ಮೀಸಲು ಅನ್ವಯ ನಿಯಮಾನುಸಾರ ಅಧ್ಯಕ್ಷ , ಉಪಾಧ್ಯಕ್ಷ ಹುದ್ದೆಗಳ ಚುನಾವಣೆ ನಡೆಸಲು ಸೂಚನೆ
—
ಕೊಪ್ಪಳ : ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ-2020ರ ನಂತರ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ. ಈ ಮೀಸಲಾತಿ ಅನ್ವಯ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳನ್ನು ಚುನಾವಣೆ ಮೂಲಕ ಭರ್ತಿ ಮಾಡಲು ಗೊತ್ತುಪಡಿಸಿದ ಅಧಿಕಾರಿಗಳನ್ನು ಜೂನ್ 30 ರಂದು ನೇಮಿಸಲಾಗಿರುತ್ತದೆ.
ಗೊತ್ತುಪಡಿಸಿದ ಅಧಿಕಾರಿಗಳಿಗೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ) ನಿಯಮಗಳು 1995 ರನ್ವಯ ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತಿಗಳಿಗೆ ಜುಲೈ 2023ರೊಳಗಾಗಿ ಎಲ್ಲಾ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರಿಗೆ 7 ದಿನಗಳ ಮುಂಗಡ ನೋಟಿಸ್ ದ್ವಾರಾ ತಿಳಿವಳಿಕೆ ನೀಡಿ ನಿಯಮಾನುಸಾರ ಚುನಾವಣೆ ಕೈಗೊಳ್ಳಲು ಸೂಚಿಸಲಾಗಿದೆ.
ಗೊತ್ತುಪಡಿಸಿದ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಸಂಬಂಧಪಟ್ಟ ತಹಶೀಲ್ದಾರರಿಗೆ ತಿಳಿಸಲಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಚುನಾವಣೆಗಳು ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್ ಹಾಗೂ ತಹಸೀಲ್ದಾರರು ಮೇಲ್ವಿಚಾರಣೆ ನಡೆಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್‌ಅಧಿನಿಯಮದಡಿ ಈ ಚುನಾವಣೆಗಳನ್ನು ಮುಕ್ತಾಯಗೊಳಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Comments are closed.