ಹತಾಶೆಯಿಂದ ಬಿಜೆಪಿಗರ ಗೂಂಡಾ ವರ್ತನೆ: ಸಚಿವ ತಂಗಡಗಿ

Get real time updates directly on you device, subscribe now.

ಬೆಂಗಳೂರು: ಜು.18 : ಅಧಿಕಾರ ಇಲ್ಲದೆ, ಹತಾಶೆಗೊಳಗಾಗಿರುವ ಬಿಜೆಪಿಗರು ಸದನದಲ್ಲಿ ಪೀಠಕ್ಕೆ ತೋರಿದ ಅಗೌರವ ಆ ಪಕ್ಷದ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು ಬಿಜೆಪಿ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಖಕ್ಕೆ ಪೇಪರ್‌ ಎಸೆದು ಪೀಠಕ್ಕೆ ಅಗೌರವ ತೋರಿದ ಘಟನೆಗೆ ಸಂಬಂಧಿಸಿದಂತೆ ಸಚಿವರು ಮಂಗಳವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಪ್ರಮುಖ ವಿಪಕ್ಷವಾಗಿ ಬಿಜೆಪಿ ಶಾಸಕರು ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪೀಠದ ಎದುರು ಅಸಭ್ಯವಾಗಿ ವರ್ತಿಸಿದ ಬಿಜೆಪಿ‌ ಶಾಸಕರ ನಡೆ ಸರಿಯಲ್ಲ. ಇದೇನಾ ಬಿಜೆಪಿಯ ಸಭ್ಯತೆ ಎಂದು ಖಾರವಾಗಿ ಪ್ರಶ್ನಿಸಿದರು.

ಊಸರವಳ್ಳಿಯ ನಾಟಕ; ದಲಿತ ಸಮುದಾಯದಿಂದ ಬಂದಂತಹ ಉಪಸಭಾಪತಿ ಅವರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದ ಬಿಜೆಪಿ ಶಾಸಕರಿಗೆ ನಾಚಿಕೆಯಾಗಬೇಕು. ಉಪಸಭಾಪತಿ ಅವರ ಮೇಲೆ ಪೇಪರ್‌ ಎಸೆಯುವುದು ಎಂದರೇನು? ಬಿಜೆಪಿಗರ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಉಪಸಭಾಪತಿ ದಲಿತರು ಎಂಬ ಕಾರಣಕ್ಕೆ ಬಿಜೆಪಿ ಶಾಸಕರು ಅಸಭ್ಯವಾಗಿ ನಡೆದುಕೊಂಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ರಾಜ್ಯದ ಜನತೆ ಮುಂದೆ ಶಿಸ್ತಿನ, ಸಂಸ್ಕಾರ ಹಾಗೂ ಸಂಸ್ಕೃತಿಯುಳ್ಳ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯವರು ಊಸರವಳ್ಳಿಗಳು ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ಕೇಂದ್ರ ಸಚಿವರಾಗಿದ್ದ ದಿವಗಂತ ಅನಂತಕುಮಾರ್‌ ಅವರ ಮನವಿಯಂತೆ ನಮ್ಮ ಸರ್ಕಾರ ಈ ಹಿಂದೆ ರಾಜ್ಯ ಕಾರ್ಯಕಾರಿಣಿಗೆ ಆಗಮಿಸಿದ್ದ ಬಿಜೆಪಿ ನಾಯಕರಿಗೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಅತಿಥಿಗಳೆಂದು ಪರಿಗಣಿಸಿ, ಕ್ರಮವಹಿಸಲಾಗಿತ್ತು. ಇದನ್ನು ಆ ಪಕ್ಷದ ನಾಯಕರು ಮರೆತಂತೆ ಕಾಣುತ್ತಿದೆ. ಅಧಿಕಾರ ಇಲ್ಲದೆ, ಬಿಜೆಪಿಗರು ಹತಾಶೆಗೊಳಗಾಗಿ ಈ ರೀತಿ ಗೂಂಡಾ ವರ್ತನೆ ತೋರುತ್ತಿದ್ದಾರೆ. ಬಿಜೆಪಿಗರಿಗೆ ಗೂಂಡಾ ವರ್ತನೆ ಹೊಸತೇನು ಅಲ್ಲ. ಇಂತಹ ಪುಂಡಾಟಕ್ಕೆ ನಾವು ಹೆದರುವುದಿಲ್ಲ ಎಂದರು.

ನನ್ನೊಳಗೊಂಡಂತೆ ಐವರು ಪಕ್ಷೇತರರು ಸೇರಿ 11 ಶಾಸಕರನ್ನು ಅಂದಿನ ಸ್ಪೀಕರ್‌ ರಾತ್ರೋರಾತ್ರಿ ಅನರ್ಹ ಮಾಡಿದ್ದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣೀಭೂತರಾದ ನಮ್ಮನ್ನೇ ಅನರ್ಹ ಮಾಡಿದ್ದರು. ನಾವು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಬಂದಿದ್ದೆವು. ಇಂದು ಪೀಠಕ್ಕೆ ಅಗೌರವ ತೋರಿದ ಪರಿಣಾಮ ಬಿಜೆಪಿ ಶಾಸಕರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದಾರೆ. ಆ ಪಕ್ಷದಂತೆ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಮಳೆಯ ಅಭಾವ ಇದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಸದನದಲ್ಲಿ ಬಿಜೆಪಿ ಶಾಸಕರು ಚರ್ಚೆ ನಡೆಸಲಿ. ಅದನ್ನು ಬಿಟ್ಟು ಸದನದಲ್ಲಿ ಗೂಂಡಾ ವರ್ತನೆ ತೋರುವುದು ಸಲ್ಲ ಎಂದು ಹೇಳಿದರು.

 

ಎಚ್ಡಿಕೆಗೆ ಎನ್‌ ಡಿಎನೂ ಇಲ್ಲ, ಇಂಡಿಯಾನೂ ಇಲ್ಲ;
ಪೀಠಕ್ಕೆ ಆಗೌರವ ತೋರಿದ ಬಿಜೆಪಿ ಶಾಸಕರನ್ನು ಅಮಾನತುಪಡಿಸಿದ್ದ ಕ್ರಮವನ್ನು ವಿರೋಧಿಸಿ ಸದನದಿಂದ ಹೊರ ನಡೆದ ಜೆಡಿಎಸ್‌ ನಡೆಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್‌ ತಂಗಡಗಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎನ್‌ಡಿಎನೂ ಇಲ್ಲ. ಇತ್ತ ಇಂಡಿಯಾ ಕೂಡ ಇಲ್ಲ ಎಂದು ಲೇವಡಿ ಮಾಡಿದರು.

ಎನ್‌ಡಿಎ ಸಭೆಗೆ ಜೆಡಿಎಸ್‌ ಪಕ್ಷವನ್ನು ಆಹ್ವಾನಿಸುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಕಾಯುತ್ತಿದ್ದರು. ಆದರೆ ಸಭೆಗೆ ಆಹ್ವಾನ ಬರಲಿಲ್ಲ. ಹೀಗಾಗಿ ಆ ಪಕ್ಷಕ್ಕೆ ಎನ್‌ಡಿಎನೂ ಇಲ್ಲ, ಇತ್ತ ಇಂಡಿಯಾನೂ ಇಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: