ಅಕ್ಷರ ಸಂತ ಪದ್ಮಶ್ರೀ ಹಾಜಬ್ಬ , ದಾನಚಿಂತಾಮಣಿ ಹುಚ್ಚಮ್ಮ ಅವರಿಂದ ಗವಿಮಠ ಹಾಸ್ಟೆಲ್ ಉದ್ಘಾಟನೆ
ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ
ಪೂರ್ಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭ
ಸಾನಿಧ್ಯ – ತ್ರಿವಿಧ ದಾಸೋಹಿ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನಿಧ್ಯವಹಿಸಲಿದ್ದಾರೆ.
ಮುಂಡರಗಿಯ ಅನ್ನದಾನೀಶ್ವರ ಮಠದ ಮೂಲಕ ಶಿಕ್ಷಣ ಕ್ರಾಂತಿ ಮಾಡಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ೧೫೦ ಕ್ಕೂ ಹೆಚ್ಚು ಮೌಲ್ಯಯುತ ಗ್ರಂಥಗಳನ್ನು ರಚನೆ ಮಾಡಿದ್ದಾರೆ.
೧೯೬೯ ಜ. ೩೧ ರಂದು ಮುಂಡರಗಿಯ ೧೦ ನೇ ಪೀಠಾಧಿಪತಿಯಾಗಿ ಅಧಿಕಾರವಹಿಸಿಕೊಂಡು, ಶ್ರೀ ಮಠದಲ್ಲಿ ಅನ್ನದಾಸೋಹ ಮತ್ತು ಅಕ್ಷರ ಕ್ರಾಂತಿ ಮಾಡಿದ್ದಾರೆ ಹಾಗೂ ಸ್ವತಃ ಅಕ್ಷರ ಕೃಷಿ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಹಿರಿಮೆ ಅವರದು. ೩೩ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ತಮ್ಮ ೧೫೫ ಗ್ರಂಥಗಳ ಜೊತೆಗೆ ಶ್ರೀ ಮಠದಿಂದ ಸುಮಾರು ೨೭೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಶ್ರೀ ಮಠದಿಂದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶರಣ ಸಾಹಿತ್ಯ ಮತ್ತು ಸಂಸ್ಕೃತ ಅಧ್ಯಯನ ಪೀಠ ಪ್ರಾರಂಭಿಸಲು ೨೭.೫೦ ಲಕ್ಷ ರುಪಾಯಿ ಠೇವಣಿ ಇರಿಸಿದ್ದಾರೆ. ಇಂಥ ಮಹಾನ ಕಾರ್ಯ ಮಾಡುವ ಮೂಲಕ ಹೆಸರಾಗಿರುವ ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭ ಸಾನಿಧ್ಯ ವಹಿಸಿಕೊಳ್ಳುತ್ತಾರೆ .
ಇದರ ಜೊತೆಗೆ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಪೂರ್ಣಗೊಂಡ ಕಟ್ಟಡದ ಉದ್ಘಾಟನೆಯನ್ನು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹಾಗೂ ದಾನಚಿಂತಾಮಣಿ ಖ್ಯಾತಿಯ ರಾಜ್ಯೋತ್ಸವ ಪುರಸ್ಕೃತೆ ಹುಚ್ಚಮ್ಮ ಅವರು ಉದ್ಘಾಟಿಸಲಿದ್ದಾರೆ.
ಅಕ್ಷರ ಸಂತ – ಹಾಜಬ್ಬ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ(ಈಗ ಉಳ್ಳಾಲ) ಕಂದಾಯ ಗ್ರಾಮದ ಹರೇಕಳ ಗ್ರಾಮದ ನಿವಾಸಿ ಹಾಜಬ್ಬ. ಬೀಡಿ ಕಟ್ಟುತ್ತಲೇ ಕುಟುಂಬಕ್ಕೆ ನೆರವಾಗುತ್ತಿದ್ದರು. ನಂತರ ಕಿತ್ತಳೆ ಹಣ್ಣು ಹೊತ್ತು ಮಾರುತ್ತಿದ್ದರು.
ಈ ವೇಳೆಯಲ್ಲಿ ತಮ್ಮೂರಿನಲ್ಲಿ ಶಾಲೆ ಇಲ್ಲದಿರುವುದು ಇವರನ್ನು ಚಿಂತೆಗೀಡು ಮಾಡುವಂತೆ ಮಾಡಿತ್ತು. ಅ?ಕ್ಕೆ ಕೊರಗಿ ಸುಮ್ಮನಾಗದ ಅವರು ಶಾಸಕರು ಸೇರಿದಂತೆ ತಮ್ಮೂರಿಗೆ ಬರುವ ಅಧಿಕಾರಿಗಳ ಬಳಿ ತಮ್ಮೂರಿನಲ್ಲೊಂದು ಶಾಲೆ ಪ್ರಾರಂಭಿಸಿ ಎಂದು ಮನವಿ ಮಾಡುತ್ತಲೇ ಇದ್ದರು. ಓದಲು ಬರೆಯಲು ಬಾರದಿದ್ದರೂ ತಮ್ಮೂರಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವುದು ಇವರ ದೊಡ್ಡ ಬಯಕೆ ಆಯಿತು. ಅದಕ್ಕಾಗಿ ನಿರಂತರ ಪ್ರಯತ್ನ ಮಾಡಿದ ಪರಿಣಾಮ ಹರೇಕಳದ ನ್ಯೂಪಡ್ಪು ಗ್ರಾಮದಲ್ಲಿ ೧೯೯೯-೨೦೦೦ ನೇ ಇಶ್ವಿಯಲ್ಲಿ ಶಾಲೆ ಮಂಜೂರಿಯಾಯಿತು ಮತ್ತು ನ್ಯೂಪಡ್ಪು ಮಸೀದಿಯಲ್ಲಿ ಶಾಲೆ ಪ್ರಾರಂಭವಾಯಿತು.
ಗ್ರಾಮದ ಶಾಲೆಗೆ ಸ್ವಂತ ಜಾಗವೂ ಇರಲಿಲ್ಲ ಮತ್ತು ಕಟ್ಟಡವೂ ಇರಲಿಲ್ಲ. ಆಗ ತಾನು ಕಿತ್ತಳೆ ಹಣ್ಣು ಮಾರಿ ಬಂದಿದ್ದರಿಂದ ಉಳಿತಾಯದ ದುಡ್ಡು ಸೇರಿಸಿ, ಅವರಿವರ ಸಹಾಯ ಪಡೆದು ಜಮೀನು ಖರೀದಿಸಲು ಕಾರಣವಾದರು ಮತ್ತು ಶಾಲೆಯ ಕಟ್ಟಡವೂ ಮಂಜೂರಿಯಾಗಿ ನಿರ್ಮಾಣವಾಯಿತು. ೨೦೦೧ ರಲ್ಲಿ ಅದೇ ಶಾಲೆಯೇ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಸಹ ಆದರು.
ಸಿಎನ್ ಎನ್ ಐಬಿಎನ್ ರಿಯಲ್ ಹಿರೋ ಎನ್ನುವ ಪ್ರಶಸ್ತಿಯನ್ನು ನೀಡಿ, ೫ ಲಕ್ಷ ರುಪಾಯಿ ನಗದು ಪುರಸ್ಕಾರ ಸಹ ನೀಡಿದರು. ಪ್ರಶಸ್ತಿಯೊಂದಿಗೆ ಬಂದ ಹಣವನ್ನು ಶಾಲೆಗೆ ಜಮೀನು ಖರೀದಿ ಮಾಡಲು ನೀಡಿದರು. ಇದಲ್ಲದೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಬಂದಿದ್ದ ಎಲ್ಲ ಪ್ರಶಸ್ತಿಯ ಮೊತ್ತವನ್ನು ಇವರು ಶಾಲೆಯ ಶ್ರೇಯೋಭಿವೃದ್ಧಿಗಾಗಿ ನೀಡಿದ್ದಾರೆ. ಇವರ ಅಕ್ಷರ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ೨೦೨೧ ನ. ೮ ರಂದು ಭಾರತದ ಗೌರವಾನ್ವಿತ ರಾ?ಪತಿಗಳು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಇವರು ದಾನಿಗಳು, ಜನಪ್ರತಿನಿಧಿಗಳಿಂದ ತಂದಿರುವ ಅನುದಾನ ಬರೋಬ್ಬರಿ ೧.೫ ಕೋಟಿ ರುಪಾಯಿಗೂ ಮಿಗಿಲಾಗಿದೆ. ಅದೆಲ್ಲವೂ ಶಾಲೆಗಾಗಿ ಬಳಕೆ ಮಾಡಿದ್ದಾರೆ. ಮಾದರಿ ಶಾಲೆಯ ನಿರ್ಮಾಣ ಮಾಡಿದ್ದ ಅವರು, ಗ್ರಾಮದಲ್ಲಿ ಪಿಯು ಶಿಕ್ಷಣವೂ ದೊರೆಯುವಂತೆ ಮಾಡಿದ ಹಿರಿಮೆಯನ್ನು ಹೊಂದಿದ್ದಾರೆ. ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ.
ದಾನ ಚಿಂತಾಮಣಿ –
ಹೆಸರು ಹುಚ್ಚಮ್ಮ. ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿ.
ಅಕ್ಷರ ಬಾರದಿದ್ದರೂ ಅಕ್ಷರ ಕ್ರಾಂತಿ ಮಾಡಿದ ಮಹಾನ್ ತಾಯಿ ಇವರು.
ಕುಣಿಕೇರಿ ಗ್ರಾಮದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲು ಸರ್ಕಾರ ಕಟ್ಟಡ ಮಂಜೂರಿಯನ್ನು ಮಾಡಿತ್ತು. ಆದರೆ, ಕಟ್ಟಡ ನಿರ್ಮಾಣಕ್ಕೆ ಜಮೀನು ಇರಲಿಲ್ಲ. ಆಗ ಯಾರು ಸಹ ಮುಂದೆಯೂ ಬರಲಿಲ್ಲ. ಆದರೆ, ಹುಚ್ಚಮ್ಮ ಮಾತ್ರ ತನ್ನ ಹೆಸರಿನಲ್ಲಿ ಇದ್ದ ೨ ಎಕರೆ ಭೂಮಿಯನ್ನು ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಯಾ ಪೈಸೆಯನ್ನು ಪಡೆಯದೇ ದಾನವಾಗಿ ನೀಡಿದರು. ಈಗ ಈ ಭೂಮಿಯ ಬೆಲೆ ಕೋಟಿ ಕೋಟಿ ರುಪಾಯಿಗಳು. ಆದರೂ ಆಸೆ ಪಡೆದೆ ಮಕ್ಕಳ ಶಿಕ್ಷಣಕ್ಕಾಗಿ ತಮ್ಮೂರಿನಲ್ಲಿ ಶಾಲೆ ನಿರ್ಮಾಣವಾಗಲು ದಾನ ಮಾಡಿದರು. ಅಲ್ಲಿಯೇ ಶಾಲೆ ನಿರ್ಮಾಣವಾಗಿ ನೂರಾರು ಮಕ್ಕಳ ಅಭ್ಯಾಸ ಮಾಡುತ್ತಾರೆ. ಅ?ಕ್ಕೆ ಆಕೆಯ ಅಕ್ಷರ ಪ್ರೀತಿ ನಿಲ್ಲಲಿಲ್ಲ. ತಾನು ಸಹ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಕಳಾಗಿ ಸೇರಿಕೊಂಡು ಮಕ್ಕಳ ಸೇವೆ ಮಾಡಿದ ಮಹಾನ್ ತಾಯಿ ಇವರು.
ಈಕೆಯ ದಾನವನ್ನು ಮೊದಲು ಶ್ರೀ ಗವಿಮಠ ಗುರುತಿಸಿ, ಜಾತ್ರೆಯಲ್ಲಿ ವಿಶೇಷ ಸಾಧಕಿಯಂದು ಪರಿಚಯಿಸಲಾಯಿತು. ಅಲ್ಲಿಂದ ಹುಚ್ಚಮ್ಮ ಅವರು ನಾಡಿಗೆ ಪರಿಚಯವಾದರು. ಸಾಲು ಸಾಲು ನಾಗರಿಕ ಸನ್ಮಾನಗಳು ಜರುಗಿದವು. ಕರ್ನಾಟ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದೆ ಎನ್ನುವುದು ಹೆಮ್ಮೆಯ ಸಂಗತಿ. ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನೆಯನ್ನು ಅಕ್ಷರ ಸಂತ ಹಾಜಬ್ಬ ಅವರಿಗೆ ಜೊತೆಯಾಗಿ ಇವರು ಮಾಡಲಿದ್ದಾರೆ .
Comments are closed.