ನೀರಿನೊಳಗೆ ಕೆಲಸ ಮಾಡುವ ತಂಡ ಸಿದ್ಧ: ಸಚಿವ ಶಿವರಾಜ ತಂಗಡಗಿ

Get real time updates directly on you device, subscribe now.

ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ ಗೇಟ್ ಮುರಿದಿರುವ ಹಿನ್ನೆಲೆ

– ಜಿಂದಾಲ್ ನಿಂದ ಸೋಮವಾರ ರಾತ್ರಿಯೇ ಹೊಸಪೇಟೆಗೆ ಆಗಮಿಸಿರುವ ಪರಿಣಿತರ ತಂಡ

– ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚೆ ನಡೆಸಿರುವ ಸಚಿವ ತಂಗಡಗಿ

– ನೀರನ್ನು ಉಳಿಸಲು ಎಲ್ಲಾ ರೀತಿಯ ಪ್ರಯೋಗ ಮಾಡಲು ಸಿದ್ಧ

– ವಿಚಾರ ತಿಳಿದಾಗಿನಿಂದ ಸ್ಥಳದಲ್ಲಿಯೇ ಮೊಕ್ಕಂ ಹೂಡಿರುವ ಸಚಿವ ತಂಗಡಗಿ

ಹೊಸಪೇಟೆ: ಆ.12

ತುಂಗಭದ್ರ ಅಣೆಕಟ್ಟೆಯಲ್ಲಿರುವ ನೀರನ್ನು ಉಳಿಸುವ ಉದ್ದೇಶದಿಂದ ನೀರಿನೊಳಗೆ ಪ್ಲೇಟ್ ಇಳಿಸಲು ನಿರ್ಧರಿಸಲಾಗಿದ್ದು, ಪರಿಣಿತ ತಂಡ ಒಂದನ್ನು ಸ್ಥಳಕ್ಕೆ ಕರೆಯಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಶಿವರಾಜ್ ತಂಗಡಗಿ ಅವರು ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ 98,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಪರಿಣಾಮವಾಗಿ ಎರಡುವರೆ ಅಡಿ ಗೇಜ್ ಕಡಿಮೆಯಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ನದಿಗೆ 1.40 ಲಕ್ಷ ಕ್ಯೂ ಸೆಕ್ ನೀರನ್ನು ಬಿಡಲಾಗುತ್ತಿದೆ ಎಂದರು.

ಒಂದು ತಂಡ ನೀರು ಕಡಿಮೆಯಾದ ಬಳಿಕ ಗೇಟ್ ಅಳವಡಿಕೆ ಬಗ್ಗೆ ಸಲಹೆ ನೀಡಿದೆ. ನೀರನ್ನು ಉಳಿಸುವ ಉದ್ದೇಶದಿಂದ ನಾನು ಹಾಗೂ ಸಂಸದರು ತಡ ರಾತ್ರಿವರೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಂದಾಲ್ ನಿಂದ ಪರಿಣಿತ ತಂತ್ರಜ್ಞರು ಹಾಗೂ ಇಂಜಿನಿಯರ್ ಗಳ ತಂಡವನ್ನು ಸೋಮವಾರ ರಾತ್ರಿಯೇ ಕರೆಸಿಕೊಂಡಿದ್ದೇವೆ. ಆ ತಂಡ ನೀರು ಖಾಲಿಯಾಗದಂತೆ ನೀರಿನೊಳಗೆ ಕೆಲಸ ಮಾಡುವ ಬಗ್ಗೆ ಸಲಹೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಮುಖ್ಯಮಂತ್ರಿಗಳ ಜೊತೆ ಕೂಡ ರಾತ್ರಿಯೇ ಚರ್ಚೆ ನಡೆಸಿದ್ದು ಅವರು ಕೂಡ ಕೆಲವೊಂದು ಸಲಹೆ ನೀಡಿದ್ದು ಜಿಂದಾಲ್ ತಾಂತ್ರಿಕ ತಂಡದೊಂದಿಗೂ ಫೋನ್ನಲ್ಲಿ ಚರ್ಚಿಸಿದ್ದಾರೆ ಎಂದು ತಿಳಿಸಿದರು.

ಅಣೆಕಟ್ಟೆಯ ಮೇಲೆ ಕೆಲಸ ಮಾಡುವುದರಿಂದ ಕ್ರೇನ್ ನನ್ನು ಬಳಕೆ ಮಾಡಬೇಕಾಗುತ್ತದೆ. ಇದರಿಂದ ಸೇತುವೆ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಷ್ಟು ತೂಕದ ಕ್ರೇನನ್ನು ಬಳಸಬೇಕು ಎಂಬುದರ ಬಗ್ಗೆಯೂ ಕೂಡ ಚರ್ಚೆ ನಡೆದಿದೆ. ಈ ಸಂಬಂಧ ಪ್ಲೇಟ್ ಸಿದ್ದಪಡಿಸಲಾಗುತ್ತಿರುವ ಸ್ಥಳಕ್ಕೆ ಕೂಡ ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪರಿಣಿತ ತಜ್ಞ ಕನ್ನಯ್ಯ ನಾಯ್ಡು ಅವರು ಡಿಸೈನ್ ಕಳಿಸಿದ್ದು ಅದರಂತೆ ಸ್ಥಳೀಯವಾಗಿ ನಾರಾಯಣ ಇಂಜಿನಿಯರಿಂಗ್ ಹಾಗೂ ಹಿಂದುಸ್ತಾನ್ ಸಂಸ್ಥೆ ಗಳು ಪ್ಲೇಟ್ ಸಿದ್ಧಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ರೈತರು ಆತಂಕ ಪಡುವುದು ಬೇಡ. ನೀರಿನ ಒಳಗೆ ಪ್ಲೇಟ್ ಇಳಿಸಿ ಕೆಲಸ ಮಾಡುವ ಪ್ರಯತ್ನ ಮಾಡಲಾಗುವುದು. ಸ್ಥಳದಲ್ಲಿಯೇ ಸಂಸದ ರಾಜಶೇಖರ್ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಜೊತೆ ಸ್ಥಳದಲ್ಲಿ ಇದ್ದು ಇದ್ದು ನೀರು ಉಳಿಸಲು ಮಾಡಬಹುದಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಭಗವಂತನ ಆಶೀರ್ವಾದ ಇದ್ದು, ನೀರು ಉಳಿಸುವ ಕೆಲಸದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದರು.

ಎರಡು ದಿನದಿಂದ ಸ್ಥಳದಲ್ಲಿಯೇ ಇರುವ ಸಚಿವರು
ಇನ್ನು ಘಟನೆಯ ವಿಷಯ ತಿಳಿಯುತ್ತಲೇ ಸೋಮವಾರ ನಸುಕಿನಲ್ಲಿ ಸ್ಥಳಕ್ಕೆ ಆಗಮಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕಳೆದ ಎರಡು ದಿನಗಳಿಂದ ಸ್ಥಳದಲ್ಲಿಯೇ ತಂಗಿದ್ದಾರೆ.

ಭಾನುವಾರ ಇಲಾಖೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ತೆರಳಿದ್ದ ಸಚಿವರು ಅಂದು ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದರು. ಮಾರ್ಗ ಮಧ್ಯೆ ಡ್ಯಾಮ್ ನ ಅಧಿಕಾರಿಗಳು ಸಚಿವರಿಗೆ ಕರೆ ಮಾಡಿ ಡ್ಯಾಮ್ ನ 19ನೇ ಗೇಟ್ ಮುರಿದಿರುವ ಬಗ್ಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೇ ಸಚಿವರು ತನ್ನ ಚಾಲಕನಿಗೆ ಕಾರನ್ನು ಹೊಸಪೇಟೆಯತ್ತ ತಿರುಗಿಸಲು ಹೇಳಿದ್ದರು. ನಾಲ್ಕು ತಾಸಿಗೆ ಹೊಸಪೇಟೆ ತಲುಪಿದ ಸಚಿವರು ಅಣೆಕಟ್ಟೆಯ ಗೇಟ್ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಘಟನೆಯ ಗಂಭೀರತೆ ಅರಿತಿರುವ ಸಚಿವರು ಸ್ಥಳದಲ್ಲಿಯೇ ಇದ್ದು, ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಿ ನೀರನ್ನು ಉಳಿಸಿ ಯಾವ ರೀತಿ ಗೇಟ್ ಅಳವಡಿಸಬೇಕು ಎಂಬ ಬಗ್ಗೆ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.

ಅಲ್ಲದೆ, ಸೋಮವಾರ ಕೂಡ ತಡರಾತ್ರಿವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಶಿವರಾಜ್ ತಂಗಡಗಿ ಅವರು, ಜಿಂದಾಲ್ ನಿಂದ ಪರಿಣಿತ ತಂಡ ಒಂದನ್ನು ಕರೆಯಿಸಿ ನೀರಿನಲ್ಲಿ ಇಳಿಸಿ ಕೆಲಸ ಮಾಡಿಸುವ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!