ಇತಿಹಾಸದಲ್ಲೇ ಅಪರೂಪದ ಬಜೆಟ್ – ಲಕ್ಷ್ಮೀ ಹೆಬ್ಬಾಳಕರ್ ಬಣ್ಣನೆ

Get real time updates directly on you device, subscribe now.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯದ ಕಾಂಗ್ರೆಸ್ ಸರಕಾರದ 2023 -24ನೇ ಸಾಲಿನ ಆಯವ್ಯಯ ಇತಿಹಾಸದಲ್ಲೇ ಅತ್ಯಪರೂಪವಾದದ್ದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೆಸ್ ಧ್ಯೇಯ ಬಜೆಟ್ ನಲ್ಲಿ ಪ್ರತಿಬಿಂಬಿತವಾಗಿದೆ ಎಂದಿದ್ದಾರೆ.

ಪ್ರಾದೇಶಿಕವಾಗಿ ನೋಡಿದರೂ, ಇಲಾಖಾವಾರು ನೋಡಿದರೂ ಎಲ್ಲ ದೃಷ್ಟಿಯಿಂದಲೂ ಬಜೆಟ್ ಅತ್ಯಂತ ಸಮತೋಲಿತವಾಗಿದೆ. ಎಲ್ಲ ಜಿಲ್ಲೆಗಳಿಗೂ, ಎಲ್ಲ ಇಲಾಖೆಗಳಿಗೂ ಹೇರಳವಾಗಿ ಹಣ ಒದಗಿಸಲಾಗಿದೆ. ರಾಜ್ಯದ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ರೀತಿಯಲ್ಲಿ ಬಜೆಟ್ ರೂಪಿಸಲಾಗಿದೆ. ಕೃಷಿ, ನೀರಾವರಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಯಾರಿಗೂ ಅಸಮಾಧಾನವಾಗದಂತೆ, ಎಲ್ಲರಲ್ಲೂ ವಿಶ್ವಾಸ ಮೂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ತಯಾರಿಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ.

ಕಾಂಗ್ರೆಸ್ ನೀಡಿದ ಎಲ್ಲ ಗ್ಯಾರಂಟಿ ಯೋಜನೆಗಳ ಜಾರಿಗೆ ಅತ್ಯಂತ ವ್ಯವಸ್ಥಿತವಾಗಿ, ಯಾವುದೇ ವರ್ಗದವರಿಗೂ ಹೊರೆಯಾಗದ ರೀತಿಯಲ್ಲಿ ಹಣ ಹೊಂದಿಸಲಾಗಿದೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಸರಕಾರ ಎನ್ನುವುದನ್ನು ಜನಮಾನಸದಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ. ಈ ಬಜೆಟ್ ಅನುಷ್ಠಾನದೊಂದಿಗೆ ಮುಂದಿನ 5 ವರ್ಷದಲ್ಲಿ ರಾಜ್ಯ ಅತ್ಯಂತ ವೇಗವಾಗಿ, ಸಮೃದ್ಧವಾಗಿ ಬೆಳವಣಿಗೆ ಸಾಧಿಸಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: