ದಸರಾ ಉತ್ಸವ: ರೋಮಾಂಚನಗೊಳಿಸಿದ ರಕ್ತರಾತ್ರಿ ನಾಟಕ

Get real time updates directly on you device, subscribe now.

ಗಂಗಾವತಿ: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ-೨೦೨೪ರ ಅಂಗವಾಗಿ ಪುರಭವನದಲ್ಲಿನ (ಟೌನ್‌ಹಾಲ್) ವೇದಿಕೆಯಲ್ಲಿ ಅಕ್ಟೋಬರ್ ೧೧ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ವಿಜಯನಗರದ ವಿಶ್ವಜ್ಯೋತಿ ಕಲಾ ಟ್ರಸ್ಟ್‌ನ ಕಲಾವಿದರು, ನಿರ್ದೇಶಕ ತಿಪ್ಪೆಸ್ವಾಮಿ ಸೂಲದಹಳ್ಳಿ ಇವರ ನೇತೃತ್ವದಲ್ಲಿ ಕಂದಗಲ್ ಹನುಮಂತರಾಯ ವಿರಚಿತ ರಕ್ತರಾತ್ರಿ ಪೌರಾಣಿಕ ನಾಟಕದ ಆಯ್ದ ಸನ್ನಿವೇಶಗಳ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ರಮೇಶ್ ಹಂಚಿನಮನೆ (ಭೀಮ), ಡಿ.ಉಮಾಶಂಕರ ವಕೀಲರು (ದುರ್ಯೋಧನ), ಚಲನಚಿತ್ರ ನಟ ನಾಗರಾಜ್ ಇಂಗಳಗಿ (ಶಕುನಿ), ಡಿ. ರಘುನಾಥ ಭೀಷ್ಣಹಳ್ಳಿ (ಅಶ್ವತ್ಥಾಮ), ನಾಗರಾಜ್ ಹಿರೇಕುಂಬಳಗುಂಟೆ (ಕೃಷ್ಣನ) ಪಾತ್ರದಲ್ಲಿ ತಮ್ಮ ಕಂಚಿನ ಕಂಠದ ಸಂಭಾಷಣೆ, ಹಾವಭಾವ ಭಂಗಿಯಿಂದ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ತೋಟದ ಮನೆ ಮಾರುತೆಪ್ಪ (ಅರ್ಜುನ), ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವೀಣಾ ಆದೋನಿ (ದ್ರೌಪದಿ), ಕಾಶಿಬಾಯಿ ದಾವಣಗೆರೆ (ಉತ್ತರೆ), ನಾಗರಾಜ್ ಗೊಲ್ಲರಹಳ್ಳಿ (ಧರ್ಮರಾಯ), ಹೆಚ್.ಶಿವಮೂರ್ತಿ ನೆಲಬೊಮ್ಮನಹಳ್ಳಿ (ಕರ್ಣ) ಇವರು ಪ್ರೇಕ್ಷಕರ ಚಪ್ಪಾಳೆ ಸಿಳ್ಳೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ನೂರಾರು ಪ್ರದರ್ಶನ ನೀಡಿ ಜನಮಾನಸದಲ್ಲಿ ಉಳಿದಿರುವ ಕಲಾವಿದರು ಮೈಸೂರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಸಂಗೀತ ನಿರ್ದೇಶಕ ಕೆ.ತಿಪ್ಪೆಸ್ವಾಮಿ ಸೂಲದಹಳ್ಳಿ ಇವರ ಸಂಗೀತ ನಾಟಕಕ್ಕೆ ಮೆರಗು, ಪ್ರೇಕ್ಷಕರಲ್ಲಿ ಬೆರಗುಮೂಡಿಸಿತು. ತಬಲಾ ಸಾತ್ ಪಿ.ಚಂದ್ರಶೇಖರ್ ದಾವಣಗೆರೆ ಇವರು ಅತ್ಯುತ್ತಮವಾಗಿ ತಬಲಾ ನುಡಿಸುವ ಮುಖೇನ ನಾಟಕದ ಕಳೆ ಹೆಚ್ಚಿಸಿದರು. ಒಟ್ಟಾರೆ ಮೈಸೂರಲ್ಲಿ ಉತ್ತರ ಕರ್ನಾಟಕದ ಕಲಾವಿದರು ಸೈ ಎನಿಸಿಕೊಳ್ಳುವ ಮೂಲಕ ಘನತೆ ಹೆಚ್ಚಿಸಿದರು.

 

Get real time updates directly on you device, subscribe now.

Comments are closed.

error: Content is protected !!