ಕೇಂದ್ರ ಪುರಷ್ಕೃತ ಯೋಜನೆಗಳು ಸಮರ್ಪಕ ಅನುಷ್ಠಾನವಾಗಲಿ : ಕೆ.ರಾಜಶೇಖರ ಹಿಟ್ನಾಳ

Get real time updates directly on you device, subscribe now.

 ಕೇಂದ್ರ ಪುರಷ್ಕೃತ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಅಕ್ಟೋಬರ್ 3ರಂದು ನಡೆದ ಕೇಂದ್ರ ಹಾಗೂ ಕೇಂದ್ರ ಪುರಷ್ಕೃತ ಯೋಜನೆಗಳ 2024-25ನೇ ಸಾಲಿನ 2ನೇ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತಕ ಸಾಲಿನಲ್ಲಿ ಉತ್ತಮವಾಗಿ ಮಳೆ ಸುರಿದಿವೆ. ಅತಿಯಾದ ಮಳೆ ಬಿದ್ದು ಅಥವಾ ಮಳೆ ಕೊರತೆಯಿಂದಾಗಿ ತೊಂದರೆ ಎದುರಿಸುವ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಹಾಗೂ ಪ್ರಧಾನಮಂತ್ರಿ ಕೃಷಿ ಸಮ್ಮಾನ ನಿಧಿ ಯೋಜನೆ(ಪಿಎಂಕಿಸಾನ್) ಯೋಜನೆಗಳು ಸಹಕಾರಿಯಾಗಲಿವೆ. ಬೆಳೆನಷ್ಟು ಅನುಭವಿಸುವ ರೈತರು ಹೆಸರು ನೋಂದಾಯಿಸಿ ವಿಮಾ ಸೌಕರ್ಯ ಪಡೆಯಲು ಅನುಕೂಲವಾಗುವಂತೆ ಈ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಂಸದರು, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಮತ್ರಿ ಫಸಲ್ ಬಿಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಮುಂಗಾರಿನಲ್ಲಿ 7847 ಲಕ್ಷ ಮತ್ತು ಹಿಂಗಾರಿನಲ್ಲಿ 630 ಲಕ್ಷ ರೂ ಸೇರಿ ಒಟ್ಟು 84.78 ಕೋಟಿ ರೂ.ನಷ್ಟು ಪರಿಹಾರ ಧನ ಬಿಡುಗಡೆಯಾಗಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಒಟ್ಟು 76,337 ರೈತರಿಗೆ 84.78 ಕೋಟಿ ರೂ. ಬೆಳೆ ಪರಿಹಾರವು ರೈತರ ಖಾತೆಗೆ ಜಮಾ ಆಗಿದೆ. 2024-25ನೇ ಸಾಲಿನಲ್ಲಿ 74,119 ರೈತ ಫಲಾನುಭವಿಗಳು ಹೆಸರು ನೋಂದಾಯಿಸಿದ್ದಾರೆ. 2024-25ನೇ ಸಾಲಿನಲ್ಲಿ ಒಟ್ಟು 3063.68 ಲಕ್ಷ ರೂ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿಯು 1,53,184 ರೈತರ ಖಾತೆಗೆ ನೇರವಾಗಿ ಜಮಾ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಸಭೆಗೆ ಮಾಹಿತಿ ನೀಡಿದರು.
ಕೇಂದ್ರ ಪುರಷ್ಕೃತ ವಿವಿಧ ಲಸಿಕಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನಗೊಳ್ಳಲು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸಂಸದರು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕಾಲುಬಾಯಿ ಲಸಿಕಾ, ಕರಳು ಬೇನೆ ಲಸಿಕಾ, ಪಿಪಿಆರ್ ಲಸಿಕಾ ಕಾರ್ಯಕ್ರಮ ಮತ್ತು ಕಂದು ರೋಗದ ವಿರುದ್ಧ ಲಸಿಕೆಗೆ ಮತ್ತು ರಾಷ್ಟಿçÃಯ ಜಾನುವಾರು ಮಿಷನ್ ಯೋಜನೆಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈಗಾಗಲೇ ಗುರಿ ನಿಗದಿಪಡಿಸಿದ್ದು, ವಾರ್ಷಿಕ ಗುರಿಯನುಸಾರ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪಶು ಸಂಗೋಪನೆಯ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಯ್ಯ ಅವರು ಸಭೆಗೆ ತಿಳಿಸಿದರು.
ಕಾಲೇಜುಗಳಲ್ಲಿ ತರಬೇತಿ ಕಾರ್ಯಕ್ರಮ ರೂಪಿಸಿ : ಜಿಲ್ಲೆಯಲ್ಲಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಕಾರ್ಯವಾಗಬೇಕಿದೆ. ಅವರ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ಕೊಡುವ ಕಾರ್ಯಕ್ರಮಳನ್ನು ರೂಪಿಸಲು ಯಾವುದೇ ಹಣಕಾಸಿನ ಕೊರತೆಯಿಲ್ಲ. ಅಲ್ಪಸ್ವಲ್ಪ ಜಮೀನು ಹೊಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಸಹ ಕಡಿಮೆ ಜಮೀನಿನಲ್ಲಿ ಅಧೀಕ ಲಾಭ ತರುವ ತೋಟಗಾರಿಕಾ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ, ಕೃಷಿ ಇಲಾಖೆಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ರೂಪಿಸಬೇಕು. ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಮುಂದೆ ಬರುವ ನಿಟ್ಟಿನಲ್ಲಿ ಕೇಂದ್ರ ಪುರಷ್ಕೃತ ತೋಟಗಾರಿಕಾ ಯೋಜನೆಗಳ ಬಗ್ಗೆ ವಿಶೇಷವಾಗಿ ಕೊಪ್ಪಳ ಜಿಲ್ಲೆಯ ಯುವ ರೈತರಿಗೆ ಮಾರ್ಗದರ್ಶನ ಮಾಡಬೇಕು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರಿಗೆ ಸಂಸದರು ನಿರ್ದೇಶನ ನೀಡಿದರು.
ಕಡಿಮೆ ಜಮೀನಿನಲ್ಲಿ, ಕಡಿಮೆ ನೀರಿನಲ್ಲಿ ತೋಟಗಾರಿಕಾ ಬೆಳೆ ಬೆಳೆದು ಸಾಕಷ್ಟು ಲಾಭ ಪಡೆಯಲು ತೋಟಗಾರಿಕಾ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಪದವಿ ಪೂರ್ಣಗೊಳಿಸಿ ಹೊರಹೋಗುವ ಕೊಪ್ಪಳ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗೆ ಇನ್ಮುಂದೆ ಕಾಲೇಜುಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ತರಬೇತಿ ವೇಳೆ ಯುವಕರಿಗೆ ಮಾರುಕಟ್ಟೆಯ ಕೌಶಲತೆಯ ಬಗ್ಗೆ ಸಹ ತಿಳಿಸಲಾಗುವುದು ಎಂದು ಉಕ್ಕುಂದ ಅವರು ತಿಳಿಸಿದರು.
ಪಿಡಿಓಗಳಿಗೆ ವಿಶೇಷ ಸೂಚನೆ ನೀಡಿ : ಎಲ್ಲ ಊರುಗಳಲ್ಲಿ ಡಂಗುರ ಸಾರಿ ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಿದ 580 ಕಡೆಗಳಲ್ಲೂ ದ್ರವ ತ್ಯಾಜ್ಯ ವಿಲೇವಾರಿ ಘಟಕಗಳು ನಿರ್ಮಾಣವಾಗುವ ನಿಟ್ಟಿನಲ್ಲಿ ವಿಶೇಷ ಕ್ರಮವಹಿಸಲು ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ಹೋಗಬೇಕು. ಎಲ್ಲ ಗ್ರಾಮ ಪಂಚಾಯತ್‌ಗಳ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸಲು ಕ್ರಮ ವಹಿಸಬೇಕು ಎಂದು ಸಂಸದರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
2024-25 ನೇ ಸಾಲಿನಲ್ಲಿ ಏಪ್ರೀಲ್‌ನಿಂದ ಆಗಸ್ಟ್ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 153 ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಎರಡು ಗೋಬರ್ ಧನ ನಿರ್ಮಾನ ಮಾಡಲಾಗಿದೆ. 5000 ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಗುರಿಯ ಪೈಕಿ ಇದುವರೆಗೆ 4308 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಸಭೆಗೆ ಮಾಹಿತಿ ನೀಡಿದರು.
ತಂಡವಾಗಿ ಕೆಲಸ ಮಾಡಿ : ಸ್ವಚ್ಛ ಗ್ರಾಮ ಎಂದು ಹೆಸರಾದ ಕಾಮನೂರದಂತಹ ಎರಡು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಶಾಲಾ ಕಾಂಪೌAಡ್ ವಾಲ್ ನಿರ್ಮಾಣ, ಶಾಲಾ ಕೊಠಡಿಗಳ ದುರಸ್ತಿ, ಶಾಲಾ ಶೌಚಾಲಯಗಳ ನಿರ್ಮಾಣದಂತಹ ಕಾರ್ಯವನ್ನು ಜನಮೆಚ್ಚುವ ಹಾಗೆ ನಡೆಸಬೇಕು. ನರೇಗಾ ಯೋಜನೆಯ ಬಗ್ಗೆ ಜನರಿಗೆ ವಿಶ್ವಾಸ ಬರಬೇಕು. ಕಾಮಗಾರಿ ನಡೆಯುವ ಹಳ್ಳಿಗಳಿಗೆ ಪ್ರತಿ 15 ದಿನಕ್ಕೊಮ್ಮೆ ಭೇಟಿ ನೀಡಬೇಕು. 15 ದಿನಗಳೊಳಗೆ ಇದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ನವೆಂಬರ್ 1ಕ್ಕೆ ಆ ಎರಡು ಹಳ್ಳಿಗಳಲ್ಲಿ ಭೂಮಿ ಪೂಜಾ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಇದಕ್ಕಾಗಿ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ 2024ರ ಆಗಸ್ಟ್ ಮಾಹೆವರೆಗೆ ಮಹಾತ್ಮ ಗಾಂಧೀ ನರೇಗಾ ಯೋಜನೆಯಡಿಯ ಮಾನವ ದಿನಗಳ ಸೃಜನೆಯು ವಾರ್ಷಿಕ ಗುರಿಗೆ ಶೇ.69.39ರಷ್ಟಾಗಿದೆ. ಒಟ್ಟು ಲಭ್ಯವಿರುವ 27182.40 ಲಕ್ಷ ರೂ.ಗಳ ಅನುದಾನದ ಪೈಕಿ ಇದುವರೆಗೆ 173 ಕೋಟಿ ರೂ.ಗಳ ಅನುದಾನವನ್ನು ಬಳಸಲಾಗಿದೆ. ಹೆಸರು ನೋಂದಾಯಿಸಿದ 3,11,120 ಕುಟುಂಬಗಳ ಪೈಕಿ 2,23,891 ಉದ್ಯೋಗ ಚೀಟಿಗಳು ಸಕ್ರಿಯವಾಗಿವೆ. ಪರಿಶಿಷ್ಟ ಜಾತಿಗೆ 51,801 ಮತ್ತು ಪರಿಶಿಷ್ಟ ಪಂಗಡಕ್ಕೆ 39,499 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಮಾತನಾಡಿ, ಕೃಷಿ ಇಲಾಖೆಯ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಹಿಂಗಾರು ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ರೈತರಿಗೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳಿಗೆ ಬರುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಉತ್ತಮ ಇಳುವರಿ ಕೊಡುವ ಬೆಳೆಗಳು, ಬೀಜೋಪಚಾರ ಸೇರಿದಂತೆ ನಾನಾ ವಿಷಯಗಳ ಬಗ್ಗೆ ರೈತರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ರೇಷ್ಮೆ, ತೋಟಗಾರಿಕಾ ಬೆಳೆಗಳ ಬಗ್ಗೆ ಸಾಕಷ್ಟು ರೈತರಲ್ಲಿ ಮಾಹಿತಿ ಕೊರತೆ ಇದೆ. ಹೀಗಾಗಿ ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಯ ಯೋಜನೆಗಳ ಜನಜಾಗೃತಿ ಕಾರ್ಯಕ್ರಮಗಳು ಪ್ರತಿಯೊಂದು ಹಳ್ಳಿಗಳಲ್ಲಿ ನಡೆಯುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದು ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಮಾತನಾಡಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದಾಗಿ ಕೇಂದ್ರ ಸರ್ಕಾರದ ಮಹತ್ವದ ಸ್ವಚ್ಛ ಭಾರತ ಮಿಷನ್ ಯೋಜನೆಯು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನವಾಗಬೇಕು. ಗುರಿಯನುಸಾರ 5000 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾದರಷ್ಟೇ ಸಾಲದು ಶೌಚಾಲಯಗಳ ಬಳಕೆ, ನೈರ್ಮಲ್ಯದ ಬಗ್ಗೆ ಗ್ರಾಮಸ್ಥರಿಗೆ ನಿರಂತರವಾಗಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳಾಗಬೇಕು. ಕೆಲವು ಹಳ್ಳಿಗಳಲ್ಲಿ ಮದ್ಯೆ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದರ ಬಗ್ಗೆ ಬಂದ ದೂರುಗಳನ್ನು ಅಬಕಾರಿ ಮತ್ತು ಪೊಲೀಸ್ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು. ವಿಶೇಷವಾಗಿ ಬಸ್ ನಿಲ್ದಾಣಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮುದಾಯ ನೈರ್ಮಲ್ಯ ಸಂಕೀರ್ಣ ಘಟಕಗಳ ನಿರ್ಮಾಣಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!