷೆಗೆ ಗುರಿಯಾದವರು, ಇವರ ಕುರಿತು ಜನಪದ ಗೀತೆಯ ಸಾಲು ಹೀಗಿದೆ.
ಗಲ್ಲಿಗೇರಿದ ಎಳು ಜನರಲ್ಲಿ ನಾಲ್ಕು ಜನ ಬೇಡ ಜನಾಂಗದ ನಾಯಕರಿದ್ದಾರೆ, ಅವರೆಂದರೆ ಬಾಳಾನಾಯಕ ಬಿನ್ ಮಲ್ಲನಾಯಕ ಬಸ್ತವಾಡ, ಕಲ್ಲಬಸಪ್ಪ ಬಿನ್ ಕಲ್ಲಪ್ಪ ಬೆಳವಡಿ, ಭೀಮಾ ಬಿನ್ ಕಲ್ಯಾ ಜಿಡ್ಡೀಮನಿ ಹೋಗರ್ತಿ ಸಂಗತಿಕೊಪ್ಪ, ಅಪ್ಪಾಜಿ ಬಿನ್ ಕೆಂಚನಾಯಕ ಸುತಗಟ್ಟಿ.
ನಂದಗಡ ಊರಾಗ, ಮಂದ್ಯಾಗ ರಾಯಣ್ಣ, ಬಾಲಣ್ಣ, ಬಸಪ್ಪ,
ಕರಬಸಪ್ಪ, ಭೀಮಣ್ಣ, ಕೆಂಚಪ್ಪ, ಅಪ್ಪಾಜಿ. ಅವರನ್ನ ತಂದು
ಶೂಲಕ ಹಾಕ್ಯಾರೊ | ಕಿತ್ತೂರ
ಗೊಂದಲ ಶೂರರಿಗೆ ದುರಮರಣೊ
ಈ ಏಳು ಜನರೊಂದಿಗೆ ಇನ್ನೂ ಆರು ಜನಕ್ಕೆ ಕರಿನೀರಿನ ಶಿಕ್ಷೆ ವಿಧಿಸಿ ಜೀವಿತ ಅವಧಿಯವರೆಗೂ ಕರಿನೀರಿನ ಶಿಕ್ಷೆ ಗುರಿಯಾದವರು. ರುದ್ರನಾಯಕ ಬಿನ್ ನೀಲನಾಯಕ, ಯಲ್ಲಾನಾಯಕ ಬಿನ್ ಬುದ್ದಣ್ಣ, ಅಪ್ಪೋಜಿ ಬಿನ್ ದಾದಾಸಾಹೇಬ, ರಾಣೋಜಿ ಬಿನ್ ಬಾಳಪ್ಪ, ಕೊಣೇರಿ ಬಿನ್ ಯಲ್ಲಪ್ಪ, ನೇಮಣ್ಣ ಬಿನ್ ಪಾಯಪ್ಪ.
ಪರಕೀಯ ಸರಕಾರದ ಶೋಷಣಾ ಪ್ರವೃತ್ತಿಯವನ್ನು ಪ್ರತಿಭಟಿಸಿದ ಜನಸಾಮಾನ್ಯರ ಒಳತಿಗಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ, ಪ್ರಾಣತ್ಯಾಗ ಮಾಡಿದ ಈ ಎಲ್ಲ ಮಹನೀಯರನ್ನು ನೆನೆಯಬೇಕು. ಬೆಳಗಾವಿಯಲ್ಲಿ ನಿರ್ಮಾಣವಾದ ಸುವರ್ಣಸೌಧ ದಿಂದ ಕೂಗಳತೆಯ ದೂರದಲ್ಲಿ ಬಸ್ತವಾಡ ಗ್ರಾಮವಿದೆ. ಬಸ್ತವಾಡ ಸಂಗೊಳ್ಳಿ ರಾಯಣ್ಣನೊಂದಿಗೆ ಗಲ್ಲಿಗೇರಿದ ಬಾಳಾನಾಯಕನ ಗ್ರಾಮ. ಆ ಎಲ್ಲ ಮಹನೀಯರ ಗ್ರಾಮಗಳಲ್ಲಿ ಸ್ಮಾರಕ ನಿರ್ಮಸಿ. ಗಲ್ಲಿಗೇರಿಸಿದ ಸ್ಥಳಗಳಲ್ಲಿ ಗಲ್ಲಿಗೇರಿದವರ ಹಾಗೂ ಕರಿನೀರಿನ ಶಿಕ್ಷೆಗೆ ಒಳಗಾದವರ ಮಾಹಿತಿ ಫಲಕ ಹಾಕಿದರೆ ಪ್ರವಾಸಿಗರಿಗೆ ಇತಿಹಾಸ ದರ್ಶನದ ಜೊತೆಗೆ ಮಾಹಿತಿಯೂ ಸಿಕ್ಕಂತಾಗುತ್ತದೆ.
ನಂದಗಡ ಒಂದು ಹೊರತು ಪಡಿಸಿದರೆ ಉಳಿದಂತೆ ಯಾವ ಗ್ರಾಮದಲ್ಲೂ ಸ್ಮಾರಕ ಸಿಗುವುದಿಲ್ಲ, ನಂದಗಡ ನ ಸ್ಮಾರಕದಲ್ಲೂ ಈ ಎಲ್ಲ ಮಹನೀಯ ಹೆಸರುಗಳ ಕುರಿತು ಹಾಗೂ ಗಲ್ಲಿಗೇರಿಸಿದ ಸ್ಥಳದಲ್ಲಿಯೂ ಗಲ್ಲು ಶಿಕ್ಷೆ ಹಾಗೂ ಕರಿನೀರಿನ ಶಿಕ್ಷೆಗೆ ಒಳಗಾದವರ ಬಗ್ಗೆ ಇತಿಹಾಸದ ಪುಟಗಳಲ್ಲಿನ ಮಾಹಿತಿಯನ್ನು ದೊರೆಯುವಂತ ಕೆಲಸ ಆಗಲಿ ಎಂಬುದು ಇತಿಹಾಸಕಾರರ, ಸಂಶೋಧಕರ ಬೇಡಿಕೆ.
ಬೆಳಗಾವಿ ಸುವರ್ಣ ಸೌಧದ ಮುಂದೆ ಈ ಮಹನೀಯರೆಲ್ಲರ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ದೇಶಕ್ಕಾಗಿ ಪ್ರಾಣ ಬಿಟ್ಟ ಶೂರರನ್ನು ಮರೆಯದೆ ನೆನಪಿಸಿಕೊಳ್ಳಬೇಕಾದ ಕೆಲಸ ನೆಡಯಬೇಕಿದೆ.
ಇವರಷ್ಟೇ ಅಲ್ಲದೇ, ಹಲಗಲಿಯ ಬೇಡರು, ವೀರ ಸಿಂಧೂರ ಲಕ್ಷ್ಮಣ ನ ಹಾಗೂ ಇನ್ನು ಅನೇಕ ರಾಜರು, ಪಾಳೆಯಗಾರರ ಇತಿಹಾಸಗಳನ್ನು ನಾವು ನೀವೆಲ್ಲಾ ತಿಳಿದು ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ ಮಹನೀಯರೆಲ್ಲರಿಗೂ ಸಿಗುವ ಮಾನ್ಯತೆ ಗೌರವ ದೊರೆಯುವ ಕೆಲಸ ಆದಷ್ಟು ಬೇಗನೆ ಆಗಬೇಕಿದೆ ಎಂಬುದು ಜನಾಂಗದ ಸಂಘಟನೆ, ಸಮುದಾಯ, ಇತಿಹಾಸಕಾರರ, ಸಂಶೋಧಕರ, ನಮ್ಮೆಲ್ಲರ ಬೇಡಿಕೆ ಆಗಿದೆ.
ಚಿತ್ರ ,ಲೇಖನ
-ನಾಗರಾಜನಾಯಕ ಡಿ.ಡೊಳ್ಳಿನ
ಕೊಪ್ಪಳ
ಆಧಾರ ಗ್ರಂಥಗಳು
೧) ಚಿತ್ರದುರ್ಗದ ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ – ಪ್ರೊ ಲಕ್ಷ್ಮಣ ತೆಲಗಾವಿ
೨) ಕರ್ನಾಟಕ ನಾಯಕ ಅರಸು ಮನೆತನಗಳ ವಿಶಿಷ್ಠ ಸಾಂಸ್ಕೃತಿಕ ಆಚರಣೆಗಳು-ಡಾ ಅಮರೇಶ ಯತಗಲ್
೩) ಗ್ಯಾಸೆಟಿಯರ್
ಫೋಟೊ ಇವೆ
೧) ಬೆಳಗಾವಿ ಸುಳದಾಳ ಗ್ರಾಮದಲ್ಲಿರುವ ಕುಮಾರರಾಮನ ದೇವಸ್ಥಾನ
೨) ಸುಳದಾಳದಲ್ಲಿರುವ ಕುಮಾರರಾಮ ದೇವಸ್ಥಾನದ ಮೂರ್ತಿಗಳು
೩) ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗದ ದಾರಿ
೪) ಅವಸಾನದ ಅಂಚಿನಲ್ಲಿರುವ ಕೊಪ್ಪಳ ಜಿಲ್ಲೆಯ ಕುಮಾರರಾಮನ ಕುಮ್ಮಟದುರ್ಗ
೫) ಮೆರವಣಿಗೆಯಿಂದ ಬಂದ ಮರದ ಮುಖಗಳು
೬) ಜಬ್ಬಲಗುಡ್ಡ, ಮಲ್ಲಾಪುರ, ಇಂದರಗಿ ಗ್ರಾಮದಿಂದ ಬಂದು ಕುಮ್ಮಟದುರ್ಗವೇರಿದ ಮರದ ಮುಖಗಳು
೭) ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಗಳಕುಪ್ಪೆಯಲ್ಲಿನ ಕುಮ್ಮಟರಾಮ ದೇವಸ್ಥಾನದ ವಿಗ್ರಹ .
೮) ಪೂಜೆಗೆ ಒಳಪಡುವ ಕಟ್ಟಿಗೆ ಮುಖಗಳು
೯) ಸುರಪುರದ ಅರಮನೆ ಫೋಟೊಗಳು
Comments are closed.