ಕನಕದಾಸರನ್ನು ಭಕ್ತಿಗೆ ಸೀಮಿತಗೊಳಿಸಿ ವೈಚಾರಿಕತೆ ಮರೆಯಬಾರದು: ಕೆ.ವಿ.ಪ್ರಭಾಕರ್
ಜಾತಿ ತಾರತಮ್ಯದ ನೋವುಂಡು ನೋವನ್ನೇ ಹಾಡಾಗಿಸಿದವರು ಕನಕದಾಸರು: ಕೆ.ವಿ.ಪಿ
ಕೋಲಾರ ಸೆ15: ಕನಕದಾಸರನ್ನು ಭಕ್ತಿಗೆ ಸೀಮಿತಗೊಳಿಸಿ ವೈಚಾರಿಕತೆ ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು.
ರಾಜ್ಯ ಕನಕ ನೌಕರರ ಸಂಘ , ಜಿಲ್ಲಾ ಮತ್ತು ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ವಿಶ್ವ ಪ್ರಜಾಪ್ರಭುತ್ವ ದಿನ. ಇದೇ ದಿನ ಕನಕ ಸಮುದಾಯದಿಂದ ಕಾರ್ಯಕ್ರಮ ನಡೆಯುತ್ತಿದೆ. ಕನಕದಾಸರು ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಥಾಪಿಸಲು ಶ್ರಮಿಸಿದ್ದರು ಎಂದು ವಿವರಿಸಿದರು.
ದಾಸಶ್ರೇಷ್ಠ ಕನಕದಾಸರು ಅಂದರೆ ನಮಗೆಲ್ಲಾ ಭಕ್ತಿ ಬರುತ್ತದೆ.
ಆದರೆ ಕನಕದಾಸರ ಬದುಕಿನ ಸಂದೇಶ ಕೇವಲ ಅವರನ್ನು ಭಕ್ತಿಯಿಂದ ಪೂಜಿಸುವುದಾಗಿರಲಿಲ್ಲ. ಕನಕದಾಸರು ಸಮಾಜದ ನೋವನ್ನು ಹಾಡಾಗಿ ಹಾಡಿದರು. ಸಮಾಜದಲ್ಲಿನ ತಾರತಮ್ಯಕ್ಕೆ ತಮ್ಮ ವಚನಗಳ ಮೂಲಕ ಕನ್ನಡಿ ಹಿಡಿದರು.
“ಕುಲ ಕುಲವೆಂದು ಬಡಿದಾಡದಿರಿ…” ಎಂದು ಕನಕರು ಹಾಡುವ ಮೊದಲು ಕುಲದ ಅವಮಾನವನ್ನು ಅನುಭವಿಸಿದ್ದರು. ಈ ಅವಮಾನವನ್ನು ಅಳಿಸಲು ಬದುಕಿನುದ್ದಕ್ಕೂ ಶ್ರಮಿಸಿದರು.
ಹೀಗಾಗಿ ಭಕ್ತಿಯ ಜೊತೆಗೆ ವೈಚಾರಿಕ ಹಿನ್ನೆಲೆಯಲ್ಲಿ ನಾವು ಕನಕರನ್ನು ಅರಿತರೆ ಮಾತ್ರ ಕನಕದಾಸರು ಒಬ್ಬ ಬಂಡಾಯಗಾರರು ಎನ್ನುವುದು ನಮಗೆ ಅರ್ಥ ಆಗುತ್ತದೆ.
ಕನಕರನ್ನು ಪೂಜಿಸುವ ಜೊತೆಗೆ ಅವರೊಳಗಿನ ಪ್ರತಿಭಟನಾ ಶಕ್ತಿಯನ್ನು ನಾವು ಗ್ರಹಿಸಬೇಕಿದೆ.
ಕನಕರೆಂದರೆ ಭಕ್ತಿ, ಭಾವ, ತನ್ಮಯತೆ ಮಾತ್ರವೇ ಎಂದುಕೊಂಡರೆ ಸಾಲದು. ಅವರ ಹೋರಾಟ, ವೈಚಾರಿಕ ಚಿಂತನೆ, ಚಳವಳಿಗಳ ಬಗ್ಗೆ ಹೆಚ್ಚೆಚ್ವು ತಿಳಿಯಬೇಕು. ಹೆಚ್ಚೆಚ್ಚು ಮಾತಾಡಬೇಕು.
ಕನಕರ ಹೋರಾಟದ ಪರಂಪರೆಯನ್ನೇ ನಾಶಮಾಡುವ ಹುನ್ನಾರದ ಭಾಗವಾಗಿ ಅವರನ್ನು ಕೇವಲ ಭಕ್ತಿಗೆ ಸೀಮಿತಗೊಳಿಸುತ್ತಿದ್ದಾರೆ. ಇದು ನಮ್ಮ ಇವತ್ತಿನ ಮತ್ತು ಮುಂದಿನ ಪೀಳಿಗೆಯಲ್ಲಿ ಹೋರಾಟವನ್ನು ಮರೆಸುವ ತಂತ್ರವೇ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಗುರುಪೀಠದ ಜಗದ್ಗುರು ಈಶ್ವರಾನಂದಪುರಿ ಶ್ರೀಗಳ ದಿವ್ಯಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಬೈರತಿ ಸುರೇಶ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ವರ್ತೂರು ಪ್ರಕಾಶ್, ಕೊಪ್ಪಳ ವಿಶ್ವ ವಿದ್ಯಾಲಯದ ವಿಸಿ ಬಿ.ಕೆ.ರವಿಯವರು, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಸೇರಿ ಸಮುದಾಯದ ಹಲವಾರು ಮುಖಂಡರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.