ಏಕಚಕ್ರಾಧಿಪತ್ಯದ ನಾಯಕತ್ವ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ: ಸುಧೀಂದ್ರ ಕುಲಕರ್ಣಿ
ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಮತ್ತು ಪತ್ರಕರ್ತರು ವಿಷಯ ಬಗ್ಗೆ ಸಂವಾದ
ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮರೆಯಾಗುತ್ತಿರುವ ಆಂತರಿಕ ಪ್ರಜಾಪ್ರಭುತ್ವ
ಬೆಂಗಳೂರು:
ಏಕಚಕ್ರಾಧಿಪತ್ಯದ ನಾಯಕತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತದೆಯೇ ಹೊರತು, ಪೂರಕವಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಸಾಮಾಜಿಕ ಚಿಂತಕ ಸುಧೀಂದ್ರ ಕುಲಕರ್ಣಿ ಎಚ್ಚರಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಮತ್ತು ಪತ್ರಕರ್ತರು ಎಂಬ ವಿಶೇಷ ಉಪನ್ಯಾಸ ಹಾಗೂ ಸಂವಾದದಲ್ಲಿ ಅವರು ಮಾತನಾಡಿದರು.
ಇಂದಿರಾಗಾಂಧಿ ಕಾಲದಲ್ಲಿ ಏಕಚಕ್ರಧಿಪತ್ಯದ ಹಿನ್ನೆಲೆಯಲ್ಲಿ ಜಾರಿಯಾದ ತುರ್ತು ಪರಿಸ್ಥಿಯ ದಿನಗಳನ್ನು ನೆನಪು ಮಾಡಿದ ಅವರು, ಈಗಲೂ ಎಲ್ಲದಕ್ಕೂ ಮೋದಿ, ಮೋದಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಬಹಳ ಮುಖ್ಯವಾದದ್ದು. ಕಾಂಗ್ರೆಸ್‌ನಲ್ಲಿ ಹಿಂದೆ ಕಾಣೆಯಾಗಿದ್ದ ಆಂತರಿಕೆ ಪ್ರಜಾಪ್ರಭತ್ವ ಈಗ ಸ್ಪಲ್ಪ ಕಾಣಿಸುತ್ತಿದೆ. ಆದರೆ, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಮಾಯವಾಗಿದ್ದು, ಏಕವ್ಯಕ್ತಿ ನಿರ್ಧಾರಗಳೇ ಪ್ರಾಂಉಖ್ಯತೆ ಪಡೆಯುತ್ತಿವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಆಳುವ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ತುರ್ತು ಪರಿಸ್ಥಿತಿ ಕಾಲದಲ್ಲಿ ದೊಡ್ಡ ಆದರ್ಶವನ್ನು ಮುಂದಿಟ್ಟುಕೊಂಡು ಜನಸಂಘವು ಸಾಕಷ್ಟು ಕೆಲಸವನ್ನು ಮಾಡಿದೆ. ಬಳಿಕ ಅದು ರಾಜಕೀಯ ಪಕ್ಷವಾಗಿ ರೂಪಾಂತರವಾದ ಮೇಲೆ, ಅಟಲ್ ಬಿಹಾರಿ ವಾಜಪೇಯಿ ಅವರು ಆ ಪಕ್ಷವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಥವಾಗಿ ಮುನ್ನೆಡೆಸಿದ್ದಾರೆ. ಆಗಿನ ಕಾಲ ಘಟ್ಟಕ್ಕೂ ಈಗಿನ ಬಿಜೆಪಿಗೂ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಆದರೆ, ಸಾಕಷ್ಟು ಲೋಪದೋಷಗಳು ಆಗಿರುವುದನ್ನು ಗಮನಿಸಬೇಕು. ಕಳೆದ 10 ವರ್ಷಗಳಲ್ಲಿ ವ್ಯಕ್ತಿ ಕೇಂದ್ರಿತ ರಾಜಕೀಯವು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಆತಂಕ ಎದುರಾಗಿದೆ ಎಂದು ಹೇಳಿದರು.
ವ್ಯಕ್ತಿ ಕೇಂದ್ರಿತ ರಾಜಕಾರಣ ಮಾರಕ
ವ್ಯಕ್ತಿ ಕೇಂದ್ರಿತ ಮತ್ತು ಪರಿವಾರ ಕೇಂದ್ರಿತ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಕಾಂಗ್ರೆಸ್ ಜನ ಮಾನ್ನಣೆ ಕಳೆದುಕೊಂಡಿದೆ. ಅಲ್ಲದೆ, ಆತ್ಮವಲೋಕನ ಮಾಡಿಕೊಳ್ಳದಿರುವುದು ಕೂಡ ಕಾಂಗ್ರೆಸ್ ಅವನತಿಗೆ ಕಾರಣವಾಗಿದೆ ಎಂದರು.
ಐಟಿ, ಇಡಿ, ಸಿಬಿಐ ಗಳನ್ನು ಈ ಹಿಂದಿನ ಸರ್ಕಾರಗಳು ಕೂಡ ದುರುಪಯೋಗ ಮಾಡಿಕೊಂಡಿವೆ. ಅದರೆ ಈಗ ಆ ದುರುಪಯೋಗ ಪ್ರಮಾಣ ಇಂದು ಹೆಚ್ಚಳವಾಗಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವ ಹಂತಕ್ಕೆ ಇದು ಬಂದು ನಿಂತಿರುವುದು ಆತಂಕ ತಂದಿದೆ ಎಂದರು. ಈ ಹಿಂದೆ ಕಾಂಗ್ರೆಸ್ ಮಾಡಿದ ಕೆಲಸವನ್ನೇ ಇಂದು ಬಿಜೆಪಿ ಮಾಡುತ್ತಿದೆ. ಎಲ್ಲವೂ ಹೀಗೆ ಮುಂದುವರಿಸಿದರೆ ಇಂದಿನ ಕಾಂಗ್ರೆಸ್ ಪರಿಸ್ಥಿತಿಯೇ ಬಿಜೆಪಿಗೂ ಬರುವ ದಿನಗಳು ದೂರವಿಲ್ಲ ಎಂದರು.
ಹಿಂದೂ ಧರ್ಮ ದೂಷಿಸಿ ಪ್ರಯೋಜನವಿಲ್ಲ:
ಹಿಂದು ಧರ್ಮವನ್ನು ಧೂಷಿಸಿಕೊಂಡು ತಿರುಗಿದರೆ ಯಾವ ಸುಧಾರಣೆಯನ್ನು ತರಲು ಆಗುವುದಿಲ್ಲ. ಹಿಂಧೂ ಧರ್ಮದಲ್ಲಿ ಒಂದಷ್ಟು ಸುಧಾರಣೆ ಆಗಬೇಕು ಎನ್ನುವುದರ ಬಗ್ಗೆ ಚರ್ಚೆಯಾಗಬೇಕು. ನಿಜವಾದ ಹಿಂದು ಧರ್ಮ ಏನೆಂದು ತಿಳಿಸುವ ಕೆಲಸವಾಗಲಿ. ಇಂದಿನ ಪ್ರಮುಖ ರಾಜಕೀಯ ಪಕ್ಷವೊಂದು ಹಿಂದು ಧರ್ಮದ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಆದ್ದರಿಂದ ಸ್ವಾಮೀಜಿಗಳು, ಧರ್ಮಗುರುಗಳು ನಿಜವಾದ ಹಿಂದು ಧರ್ಮವೇನೆಂದು ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಒಕ್ಕೂಟ ವ್ಯವಸ್ಥೆ ಶಿಥಿಲ:
ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ನನಗಿದೆ. ಆದಷ್ಟು ಪ್ರಜಾಪ್ರಭುತ್ತಾತ್ಮಕವಾಗಿ ನಡೆದುಕೊಳ್ಳುತ್ತಿದ್ದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಆಗಿನ ಸಿಎಂ ಎಸ್.ಎಂ.ಕೃಷ್ಣ ಒಪ್ಪಿಕೊಂಡು ಬಂದಿದ್ದರು. ಬಳಿಕ ಹೈಕಮಾಂಡ್ ವಿರೋಧಿಸಿದ್ದರಿಂದ ಕೃಷ್ಣ ಅವರು ಕೈಚೆಲ್ಲಿದರು. ಈ ಅಸಹಾಯಕತೆಯನ್ನು ಕೃಷ್ಣ ಅವರು ವಾಜಪೇಯಿಗೆ ಮನದಟ್ಟು ಮಾಡಿಕೊಟ್ಟಿದ್ದರು. ವಾಜಪೇಯಿ ಅವರು ಕೊನೇ ಪಕ್ಷ ಎಲ್ಲರನ್ನು ಒಳಗೊಳ್ಳುವಿಕೆಯ ಪ್ರಯತ್ನ ಮಾಡಿದ್ದರು. ಆದರೆ, ಇಂದಿನ ಪ್ರಧಾನಿ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೇ ಸಿಗುತ್ತಿಲ್ಲ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಜೊತೆಗಿನ ರಾಜ್ಯಗಳ ಸಂಬಂದ ಶಿಥಿಲವಾಗುತ್ತಿದೆ ಎಂದರು.
ವಸ್ತು ನಿಷ್ಠತೆ ಕಡಿಮೆಯಾಗುತ್ತಿದೆ:
ಹಿರಿಯ ಪತ್ರಕರ್ತ ಅನಂತ ಚಿನಿವಾರ ಮಾತನಾಡಿ, ಮಾಧ್ಯಮ ಮತ್ತು ಪತ್ರಕರ್ತರನ್ನು ಪ್ರತ್ಯೇಕವಾಗಿ ನೋಡಬೇಕಿದೆ. ಹೆಚ್ಚಿನ ಪತ್ರಕರ್ತರು ನಿಜವಾಗಿ ಮಾಡಬೇಕು ಎಂದುಕೊಂಡಿರುವ ಸುದ್ದಿ ಮತ್ತು ಮಾಡಬೇಕಾದ ಸುದ್ದಿಯ ನಡುವೆ ಇಬ್ಬಂದಿತನ ಅನುಭವಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮಾಧ್ಯಮಗಳು ಸಾಗುತ್ತಿರುವ ದಿಕ್ಕು ಕೂಡ ಆತಂಕ ತಂದಿದೆ ಎಂದರು.
ಮಾಧ್ಯಮಗಳು ತಮ್ಮ ಇಷ್ಟದ, ಅನುಕೂಲ ಮತ್ತು ಯಾವುದೋ ಒತ್ತಡಕ್ಕೆ ಸಿಲುಕಿ ಬೇಕಾದ ದ್ರುವವನ್ನು ಆಯ್ಕೆ ಮಾಡಿಕೊಂಡು ಅತ್ತ ಸಾಗಿದೆ. ಇದರಿಂದ ವಸ್ತುನಿಷ್ಠ ಮಾಧ್ಯಮ ಕಡಿಮೆಯಾಗುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಎಲ್ಲಾ ಆಯಾಮಗಳಲ್ಲಿ ಚರ್ಚೆಯಾಗಲಿ:
ಅಧ್ಯಕ್ಷತೆ ವಹಿಸಿದ್ದ ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಚುನಾವಣೆಯ ಹೊತ್ತಿನಲ್ಲಿ ಮಾಧ್ಯಮದ ಜವಬ್ದಾರಿ ಮತ್ತು ಪತ್ರಕರ್ತರ ಹೊಣೆಗಾರಿಕೆ ಮಹತ್ವದ್ದಾಗಿದ್ದು, ಈ ಹಿನ್ನೆಲೆಯಲ್ಲಿಯೇ ಎಲ್ಲಾ ಆಯಾಮಗಳಲ್ಲಿ ವಿಚಾರಗಳು ಮಂಥನವಾಗಲಿ ಎಂದು ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬೆಂ.ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಚುನಾವಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತವೆ. ಈ ವಿಷಯದಲ್ಲಿ ಇನ್ನಷ್ಟು ಸುಧಾರಣೆಗಳನ್ನು ಜನರು ಮತ್ತು ಸಮಾಜ ನಿರೀಕ್ಷಿಸಿದೆ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಎನ್.ನರಸಿಂಹಮೂರ್ತಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸುಧೀಂಧ್ರ ಕುಲಕರ್ಣಿ ಮತ್ತು ಪ್ರೊ.ಲಿಂಗರಾಜ ಗಾಂಧಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಡಿ.ಉಮಾಪತಿ, ಎಸ್.ಆರ್.ಆರಾಧ್ಯ, ವೆಂಕಟೇಶ್, ಮಾಲತಿ ಭಟ್, ಶಮಂತ, ಬಸವರಾಜು, ಎನ್.ರವಿಕುಮಾರ್, ಧ್ಯಾನ್ ಪೂಣಚ್ಚ, ಶ್ರೀಜಾ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು
Comments are closed.