ಮಳೆಗಾಲ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ
ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
—
ಕೊಪ್ಪಳ : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜುಲೈ 06ರಂದು ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು.
ತಾಲೂಕುವಾರು ಸುರಿದ ಮಳೆಯ ಪ್ರಮಾಣ ಸೇರಿದಂತೆ ಇನ್ನೀತರ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿಗಳು, ಕಳೆದೊಂದು ವಾರದಿಂದ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಎಲ್ಲೆಡೆ ಮೋಡ ಕವಿದ ವಾತಾವರಣವಿದೆ. ಅಲ್ಲಲ್ಲಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಕೆಲ ಕಡೆಗಳಲ್ಲಿ ಜಿಟಿಜಿಟಿ ಮಳೆ ಬೀಳುತ್ತಿದೆ. ಹೀಗಾಗಿ ಮಳೆ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯಿಂದಲೂ ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿನ ಚರಂಡಿಗಳ ಶುಚಿತ್ವಕ್ಕೆ ಮೊದಲಾದ್ಯತೆ ನೀಡಬೇಕು. ಎಲ್ಲು ಸಹ ನೀರು ನಿಲ್ಲದೇ ಅದು ಸರಾಗವಾಗಿ ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಬೇಕು. ಕೆಲವೊಮ್ಮೆ ಕುಡಿಯುವ ನೀರಿನಲ್ಲಿ ಮಳೆ ನೀರು ಸೇರುವ ಸಾಧ್ಯತೆ ಇದ್ದು, ಹೀಗಾಗಿ ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಿಯೇ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಳೆಯಿಂದಾಗಿ ಹಾನಿಯಾದ ಮನೆಗಳ ಮಾಹಿತಿಯನ್ನು ತ್ವರಿತವಾಗಿ ತಂತ್ರಾಂಶದಲ್ಲಿ ದಾಖಲಿಸಬೇಕು. ಪ್ರಾಣ ಹಾನಿ ಸಂಭವಿಸಿದಲ್ಲಿ 24 ಗಂಟೆಯೊಳಗೆ ಪರಿಹಾರ ವಿತರಿಸಲು ಆಯಾ ತಾಲೂಕುಗಳ ತಹಶೀಲ್ದಾರರು, ಇಓ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕೊಪ್ಪಳ, ಕುಷ್ಟಗಿ, ಕುಕನೂರ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಸಿಡಿಲಿನಿಂದ ಮೃತಪಟ್ಟ ಐವರು ಕುಟುಂಬದವರಿಗೆ ಹಾಗೂ ಕನಕಗಿರಿ ತಾಲೂಕಿನಲ್ಲಿ ಮನೆಕುಸಿದು ಮೃತಪಟ್ಟ ಇಬ್ಬರಿಗೆ ತಲಾ 5 ಲಕ್ಷ ರೂ.ಗಳಂತೆ ಮಾನವ ಜೀವ ಹಾನಿ ಪ್ರಕರಣಗಳಿಗೆ 35,00,000 ರೂ.ಪರಿಹಾರವನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ. ಏಪ್ರಿಲ್‌ನಿಂದ ಜೂನ್ ಮಾಹೆವರೆಗೆ ಕೊಪ್ಪಳ ತಾಲೂಕಿನಲ್ಲಿ 12, ಕುಷ್ಟಗಿ ತಾಲೂಕಿನಲ್ಲಿ 10, ಕುಕನೂರ ತಾಲೂಕಿನಲ್ಲಿ 9 ಹಾಗು ಯಲಬುರ್ಗಾ ತಾಲೂಕಿನಲ್ಲಿ 22 ಮತ್ತು ಗಂಗಾವತಿ ತಾಲೂಕಿನಲ್ಲಿ 5 ಸೇರಿ ಒಟ್ಟು ಒಟ್ಟು 58 ಮನೆಹಾನಿ ಪ್ರಕರಣಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್‌ದಿಂದ ಜೂನ್ 23ರವರೆಗೆ ಕೊಪ್ಪಳ ತಾಲೂಕಿನಲ್ಲಿ 14, ಕುಷ್ಟಗಿ ತಾಲೂಕಿನಲ್ಲಿ 12, ಕನಕಗಿರಿ ತಾಲೂಕಿನಲ್ಲಿ 1, ಕೂಕನೂರ ತಾಲೂಕಿನಲ್ಲಿ 4 ಮತ್ತು ಯಲಬುರ್ಗಾ ತಾಲೂಕಿನಲ್ಲಿ 5 ಸೇರಿ ಒಟ್ಟು 36 ಜಾನುವಾರುಗಳು ಸಾವಿಗೀಡಾಗಿದ್ದು, ಈ ಪೈಕಿ 34 ಜಾನುವಾರಗಳ ಪರಿಹಾರವನ್ನು ಸಂಬಂಧಪಟ್ಟ ರೈತರಿಗೆ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಜೂನ್ ಮಾಹೆಯಲ್ಲಿ ವಾಡಿಕೆ ಮಳೆ 79 ಮಿಲಿ ಮೀಟರ್ ಇದ್ದು, ವಾಸ್ತವಿಕವಾಗಿ 40 ಮಿ.ಮೀ ಮಳೆಯಾಗಿ ಶೇ49ರಷ್ಟು ಮಳೆ ಕೊರತೆಯಾಗಿದೆ. ಜುಲೈ 1ರಿಂದ 5ರವರೆಗೆ ವಾಡಿಕೆ 5 ಮಿ.ಮೀ ಇದ್ದು 24 ಮಿ.ಮೀ ಹೆಚ್ಚಿನ ಮಳೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಳೆಗಾಲ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾಯಿಸಿ ಆರಿಸಿದ ನೀರನ್ನು ಕುಡಿಯಲು, ಡೆಂಗೆ, ಚಿಕೂನ್‌ಗುನ್ಯದಂತಹ ಕಾಯಿಲೆಗಳಿಂದ ದೂರವಿರಲು ಮನೆಯ ಸುತ್ತಲು ಶುಚಿತ್ವ ಕಾಯ್ದುಕೊಳ್ಳುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣ ನೀಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆ, ವಿವಿಧ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.
Comments are closed.