ನೇಹಾ ಹಿರೇಮಠ ಹತ್ಯೆ ಪ್ರಕರಣ : ವ್ಹಿ.ಎಂ.ಭೂಸನೂರಮಠ ಖಂಡನೆ
ಕೊಪ್ಪಳ : ಹುಬ್ಬಳ್ಳಿ ನಗರದಲ್ಲಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಗೆ ಹಾಡು ಹಗಲೇ ಬರ್ಬರವಾಗಿ ಹತ್ಯೆಗೈದ ಆರೋಪಿ ಫಯಾಜ್ ಮೇಲೆ ಸರಕಾರ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಘಟನೆಯನ್ನು ಖಂಡಿಸುವುದಾಗಿ ವೀರಶೈವ ಜಂಗಮ ಸಮಾಜದ ಮುಖಂಡರು ಹಾಗೂ ಹಿರಿಯ ನ್ಯಾಯವಾದಿ ವ್ಹಿ.ಎಂ.ಭೂಸನೂರಮಠ ಹೇಳಿದರು.
ಅವರು ಶನಿವಾರದಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಹಾಡುಹಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಹುಬ್ಬಳ್ಳಿ ನಗರದಲ್ಲಿ ಬರುವ ಬಿವಿಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಂಗಮ ಸಮಾಜದ ವಿದ್ಯಾರ್ಥಿನಿ ಕುಮಾರಿ ನೇಹಾ ತಂದೆ ನಿರಂಜನ ಹಿರೇಮಠ ಪರೀಕ್ಷೆ ಮುಗಿಸಿ ಮನೆಗೆ ಬರುವ ಸಮಯದಲ್ಲಿ ಫಯಾಜ್ ಎಂಬ ದುಷ್ಕರ್ಮಿಯು ಕೊಲೆ ಮಾಡುವ ಉದ್ದೇಶದಿಂದ ಅವಳ ಮೇಲೆ ಹಠಾತ್ತನೇ ದಾಳಿ ಮಾಡಿ ತಾನು ತಂದಿದ್ದ ಚಾಕುವಿನಿಂದ ಅವಳ ದೇಹದ ಮೇಲೆ ಸುಮಾರು 09 ಸಲ ಇರಿದು ಸಾಯಿಸಿ ಕೊಲೆ ಮಾಡಿರುವ ಪೈಶಾಚಿಕ ಕೃತ್ಯವನ್ನು ಸಮಾಜ ಖಂಡಿಸುತ್ತದೆ ಎಂದರು.
ಕೊಪ್ಪಳ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣಪ್ಪ ಹ್ಯಾಟಿ ಮಾತನಾಡಿ ವೀರಶೈವ ಜಂಗಮ ಸಮಾಜದ ನೇಹಾ ತಂದೆ ನಿರಂಜನ ಹಿರೇಮಠ ಹುಬ್ಬಳ್ಳಿ ಇವರ ಸಾವಿನಿಂದ ಅವರ ಕುಟುಂಬವು ಅತ್ಯಂತ ದು:ಖದ ಮಡುವಿನಲ್ಲಿದ್ದು, ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಅವರಿಗೆ ಮತ್ತು ಸಮಾಜಕ್ಕೆ ನ್ಯಾಯ ಒದಗಿಸಬೇಕು. ಈ ರೀತಿ ಬರ್ಬರವಾಗಿ ಕೊಲೆ ಮಾಡಿರುವ ಫಯಾಜ್ ಹಾಗೂ ಸಹಚರರ ಮೇಲೆ ಕೂಡಲೇ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯದಲ್ಲಿ ತಪ್ಪಿತಸ್ಥನಿಗೆ ಗಲ್ಲುಶಿಕ್ಷೆಯಾಗುವ ಮೂಲಕ ಮೃತ ನೇಹಾ ಹಿರೇಮಠ ಇವಳ ಆತ್ಮಕ್ಕೆ ಶಾಂತಿ ಸಿಗುವಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಭದ್ರತೆಗೆ ಪ್ರಯತ್ನಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಜಂಗಮ ಸಮಾಜದ ಮುಖಂಡರಾದ ನೀಲಕಂಠಯ್ಯ ಹಿರೇಮಠ, ಹಂಪಯ್ಯ ಬನ್ನಿಮಠ, ವಿರೇಶ ಮಹಾಂಯ್ಯನಮಠ, ನಗರ ಪ್ರಾಧಿಕಾರ ಮಾಜಿ ಸದಸ್ಯ ನಾಗಭೂಷಣ ಸಾಲಿಮಠ, ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ಬಸಯ್ಯ ಹಿರೇಮಠ, ನಗರಸಭೆ ಸದಸ್ಯ ಸರ್ವೇಶ, ಕಲ್ಲಯ್ಯ ಕಲ್ಯಾಣಗೌಡರು, ಬಸವರಾಜ್ ಮಿಠಾಯಿ, ವೆಂಕಯ್ಯಸ್ವಾಮಿ ಹೂವಿನಹಾಳ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Comments are closed.