ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ-ಶಾಸಕಿ ಹೇಮಲತಾನಾಯಕ
ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿದ್ದ,ಕಳ್ಳನಾಗಿದ್ದ ಎಂಬ ಸುಳ್ಳನ್ನು ಪದೇ ಪದೇ ಹೇಳುವ ವ್ಯವಸ್ಥಿತ ಸಂಚು ಬಹು ಹಿಂದಿನಿಂದಲೂ ನಡೆಯುತ್ತಿದ್ದ ಪರಿಷತ್ ಕಲಾಪದಲ್ಲಿ ಈ ಪದಗಳನ್ನು ಬಳಸಿದ ಸದಸ್ಯರ ಮಾತುಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಮಾಡಿದ ಒತ್ತಾಯವನ್ನು ಗೌರವಿಸಿ ಸಭಾಪತಿ ಪೀಠದಲ್ಲಿದ್ದ ಭಾರತಿಶೆಟ್ಟಿ ಅವರು ಆ ಪದಗಳನ್ನು ತೆಗೆದು ಹಾಕಲು ಸೂಚಿಸಿದರು.
ವಿಧಾನಪರಿಷತ್ತಿನಲ್ಲಿಂದು ಮಹರ್ಷಿ ವಾಲ್ಮೀಕಿ ಎಸ್.ಟಿ.ಅಭಿವೃದ್ಧಿ ನಿಗಮದ ಅವ್ಯವಹಾರಗಳ ಕುರಿತು ಮಾತನಾಡುತ್ತಿದ್ದ ವೇಳೆ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿದ್ದ,ಕಳ್ಳನಾಗಿದ್ದ ,ನಾರದರ ಬೋಧನೆಯಿಂದ ತಪಸ್ಸು ಆಚರಿಸಿ ಆತನ ಮನಃಪರಿವರ್ತನೆಯಾಗಿ ಮನುಕುಲಕ್ಕೆ ಶ್ರೇಷ್ಠ ರಾಮಾಯಣ ಮಹಾಕಾವ್ಯ ನೀಡಿದ ಎಂದರು.
ಇದಕ್ಕೆ ಪ್ರತಿಯಾಗಿ ಮಧ್ಯಾಹ್ನದ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಹೇಮಲತಾನಾಯಕ ಅವರು,
ಪಂಜಾಬಿನ ಹೈಕೋರ್ಟ್ ನಲ್ಲಿ 12-10-2009 ರಂದು ನ್ಯಾಯಮೂರ್ತಿ ರಾಜೀವ್ ಭಲ್ಲಾ ಅವರಿದ್ದ ಪೀಠವು ಮಹರ್ಷಿ ವಾಲ್ಮೀಕಿಯು ದರೋಡೆಕೋರನಾಗಿರಲಿಲ್ಲ,ಕಳ್ಳನಾಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಪಾಟಿಯಾಲಾದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠದ ನಿರ್ದೇಶಕಿ ಡಾ.ಮಂಜುಳ ಸಹದೇವ ಸಾಕಷ್ಟು ಆಧಾರಗಳನ್ನು ಒದಗಿಸಿದ್ದಾರೆ.
ವೇದಗಳ ಕಾಲದಿಂದ ಹಿಡಿದು 9 ನೇ ಶತಮಾನದವರೆಗಿನ ದಾಖಲೆಗಳಲ್ಲಿ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿದ್ದ,ಕಳ್ಳನಾಗಿದ್ದ ಎಂಬ ಉಲ್ಲೇಖಗಳೂ ಎಲ್ಲಿಯೂ ವ್ಯಕ್ತವಾಗಿಲ್ಲ.9 ನೇ ಶತಮಾನದ ನಂತರ ಇಂತಹ ಸುಳ್ಳುಗಳು ಸೃಷ್ಟಿಯಾಗಿವೆ.ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ.
ಇದರಿಂದ ಬೇಡನಾಯಕರು ಸೇರಿದಂತೆ ಹಲವಾರು ಬುಡಕಟ್ಟು ಸಮುದಾಯಗಳ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ.
ದರೋಡೆಕೋರ,ಕಳ್ಳ ಎಂಬ ಪದಗಳನ್ನು ಕಡತದಿಂದ ತೆಗೆದುಹಾಕಲು ಒತ್ತಾಯಿಸುತ್ತೇನೆ ಎಂದರು.
ಸಭಾಪತಿ ಪೀಠದಲ್ಲಿದ್ದ ಭಾರತಿಶೆಟ್ಟಿ ಅವರು ತಕ್ಷಣ ಆ ಪದಗಳನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದರು.
Comments are closed.