ಬಿಜೆಪಿ ಮಹಿಳೆಯರು ಮತ್ತು ಶ್ರಮಿಕ ವರ್ಗದ ವಿರೋಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಜು 19: ಬಿಜೆಪಿ ಸೈದ್ಧಾಂತಿಕವಾಗಿಯೇ ಮಹಿಳೆಯರು ಮತ್ತು ಶ್ರಮಿಕ ವರ್ಗದ ವಿರೋಧಿ. ಈ ವರ್ಗ ಆರ್ಥಿಕವಾಗಿ ಸಭಲರಾಗುವುದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ಇಡೀ ದೇಶದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ ಏಕೈಕ ರಾಜ್ಯ ಕರ್ನಾಟಕ. ಬಿಜೆಪಿಯ ಬುರುಡೆ ದಾಸರು ಬುರುಡೆ ಬುಡುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ.
ಅನ್ನಭಾಗ್ಯ ಯೋಜನೆ ಮೋದಿಯವರದ್ದು ಎಂದು ಬಿಜೆಪಿಯವರು ಬುರುಡೆ ಬಿಡುತ್ತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ? ಅಲ್ಲೆಲ್ಲಾ ಉಚಿತ ಅಕ್ಕಿ ಕೊಡುವ ಕಾರ್ಯಕ್ರಮಗಳು ಏಕೆ ಇಲ್ಲ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಕೊಡುತ್ತಿದ್ದೇವೆ. ಇಡಿ ದೇಶದಲ್ಲಿ 30 ಸಾವಿರ ಕೋಟಿಯ ಒಂದೇ ಯೋಜನೆ ಜಾರಿಗೆ ತಂದ ಏಕೈಕ ರಾಜ್ಯ ನಮ್ಮ ಕರ್ನಾಟಕ. ಒಂದು ಕೋಟಿ 28 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಇದನ್ನು ಸಹಿಸಲಾರದೆ ಅತ್ತೆ-ಸೊಸೆ, ಅತ್ತಿಗೆ- ನಾದಿನಿ ಜಗಳ ಹುಟ್ಟು ಹಾಕ್ತಾ ಬಿಜೆಪಿಯವರು ಕಿರಿಕ್ ಮಾಡ್ತಾ ಇದಾರೆ. ಇವರಿಗೆ ಮನುಷ್ಯತ್ವ ಇದೆಯಾ ಎಂದು ಸಭೆಯಲ್ಲಿದ್ದ ಮಹಿಳೆಯರಿಗೆ ಕೇಳಿದರು. ಮಹಿಳೆಯರು ಇಲ್ಲ ಎಂದು ಕೂಗಿದರು.
ಶಾಸಕರಾದ ರಿಜ್ವಾನ್ ಹರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಡಾ. ಹೆಚ್. ಸಿ. ಮಹದೇವಪ್ಪ, ರಹೀಂ ಖಾನ್, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಹಲವು ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಭಾಷಣದ ಹೈಲೈಟ್ಸ್
ಗ್ಯಾರಂಟಿ ಜಾರಿ ಸಾಧ್ಯವೇ ಇಲ್ಲ ಎಂದು ಬಿಜೆಪಿ-ಜೆಡಿಎಸ್ ಅಂದುಕೊಂಡಿದ್ದರು. ಆದರೆ ನಾನು ಮತ್ತು ಡಿ.ಕೆ.ಶಿವಕುಮಾರ್ ಸೇರಿ ಇದನ್ನು ಸಾಧ್ಯ ಮಾಡಿ ತೋರಿಸಿದ್ದೀವಿ
ಆರ್ಥಿಕ ಶಕ್ತಿ ಇಲ್ಲದವರಿಗೆ ವಿಶೇಷ ಗ್ಯಾರಂಟಿಗಳ ಮೂಲಕ ಆರ್ಥಿಕ ಶಕ್ತಿ ತುಂಬಿದರೆ ಅಸಮಾನತೆ, ತಾರತಮ್ಯ ನಿವಾರಣೆ ಆಗ್ತದೆ
ನೂರಾರು ವರ್ಷಗಳ ಕಾಲ ಶೂದ್ರರಂತೆ ಮಹಿಳೆಯರೂ ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಆರ್ಥಿಕ ಚೈತನ್ಯ ಬಂದರೆ ಸಮಾಜದಲ್ಲಿ ಚಲನೆ ಶುರುವಾಗುತ್ತದೆ
ಮಹಿಳೆಯರು ಆರ್ಥಿಕವಾಗಿ ಸಭಲರಾಗಿದ್ದರೆ ಆ ದೇಶ ಮುಂದುವರೆದಿದೆ ಎಂದು ಅರ್ಥ
ಮಹಿಳೆಯರ ರಾಜಕೀಯ ಮೀಸಲಾತಿ ಜಾರಿಗೆ ಬಂದಿದ್ದು ಕಾಂಗ್ರೆಸ್ ನಿಂದ. ಬಿಜೆಪಿ ಮಹಿಳೆಯರ ರಾಜಕೀಯ ಮೀಸಲಾತಿ ಪರವಾಗಿ ಯಾವತ್ತೂ ಧ್ವನಿ ಎತ್ತಿಲ್ಲ
ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಆದರೂ ನಾವು ಮಂಡಿಸಿದ್ದ ಮಹಿಳಾ ಮೀಸಲಾತಿ ಬಿಲ್ ಅನ್ನು ಪಾಸ್ ಮಾಡಿಲ್ಲ ಏಕೆ?
ಬಡವರ ಅಕ್ಕಿಗೆ ಕಲ್ಲು ಹಾಕಿದ ಬಿಜೆಪಿ, ಉಚಿತ ವಿದ್ಯುತ್ ಕೊಟ್ಟರೆ ಅದರ ದುಂದುವೆಚ್ಚ ಮಾಡಿ ಎಂದು ಕುಮ್ಮಕ್ಕು ಕೊಡುವ ಬಿಜೆಪಿ ಜನದ್ರೋಹಿ ಅಲ್ಲವಾ?
ಕೈ ಎತ್ತಿ ನೋಡೋಣ
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, “ಉಚಿತ ಬಸ್ ಪ್ರಯಾಣ ಮಾಡಿದವರು ಯಾರಿದ್ದೀರಿ ಕೈ ಎತ್ತಿ” ಎಂದರು. ಸಭೆಯಲ್ಲಿದ್ದ ಎಲ್ಲಾ ಮಹಿಳೆಯರೂ ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಶಕ್ತಿ ಯೋಜನೆ ಒಳ್ಳೇದೋ ಅಲ್ವೋ ಹೇಳಿ” ಎಂದು ಕೇಳಿದರು. ಮಹಿಳೆಯರು, ಒಳ್ಳೆ ಕಾರ್ಯಕ್ರಮ. ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಎಂದು ಕೂಗಿದರು.
Comments are closed.