ಬಿಜೆಪಿ ಅಭ್ಯರ್ಥಿಗೆ ಮತ‌ ಕೇಳಲು ಮುಖ ಇಲ್ಲ: ಸಚಿವ ಶಿವರಾಜ್ ತಂಗಡಗಿ

Get real time updates directly on you device, subscribe now.

ಗೃಹ ಲಕ್ಷ್ಮೀ ಯೋಜನೆ ಆಯ್ತು, ಮುಂದೆ ಸಿಗಲಿದೆ ಮಹಾಲಕ್ಷ್ಮಿ ಯೋಜನೆ

ಆಂಜನೇಯ, ರಾಮನನ್ನು ರೋಡಿಗೆ ನಿಲ್ಲಿಸಿರುವ ಬಿಜೆಪಿಗೆ ಆಗಲಿದೆ ತಕ್ಕ ಶಾಸ್ತಿ

ಬಿಜೆಪಿಯದ್ದು ಸುಳ್ಳಿನ ಗ್ಯಾರಂಟಿ

ತಳಕಲ್: ಏ.02

ರಾಜ್ಯದಲ್ಲಿ ಗೃಹ ಲಕ್ಷ್ಮೀ ಕೊಟ್ಟಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆ (ವರ್ಷಕ್ಕೆ ಕುಟುಂಬದ ಯಜಮಾನಿಗೆ ಒಂದು ಲಕ್ಷ) ಜಾರಿಗೆ ಬರಲಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಪರವಾಗಿ ತಳಕಲ್ ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ‌ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆ ಜಾರಿಗೆ ತಂದಿಲ್ಲ.‌ ಇಲ್ಲಿನ ಅಭ್ಯರ್ಥಿಗಳು ಅಭಿವೃದ್ಧಿ ಹೆಸರಲ್ಲಿ‌ ಮತ ಕೇಳಲು ಆಗದೆ, ಯುವಕರಿಗೆ ಸುಳ್ಳಿನ ಮೋಡಿ ಮಾಡಿರುವ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಇತಿಹಾಸ ಇಲ್ಲ. ತಮ್ಮ ಹೆಸರಲ್ಲಿ ಮತ ಕೇಳಲು ಮುಖ ಇಲ್ಲ ಎಂದು ಛೇಡಿಸಿದರು.

ಈ ಬಾರಿಯ ಚುನಾವಣೆ ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆ ಆಗಿದೆ. ನಾವು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಆದರೆ ಬಿಜೆಪಿಯವರು ಅತ್ತೆ- ಸೊಸೆಯರ ನಡುವೆಯೇ ಜಗಳ ಹಚ್ಚಲು ಪ್ರಯತ್ನಿಸಿದ್ದರು. ಅದೆಲ್ಲವೂ ನಡೆಯಲಿಲ್ಲ. ಸುಳ್ಳು ಹೇಳಿ ಹತ್ತು ವರ್ಷ ಕಾಲ ತಳ್ಳಿದ್ದ ಕೇಂದ್ರ ‌ಸರ್ಕಾರ‌‌ ಇದೀಗ ಸುಳ್ಳಿನ‌ ಗ್ಯಾರಂಟಿಗಳನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನೂರಕ್ಕೆ ನೂರರಷ್ಟು ಈ ಭಾರಿ ಕೊಪ್ಪಳ‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಗೆಲುವು ನಿಶ್ಚಿತ. ಈ ಹಿಂದೆ ಕೊಪ್ಪಳದಲ್ಲಿ ಮೋದಿ ಅವರನ್ನು ನೋಡಿ ಜನ ಬಿಜೆಪಿಗೆ ಮತ ನೀಡಿಲ್ಲ. ಕರಡಿ ಸಂಗಣ್ಣ ಅವರನ್ನು ನೋಡಿ ಮತ ನೀಡಿದ್ದಾರೆ ಎಂಬುದನ್ನು ಬಿಜೆಪಿಗರು ತಿಳಿದುಕೊಳ್ಳಲಿ ಎಂದು ತೀಕ್ಷ್ಣವಾಗಿ ಹೇಳಿದರು.

ಬಿಜೆಪಿಯವರು ಚುನಾವಣೆ ಸಮೀಪದಲ್ಲಿ‌ ಧರ್ಮ- ಧರ್ಮಗಳ ನಡುವೆ ಜಗಳ‌ ಹಚ್ಚುತ್ತಾರೆ. ಅದು ಸಾಧ್ಯವಾಗದ್ದಿದ್ದರೆ‌‌ ಪಾಕಿಸ್ತಾನದ ವಿಷಯ ತೆಗೆಯುತ್ತಾರೆ. ಅದು ಸಾಧ್ಯವಾಗದಿದ್ದರೆ ನಮ್ಮ ಅಂಜನಾದ್ರಿ ಬೆಟ್ಟದ ವಿಚಾರಕ್ಕೆ ಬರುತ್ತಾರೆ. ದೇವರು ದೇವಸ್ಥಾನದಲ್ಲಿ, ಭಕ್ತಿ ಮನದಲ್ಲಿ ಇರಬೇಕು. ಆದರೆ ಮುಂದೊಂದು ದಿನ ಆಂಜನೇಯ, ರಾಮ ಒಮ್ಮೆ ಬಿಜೆಪಿ ಪಕ್ಷಕ್ಕೆ ಶಾಪಾ ಕೊಡುತ್ತಾರೆ. ಏಕೆಂದರೆ ಬಿಜೆಪಿಗರು ದೇವರುಗಳನ್ನು ವಿನಾಕಾರಣ ರಸ್ತೆಗೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಬಿಜೆಪಿಗರು ಶಾಪಕ್ಕೆ ಒಳಗಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಚಾರ ಸಭೆಯಲ್ಲಿ ಸಚಿವ‌ ಭೈರತಿ ಸುರೇಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಸಂಸದರಾದ ಕರಡಿ ಸಂಗಣ್ಣ, ಶಾಸಕ ಜಿ.ಎಚ್.ಶ್ರೀನಿವಾಸ್, ಮುಖಂಡರಾದ ವೀಣಾಕಾಶೆಪ್ಪನವರ್, ಮಂಜುಳಾ ಕರಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್ ಹಾಗೂ ಬಸವರಾಜ್ ಉಳ್ಳಾಗಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!